ಕಳೆದ ಕೆಲವು ದಿನಗಳಿಂದ ಬಿಬಿಎಂಪಿ ಅಧಿಕಾರಿಗಳ ನಿದ್ದೆಗೆಟ್ಟು ಹೋಗಿತ್ತು. ಬಡವರ ಮನೆ ಮೇಲೆ ಪ್ರತಾಪ ತೋರಿಸಿ ದೊಡ್ಡವರಿಗೂ ಬುಲ್ಡೋಜರ್ ಬಿಸಿ ಮುಟ್ಟಿಸಲು ಹೊರಟ ಪಾಲಿಕೆ ಕೈ ಕಾಲು ಕಟ್ಟಿಹಾಕಲಾಗಿತ್ತು. ಇದೀಗ ಇದಕ್ಕೆಲ್ಲಾ ಕಾರಣ ಏನು ಅಂದರೆ ಕಂದಾಯ ಇಲಾಖೆ ಅಂತಿದೆ ಬಿಬಿಎಂಪಿ.
ಬಿಬಿಎಂಪಿ ಬುಲ್ಡೋಜರ್ ಆಪರೇಷನ್.. ಉಳ್ಳವರ ಪರ ನಿಂತರೇ ತಹಶಿಲ್ದಾರ್?
ಮಳೆಯಿಂದ ಅನಾಹುತವಾಗೋಕೆ ರಾಜಕಾಲುವೆ ಒತ್ತುವರಿ ಪ್ರಮುಖ ಕಾರಣ ಅನ್ನೋದು ಈಗಾಗಲೇ ಜಗಜ್ಜಾಹಿರವಾಗಿದೆ. ಹೀಗಾಗಿ ಬಿಬಿಎಂಪಿ ಒತ್ತುವರಿ ಕಡೆಗಳಲೆಲ್ಲಾ ಆರಂಭಿಸಿದ್ದ ಡೆಮಾಲಿಷನ್ ಡ್ರಾಮ 8 ದಿನ ಯಶಸ್ವಿಯಾಗಿ ಪೂರೈಸಿದೆ. ವಿನಾಕಾರಣ ವಿಳಂಬ ಮಾಡ್ತಾ ಸಿರಿವಂತರು, ಹಣವಂತರನ್ನು ಬಚಾವ್ ಮಾಡೋ ಕೆಲ್ಸ ಪಾಲಿಕೆಯಿಂದ ಆಗ್ತಿದೆ ಅನ್ನೋ ಆರೋಪಾನೂ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎನ್ನುವಂತೆ ಬಾಗ್ಮನೆ ಟೆಕ್ ಪಾರ್ಕ್ ನ ಪಕ್ಕದ ಪೂರ್ವಾಂಕರ ವಿಲ್ಲಾಗಳನ್ನ ರಾಜಕಾಲುವೆ ಮೇಲೆ ನಿರ್ಮಿಸಿತ್ತು. ಹೀಗಾಗಿ ನಿನ್ನೆ ಸಂಜೆ ಡೆಮಾಲಿಷನ್ ಗೆ ತೆರಳಿದಾಗ ಕೋರ್ಟ್ ನಿಂದ ತಡಯಾಜ್ಞೆ ಕೊಟ್ಟಿರೋ ಆದೇಶ ಪ್ರತಿ ನಿವಾಸಿಗಳು ತೋರಿಸಿದ್ದರಿಂದ ಪಾಲಿಕೆ ಜೆಸಿಬಿ ಘರ್ಜಿಸದೇ ವಾಪಾಸ್ ಅಗಿದ್ವು.

ತಹಶೀಲ್ದಾರ್ ನಡೆ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯೋಕೆ ತೀರ್ಮಾನ!
ರಾಜಕಾಲುವೆ ಮೇಲೆ ಒತ್ತುವರಿ ಆಗಿದೆ ಅಂತ ಗೊತ್ತಿದ್ರೂ ಒತ್ತುವರಿದಾರರು ಕೋರ್ಟ್ ನಿಂದ ಸ್ಟೇ ತೆಗೆದುಕೊಳ್ಳೋವರೆಗೂ ಬಿಬಿಎಂಪಿ ಸುಮ್ಮನಿರೋಕೆ ಕಾರಣ ಏನು ಅನ್ನೋದನ್ನ ಬಿಬಿಎಂಪಿ ಮುಖ್ಯ ಆಯುಕ್ತರನ್ನ ಕೇಳಿದ್ರೆ ತಮ್ಮದೇನೂ ತಪ್ಪಿಲ್ಲ ಎಲ್ಲಾ ತಪ್ಪು ಆಗಿರೋದು ಬೆಂಗಳೂರು ಪೂರ್ವ ತಹಶೀಲ್ದಾರ್ ಕಡೆಯಿಂದ ಅಂತ ಹೇಳುತ್ತಿದ್ದಾರೆ. ಇದೇ ತಿಂಗಳ 16ಕ್ಕೆ ತಹಶೀಲ್ದಾರ್ ಪೂರ್ವ ಪಾರ್ಕ್ ರಿಡ್ಜ್ ಗೆ ನೊಟೀಸ್ ಕೊಟ್ಟಿದ್ದಾರೆ.
ನೊಟೀಸ್ ಕೊಟ್ಟ ತಕ್ಷಣ ಡೆಮಾಲಿಷನ್ ಮಾಡುವಂತೆ ಬಿಬಿಎಂಪಿ ಗಮನಕ್ಕೆ ತಂದಿದ್ರೆ ಅವತ್ತೇ ಡೆಮಾಲಿಷನ್ ಮಾಡ್ತಿದ್ವಿ. ಆದ್ರೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ರೈ ಪಾಲಿಕೆ ಗಮನಕ್ಕೆ ತಾರದೇ ಪೂರ್ವ ಪಾರ್ಕ್ ರಿಡ್ಜ್ ಪರ ನಿಂತಿದ್ದಾರೆ ಅನ್ನೋದು ಗೊತ್ತಾಗಿದೆ. ನಿನ್ನೆ ಮಧ್ಯಾಹ್ನ ನೊಟೀಸ್ ನೀಡಿರೋದಾಗಿ ಹೇಳಿದ್ರಿಂದ ಸಂಜೆ ಒತ್ತುವರಿ ತೆರವಿಗೆ ತೆರಳಬೇಕಾಯ್ತು. ಅಷ್ಟರಲ್ಲೇ ಕೋರ್ಟ್ ನಿಂದ ವಿಲ್ಲಾ ವಾಸಿಗಳು ಸ್ಟೇ ತೆಗೆದುಕೊಂಡಿದ್ರು. ನೊಟೀಸ್ ಕೊಟ್ಟಾಗಲೇ ಮಾಹಿತಿ ನೀಡದೆ ಕಾಲಹರಣ ಮಾಡಿದ್ದಾರೆ. ಹೀಗಾಗಿ ತಹಶೀಲ್ದಾರ್ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಕಳೆದ ಎಂಟು ದಿನಗಳಿಂದ ಯಾವ ರೀತಿ ಬಿಬಿಎಂಪಿ ಡೆಮಾಲಿಷನ್ ಡ್ರಾಮ ಮಾಡ್ತಿದೆ ಅನ್ನೋದನ್ನ ನಿರಂತರವಾಗಿ ತೋರಿಸಲಾಗ್ತಿತ್ತು. ಅಂತಿಮವಾಗಿ ತನ್ನ ಎಡವಟ್ಟನ್ನು ಮುಚ್ಚಿಕೊಳ್ಳೋಕೆ ಇದೀಗ ಕಂದಾಯ ಇಲಾಖೆ ಕಡೆ ಬೊಟ್ಟು ಮಾಡ್ತಿದೆ. ಮತ್ತೊಂದು ಕಡೆ ತಹಶೀಲ್ದಾರ್ ನಡೆ ಬಗ್ಗೆಯೂ ಅನುಮಾನ ಮೂಡ್ತಿದೆ.