
ಮೈಸೂರಿನ ದೇವನೂರು 3ನೇ ಹಂತದ ಬಡಾವಣೆಗೆ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ನಿಯಮ ಮೀರಿದ ಬೆಳವಣಿಗೆ ಆಗಿದೆ ಎನ್ನುವುದು ದೂರುದಾರರ ಪ್ರಮುಖ ಆರೋಪ ಆಗಿತ್ತು. 1997ರಲ್ಲಿ ಮುಡಾದಿಂದ 3.16 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿದ್ದು, ಪಾರ್ವತಿ ಸಿದ್ದರಾಮಯ್ಯ ಹೆಸರಿನ ಜಮೀನು ಸ್ವಾಧೀನ ಮಾಡಿಕೊಂಡು, 2014ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಪತ್ರ ಬರೆದಿದ್ದರು. 2020 ರಿಂದ ಶೇಕಡ 50:50 ಬದಲಿ ನಿವೇಶನ ಕೊಡುವಂತಿಲ್ಲ. ಆದರೂ 2021ರಲ್ಲಿ ಸಿಎಂ ಪತ್ನಿ ಪಾರ್ವತಿ ಹೆಸರಿಗೆ ನಿವೇಶನ ಕೊಡಲಾಗಿದೆ. 50:50 ಅನುಪಾತದಲ್ಲಿ 38,284 ಚದರ ಅಡಿ ನಿವೇಶನ ಕೊಡಲಾಗಿತ್ತು.

ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಿದ ಆರೋಪ ಕೇಳಿ ಬಂದಾಗ ಸಿಎಂ ವಿರುದ್ಧ ತನಿಖೆಗೆ ಗವರ್ನರ್ ಅನುಮತಿ ಕೇಳಲಾಗಿತ್ತು. ಆ ಬಳಿಕ ಅನುಮತಿ ಸಿಕ್ಕ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದರು ಸಿಎಂ ಸಿದ್ದರಾಮಯ್ಯ. ಆ ಬಳಿಕ ಹೈಕೋರ್ಟ್ ತಡೆಯಾಜ್ಞೆ ಕೊಡಲಿಲ್ಲ. ಆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಮೈಸೂರು ಲೋಕಾಯುಕ್ತರು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ಇದೀಗ ಲೋಕಾಯುಕ್ತ ಬದಲು ಸಿಬಿಐ ತನಿಖೆಗೆ ದೂರುದಾರ ಸ್ನೇಹಮಯಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ವಿಚಾರಣೆ ಹಂತದಲ್ಲಿದೆ.

ಮುಡಾ ಹಗರಣ ಪ್ರಕರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಜೈಲಿಗೆ ಹೋಗ್ತಾರೆ ಎಂದು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. 50:50 ಹಗರಣದಲ್ಲಿ ಯಾರೇ ನಿವೇಶನ ಪಡೆದಿದ್ದರೂ ಕ್ರಮ ಆಗಬೇಕು. 142 ಆಸ್ತಿಯಲ್ಲಿ ಸಿಎಂ ಸಿದ್ದರಾಮಯ್ಯ, ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್, ಬಿಲ್ಡರ್ ಮಂಜುನಾಥ್ ಅವರದ್ದು ಇರಬಹುದು. ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂಬ ನಮ್ಮ ಹೋರಾಟ ಮುಂದುವರಿಯುತ್ತದೆ. ಮೊದಲಿನಿಂದಲೂ ಹೋರಾಟ ಮಾಡಿದ್ದ ಮಾಧ್ಯಮಗಳಿಗೆ ಧನ್ಯವಾದಗಳು ಎಂದಿದ್ದಾರೆ ಸ್ನೇಹಮಯಿ ಕೃಷ್ಣ.

ಮೈಸೂರಿನಲ್ಲಿ ಮತ್ತೋರ್ವ ದೂರುದಾರ ವಕೀಲ ವಿ. ರವಿಕುಮಾರ್ ಮಾತನಾಡಿ, ಮುಡಾದ ಬಗ್ಗೆ ಮಾಧ್ಯಮಗಳಿಂದ ಉತ್ತಮ ಬೆಂಬಲ ಸಿಕ್ಕಿದೆ. ಮುಡಾದಲ್ಲಿ ಬೋಗಸ್ ವ್ಯಕ್ತಿಗಳಿಗೆ ಸೈಟ್ ನೀಡಿದ್ದರು. ಈ ಹಿಂದೆ ಚೇರ್ ಮೆನ್ ಆಗಿದ್ದ ರಾಜೀವ್, ಹಿಂದಿನ ಆಯುಕ್ತರಾದ ನಟೇಶ್, ದಿನೇಶ್ ವಿರುದ್ಧ ಕ್ರಮ ಆಗಬೇಕು. 142 ಆಸ್ತಿಗಳ ಜೊತೆಗೆ ಕೋಟ್ಯಾಂತರ ರೂಪಾಯಿ ಆಸ್ತಿ ಕೂಡ ಮುಟ್ಟುಗೋಲು ಹಾಕಿಕೊಳ್ಳಬೇಕು. 300 ಕೋಟಿಯಲ್ಲ ಮುಂದಿನ ದಿನಗಳಲ್ಲಿ 3 ಸಾವಿರ ಕೋಟಿ ಮೌಲ್ಯದ ಆಸ್ತಿ ವಾಪಸ್ ಆಗತ್ತದೆ ಎಂದಿದ್ದಾರೆ.


ಇಡಿಯಿಂದ 300 ಕೋಟಿ ಮೌಲ್ಯದ ಮುಡಾ ಆಸ್ತಿ ಮುಟ್ಟುಗೋಲು ವಿಚಾರಕ್ಕೆ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ. ನನಗೆ ಬಹಳ ಸಂತಸವಾಗಿದೆ. ಆರಂಭದಿಂದಲೂ ನಿರಂತರವಾಗಿ ಮಾಧ್ಯಮಗಳು ವರದಿ ಮಾಡಿದವು. ಮಾಧ್ಯಮದ ಸಹಕಾರಕ್ಕೆ ನನ್ನ ಧನ್ಯವಾದಗಳು. ಅಕ್ರಮ ಆಸ್ತಿಗಳು ಮತ್ತಷ್ಟು ಮುಟ್ಟುಗೋಲು ಹಾಕಿಕೊಳ್ಳಬೇಕು. ಈಗಾಗಲೇ ಅಕ್ರಮ ಎಸಗಿ ಮನೆ ಕಟ್ಟಿದ ಬಗ್ಗೆ ಅವುಗಳನ್ನೂ ವಶಕ್ಕೆ ಪಡೆಯಬೇಕು. ಮುಡಾ ಸ್ವಚ್ಚ ಆಗ್ಬೇಕು. ಇಡಿ ಎಂಟ್ರಿಯಿಂದ ಎಲ್ಲಾ ಕ್ಲೀನ್ ಆಗುವ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕರ ಹೆಸರು ಹೊರಗೆ ಬರತ್ತದೆ ಎಂದಿದ್ದಾರೆ. ತಪ್ಪು ಮಾಡಿ ಸೈಟ್ ನುಂಗಿದವರು ಹೊರ ಹಾಕಲೇಬೇಕು. ಅಧಿಕಾರಿಗಳ ತಪ್ಪನ್ನು ಇಡಿ ಹೇಳಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಕೋಟಿ ಮುಡಾ ಆಸ್ತಿ ವಾಪಸ್ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ.