ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಭಾರತದಲ್ಲಿ 1980 ರ ದಶಕದಿಂದಲೂ ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಚಿಕ್ಕ ವಯಸ್ಸಿನಿಂದಲೂ ಸ್ಥಳೀಯ ಗೂಂಡಾಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಭಾರತೀಯ ಅಧಿಕಾರಿಗಳು ವಿವರವಾದ ವರದಿಯನ್ನು ಸಿದ್ಧಪಡಿಸಿದ್ದಾರೆ.
ಈ ವರದಿಯಲ್ಲಿರವ ಮಾಹಿತಿಯ ಬಗ್ಗೆ ಎನ್‌ಡಿಟಿವಿ ಪ್ರಕಟಿಸಿದೆ.
1996 ರಲ್ಲಿ ನಕಲಿ ಪಾಸ್‌ಪೋರ್ಟ್‌ನಲ್ಲಿ ಕೆನಡಾಕ್ಕೆ ಪಲಾಯನ ಮಾಡಿ, ಅಲ್ಲಿ ಟ್ರಕ್ ಡ್ರೈವರ್ ಆಗಿ ಗುರುತಿಸಿಕೊಂಡಿದ್ದ ನಿಜ್ಜರ್, ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ ಎಂದು ವರದಿ ಹೇಳಿದೆ.
ಅಲ್ಲದೆ, ಕೆನಡಾದಲ್ಲಿ ಇರುವಾಗಲೇ ಪಂಜಾಬ್‌ನಲ್ಲಿ ಹಲವಾರು ಹತ್ಯೆಗಳು ಮತ್ತು ದಾಳಿಗಳಿಗೆ ಅವರು ಆದೇಶ ನೀಡಿದ್ದ ಎಂದೂ ಆರೋಪಿಸಲಾಗಿದೆ.
ಪಂಜಾಬ್‌ನ ಜಲಂಧರ್‌ನ ಭರ್ ಸಿಂಗ್ ಪುರ ಮೂಲದ ಹರ್ದೀಪ್ ಸಿಂಗ್ ನಿಜ್ಜರ್ ಗುರ್ನೆಕ್ ಸಿಂಗ್ ಅಲಿಯಾಸ್ ನೇಕಾ ಎಂಬಾತನ ಮೂಲಕ ಸಂಘಟಿತ ಅಪರಾಧ ಚಟುವಟಿಕೆಗೆ ಇಳಿದಿದ್ದ. 1980 ಮತ್ತು 90 ರ ದಶಕದಲ್ಲಿ, ಆತ ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್) ಉಗ್ರಗಾಮಿಗಳೊಂದಿಗೆ ಸಂಬಂಧ ಹೊಂದಿದ್ದು, ನಂತರ 2012 ರಿಂದ, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಜಗತಾರ್ ಸಿಂಗ್ ತಾರಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಭಾರತದ ಅಧಿಕಾರಿಗಳು ಆರೋಪಿಸಿದ್ದಾರೆ.
ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ನಿಜ್ಜರ್ 1996 ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ. ನಂತರ, ಆತ ಪಾಕಿಸ್ತಾನ ಮೂಲದ ಕೆಟಿಎಫ್ ಮುಖ್ಯಸ್ಥ ಜಗತಾರ್ ಸಿಂಗ್ ತಾರಾ ಜೊತೆ ಸೇರಿ 2012 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಹದಿನೈದು ದಿನಗಳ ಕಾಲ ಅಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಯನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಕೆನಡಾಕ್ಕೆ ಹಿಂದಿರುಗಿದ ಬಳಿಕ, ಅಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ತನ್ನ ಸಹಚರರ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಆತ ಪ್ರಾರಂಭಿಸಿದ್ದ. ಅಲ್ಲದೆ, ಪಂಜಾಬ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಜಗತಾರ್ ಸಿಂಗ್ ತಾರಾ ಜೊತೆ ಸೇರಿ ಷಡ್ಯಂತ್ರ ಕೂಡಾ ಮಾಡಿದ್ದ ಎಂಬ ಆರೋಪವೂ ಇದೆ.
2014 ರಲ್ಲಿ, ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆಸಲು ನಿಜ್ಜರ್ ಸಂಚು ಹೂಡಿದ್ದು, ಆದರೆ ಅದು ವಿಫಲವಾಗಿತ್ತು.
ಮಾಜಿ ಡಿಜಿಪಿ ಮಹಮ್ಮದ್ ಇಝಾರ್ ಆಲಂ, ಪಂಜಾಬ್ ಮೂಲದ ಶಿವಸೇನೆಯ ನಾಯಕ ನಿಶಾಂತ್ ಶರ್ಮಾ, ಮತ್ತು ಬಾಬಾ ಮನ್ ಸಿಂಗ್ ಪೆಹೋವಾ ವಾಲೆ ಎಂಬವರ ಕೊಲೆಗೂ ನಿಜ್ಜರ್ ಸಂಚು ಹೂಡಿದ್ದ. ಪಂಜಾಬ್‌ನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ನಿಜ್ಜರ್ ಪಂಜಾಬ್ ಮೂಲದ ಅರ್ಶ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲಾ ಜೊತೆ ಸೇರಿ ಕೆಲಸ ಮಾಡಿದ್ದ. 2020 ರಲ್ಲಿ ಮನೋಹರ್ ಲಾಲ್ ಅರೋರಾ ಮತ್ತು ಜತೀಂದರ್ಬೀರ್ ಸಿಂಗ್ ಅರೋರಾ ಎಂಬವರ ಜೋಡಿ ಕೊಲೆಯನ್ನು ನಡೆಸಲು ಅರ್ಶ್‌ದೀಪ್ ಗೆ ನಿರ್ದೇನ ನೀಡಿದ್ದ ಎನ್ನುವ ಆರೋಪವೂ ಇದೆ.

ಈ ದಾಳಿಯಲ್ಲಿ ಮನೋಹರ್ ಲಾಲ್ ಅವರನ್ನು ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದ್ದು, ಮನೋಹರ್ ಲಾಲ್ ಮಗ ಬದುಕುಳಿದಿದ್ದ. ಈ ಕೊಲೆಗಾಗಿ ನಿಜ್ಜರ್ ಕೆನಡಾದಿಂದ ಹಣವನ್ನು ಕಳುಹಿಸಿದ್ದ. 2021 ರಲ್ಲಿ, ಭರ್ ಸಿಂಗ್ ಪುರ ಗ್ರಾಮದ ಅರ್ಚಕನನ್ನು ಕೊಲೆ ಮಾಡುವಂತೆ ಅರ್ಶ್‌ದೀಪ್‌ಗೆ ಸುಪಾರಿ ನೀಡಿದ್ದ ಎಂದು ಆರೋಪಿಸಲಾಗಿದೆ. ಆದರೆ, ಅರ್ಚಕ ಪ್ರಾಣಾಪಾಯದಿಂದ ಪಾರಾಗಿದ್ದಾರು. ಈ ರೀತಿಯಾಗಿ, ಕೆನಡಾದಲ್ಲಿ ತೆರೆಮರೆಯಿಂದ ಪಂಜಾಬ್‌ನಲ್ಲಿ ಭಯೋತ್ಪಾದನೆಯ ಹಲವು ಕೃತ್ಯಗಳಲ್ಲಿ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಕೊಲೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದ್ದು, ಅದಾದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ.