ಉತ್ತರ ಪ್ರದೇಶದಲ್ಲಿ ಯಾವೆಲ್ಲಾ ಕಾರಣಕ್ಕೆ ಬಂಧನಕ್ಕೊಳಗಾಗುತ್ತಾರೆ, ದಾಳಿಗೆ ಒಳಗಾಗುತ್ತಾರೆ ಅನ್ನುವುದು ಊಹಿಸಲು ಸಾಧ್ಯವಾಗದಂತಹ ವಿದ್ಯಾಮಾನಗಳು ಪ್ರತಿನಿತ್ಯ ವರದಿಯಾಗುತ್ತಿದೆ. ಅಂತಹದ್ದೇ ಪ್ರಕರಣವೊಂದರಲ್ಲಿ ಕಬಾಬ್ ಕಟ್ಟಿದ ಪೇಪರಿನಲ್ಲಿ ಹಿಂದೂ ದೇವತೆಯರ ಚಿತ್ರವಿತ್ತು ಎಂಬ ಕಾರಣಕ್ಕಾಗಿ ಹೊಟೆಲ್ ಮಾಲಿಕರೊಬ್ಬರನ್ನು ಬಂಧಿಸಲಾಗಿದೆ.
ಇದು ನಡೆದಿರುವುದು, ಉತ್ತರಪ್ರದೇಶದ ಸಂಭಾಲ್ ನಗರದಲ್ಲಿ, ದೇವರು ಮತ್ತು ದೇವತೆಗಳ ಚಿತ್ರಗಳಿರುವ ನ್ಯೂಸ್ ಪೇಪರ್‌ನಲ್ಲಿ ಕೋಳಿ ಮಾಂಸ ಕಟ್ಟಿ ಕೊಡುತ್ತಿದ್ದ ಎಂಬುದು ಬಂಧಿತ ವ್ಯಕ್ತಿಯ ವಿರುದ್ಧ ಇರುವ ಆರೋಪ. ತನಿಖೆ ನಡೆಸಲು ಸ್ಥಳಕ್ಕೆ ಹೋದ ಪೊಲೀಸ್ರ ಮೇಲೆಯೇ ದಾಳಿಗೂ ಯತ್ನಿಸಲಾಗಿದೆ ಎಂದು ಪೊಲೀಸರು ದೂರಿದ್ದು, ಸದ್ಯ ಧರ್ಮಗಳ ನಡುವೆ ಹಗೆತನ ಸಾಧಿಸುವುದು, ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಅಪವಿತ್ರೀಕರಣ ಮಾಡುವುದು, ಕೊಲೆ ಯತ್ನ ಮೊದಲಾದ ಪ್ರಕರಣ ದಾಖಲಿಸಿ ಹೊಟೆಲ್ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಈ ಮಾಹಿತಿ ನೀಡಿದ್ದಾರೆ. ಸೋಮವಾರ ಹಿರಿಯ ಸಬ್‌ಇನ್‌ಸ್ಪೆಕ್ಟರ್ ಅಜಯ್‌ಕುಮಾರ್ ಅವರು ಈ ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಭಾಲ್ ಕೊತ್ವಾಲಿ ಪ್ರದೇಶದಲ್ಲಿ ತಾಲಿಬ್ ಹುಸೇನ್ ಎಂಬ ವ್ಯಕ್ತಿ ತನ್ನ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಿರುವ ಪೇಪರಿನಲ್ಲಿ ಕೋಳಿ ಮಾಂಸ ಕಟ್ಟಿ, ಮಾರಾಟ ಮಾಡುತ್ತಿದ್ದಾರೆ ಎಂದು ಕೆಲವರು ದೂರು ನೀಡಿದ್ದು, ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿತ್ತು. ತನಿಖೆ ವೇಳೆ ತಾಲಿಬ್ ಪೊಲೀಸ್ ತಂಡದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
