ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅಚ್ಚರಿಯ ಉತ್ತರ ನೀಡಿ ಗಮನ ಸೆಳೆದಿದ್ದಾರೆ. “ಬಿಜೆಪಿಯಲ್ಲಿರುವ ನಿಮ್ಮ ಮೆಚ್ಚಿನ ನಾಯಕ ಯಾರು?” ಎಂಬ ಪ್ರಶ್ನೆಗೆ ಅವರು ಮಾಜಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಜೆನ್-ಝೀ ಯುವಕರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಯಾವುದೇ ಪ್ರಶ್ನೆಯನ್ನು ಕೇಳಬಹುದು ಎಂದು ಆಹ್ವಾನಿಸಿದ್ದರು. ಈ ವೇಳೆ ನೆಟ್ಟಿಗರೊಬ್ಬರು ಬಿಜೆಪಿಯಲ್ಲಿರುವ ತಮ್ಮ ಮೆಚ್ಚಿನ ನಾಯಕನ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ಹಿಂಜರಿಕೆ ಇಲ್ಲದೆ ಅಮರಿಂದರ್ ಸಿಂಗ್ ಅವರ ಹೆಸರನ್ನು ಹೇಳಿದರು.ಅವರ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ಖಂಡಿತವಾಗಿಯೂ ಕ್ಯಾಪ್ಟನ್ ಅಮರಿಂದರ್ ಸಿಂಗ್. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಅತ್ಯಂತ ತಾಳ್ಮೆಯ ವ್ಯಕ್ತಿ. ಸೇನಾ ಇತಿಹಾಸದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅದಕ್ಕಾಗಿ ಅವರನ್ನು ನಾನು ತುಂಬಾ ಗೌರವಿಸುತ್ತೇನೆ” ಎಂದು ಹೇಳಿದರು.

ಕೊನೆಯಲ್ಲಿ ನಗುತ್ತಾ “ಹಲೋ ಅಂಕಲ್ ಅಮರಿಂದರ್” ಎಂದೂ ಅಭಿನಂದಿಸಿದರು.ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2021ರಲ್ಲಿ ಪಂಜಾಬ್ ಮುಖ್ಯಮಂತ್ರಿ ಸ್ಥಾನ ತೊರೆದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಪಂಜಾಬ್ ಲೋಕ್ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದರು. ನಂತರ 2022ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು.ಕಾಂಗ್ರೆಸ್‌ನಲ್ಲಿ ಇದ್ದ ಸಮಯದಲ್ಲಿ ರಾಹುಲ್ ಗಾಂಧಿ ಮತ್ತು ಅಮರಿಂದರ್ ಸಿಂಗ್ ಒಟ್ಟಿಗೆ ಕೆಲಸ ಮಾಡಿದ್ದರೂ, ಅವರು ಕಾಂಗ್ರೆಸ್ ತೊರೆದ ಬಳಿಕ ಇಬ್ಬರ ರಾಜಕೀಯ ದಾರಿಗಳು ಬೇರ್ಪಟ್ಟಿದ್ದವು. ಆದರೂ ರಾಹುಲ್ ಗಾಂಧಿ ಅವರ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.






