ಸುರೇಶ್ ಕಂಜರ್ಪಣೆ
ಮೈಸೂರಿನ ಡಿಸಿ ರೋಹಿಣಿ ಮತ್ತು ಕಾರ್ಪೋರೇಷನ್ ಕಮಿಷನರ್ ಶಿಲ್ಪಾ ನಾಗ್ ನಡುವಿನ ಬಿರುಕು ಸ್ಫೋಟಗೊಂಡಿದೆ.
ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಐಎಎಸ್ ಅಧಿಕಾರಿಗಳ ನಡುವಿನ ಈ ವಿವಾದದ ಹಿನ್ನೆಲೆಯಲ್ಲಿ ಇಬ್ಬರನ್ನೂ ಒಂದೇ ತಕ್ಕಡಿಗೆ ಹಾಕಿ ನೋಡುವ ಕೆಲಸ ಒಂದಾದರೆ, ರೋಹಿಣಿ ಅವರ ಇಮೇಜ್ ಗಮನಿಸಿ ಅವರ ಕಾರ್ಯವೈಖರಿ ಕಂಡೇ ಇರದವರು ಅವರ ಪರವಾಗಿ ಮಾತಾಡುತ್ತಿರುವುದು ಮತ್ತೊಂದು ಕಡೆ.
ಮೂಲತಃ ಇದು ಅಧಿಕಾರಿಯೊಬ್ಬರ ಆಡಳಿತದ ಧೋರಣೆಗೆ ಸಂಬಂಧಿಸಿದ್ದು. ರೋಹಿಣಿಯವರ ಸಮಸ್ಯೆ ಇರುವುದು ಇಲ್ಲಿ. ಮಾಮೂಲಿ ಸಂದರ್ಭದಲ್ಲಿ ಡಿಸಿ ಒಬ್ಬರಿಗೆ ರೆವಿನ್ಯೂ ದಾಖಲೆಗಳ ಕಳ್ಳಾಟ ಗಮನಿಸಿ ನೋಟೀಸ್ ಕೊಡುವುದು ಇತ್ಯಾದಿ ಸರಿಯಾದ ಆಡಳಿತ ವಿಧಾನ. ಆದರೆ ಡಿಸಿ ಒಬ್ಬರಿಗೆ ಈ ಹುಳುಕು ಹುಡುಕಿ ನೋಟೀಸ್ ಕೊಡುವುದೊಂದೇ ಕೆಲಸ ಅಲ್ಲ. ಎಲ್ಲರಿಗೂ ಮಾರ್ಗದರ್ಶನ ಮಾಡಿ ಅವರಿಂದ ಕೆಲಸ ತೆಗೆಯುವುದು ಬಲು ಮುಖ್ಯ ಜವಾಬ್ದಾರಿ.
ರೋಹಿಣಿ ಭ್ರಷ್ಟಾಚಾರಿ ಅಲ್ಲ. ಶಿಲ್ಪಾ ಅವರೂ ಅಲ್ಲ!
ರೋಹಿಣಿ ಈ ಹಿಂದೆ ಹಾಸನದಲ್ಲಿದ್ದಾಗಲೂ ಪ್ರಚಾರಪ್ರಿಯತೆಯಿಂದಾಗಿ ಎಡವಟ್ಟು ಮಾಡಿಕೊಂಡಿದ್ದರು. ವೈಯುಕ್ತಿಕ ಮಟ್ಟದಲ್ಲೂ ಈಕೆಯ ವರ್ತನೆಯಿಂದ ನೊಂದ ಸಾಮಾಜಿಕ ಕಾರ್ಯಕರ್ತರಿದ್ದಾರೆ. ದಲಿತರಿಗೆ ಸಂಬಂಧಿಸಿದ ಒಂದೇ ಒಂದು ಸಭೆಯನ್ನೂ ಅವರು ಕರೆದಿಲ್ಲ ಎಂಬ ವಿವರವನ್ನು ಹಾಸನದ ಗೆಳೆಯರು ಹೇಳುತ್ತಾರೆ. ಮಂಡ್ಯದ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿದ್ದಾಗ ಶೌಚಾಲಯ ಅಭಿಯಾನ ಅದ್ಭುತವಾಗಿ ಮಾಡಿ ಗಮನ ಸೆಳೆದಿದ್ದರು. ಆದರೆ ಉದ್ಯೋಗಖಾತರಿ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದರು.
ಈ ಒಗಟಿಗೆ ಅಧಿಕಾರಿಯೊಬ್ಬರು ಉತ್ತರ ಹೇಳಿದ್ದರು. ಸ್ವಚ್ಛ ಭಾರತ ಅಭಿಯಾನ ಸ್ಕೋರಿಂಗಿಗೆ ಸಹಾಯ ಮಾಡುತ್ತೆ. ದೆಹಲಿಯ ಗಮನ ಸೆಳೆಯಲೂ ಸಹಾಯ ಮಾಡುತ್ತೆ ಅಂತ.
ಮೈಸೂರಿನ ವಿಷಯಕ್ಕೆ ಬಂದರೆ; ಮೈಸೂರಿಗೆ ರೋಹಿಣಿ ಸಿಂಧೂರಿ ಅವರು ಡಿಸಿಯಾಗಿ ಬಂದಿದ್ದೇ ಶರತ್ ಎಂಬ ಅಧಿಕಾರಿಗೆ ಖೋ ಕೊಟ್ಟು. ರೋಹಿಣಿಯವರನ್ನು ಮೈಸೂರು ಡಿಸಿ ಮಾಡುವ ಏಕಮಾತ್ರ ಕಾರಣಕ್ಕೆ ಶರತ್ ಅವರನ್ನು ಎತ್ತಂಗಡಿ ಮಾಡಲಾಯಿತು. ಶರತ್ ಆಡಳಿತ ನ್ಯಾಯಮಂಡಳಿಯ ಮೊರೆ ಹೊಕ್ಕು ಅವರ ಪರವಾಗಿ ತೀರ್ಪು ಬಂದರೂ ಸರಕಾರ ಏನೂ ಮಾಡಲಿಲ್ಲ. ಈಗ ಶರತ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ವಿಪರ್ಯಾಸವೆಂದರೆ ರೋಹಿಣಿಯವರನ್ನು ಹೀಗೆ ವರ್ಗ ಮಾಡಿದಾಗ ಅವರು ಆಡಳಿತ ನ್ಯಾಯ ಮಂಡಳಿಯ ಮೊರೆ ಹೊಕ್ಕು ಮತ್ತೆ ಹಾಸನದ ಡಿಸಿಯಾಗಿ ಮರಳಿದ್ದರು. ಆದರೆ, ತನ್ನ ಸಹೋದ್ಯೋಗಿ ಅಧಿಕಾರಿಗೆ ಖೋ ಕೊಡುವಾಗ ಆಕೆಗೆ ಏನೂ ಅನಿಸಲಿಲ್ಲ!
ಮೈಸೂರಿನಲ್ಲಿ ಈ ಹಿಂದೆ ಡಿಸಿಯಾಗಿದ್ದ ಅಭಿರಾಂ ಶಂಕರ್, ಸಮಸ್ಯೆ ಇದ್ದ ಪ್ರದೇಶಕ್ಕೆ ಸ್ವತಃ ಭೇಟಿ ಕೊಟ್ಟು ಕೈಕೆಳಗಿನ ಅಧಿಕಾರಿ, ಸಿಬ್ಬಂದಿಯ ತಪ್ಪು ತಿದ್ದಿ ಕೆಲಸ ಮಾಡುವಂತೆ ಹೇಳುತ್ತಿದ್ದರು. ‘ಕಣ್ಣಿಟ್ಟಿದ್ದೇನೆ’, ‘ಶಿಕ್ಷೆಗೊಳಪಡಿಸುತ್ತೇನೆ’ ಎಂಬ ಅಸ್ತ್ರಗಳನ್ನು ಅವರು ಎಂದೂ ಉಪಯೋಗಿಸಲಿಲ್ಲ.
ಆದರೆ, ರೋಹಿಣಿಯವರು ಜಿಲ್ಲೆಯ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇ ಅಪರೂಪ. ಬಹುತೇಕ ವಿಡಿಯೋ ಮೀಟಿಂಗ್ ಮಾಡುತ್ತಾ ಅಧಿಕಾರಿಗಳಲ್ಲಿ ಭಯ ಬಿತ್ತಿದ್ದೇ ಜಾಸ್ತಿ. ಈ ರೀತಿಯ ಕಾರ್ಯವೈಖರಿಯಲ್ಲಿ ಅಧಿಕಾರಿಗಳು, ಬೀಸುವ ದೊಣ್ಣೆಯಿಂದ ಪಾರಾದರೆ ಸಾಕು ಎಂದು ಸುಳ್ಳೇ ದಾಖಲೆ ಕೊಟ್ಟು ಪಾರಾಗಲು ನೋಡುತ್ತಾರೆ.
ಮೈಸೂರು ಹದಗೆಟ್ಟಿದ್ದು ಹೀಗೆ.
ಮೊನ್ನೆ ಮೋದಿ ಎಲ್ಲಾ ಸಾಂವಿಧಾನಿಕ ಶಿಷ್ಟಾಚಾರ ಉಲ್ಲಂಘಿಸಿ ಡಿಸಿಗಳ ಜೊತೆ ಸಭೆ ನಡೆಸಿದರಲ್ಲಾ, ಆ ಸಭೆಗೆ ಆಯ್ಕೆಯಾದವರಲ್ಲಿ ರೋಹೀಣಿ ಕೂಡಾ ಒಬ್ಬರು. “ನೀವೇ ಆಡಳಿತ ನಡೆಸಿ, ಸಮಸ್ಯೆ ಬಂದರೆ ನನ್ನನ್ನು ಸಂಪರ್ಕಿಸಿ” ಎಂದು ಮೋದಿ ಹೇಳಿದ ಬಳಿಕ ರೋಹಿಣಿ ಅವರ ಕಾರ್ಯ ವೈಖರಿ ಇನ್ನಷ್ಟು ಅಧಿಕಾರಶಾಹಿಯಾಯಿತು. ಈ ಮಧ್ಯೆ ಆಕೆ ತನ್ನ ವರ್ತನಾ ಸಮಸ್ಯೆಯಿಂದ ಬಹುತೇಕ ಎಲ್ಲಾ ಜನ ಪ್ರತಿನಿಧಿಗಳನ್ನು ಎದುರು ಹಾಕಿಕೊಂಡದ್ದಾಗಿದೆ. ಶಿಲ್ಪಾ ಅವರೊಂದಿಗೂ ಇದೇ ಸಮಸ್ಯೆ.
ಈ ಮಧ್ಯೆ ಕೆಲವು ದಿನಗಳ ಹಿಂದೆ ಲಸಿಕೆ ಲಭ್ಯವಿಲ್ಲ ಎಂದು ಜಾಹೀರಾದಾಗ ಖಾಸಗಿ ಆಸ್ಪತ್ರೆಯಾದ ‘ಅಪೋಲೋದಲ್ಲಿ ಲಸಿಕೆ ಹಾಕಿಸಿಕೊಳ್ಳಿ’ ಎಂದು ಅಧಿಕೃತ ಸೂಚನೆ ನೀಡಿದ ಮೊದಲ ಡಿಸಿ ರೋಹಿಣಿ ಅವರು!! ಈ ಲಸಿಕೆ ಬಿಟ್ಟಿ ಅಲ್ಲ; ರೂ.1200 ತೆರಬೇಕು. ಇದೇ ವೇಳೆ ತೇಜಸ್ವಿ ಸೂರ್ಯ ಕೂಡಾ ಇದೇ ಖಾಸಗಿ ಲಸಿಕಾ ಅಭಿಯಾನಕ್ಕೆ ಬ್ರಾಂಡ್ ಅಂಬಾಸೆಡರ್ ಆಗಿದ್ದು! ಇದು ನಮ್ಮ ಕೆಲವು ಪ್ರಗತಿಪರರಿಗೆ ಮರೆತೇ ಹೋಗಿದೆ ಅನ್ನಿಸುತ್ತೆ.
ಒಬ್ಬ ಜಿಲ್ಲಾಧಿಕಾರಿಯಾಗಿ ಈ ಸಾಂಕ್ರಾಮಿಕ ಎಮರ್ಜೆನ್ಸಿಯಲ್ಲಿ ಎಲ್ಲಾ ಅಧಿಕಾರವೂ ಪ್ರಾಪ್ತವಾದಾಗ ಪ್ರಜಾ ಸತ್ತಾತ್ಮಕವಾದ ಸಾರ್ವತ್ರಿಕ ಲಸಿಕಾ ಅಭಿಯಾನ ಮಾಡಬೇಕೆಂದು ರೋಹಿಣಿಯವರಿಗೆ ಅನ್ನಿಸಲಿಲ್ಲ!
ಇನ್ನು ಶಿಲ್ಪಾ ಅವರೊಂದಿಗಿನ ತಿಕ್ಕಾಟ ತೀರಾ ಇತ್ತೀಚೆಗಿನದ್ದು! ಕಾರ್ಪೋರೇಶನ್ ಸಿಬ್ಬಂದಿ ಒಬ್ಬರು ಸತ್ತಾಗ ಆತನ ತಾಯಿಯನ್ನು ಶಿಲ್ಪಾ ಅವರು ಸಂತೈಸಿದ ಫೋಟೋ ಏಕಾಏಕಿ ಐಎಎಸ್ ಬಳಗದಲ್ಲಿ ವೈರಲ್ ಆಗಿದ್ದೇ ರೋಹಿಣಿಯವರು ತನ್ನ ಫೋಟೋ ಬರಲಿಲ್ಲ ಎಂದು ಬೇಗುದಿಪಟ್ಟುಕೊಂಡರು ಎಂಬ ಕತೆ ಅಧಿಕಾರಿ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ.
ಮೈಸೂರು ಕಾರ್ಪೋರೇಶನ್ ಸಿ.ಎಸ್.ಆರ್. ನಿಧಿ ಪಡೆದು ಕೆಲಸ ಶುರು ಮಾಡಿದಾಗ ಅದರ ಲೆಕ್ಕ ಒಪ್ಪಿಸಿ ಎಂದು ನೋಟೀಸ್ ಕಳಿಸಿದರು. ಸರಿ. ಆದರೆ ಅದರ ಮೊದಲು ಈ ಸಿ.ಎಸ್.ಆರ್. ಜವಾಬ್ದಾರಿಯಿಂದ ಕಮಿಷನರ್ ಅವರನ್ನು ಕಿತ್ತು ಹಾಕಿ ಅರಮನೆ ಪ್ರಾಧಿಕಾರದ ಅಧಿಕಾರಿಗೆ ವಹಿಸಿದ್ದು ಯಾಕೆ ಎಂಬುದಕ್ಕೆ ರೋಹಿಣಿ ಅವರಲ್ಲಿ ಉತ್ತರ ಇಲ್ಲ!. ಈ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ಆರೋಪ ಚಾಮುಂಡಿ ಬೆಟ್ಟದಷ್ಟೆತ್ತರ ಇದ್ದರೂ ಇನ್ನೂ ಅಲ್ಲೇ ಇದ್ದಾರೆ!
ಕಾರ್ಪೋರೇಶನ್ನಿಗೆ ಲಭ್ಯವಾದ ನಿಧಿಯ ವೆಚ್ಚಕ್ಕೆ ಸಂಬಂಧಿಸಿದಂತೆ ಕಾರ್ಪೋರೇಶನ್ನಿನ ಚುನಾಯಿತ ಪ್ರತಿನಿಧಿಗಳಿಗೆ ಪ್ರಾಥಮಿಕವಾಗಿ ಕಮಿಶನರ್ ಉತ್ತರದಾಯಿಯಾಗುತ್ತಾರೆ. ಆದ್ದರಿಂದ ಡಿಸಿಯಾಗಿ ಕಾರ್ಪೋರೇಶನ್ನಿನ ಮೇಯರ್ ಮತ್ತಿತರರನ್ನು ಕೇಳಬೇಕು ಎಂಬ ಪ್ರಾಥಮಿಕ ಸಂಗತಿಯೂ ರೋಹಿಣಿಯವರಿಗೆ ಗೊತ್ತಿಲ್ಲವೇ? ಮುಖಭಂಗ ಮಾಡುವ ಚಟ ಹತ್ತಿದ ಅಧಿಕಾರಿ ನಿಧಾನಕ್ಕೆ ಆಡಳಿತ ಯಂತ್ರವನ್ನು ಕೆಡಿಸುತ್ತಾ ಬರುತ್ತಾರೆ.
ಇನ್ನು ಸ್ವಿಮ್ಮಿಂಗ್ ಪೂಲ್ ಇತ್ಯಾದಿ ಕ್ಷುಲ್ಲಕ ರಾಜಕೀಯ ಗಾಸಿಪ್ಪಿನ ಭಾಗವಾಗಿ ಬಂದ ಆರೋಪ. ಆದರೆ ಅದರಲ್ಲೂ ರೋಹಿಣಿಯವರು ಸರಿಯಾದ ಉತ್ತರ ಕೊಟ್ಟಿಲ್ಲ.
ಆಡಳಿತಾತ್ಮಕವಾಗಿ ವಿಚಿತ್ರ ಧೋರಣೆಯ ಮೂಲಕ ಕೊರೋನಾ ನಿರ್ವಹಣೆಯಲ್ಲಿ ಗೊಂದಲ ಸೃಷ್ಟಿಯಾಗುತ್ತಿರುವ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಶಿಲ್ಪಾ ನಾಗ್ ಅವರು ಸಿಡಿದದ್ದು ಸದ್ಯ ಈ ಸವಾರಿಯ ಕಿರಿಕಿರಿಯನ್ನು ಅನಾವರಣಗೊಳಿಸಿದೆ. ಉಳಿದ ಕೈಕೆಳಗಿನ ಅಧಿಕಾರಿಗಳು ಈ ಸವಾರಿ ಬಗ್ಗೆ ಮಾತೆತ್ತಲು ಸಾಧ್ಯವೇ ಇಲ್ಲ ಎಂಬುದು ನಮಗೆ ಗೊತ್ತಿರಬೇಕು.
ಇನ್ನು ರೋಹಿಣಿಯವರಿಗೆ ಯಾರಾದರೂ ಹಿರಿಯ ಅಧಿಕಾರಿಗಳು ಮನುಷ್ಯರನ್ನು ಅನುಕಂಪದಿಂದ ನೋಡಿ ಮಾತಾಡಿಸುವ ಬಗ್ಗೆ ಪಾಠ ಮಾಡಬೇಕು. ಹಿರಿಯ ಐಎಎಸ್ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯ ಸೋಂಭೇರಿ ಕಾರ್ಯವೈಖರಿಗೆ ದಾಖಲೆ ಸಮೇತ ಝಾಡಿಸಿ, ಆಮೇಲೆ ರಾತ್ರಿ ತಮ್ಮನಿಗೆ ಹಿತವಚನ ಹೇಳಿದ ರೀತಿಯಲ್ಲಿ, ಸಾರಿ ಅಂತ ಶುರು ಮಾಡಿ ಮಾತಾಡಿದ್ದು ನನಗೆ ಗೊತ್ತು.
ಪ್ರಚಾರದ ಹಂಬಲದೊಂದಿಗೆ ಅಧಿಕಾರವನ್ನು ಪಿನಲೈಸ್ ಮಾಡುವ, ಬೆದರಿಕೆಯೊಂದಿಗೆ ಬಳಸುವ ಅಧಿಕಾರಿಗೆ ಜನಪರ ಕೆಲಸ ಮಾಡಿಸುವ ದಾರಿಯೇ ಕ್ರಮೇಣ ಮುಚ್ಚಿ ಹೋಗುತ್ತದೆ.