ಅತ್ಯಾಚಾರ ಸಂತ್ರಸ್ತೆಯ ಕಿಡ್ನಾಪ್ ಕೇಸ್ನಲ್ಲಿ ಹೆಚ್ ಡಿ ರೇವಣ್ಣ ವಿರುದ್ಧದ ಆರೋಪ ನಿಗದಿ ಮಾಡಬಾರದೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದ ಹೈಕೋರ್ಟ್, ಜನವರಿ 30ರ ತನಕ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಕೆ ಆರ್ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಶಾಸಕ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿದರು.

ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ನಿಗದಿಗೂ ಮುನ್ನ ವಾದ ಆಲಿಸಲು ಪ್ರಕರಣವನ್ನು ನಿಗದಿಗೊಳಿಸಲಾಗಿದೆ. ಹಾಲಿ ಅರ್ಜಿ ಇತ್ಯರ್ಥ ಆಗುವವರೆಗೆ ಆರೋಪ ನಿಗದಿ ಮಾಡದಂತೆ ನಿರ್ಬಂಧಿಸಬೇಕು ಎಂದು ಆರೋಪಿ ಪರ ವಕೀಲರು ಮನವಿ ಮಾಡಿದರು.

ವಿಚಾರಣಾಧೀನ ನ್ಯಾಯಾಲಯವು ಆರೋಪ ನಿಗದಿಗೂ ಮುನ್ನ ವಾದ-ಪ್ರತಿವಾದ ಆಲಿಸಬಹುದು. ಆದರೆ ಜನವರಿ 30ರವರೆಗೆ ಆರೋಪ ನಿಗದಿ ಮಾಡಬಾರದು ಎಂದು ಆದೇಶಿಸಿ ವಿಚಾರಣೆ ಮುಂದೂಡಿದೆ ಹೈಕೋರ್ಟ್. ಈ ಮೂಲಕ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ಬಳಿಕ ಈ ಅರ್ಜಿ ಭವಿಷ್ಯ ನಿರ್ಧಾರ ಆಗಲಿದೆ.