ಬಸ್ ನಿಲ್ದಾಣದಲ್ಲಿ ಮೊಬೈಲ್ ಮರೆತುಹೋಗಿದ್ದ ಕಣ್ಣಿಲ್ಲದ ಹಾಗೂ ಎರಡೂ ಕಾಲುಗಳ ಸ್ವಾಧೀನ ಇಲ್ಲದ ವಿಶೇಷಚೇತನ ವ್ಯಕ್ತಿಯ ಮೊಬೈಲ್ ಅನ್ನು ಕೇವಲ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಲಷ್ಕರ್ ಠಾಣಾ ಪೊಲೀಸರು, ವಿಶೇಷಚೇತನನಿಗೆ ಹಿಂದಿರುಗಿಸಿದ್ದಾರೆ.
ಕಣ್ಣುಗಳಿಲ್ಲದೆ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ವಿಶೇಷ ಚೇತನನ್ನು ಆಟೋದಲ್ಲಿ ಕರೆತಂದು ಎಸಿಪಿ ಶಶಿಧರ್ ರವರ ಕಚೇರಿಗೆ ಹೊತ್ತುತಂದು ಮೊಬೈಲ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಹಾಸನದ ಅರುಣ್ ಕುಮಾರ್ ಕಣ್ಣು ಕಳೆದುಕೊಂಡು ಎರಡು ಕಾಲುಗಳಿಗೆ ಸ್ವಾಧೀನವಿಲ್ಲದ ವಿಶೇಷ ಚೇತನ.ಕಾರ್ಯನಿಮಿತ್ತ ಎರಡು ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಮೈಸೂರಿಗೆ ಬಂದಿದ್ದಾರೆ.
ತಮ್ಮ ಬಳಿ ಇದ್ದ ಸುಮಾರು 20 ಸಾವಿರ ಮೌಲ್ಯದ ಮೊಬೈಲ್ ಬಸ್ ಸ್ಟ್ಯಾಂಡ್ ನಲ್ಲಿ ಮರೆತುಹೋಗಿದ್ದಾರೆ.ಕೂಡಲೇ ಅರುಣ್ ಕುಮಾರ್ ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ರವರನ್ನ ಭೇಟಿಯಾಗಿ ಮೊಬೈಲ್ ಪತ್ತೆ ಹಚ್ಚಿಕೊಡುವಂತೆ ದೂರು ಕೊಟ್ಟಿದ್ದಾರೆ.

ಕೂಡಲೇ ಕಾರ್ಯೋನ್ಮುಖರಾದ ಇನ್ಸ್ಪೆಕ್ಟರ್ ಸಂತೋಷ್ ರವರು ಡಿಸಿಪಿ ಪ್ರದೀಪ್ ಘಂಟಿ ಹಾಗೂ ಶಶಿಧರ್ ರವರ ಮಾರ್ಗದರ್ಶನದಲ್ಲಿ ತಮ್ಮ ಸಿಬ್ಬಂದಿಗಳಾದ ಮಹದೇವಸ್ವಾಮಿ, ಚಿನ್ನಪ್ಪ ಹಾಗೂ ಚೇತನ್ ರೊಂದಿಗೆ ಕಾರ್ಯಾಚರಣೆ ನಡೆಸಿ ಮೇಟಗಳ್ಳಿಯ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಅನ್ನು ಕೇವಲ 24 ಗಂಟೆಯಲ್ಲಿ ಮೊಬೈಲ್ ಪತ್ತೆ ಹಚ್ಚಿದ್ದಾರೆ.
ನಂತರ ಅರುಣ್ ಕುಮಾರ್ ರನ್ನ ಆಟೋದಲ್ಲಿ ಕರೆತಂದು ಎಸಿಪಿ ಶಶಿಧರ್ ಕಚೇರಿಯಲ್ಲಿ ಹಿಂದಿರುಗಿಸಿದ್ದಾರೆ. ಎರಡು ಕಾಲು ಸ್ವಾಧೀನ ಕಳೆದುಕೊಂಡ ಅರುಣ್ ಕುಮಾರ್ ರನ್ನ ಸಿಬ್ಬಂದಿ ಚಿನ್ನಪ್ಪ, ಚೇತನ್ ಹಾಗೂ ಮಹದೇವ ಸ್ವಾಮಿ ಹೊತ್ತು ತಂದು ಮಾನವೀಯತೆ ಮೆರೆದಿದ್ದಾರೆ.
ದುಷ್ಕರ್ಮಿಗಳಿಗೆ ಸಿಂಹಸ್ವಪ್ನವಾದ ಖಾಕಿಯಲ್ಲಿ ಮಾನವೀಯ ಹೃದಯ ಇದೆ ಎಂದು ಲಷ್ಕರ್ ಠಾಣಾ ಪೊಲೀಸರು ಈ ಮೂಲಕ ನಿರೂಪಿಸಿದ್ದಾರೆ.