ಮೈಸೂರಿನ ಎನ್‍ಟಿಎಂಎಸ್ ಶಾಲೆಯ ವಿವಾದ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಸಂಘಟನೆಗಳು ಶಾಲೆಯ ಉಳಿವಿಗಾಗಿ ಹೋರಾಡಲು ಅಣಿಯಾಗುತ್ತಿವೆ. ಪ್ರತಿಭಟನೆಯ ಕಾವು ಜಡಿ ಮಳೆಯಲ್ಲೂ ತಣ್ಣಗಾಗದೆ ಮುಂದುವರೆದಿರುವುದು ಮೈಸೂರಿನ ಹೋರಾಟದ ಪರಂಪರೆಗೆ ಪೂರಕವಾಗಿಯೇ ಇದೆ. ಜನಪರ, ಕನ್ನಡಪರ, ವಿವೇಕಪರ ಮತ್ತು ವಿವೇಚನಾಪರ ಹೀಗೆ ಯಾವುದೇ ರೀತಿಯಲ್ಲಿ ಬಣ್ಣಿಸಿದರೂ ಈ ಪ್ರತಿಭಟನೆಯ ಹಿಂದಿರುವ ಮನಸುಗಳ ಏಕೈಕ ಉದ್ದೇಶ ಒಂದು ಚಾರಿತ್ರಿಕ ಹೆಣ್ಣುಮಕ್ಕಳ ಶಾಲೆಯನ್ನು ಉಳಿಸಿಕೊಳ್ಳುವುದೇ ಆಗಿದೆ. ಶಾಲೆಯ ಕಟ್ಟಡವನ್ನಷ್ಟೇ ಕೆಡವುತ್ತೇವೆ, ‘ ಹೆಣ್ಣು ಮಕ್ಕಳ ಕನ್ನಡ ಶಾಲೆ ’ ಮತ್ತೊಂದು ಐಷಾರಾಮಿ, ಹವಾನಿಯಂತ್ರಿತ, ಅಮೃತಶಿಲೆಯಿಂದ ನಿರ್ಮಿಸಲಾಗುವ ಕಟ್ಟಡದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ ಎಂದು ವಾದಿಸುವವರು ‘ಶಾಲೆ’ ಎನ್ನುವ ಪದದ ಅರ್ಥವನ್ನೇ ಅಪ್ರಭ್ರಂಶಗೊಳಿಸುತ್ತಿದ್ದಾರೆ.

ಎನ್‍ಟಿಎಂಎಸ್ ಶಾಲೆ ಕೇವಲ ಒಂದು ಶಿಥಿಲ ಸ್ಥಾವರ ಅಲ್ಲ ಎನ್ನುವುದನ್ನು ವಿವೇಕಾಭಿಮಾನಿಗಳು ಅರ್ಥಮಾಡಿಕೊಳ್ಳಬೇಕಿದೆ. ಈ ಶಾಲೆಯ ಹಿಂದೆ ಒಂದು ಚರಿತ್ರೆ ಇದೆ, ಐತಿಹ್ಯ ಇದೆ, ಸಾಂಸ್ಕೃತಿಕ ಮಹತ್ವ ಇದೆ ಮತ್ತು ಸಾಮಾಜಿಕ ಸಂದೇಶವೂ ಇದೆ. ಇಲ್ಲಿರುವ ಕಟ್ಟಡ ಮಾನವ ನಿರ್ಮಿತ, ಎಂದಾದರೂ ಕುಸಿಯಬಹುದು, ಆದರೆ ಶಾಲೆ ಎನ್ನುವ ಅಮೂರ್ತ ಕಲ್ಪನೆ ಕುಸಿಯುವುದಿಲ್ಲ. 1881ರಲ್ಲಿ ‘ ಹೆಣ್ಣು ಮಕ್ಕಳ ಶಿಕ್ಷಣ ’ ಎನ್ನುವ ಕಲ್ಪನೆಯೇ ಇಲ್ಲದಿದ್ದ ಕಾಲಘಟ್ಟದಲ್ಲಿ ಒಂದು ರಾಜಪ್ರಭುತ್ವದ ಮೂಲಕ ಪ್ರತ್ಯೇಕ ಹೆಣ್ಣು ಮಕ್ಕಳ ಶಾಲೆಯೊಂದು ಆರಂಭವಾಗುವುದು ಮನುಕುಲ ಇರುವವರೆಗೂ ಉಳಿಯುವಂತಹ ಒಂದು ವಿದ್ಯಮಾನ ಅಲ್ಲವೇ ? ಈ ‘ ಶಾಲೆಯ’ ಅಸ್ತಿತ್ವ ಇರುವುದು ಜನಮಾನಸದಲ್ಲಿ, ಇತಿಹಾಸದ ಪುಟಗಳಲ್ಲಿ, ಸಮಾಜೋ ಸಾಂಸ್ಕೃತಿಕ ಪರಂಪರೆಯಲ್ಲಿ. ಇದರ ಅಸ್ಮಿತೆ ಇರುವುದು ಭಾಷೆ ಮತ್ತು ಭಾಷಿಕರ ಅಸ್ಮಿತೆಗಳಲ್ಲಿ.

Also Read: ಸ್ಥಾವರ ಜಂಗಮದ ಸಂಘರ್ಷದಲ್ಲಿ ವಿವೇಕ
ಈ ಅಸ್ಮಿತೆಗಳನ್ನು ಅಳಿಸಿಹಾಕುವ ಒಂದು ದುಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. “ ಶಿಕ್ಷಣ ಎಂದರೆ ಮಾರುಕಟ್ಟೆ ಸರಕು, ಶಾಲೆ ಎಂದರೆ ಜಗುಲಿ ಕಟ್ಟೆ ” ಎನ್ನುವ ಒಂದು ವ್ಯಾವಹಾರಿಕ ಸಮಾಜವನ್ನು ನಾವು ವ್ಯವಸ್ಥಿತವಾಗಿಯೇ ನಿರ್ಮಿಸುತ್ತಿದ್ದೇವೆ. ಹಾಗಾಗಿಯೇ ನಮಗೆ ಶಿಕ್ಷಣ ಎಂದರೆ ಯಾರಿಂದಲೋ ನೀಡಲ್ಪಡುವ ಒಂದು ಸೌಲಭ್ಯ ಎನಿಸಿಬಿಡುತ್ತದೆ. ಈ ಸೌಲಭ್ಯವನ್ನು ನೀಡುವವರು ಆಸ್ತಿವಂತರಾದಷ್ಟೂ ಶಿಕ್ಷಣ ಮೌಲ್ಯಯುತವಾಗಿರುತ್ತದೆ ಎಂಬ ಭ್ರಮೆಯೂ ನಮ್ಮ ಸಮಾಜವನ್ನು ಆವರಿಸಿದೆ. “ ಶಿಥಿಲವಾದ ಎನ್‍ಟಿಎಂಎಸ್ ಶಾಲೆಯ ಜಾಗವು ಯುವ ಸಾಂಸ್ಕೃತಿಕ ಪರಂಪರೆಯಾಗಿ ಪರಿವರ್ತನೆಯಾಗುವುದು ಒಂದು ವಿಕಾಸವೇ ಹೊರತು, ಪರಂಪರೆಯ ನಾಶವಲ್ಲ ” (ನ್ಯಾಯಾಲಯದ ತೀರ್ಪು ಗೌರವಿಸಿ ಅಂದೋಲನ 16-7-21) ಎಂಬ ವಿವೇಕಾನಂದರ ಅನುಯಾಯಿಗಳ ಬೀಸು ಹೇಳಿಕೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.
Also Read: ವಿವೇಕ ಸ್ಮಾರಕಕ್ಕಾಗಿ ಅವಿವೇಕದ ನಡೆ ತರವೇ?
ಎನ್‍ಟಿಎಂಎಸ್ ಶಾಲೆಯೇ ಒಂದು ಪರಂಪರೆಯ ದ್ಯೋತಕ ಅಲ್ಲವೇ ? ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ತೆರೆದ ವಸಾಹತು ಭಾರತದ ಮೂರನೆಯ ಶಾಲೆ ಇದು. 70 ವರ್ಷಗಳ ಪ್ರಜಾಪ್ರಭುತ್ವದ ಆಳ್ವಿಕೆಯ ನಂತರ ಶಿಕ್ಷಣ ಎಂಬ ಅಮೂಲ್ಯ ಕಲ್ಪನೆಯನ್ನು ಹರಾಜು ಹಾಕುತ್ತಿರುವ ಸಂದರ್ಭದಲ್ಲಿ, ಪ್ರಜಾತಂತ್ರದ ಪರಿವೆಯೇ ಇಲ್ಲದೆಯೂ ಶಿಕ್ಷಣವನ್ನು ಸಾರ್ವಜನಿಕ ಸ್ವತ್ತು ಎಂದು ಭಾವಿಸಿ ರಾಜಪ್ರಭುತ್ವದಲ್ಲಿ ನಿರ್ಮಿಸಲಾದ ಒಂದು ಸಂಸ್ಥೆ, ಒಂದು ವಿಶಿಷ್ಟ ಪರಂಪರೆಯ ಸಂಕೇತ ಎನಿಸುವುದಿಲ್ಲವೇ ? “ ಸುತ್ತಮುತ್ತಲಿರುವ ಶಾಲೆ ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ,,,,,, ” ಒಂದು ಪಾರಂಪರಿಕ ಶಾಲೆಯ ಅಸ್ಮಿತೆಯನ್ನೇ ಅಳಿಸಿಹಾಕುವುದು ವಿವೇಕಯುತವೇ ? ಇದು ವಿವೇಕಾನಂದರ ಸಂದೇಶವನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವವರನ್ನು ಕಾಡಬೇಕಾದ ಪ್ರಶ್ನೆ.
Also Read: ಜಂಗಮ ಸನ್ಯಾಸಿಗೆ ಸ್ಥಾವರದ ಸಂಕೋಲೆ
ಕಳೆದ 140 ವರ್ಷಗಳಲ್ಲಿ ಸಾವಿರಾರು ಯುವಕ ಯುವತಿಯರ ಬದುಕಿನ ಬುನಾದಿಯನ್ನು ನಿರ್ಮಿಸುವ ಕೈಂಕರ್ಯದಲ್ಲಿ ತೊಡಗಿರುವ ಒಂದು ಹೆಣ್ಣು ಮಕ್ಕಳ ಶಾಲೆಯ ಅಸ್ತಿತ್ವವನ್ನೇ ಇಲ್ಲವಾಗಿಸಿ “ ಭವಿಷ್ಯದಲ್ಲಿ ಸಾವಿರಾರು ಯುವಕ ಯುವತಿಯರಿಗೆ ಸೇವೆ ಸಲ್ಲಿಸುವ,,,,ಸಾಂಸ್ಕೃತಿಕ ಯುವ ಕೇಂದ್ರ,,,,” ನಿರ್ಮಿಸುವುದು ಯಾವ ಪುರುಷಾರ್ಥಕ್ಕೆ ? ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದಲ್ಲಿ ಸಂಸ್ಕೃತಿ ಎಂಬ ಅಮೂಲ್ಯ ಪದವೇ ನಾನಾ ಅರ್ಥಗಳನ್ನು ಪಡೆದುಕೊಂಡಿದೆ. ಈ ಪರಿಸರದಲ್ಲಿ ಕನ್ನಡ ಸಂಸ್ಕೃತಿ ಎನ್ನುವುದೊಂದಿದ್ದರೆ, ಅದನ್ನು ಸಂರಕ್ಷಿಸಲು ವಿಭಿನ್ನ ಚಿಂತನಾ ಧಾರೆ ಅಗತ್ಯವಿದೆ. ವಿವೇಕಾನಂದರ ವಿಚಾರಧಾರೆಯನ್ನೇ ನಿಷ್ಠೆಯಿಂದ ಅನುಸರಿಸುವುದಾದರೆ, ಸ್ಮಾರಕ ಎನ್ನುವ ಸ್ಥಾವರದ ನಿರ್ಮಾಣವೇ ಅವರಿಗೆ ಅಪಚಾರ ಎಸಗಿದಂತೆ ಅಲ್ಲವೇ ?

ಮೂಲತಃ ವಿವೇಕಾನಂದರು ಕೆಡವಿ ಕಟ್ಟುವ ಸಿದ್ಧಾಂತವನ್ನು ಪ್ರತಿಪಾದಿಸಿದವರಲ್ಲ. ಭಾರತದಲ್ಲಿದ್ದ ಅನಕ್ಷರತೆಯನ್ನು ಅಳಿಸಿ, ಜಾತಿ ವ್ಯವಸ್ಥೆಯ ತಾರತಮ್ಯಗಳನ್ನು ಅಳಿಸಿ, ಅಸಮಾನತೆಯನ್ನು ಅಳಿಸಿ, ಮೌಢ್ಯವನ್ನು ಅಳಿಸಿ ಹೊಸ ಸಮಾಜವನ್ನು ನಿರ್ಮಿಸಲು ಪಣತೊಟ್ಟ ಓರ್ವ ಪರಿವ್ರಾಜಕ ವಿವೇಕಾನಂದರು. ಈ ಧ್ಯೇಯಗಳನ್ನು ಸಾಧಿಸಲೆಂದೇ ವಿಶ್ವಪರ್ಯಟನೆಯನ್ನೂ ಮಾಡಿದ್ದುದನ್ನು ಅವರ ಬರಹಗಳಲ್ಲೇ ಗುರುತಿಸಬಹುದು. “ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ” ಎಂಬ ಅವರ ಘೋಷವಾಕ್ಯದ ಹಿಂದೆ ಒಂದನ್ನು ಕೆಡವಿ ಮತ್ತೊಂದನ್ನು ನಿರ್ಮಿಸಿ ಎಂಬ ಸಂದೇಶ ಕಾಣಲು ಸಾಧ್ಯವೇ ? ಅವರ ಗುರಿ ಇದ್ದುದು ಭವಿಷ್ಯದತ್ತ, ತಮ್ಮ ಕನಸಿನ ಭವ್ಯ ಭಾರತವನ್ನು ಕಾಣುವತ್ತ.
ಇಂತಹ ಒಬ್ಬ ಜಂಗಮ ಸನ್ಯಾಸಿಯ ಉದಾತ್ತ ಧ್ಯೇಯಗಳನ್ನು ಕಾರ್ಯರೂಪಕ್ಕೆ ತರುವುದು ಎಂದರೆ ಅವರ ವಿಚಾರಧಾರೆಯನ್ನು ಗೌರಿಸುವುದೇ ಆಗಿರುತ್ತದೆ. “ ಕನ್ನಡ ಕಟ್ಟುವ ಕೈಂಕರ್ಯಕ್ಕೆ ಶಾಲೆಯನ್ನು ಕೆಡವಿ ನಿರ್ಮಿಸಲಾಗುವ ವಿವೇಕ ಸ್ಮಾರಕ ಪೂರಕವಾಗಿದೆ ” ಎಂದರೆ ಇಲ್ಲಿ ಧ್ವಂಸವಾಗುವುದು ಕೇವಲ ನಾಲ್ಕು ಗೋಡೆಗಳಿರುವ ಒಂದು ಸ್ಥಾವರ ಅಲ್ಲ, ಒಂದು ಉದಾತ್ತ ಪರಂಪರೆಯ ಚಿಂತನೆ ಎನ್ನುವುದನ್ನೂ ಮನಗಾಣಬೇಕಲ್ಲವೇ ? ವಿವೇಕಾನಂದರು ಸನಾತನ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸಿದರೂ, ಇದೇ ಧರ್ಮದ ವಿರುದ್ಧ ಸಿಡಿದೆದ್ದ ಬುದ್ಧ ಪರಂಪರೆಯನ್ನು, ಬಸವಣ್ಣನವರ ಆಶಯಗಳನ್ನು ನಿರಾಕರಿಸಲಿಲ್ಲ. ಬದಲಾಗಿ ಬುದ್ಧ ಪರಂಪರೆಯನ್ನು ಶ್ರೇಷ್ಠ ಎಂದು ಬಣ್ಣಿಸಿದ್ದರು. ಚಿಂತನೆಗಳನ್ನೂ ನಿರಾಕರಿಸದೆ, ನವ ಸಮಾಜದ ನಿರ್ಮಾಣಕ್ಕಾಗಿ ಹಾತೊರೆದ ಓರ್ವ ಸಂತನ ಅನುಯಾಯಿಗಳು, ಸ್ಥಾವರ ಪ್ರಿಯರಾಗುವುದೇ ವಿವೇಕರ ಆದರ್ಶಗಳಿಗೆ ಅಪಚಾರ ಎಸಗಿದಂತೆ ಅಲ್ಲವೇ ? ಭಾರತದಲ್ಲಿನ ಶಿಕ್ಷಣ ವಂಚಿತ ಶೋಷಿತ ಸಮುದಾಯಗಳಿಗೆ ಶೈಕ್ಷಣಿಕ ಜಗತ್ತನ್ನು ತೆರೆಯುವ ಅವರ ಧ್ಯೇಯಾದರ್ಶಗಳನ್ನು ಪಾಲಿಸುವವರಿಗೆ, ಒಂದು ಚಾರಿತ್ರಿಕ ಹೆಣ್ಣು ಮಕ್ಕಳ ಶಾಲೆಯ ಅಸ್ತಿತ್ವವನ್ನೇ ಅಳಿಸಿ ಹಾಕುವ ಕೈಂಕರ್ಯ, ಕನ್ನಡ ಕಟ್ಟುವ ಕೆಲಸ ಹೇಗಾದೀತು ?
“ ನಕಾರಾತ್ಮಕ ಪ್ರಭಾವಗಳಿಂದ ನೈತಿಕ ಅಧಃಪತನ ಹೊಂದುತ್ತಿರುವ ಯುವ ಸಮೂಹಕ್ಕೆ,,,,,” ಮಾರ್ಗದರ್ಶಕವಾಗಲು ಈ ದೇಶದಲ್ಲಿ ಸ್ಥಾಪನೆಯಾಗಿರುವ ಎಲ್ಲ ಸೋ ಕಾಲ್ಡ್ ಸಾಂಸ್ಕೃತಿಕ ಕೇಂದ್ರಗಳೂ ಪ್ರಾಮಾಣಿಕವಾಗಿ ಶ್ರಮಿಸಿದ್ದರೆ, ಭಾರತ ಇಂದು ದ್ವೇಷ ರಾಜಕಾರಣದ ಕರ್ಮಭೂಮಿಯಾಗುತ್ತಿರಲಿಲ್ಲ. ಇದು ಕಟು ವಾಸ್ತವ. ಈ ಉದ್ದೇಶದಿಂದಲೇ ನಿರ್ಮಾಣವಾಗುವ ಒಂದು ‘ ಶಕ್ತಿ ಕೇಂದ್ರ ’ ಚಾರಿತ್ರಿಕ ಹೆಣ್ಣುಮಕ್ಕಳ ಶಾಲೆಯ ಸಮಾಧಿಯ ಮೇಲೆ ಏಳಬೇಕೇ ? ಇದು ಕೆಡವುವ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡ ಸಾಂಸ್ಕೃತಿಕ ರಾಜಕಾರಣದ ಒಂದು ರೂಪಕವಾಗಿ ಕಾಣುವುದಿಲ್ಲವೇ ? ವಿವೇಕಾನಂದರು ಕೆಡವುವ ಸಂಸ್ಕೃತಿಯನ್ನು ಪ್ರತಿಪಾದಿಸಿದವರಲ್ಲ. ಶಾಲೆ ಎನ್ನುವ ಅಮೂರ್ತ ಕಲ್ಪನೆಯನ್ನೇ ಕೆಡವಿ ಸ್ಮಾರಕದ ಹೆಸರಿನಲ್ಲಿ ಸ್ಥಾವರವನ್ನು ನಿರ್ಮಿಸುವುದು ವಿವೇಕಯುತ ನಡೆಯೂ ಅಲ್ಲ.