ಕರೋನವನ್ನು ದಿಟ್ಟತನದಿಂದ ಎದುರಿಸಿದ ಮುಂಬೈ ಮಾದರಿಯನ್ನು ಇಡೀ ದೇಶವೇ ಅಳವಡಿಸಿಕೊಳ್ಳಬೇಕು

ನಮ್ಮ ನಿಮ್ಮ ಸಾವಿರ ಪ್ರಶ್ನೆಗಳಿಗೆ ಒಂದು ಉತ್ತರ. ಕೋವಿಡ್ ಎದುರಿಸುವುದು ಒಂದು ಸರ್ಕಾರವಾಗಿ, ಸಮಾಜವಾಗಿ, ಕುಟುಂಬವಾಗಿ, ವ್ಯಕ್ತಿಯಾಗಿ ಹೇಗೆ ಎಂಬುದು ನಮ್ಮ ಪ್ರಶ್ನೆ. ಅದೊಂದೇ ಪ್ರಶ್ನೆ ಸಾವಿರವಾಗಿ ಒಡೆದುಹೋಗಿ ನಮ್ಮನ್ನು ಕಿತ್ತು ತಿನ್ನುತ್ತಿವೆ. ಇಕ್ಬಾಲ್ ಸಿಂಗ್ ಚಾಹಲ್ ಇದಕ್ಕೆಲ್ಲ ಉತ್ತರ ಹುಡುಕಿಕೊಂಡಿದ್ದಾರೆ. ಸತತ ಒಂದು ವರ್ಷದಿಂದ ಕೋವಿಡ್ ವಿರುದ್ಧ ಯುದ್ಧವನ್ನೇ ಹೂಡಿದ್ದಾರೆ.

ಇಕ್ಬಾಲ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಆಯುಕ್ತರು. ರಾಜಸ್ತಾನ ಮೂಲದ, ಮಹಾರಾಷ್ಟ್ರ ಕೇಡರ್ ನ ಐಎಎಸ್ ಅಧಿಕಾರಿ. ಕಳೆದ ವರ್ಷ ಮುಂಬೈನಲ್ಲಿ ಜನರು ಕೋವಿಡ್ನಿಂದ ಹುಳಗಳಂತೆ ಸಾಯುತ್ತಿದ್ದಾಗ ಇವರನ್ನು ಆಯುಕ್ತರ ಸ್ಥಾನಕ್ಕೆ ತರಲಾಯಿತು. ಅಲ್ಲಿಂದೀಚಿಗೆ ಇಕ್ಬಾಲ್ ಮಾಡಿದ್ದೆಲ್ಲ ಒಂದು ಪವಾಡ, ಅದೊಂದು ರೋಮಾಂಚಕ ಯಶೋಗಾಥೆ, ದೇಶದ ನಾನಾ ರಾಜ್ಯಗಳ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಒಂದು ಪಾಠ.

2020ರ ಮೇ ತಿಂಗಳಿನಲ್ಲಿ ಇಕ್ಬಾಲ್ ಅವರು ಬಿಎಂಸಿ ಆಯುಕ್ತರಾಗಿ ನೇಮಕಗೊಂಡಾಗ ಅವರು ಉನ್ನತ ದರ್ಜೆಯ ಒಟ್ಟು ನೂರಿಪ್ಪತ್ತು ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸುತ್ತಾರೆ. ಅದೂ ಕೂಡ ಜೂಮ್ ಸಭೆಯಲ್ಲ. ನಾನು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬೇಕು, ಹೀಗಾಗಿ physical ಆದ ಸಭೆ ಕರೆದಿದ್ದೇನೆ ಎಂದರು. ಮೊದಲು ಅವರು ಅಷ್ಟೂ ಅಧಿಕಾರಿಗಳಿಗೆ ಹೇಳಿದ್ದು, ನಾವು ಎದುರಿಸುತ್ತಿರುವುದು ಒಂದು ಯುದ್ಧ. It is a war. ನೀವು ಯೋಧರಾದರಷ್ಟೇ ಇದನ್ನು ಎದುರಿಸಲು ಸಾಧ್ಯ. ನಿಮಗೆ ನನ್ನೊಂದಿಗೆ ಕೈ ಜೋಡಿಸುವ ಧೈರ್ಯ ಇದ್ದರಷ್ಟೇ ಬನ್ನಿ, ಇಲ್ಲವಾದಲ್ಲಿ ಹೊರಗೆ ಉಳಿದುಬಿಡಿ. ಜತೆಗೆ ಇದ್ದರೆ ನಿಮಗೆ ಬೇರೆ ದಾರಿ ಇಲ್ಲ. ಈ ಯುದ್ಧ ವರ್ಷ, ಎರಡು ವರ್ಷ ಅಥವಾ ಇನ್ನೂ ಹೆಚ್ಚು ಕಾಲ ನಡೆಯಬೇಕು, ಅಲ್ಲಿಯವರೆಗೆ ನೀವು ಬಡಿದಾಡುತ್ತಲೇ ಇರಬೇಕು ಎಂದರು.

ಇಕ್ಬಾಲ್ ಅದಾದ ನಂತರ ಮಾಡಿದ ಕೆಲಸ ನೇರವಾಗಿ ಬೀದಿಗೆ ಇಳಿದಿದ್ದು. ಇಡೀ ಬಿಎಂಸಿಯ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಬೆದರಿ ಮನೆಯಲ್ಲಿ ಕುಳಿತಿದ್ದರು. ಅವರು ಬೀದಿಗಿಳಿಯದೆ ಏನೂ‌ ಮಾಡಲು ಸಾಧ್ಯವಿರಲಿಲ್ಲ. ಇಕ್ಬಾಲ್ ಮುಂಬೈನ ಆಸ್ಪತ್ರೆಗಳ ಐಸಿಯು ಪ್ರವೇಶಿಸಿದರು. ಸೀದಾ ಸ್ಲಂಗಳಿಗೆ ಹೋದರು. ಕಂಟೈನ್ಮೆಂಟ್ ಜೋನ್ ನಲ್ಲಿ ನಾಲ್ಕು ಕಿ.ಮೀ ವರೆಗೆ ನಡೆದರು. ಜನರಲ್ಲಿ ಸಣ್ಣದಾಗಿ ವಿಶ್ವಾಸ ಮೂಡಿಸಲು ಆರಂಭಿಸಿದರು.

ಬಿಎಂಸಿ ಶ್ರೀಮಂತ ಪಾಲಿಕೆ. ದುಡ್ಡಿಗೇನು ಕೊರತೆಯಿರಲಿಲ್ಲ. ಕೋವಿಡ್ ನಿಂದ ನನ್ನ ಒಂದು‌ ಲಕ್ಷ ಸಿಬ್ಬಂದಿಯಲ್ಲಿ ಯಾರು ಸತ್ತರೂ ಅವರ ಕುಟುಂಬಕ್ಕೆ ಐವತ್ತು ಲಕ್ಷ ಕೊಡುವ ಆದೇಶ ಹೊರಡಿಸಿದರು. ಅಷ್ಟೇ ಅಲ್ಲ,‌ ಸತ್ತವರ ಕುಟುಂಬಕ್ಕೆ ಒಂದು ನೌಕರಿ ಕೊಡುವ ಆದೇಶವನ್ನೂ ಹೊರತಂದರು. ಇಕ್ಬಾಲ್ ಇದೆಲ್ಲ ಮಾಡುತ್ತಿದ್ದಂತೆ ಒಂದು ಲಕ್ಷ ನೌಕರರು ಬೀದಿಗೆ ಇಳಿದರು. ತಮ್ಮ ಉನ್ನತ ಅಧಿಕಾರಿಗಳ ಆದೇಶವನ್ನು‌ ಚಾಚೂ ತಪ್ಪದೆ ಪಾಲಿಸತೊಡಗಿದರು.

ಇಕ್ಬಾಲ್ ಆಯುಕ್ತರಾದ ನಂತರ ಮಾಡಿದ ಬಹುದೊಡ್ಡ ಕೆಲಸವೆಂದರೆ centralised ವ್ಯವಸ್ಥೆಯನ್ನು ಕಿತ್ತು ಎಸೆದಿದ್ದು. ಒಂದು ಕೋಟಿ ಅರವತ್ತು ಲಕ್ಷ ಜನ ಸಂಖ್ಯೆಯ ಮಹಾನಗರಿ ಮುಂಬೈ. ಅದರಲ್ಲಿ ಒಂದು ಕೋಟಿ ಜನರು ಸ್ಲಂಗಳಲ್ಲೇ ವಾಸವಾಗಿದ್ದಾರೆ. ಇಂಥ ವ್ಯವಸ್ಥೆಗೆ ಒಂದು ಕೇಂದ್ರೀಕೃತ ವಾರ್ ರೂಮ್ ಇದ್ದರಾಗದು ಎಂದು ಯೋಚಿಸಿದರು ಇಕ್ಬಾಲ್. ಈತ ಇದೇನು ಮಾಡುತ್ತಿದ್ದಾನೆ, ಕೇಂದ್ರೀಕೃತ ವಾರ್ ರೂಮ್ ತೆಗೆದುಬಿಟ್ಟರೆ ಅರಾಜಕ ವ್ಯವಸ್ಥೆ‌ ಉಂಟಾಗೋದಿಲ್ಲವೇ ಎಂದರು ರಾಜಕಾರಣಿಗಳು. ಇಕ್ಬಾಲ್, ನನಗೆ ಹದಿನೈದು ದಿನಗಳ ಅವಕಾಶ ಕೊಡಿ ಎಂದು ಹೇಳಿ ಕೆಲಸ ಶುರು ಮಾಡಿದರು. ಅಷ್ಟು ದೊಡ್ಡ ಒಂದು ಮುಂಬೈಯನ್ನು ಅವರು ಇಪ್ಪತ್ತ ನಾಲ್ಕು ಮುಂಬೈ ಮಾಡಿಬಿಟ್ಟರು. 24 ಸುಸಜ್ಜಿತ ವಾರ್ ರೂಂಗಳು ದಿನಬೆಳಗಾಗುವುದರೊಳಗೆ ಎದ್ದು ನಿಂತವು.

ಇಕ್ಬಾಲ್ ಅವರ ಕಣ್ಣು ವೈದ್ಯಕೀಯ ವಿಜ್ಞಾನ‌ ಕೊನೆಯ‌ ವರ್ಷ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ‌ ಬಿತ್ತು. ಒಂದೊಂದು ಕಾಲೇಜಿನಿಂದ ತಲಾ ಇನ್ನೂರು‌ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿದರು. ಅವರಿಗೆ ತಲಾ ಐವತ್ತು ಸಾವಿರ ಸಂಬಳ ಫಿಕ್ಸ್ ಮಾಡಿದರು. ಎಲ್ಲರಿಗೂ ಐಶಾರಾಮಿ ಹೋಟೆಲುಗಳಲ್ಲಿ ಕೂರಿಸಿ ಕೆಲಸಕ್ಕೆ ಹಚ್ಚಿದರು. ಅವರ ಕೆಲಸ ರೋಗಿಗಳಿಗೆ ಚಿಕಿತ್ಸೆ ಕೊಡುವುದಲ್ಲ. ಪ್ರತಿನಿತ್ಯ ರಿಪೋರ್ಟ್ ಆಗುವ ಪಾಜಿಟಿವ್ ಕೇಸುಗಳನ್ನು ವಿಂಗಡಿಸಿ, ಚಿಕಿತ್ಸೆಯ ಆದ್ಯತೆಗಳನ್ನು ನಿರ್ಧರಿಸುವುದು. ಇಕ್ಬಾಲ್ ಅವರ ಈ ಮಾದರಿ ಫಲಕೊಡತೊಡಗಿತು. ಹಿಂದಿನ‌ ದಿನ ಪರೀಕ್ಷೆಗೆ ಸ್ಯಾಂಪಲ್ ಕೊಟ್ಟವರ ಲ್ಯಾಬ್ ರಿಪೋರ್ಟ್ ಗಳು ನೇರವಾಗಿ ಪೇಶೆಂಟ್ ಕೈಗೆ ತಲುಪುತ್ತಿರಲಿಲ್ಲ. ಈ ಜೂನಿಯರ್ ವೈದ್ಯರ ಕೈಗೆ ಸಿಗುತ್ತಿದ್ದವು.

ಮರುದಿನ ಬೆಳಿಗ್ಗೆ ಹೊತ್ತಲ್ಲಿ ಎಲ್ಲವೂ ಫೈನಲ್! ಶೇ.85ರಷ್ಟು ಮಂದಿ asymptotic ಆದ್ದರಿಂದ ಅವರಿಗೆ ಮನೆಗಳಲ್ಲೇ ಉಳಿಯಲು ಹೇಳಲಾಗುತ್ತಿತ್ತು. ದಿನಕ್ಕೆ ಐದು ಬಾರಿ ಇದೇ ಜೂನಿಯರ್ ವೈದ್ಯರು ಕರೆ ಮಾಡಿ ಅವರನ್ನು ವಿಚಾರಿಸಿಕೊಳ್ಳುತ್ತಿದ್ದರು. ಮಿಕ್ಕ ರೋಗಿಗಳ ಮನೆಗಳಿಗೆ ಸೀದಾ ಬಿಎಂಸಿ ವೈದ್ಯರೇ ಆಂಬ್ಯುಲೆನ್ಸ್ ನೊಂದಿಗೆ ತೆರಳುತ್ತಿದ್ದರು. ಅವರ ಬಿಪಿ, ಸ್ಯಾಚುರೇಷನ್, ಟೆಂಪರೇಚರ್ ಅಲ್ಲೇ ಟೆಸ್ಟ್ ಮಾಡಿ, ಅವರಿಗೆ hospitalisation ಬೇಕಿದ್ದರೆ ಎಂಥ ಬೆಡ್ ಬೇಕು, ಆಕ್ಸಿಜನ್ ಬೆಡ್ ಬೇಕೆ, ಐಸಿಯು ಬೆಡ್ ಬೇಕೆ, ವೆಂಟಿಲೇಟರ್ ಬೇಕೆ ಎಂದು ನಿರ್ಧರಿಸಿ, ನೇರವಾಗಿ ಆಸ್ಪತ್ರೆಗೆ ಕಳಿಸುತ್ತಿದ್ದರು. ರೋಗಿಗಳು ಯಾವ ಆಸ್ಪತ್ರೆಯಲ್ಲೂ ಬೆಡ್ ಹುಡುಕುವ ಅಗತ್ಯವೇ ಇರಲಿಲ್ಲ. ಬೆಡ್ ಅನಗತ್ಯವಾದವರಿಗೆ ಸಿಗುತ್ತಲೂ ಇರಲಿಲ್ಲ. ಇಕ್ಬಾಲ್ ಮುಂಬೈನ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಎಲ್ಲ ಆಸ್ಪತ್ರೆಗಳು ಶೇ. 80 ರಷ್ಟು ಬೆಡ್ ಗಳನ್ನು‌ ಬಿಎಂಸಿಗೆ ಬಿಟ್ಟುಕೊಟ್ಟಿದ್ದವು. ಕೋವಿಡ್ ರೋಗಿಗಳು ಎಲ್ಲರೂ ಬಿಎಂಸಿ ಮೂಲಕವೇ ಆಸ್ಪತ್ರೆಗೆ ಸೇರಬೇಕಾದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ಬಂದಿತು.

ನಂತರ ನಿಧಾನವಾಗಿ ಎಲ್ಲವೂ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದವು. ಸಾವಿರದಿನ್ನೂರು ಐಸಿಯು ಹಾಸಿಗೆಗಳ ಸಾಮರ್ಥ್ಯವನ್ನು 2800ಕ್ಕೆ ಏರಿಸಲಾಯಿತು. Oxygenated ಬೆಡ್ ಗಳ ಸಂಖ್ಯೆಯನ್ನು ಪ್ರತಿನಿತ್ಯ ಏರಿಸುತ್ತಲೇ ಬರಲಾಯಿತು. ಈ ವರ್ಷ ಜನವರಿ ಹೊತ್ತಿಗೆ ಆಸ್ಪತ್ರೆಗಳು ಖಾಲಿ ಹೊಡೆಯತೊಡಗಿದವು. 2000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಐಸಿಯುನಲ್ಲಿ ಕೇವಲ ಮೂರೇ ಜನ. ಏನು ಮಾಡೋದು‌ ಸರ್, ಮುಚ್ಚಿಬಿಡೋದಾ ಎಂದರು ಅಲ್ಲಿನ ವೈದ್ಯರು. ಇಕ್ಬಾಲ್ ಆಗೋದಿಲ್ಲ ಎಂದರು. ಇನ್ನೂ ಎರಡನೇ ಅಲೆ ಬರೋದಿದೆ, ನಾವು ತಯಾರಾಗೋಣ ಎಂದರು. ಅಷ್ಟು ಹೊತ್ತಿಗಾಗಲೇ ನಾಲ್ಕು ಬೃಹತ್ ಆಸ್ಪತ್ರೆಗಳನ್ನು ಬಿಎಂಸಿಯಿಂದಲೇ ಕಟ್ಟುವ ಕಾರ್ಯಕ್ರಮ ಆರಂಭಗೊಂಡಿತ್ತು. ಸಾವಿರದಿನ್ನೂರು ಐಸಿಯುಗಳು, ಏಳು ಸಾವಿರಕ್ಕೂ ಹೆಚ್ಚು ಬೆಡ್ ಗಳು. ಅವುಗಳಲ್ಲಿ ಶೇ. 70ರಷ್ಟು oxygenated ಬೆಡ್ ಗಳು! ಇವುಗಳ ನಿರ್ವಹಣೆ ನೀವೇ‌ ಮಾಡಿ ಎಂದು ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕೇಳಿದರು ಇಕ್ಬಾಲ್, ಅವರೂ ಕೂಡ ಒಪ್ಪಿಕೊಂಡರು.

ಇಕ್ಬಾಲ್ ಅವರ ನಿರೀಕ್ಷೆಯಂತೆ ಮಾರ್ಚ್ ನಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿತು. ಅದು ಮೊದಲು ಅಪ್ಪಳಿಸಿದ್ದು ಮುಂಬೈಯನ್ನೇ. ಈ ಬಾರಿ ಇಕ್ಬಾಲ್ ಸಕಲ ತಯಾರಿ ಮಾಡಿ ಕುಳಿತಿದ್ದರು. ವಾರ್ ರೂಂಗಳು ಮತ್ತೆ ಎದ್ದುನಿಂತವು. ಅದೇ ಜೂನಿಯರ್ ವೈದ್ಯರು ಹಾಗೇ ಕೆಲಸ ಶುರು ಮಾಡಿದರು, ಈಗ ಅವರ ಪಗಾರವೂ ಹೆಚ್ಚಿಗೆಯಾಗಿತ್ತು. ಆಸ್ಪತ್ರೆಗಳಲ್ಲಿ ಐಸಿಯುಗಳು ಹೆಚ್ಚಿದ್ದವು. ಆರಂಭದಲ್ಲಿ ಮೂವತ್ತು ಪರ್ಸೆಂಟಿದ್ದ ಪಾಜಿಟಿವಿಟಿ ರೇಟ್ ಹೆಚ್ಚು ಕಡಿಮೆ ಹತ್ತು ಪರ್ಸೆಂಟಿನ ಆಸುಪಾಸಿಗೆ ಬಂದಿದೆ. ಸಾವಿನ ದರ ಇತರ ಇನ್ಯಾವ ನಗರದಲ್ಲೂ ಇಲ್ಲದಷ್ಟು ಕಡಿಮೆ 0.5 ಪರ್ಸೆಂಟಿಗೆ ಕುಸಿಯಿತು. ದೇಶದ ಸುಪ್ರೀಂ ಕೋರ್ಟ್ ‘ಮುಂಬೈ‌ ನೋಡಿ ಕಲಿಯಿರಿ’ ಎಂದು observation ನುಡಿದುಬಿಟ್ಟಿತು. ಒಕ್ಕೂಟ ಸರ್ಕಾರ ಮತ್ತು ದೆಹಲಿ‌ ರಾಜ್ಯ ಸರ್ಕಾರದ ಅಧಿಕಾರಿಗಳು ಇಕ್ಬಾಲ್ ಅವರನ್ನು ಕರೆಯಿಸಿಕೊಂಡು ಇದೆಲ್ಲ ಹೇಗೆ ಮಾಡಿದಿರಿ ಎಂದು ಪಾಠ ಹೇಳಿಸಿಕೊಂಡರು!

ಕೋವಿಡ್ ಮೊದಲ ಅಲೆಯಲ್ಲಿ ಸೋಂಕಿಗೆ ಗುರಿಯಾದವರಲ್ಲಿ ಶೇ. 90 ರಷ್ಟು ಮಂದಿ ಸ್ಲಂ ನಿವಾಸಿಗಳು. ಅವರು ಶಿಸ್ತಿನ ನಾಗರಿಕರು ಮತ್ತು‌ ಕಾನೂನು‌ಪಾಲಕರು. ತಮ್ಮ ಟೆಸ್ಟ್ ರಿಪೋರ್ಟಿಗಾಗಿ ಅವರು ಲ್ಯಾಬ್ ಗಳ ಹಿಂದೆ ಸುತ್ತದೆ ಬಿಎಂಸಿಗಾಗಿ ಕಾಯುತ್ತಿದ್ದರು. ಬಿಎಂಸಿಯ ಸೂಚನೆಗಳನ್ನು ಪಾಲಿಸುತ್ತಿದ್ದರು. ಹೀಗಾಗಿ ನಮಗೆ ಅಷ್ಟು ಕಷ್ಟವಾಗಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಉಲ್ಟಾ ಆಗಿದೆ. ಸ್ಲಂನವರ ಪೈಕಿ ಶೇ.10 ರಷ್ಟು ಮಂದಿಯಷ್ಟೇ ಈಗ ಸೋಂಕಿತರಾಗುತ್ತಿದ್ದಾರೆ. ಶೇ.40 ಎಷ್ಟು ಮಂದಿ ಈಗಾಗಲೇ ಹರ್ಡ್ ಇಮ್ಯುನಿಟಿ ಗಳಿಸಿಬಿಟ್ಟಿದ್ದಾರೆ. ಆದರೆ ಸ್ಲಂ ಹೊರತಾದ ಜನರೇ ಈಗ ಶೇ. 90 ರಷ್ಟು ಪಾಜಿಟಿವ್ ಆಗುತ್ತಿದ್ದಾರೆ. ಇವರೆಲ್ಲ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ಜನರು. ಇವರಿಗೆ ಕಾಯುವ ತಾಳ್ಮೆ ಇಲ್ಲ ಎನ್ನುತ್ತಾರೆ ಇಕ್ಬಾಲ್.

ನನಗೆ ಮೂರು ತಿಂಗಳ ಸಮಯ, 1,60,00,000 ಡೋಸ್ ವ್ಯಾಕ್ಸಿನ್ ಕೊಡಿ. ಮುಂಬೈನ ಹದಿನೆಂಟು ವಯಸ್ಸು ಮೀರಿದ ಎಂಬತ್ತು ಲಕ್ಷ ಮಂದಿಗೆ ಯಾವ ನೂಕುನುಗ್ಗಲೂ‌ ಇಲ್ಲದಂತೆ ಎರಡೂ ಡೋಸ್ ವ್ಯಾಕ್ಸಿನ್ ಕೊಟ್ಟುಬಿಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಇಕ್ಬಾಲ್. ಬಿಎಂಸಿಯ ಒಂದು ಲಕ್ಷ ನೌಕರರಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಒಬ್ಬರೂ ಎರಡನೇ ಅಲೆಯಲ್ಲಿ ಐಸಿಯುಗೆ ಹೋಗಿಲ್ಲ. ಸತ್ತವರಂತೂ ಇಲ್ಲವೇ‌ ಇಲ್ಲ. ಹೀಗಾಗಿ ಕೈಮುಗಿದು ಕೇಳುತ್ತೇನೆ, ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಿ, ಅದೊಂದೇ ನಿಮ್ಮ ಜೀವ ಕಾಪಾಡಬಲ್ಲದು ಎನ್ನುತ್ತಾರೆ ಇಕ್ಬಾಲ್.

ಕೋವಿಡ್ ಸಂದರ್ಭವನ್ನು ಹೇಗೆ ಎದುರಿಸಬಹುದು ಎಂಬುದಕ್ಕೆ ಇಕ್ಬಾಲ್ ಮಾದರಿ. ಅಂದಹಾಗೆ ಇಕ್ಬಾಲ್ ಮುಂಬೈನಲ್ಲಿ ಏನೇನನ್ನು ಮಾಡಿದರೋ ಥೇಟ್ ಅದೇ ಮಾದರಿಯ ಕಾರ್ಯಯೋಜನೆಯನ್ನು ಕಳೆದ ವರ್ಷ ಕೋವಿಡ್ ಶುರುವಾದ ಆರಂಭದಲ್ಲೇ ನಮ್ಮ ಡಾ.ಶ್ರೀನಿವಾಸ ಕಕ್ಕಿಲಾಯರು ಕರ್ನಾಟಕ ಸರ್ಕಾರಕ್ಕೆ ನೀಡಿದ್ದರು. ನಮ್ಮವರು ಅದನ್ನು ಕಸದ ಬುಟ್ಟಿಗೆ ಎಸೆದರು.!

ಇಕ್ಬಾಲ್ ಅವರನ್ನು ದಿ ಪ್ರಿಂಟ್ ಗಾಗಿ ಶೇಖರ್ ಗುಪ್ತ ಕಳೆದ ವಾರ ಸಂದರ್ಶಿಸಿದ್ದಾರೆ. ಯಾವ ಥ್ರಿಲ್ಲರ್ ಸಿನಿಮಾಗೂ‌ ಕಡಿಮೆ ಇಲ್ಲ ಇಕ್ಬಾಲ್ ಅವರ ಅನುಭವಗಳು. ಇನ್ನೂ ಸಂದರ್ಶನ ನೋಡದವರಿಗೆ ಕಮೆಂಟ್ ಬಾಕ್ಸ್ ನಲ್ಲಿ‌ ಲಿಂಕ್ ಒದಗಿಸಿದ್ದೇನೆ.

ದಿನೇಶ್ ಕುಮಾರ್ ಎಸ್.ಸಿ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...