ಹಿಜಾಬ್ ವಿವಾದದ ನಡುವೆ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರು ಮೊನ್ನೆ ಸಂಸತ್ತಿನಲ್ಲಿ ಮಾಡಿದ ನಿರುದ್ಯೋಗ ಮತ್ತು ಉದ್ಯೋಗ ನಷ್ಟದ ಕುರಿತ ಭಾಷಣ ರಾಜ್ಯದ ಮಟ್ಟಿಗೆ ಹೆಚ್ಚು ಚರ್ಚೆಯಾಗದೆ ಮರೆಮಾಚಿಹೋಗಿದೆ.
ಸಂಸತ್ತಿ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ದೇಶದ ಯುವ ಸಮೂಹಕ್ಕೆ ಉದ್ಯೋಗ ಭರವಸೆ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದರು. ಅವರ ಮಾತುಗಳಿಗೆ ಪ್ರತಿಯಾಗಿ ಬೆಂಗಳೂರಿನ ಸಂಸದ ಹಾಗೂ ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, “ಕಾಂಗ್ರೆಸ್ ಪಕ್ಷ ಮತ್ತು ಅದರ ವಂಶಪಾರಂಪರ್ಯ ನಾಯಕರು ತಮ್ಮ ನಿರುದ್ಯೋಗವನ್ನೇ ದೇಶದ ನಿರುದ್ಯೋಗ ಎಂದು ಗೊಂದಲಕ್ಕೊಳಗಾಗಿದ್ದಾರೆ. ದೇಶದಲ್ಲಿ ಶ್ರಮಿಕರು ಮತ್ತು ಪ್ರತಿಭಾವಂತರಿಗೆ ಉದ್ಯೋಗದ ಯಾವುದೇ ತೊಂದರೆಯೂ ಇಲ್ಲ. ದೇಶದಲ್ಲಿ ಉದ್ಯೋಗವಿಲ್ಲದ ಏಕೈಕ ವ್ಯಕ್ತಿ ಎಂದರೆ ಅದು ಕಾಂಗ್ರೆಸ್ ಯುವರಾಜ” ಎಂದು ವ್ಯಂಗ್ಯವಾಡಿದ್ದರು.
ಅಷ್ಟೇ ಅಲ್ಲದೆ, “ಕಳೆದ ಏಳು ವರ್ಷಗಳ ಮೋದಿ ಆಡಳಿತದಲ್ಲಿ ದೇಶ ಸಾಧಿಸಿರುವ ಅಭಿವೃದ್ಧಿ ಮತ್ತು ಸುಧಾರಣೆ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದ್ದು. ಮೋದಿಗೆ ಮುಂಚೆ ಹಣದುಬ್ಬರ ಪ್ರಮಾಣ ಎರಡಂಕಿಯದ್ದಾಗಿದ್ದರೆ, ಮೋದಿ ಬಳಿಕ ಅದು ಒಂದಂಕಿ ಪ್ರಮಾಣಕ್ಕೆ ಕುಸಿದಿದೆ. ಮೊದಲು ಜಿಡಿಪಿ ಪ್ರಮಾಣ 110 ಲಕ್ಷ ಕೋಟಿಯಷ್ಟಿತ್ತು. ಈಗ ಅದು 230 ಲಕ್ಷ ಕೋಟಿಗೆ ಏರಿದೆ. ದೇಶದ ರಫ್ತು ಪ್ರಮಾಣ ಮೊದಲು 2.85 ಲಕ್ಷ ಕೋಟಿ ಇತ್ತು. ಈಗ ಅದು 4.7 ಲಕ್ಷ ಕೋಟಿಗೆ ಏರಿದೆ. ಹೀಗೆ ಎಲ್ಲಾ ವಿಷಯದಲ್ಲೂ ದೇಶದ ಸಾಧನೆ ಹಲವು ಪಟ್ಟು ಹೆಚ್ಚಾಗಿರುವಾಗ, ನಿರುದ್ಯೋಗ ಇರಲು ಹೇಗೆ ಸಾಧ್ಯ?” ಎಂದೂ ತೇಜಸ್ವಿ ಸೂರ್ಯ ಪ್ರಶ್ನಿಸುವ ಮೂಲಕ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ, ಉದ್ಯೋಗ ನಷ್ಟ ಆತಂಕ ಮೂಡಿಸಿದೆ ಎಂಬ ರಾಹುಲ್ ಗಾಂಧಿಯ ವಾದವನ್ನೇ ಹುರುಳಿಲ್ಲದ್ದು ಎಂದು ಹೇಳಿದ್ದರು.
ಹಾಗಾದರೆ, ನಿಜಕ್ಕೂ ಬಿಜೆಪಿಯ ಯುವ ಸಂಸದರು ಮಾತುಗಳು ವಾಸ್ತವವೇ ಅಥವಾ ಕಾಂಗ್ರೆಸ್ ಯುವರಾಜ ಹೇಳಿದ ಮಾತುಗಳು ನಿಜವೇ ಎಂಬುದು ಕುತೂಹಲ ಹುಟ್ಟಿಸಿದೆ.
ಹಾಗೆ ನೋಡಿದರೆ ತೇಜಸ್ವಿ ಸೂರ್ಯ ಅವರ ಮಾತುಗಳ ಸಾಚಾತನ ಏನು ಎಂಬುದು ದೇಶದ ಪ್ರತಿ ಬಡ-ಮಧ್ಯಮವರ್ಗದ ಮನೆಮನೆಯಲ್ಲೂ ಕೆಲಸ ಮತ್ತು ದುಡಿಮೆಯ ಭವಿಷ್ಯದ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕವೇ ಹೇಳುತ್ತಿದೆ. ಖಾಸಗಿ ವಲಯದ ವೇತನದಾರರಿಗೆ ಕೆಲಸ ನಾಳೆಗೆ ಉಳಿಯುತ್ತದೆ ಎಂಬ ಖಾತ್ರಿಯೇ ಇಲ್ಲದ, ಕೆಲಸ ಉಳಿದರೂ ಸದ್ಯದ ಸಂಬಳ ಉಳಿಯುತ್ತದೆ ಎಂಬ ಗ್ಯಾರಂಟಿಯೂ ಇಲ್ಲದ ಪರಿಸ್ಥಿತಿ ಇದೆ. ಇನ್ನು ಸ್ವಂತ ಉದ್ಯೋಗ, ಸಣ್ಣ ಕೈಗಾರಿಕೆ, ಅಂಗಡಿಮುಂಗಟ್ಟು, ಗ್ಯಾರೇಜು, ಟೈಲರಿಂಗ್, ಬೀಡಾ ಅಂಗಡಿಯಂತಹ ಸಣ್ಣಪುಟ್ಟ ದುಡಿಮೆ ಆಶ್ರಯಿಸಿ ಬದುಕುತ್ತಿದ್ದವರ ಪೈಕಿ ಅರ್ಧದಷ್ಟು ಮಂದಿ ಈಗಾಗಲೇ ದುಡಿಮೆ ಕಳೆದುಕೊಂಡು ನಾಳೆ ಹೇಗೋ ಎಂತೋ ಎಂಬ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಇದು ಭಾರತದ ಬೀದಿಬೀದಿಯಲ್ಲಿ ಕಣ್ಣಿಗೆ ರಾಚುವ ನಿಗಿನಿಗಿ ಸತ್ಯ. ಅದಕ್ಕೆ ಚುನಾವಣಾ ಕಣದಲ್ಲಿರುವ ಉತ್ತರಪ್ರದೇಶ ಹಾಗೂ ನೆರೆಯ ಬಿಹಾರದಲ್ಲಿ ಇತ್ತೀಚೆಗೆ ನಿರುದ್ಯೋಗಿ ಯುವಕರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ನಡೆಸಿದ ಭಾರೀ ಪ್ರತಿಭಟನೆ ಒಂದು ಸ್ಯಾಂಪಲ್ ಅಷ್ಟೇ.
ಇನ್ನು ಇದೇ ತೇಜಸ್ವಿ ಸೂರ್ಯ ಅವರ ಪಕ್ಷದ ಸರ್ಕಾರವೇ ಸಂಸತ್ತಿನಲ್ಲಿ ಮಂಡಿಸಿರುವ ಅಧಿಕೃತ ಅಂಕಿಅಂಶಗಳು ಮತ್ತು ಅವರದೇ ಸರ್ಕಾರದ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಮಾಹಿತಿಗಳು ಹೇಳುವ ಸಂಗತಿಯಂತೂ ಸಂಸದರು ಸಂಸತ್ತಿನ ಮಹತ್ವದ ವೇದಿಕೆಯಲ್ಲಿ ನಿಂತು ಆಡಿದ ಮಾತುಗಳು ಎಂತಹ ನಾಚಿಕೆಗೇಡಿನ ಹಸೀಸುಳ್ಳು ಎಂಬುದನ್ನು ಮೇಲ್ನೋಟಕ್ಕೇ ಸಾಬೀತು ಮಾಡುತ್ತವೆ.
ಎನ್ ಎಸ್ ಎಸ್ ಒನ 2019ರ ವರದಿಯ ಪ್ರಕಾರ, 2017-18ರಲ್ಲಿ ನಲವತ್ತು ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಗರಿಷ್ಟ ಪ್ರಮಾಣಕ್ಕೆ ತಲುಪಿತ್ತು. 2011-12ರಲ್ಲಿ ಮೋದಿ ಪ್ರಧಾನಿಯಾಗುವ ಹಿಂದಿನ ವರ್ಷ ಶೇ. 2.2ರಷ್ಟಿದ್ದ ನಿರುದ್ಯೋಗ ಪ್ರಮಾಣ, ಮೋದಿ ಪ್ರಧಾನಿಯಾಗಿ ನಾಲ್ಕೇ ವರ್ಷದಲ್ಲಿ ಶೇ.6.1ಕ್ಕೆ ಏರಿಕೆಯಾಗಿತ್ತು. ಅದು ಕಳೆದ ನಲವತ್ತು ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಕಂಡ ಅತ್ಯಂತ ದೊಡ್ಡ ಏರಿಕೆ. ಅಂದರೆ, 2020ರ ಮಾರ್ಚ್ ನಲ್ಲಿ ಕರೋನಾ ಸಾಂಕ್ರಾಮಿಕ ದೇಶದ ಮೇಲೆ ದಾಳಿ ಮಾಡುವ ಮುಂಚೆಯೇ ನಿರುದ್ಯೋಗ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆ ಬಳಿಕ ದೇಶದ ಆರ್ಥಿಕತೆ ಕುರಿತ ನಂಬಿಕಸ್ಥ ಸಮೀಕ್ಷೆಯಾದ ಸೆಂಟರ್ ಫಾರ್ ಮಾನಿಟರಿಂಗ್ ದ ಇಂಡಿಯನ್ ಎಕಾನಮಿ(ಸಿಎಂಐಇ) ಪ್ರಕಾರ, ನಿರುದ್ಯೋಗ ಪ್ರಮಾಣ ಕಳೆದ 2017-18ರ ಬಳಿಕ ದುಪ್ಪಟ್ಟು ಏರಿಕೆ ಕಂಡಿದೆ. ಅದಕ್ಕೆ ನೋಟು ರದ್ದತಿ, ಜಿಎಸ್ ಟಿ ಮತ್ತು ಆ ಬಳಿಕದ ಎರಡು ವರ್ಷಗಳ ಕೋವಿಡ್ ಕೂಡ ನೇರ ಕಾರಣ.
ಸಿಎಂಐಇ ಪ್ರಕಾರ, ಕೇವಲ 2021ರ ಆರಂಭದಿಂದ ಈವರೆಗಿನ ಅವಧಿಯಲ್ಲೇ ದೇಶದ ಎರಡೂವರೆ ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದುಡಿಮೆ ಇಲ್ಲದೆ, ಆದಾಯವಿಲ್ಲದೆ ದೇಶದ 7.5 ಕೋಟಿಗೂ ಹೆಚ್ಚು ಜನ ಕಡುಬಡತನಕ್ಕೆ ಕುಸಿದಿದ್ದಾರೆ. ಆ ಪೈಕಿ ದೇಶದ ಮಧ್ಯವರ್ಗದ 10 ಕೋಟಿ ಜನರ ಪೈಕಿ ಮೂರನೇ ಒಂದು ಭಾಗದಷ್ಟು ಮಂದಿ ಕೂಡ ಸೇರಿದ್ದು, ಅವರ ಅರ್ಧ ದಶಕದ ದುಡಿಮೆ ಈ ಕೆಲವೇ ವರ್ಷಗಳಲ್ಲಿ ಕರಗಿಹೋಗಿ ಬಡತನದ ದವಡೆಗೆ ಸಿಲುಕಿದ್ದಾರೆ.
ಈ ನಡುವೆ ಪ್ರತಿ ವರ್ಷ ದೇಶದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ 2014ರಲ್ಲಿ ದೇಶದ ಜನತೆಗೆ ಚುನಾವಣಾ ಭರವಸೆ ನೀಡಿದ್ದ ಮೋದಿಯವರು, ತಮ್ಮ ಈ ಏಳು ವರ್ಷಗಳ ಅವಧಿಯಲ್ಲಿ ಸೃಷ್ಟಿಸಿರುವ ಸರಾಸರಿ ವಾರ್ಷಿಕ ಉದ್ಯೋಗದ ಪ್ರಮಾಣ ಕೇವಲ 40 ಲಕ್ಷ! ಹಾಗಾಗಿ ಕಳೆದ 2021ರ ಡಿಸೆಂಬರ್ ಹೊತ್ತಿಗೆ ದೇಶದ ನಿರುದ್ಯೋಗಿ ಯುವಕರ ಪ್ರಮಾಣವೇ 5.3 ಕೋಟಿಯಷ್ಟಾಗಿತ್ತು. ಆ ಪೈಕಿ 3.5 ಕೋಟಿ ಯುವಕರು ಉದ್ಯೋಗಾವಕಾಶದ ಹುಡಕಾಟದಲ್ಲಿದ್ದರೆ, ಇನ್ನುಳಿದ ಸುಮಾರು ಎರಡು ಕೋಟಿ ಮಂದಿ ಉದ್ಯೋಗದ ಭರವಸೆಯನ್ನೇ ಕಳೆದುಕೊಂಡು ತಾವು ಕಲಿತ ಶಿಕ್ಷಣಕ್ಕೂ, ಮಾಡುವ ಕೆಲಸಕ್ಕೂ ಯಾವ ರೀತಿಯಲ್ಲೂ ತಾಳೆಯಾಗದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ!
ದೇಶದ ನಿರುದ್ಯೋಗ ಮತ್ತು ಉದ್ಯೋಗ ನಷ್ಟದ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ, ಸಾಂಪ್ರದಾಯಕ ಕೃಷಿ ವಲಯ ಹೊರತುಪಡಿಸಿ ಇನ್ನುಳಿದ ಉತ್ಪಾದನಾ ವಲಯ, ಸೇವಾ ವಲಯ ಸೇರಿದಂತೆ ಪ್ರತಿ ವಲಯದಲ್ಲಿಯೂ ಅರ್ಧಕ್ಕಿಂತ ಅಧಿಕ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ ಮತ್ತು ಆ ಮೂಲಕ ನಿರುದ್ಯೋಗ ಸಮಸ್ಯೆ ಉಲ್ಬಣವಾಗಲು ಪ್ರಮುಖ ಉದ್ಯೋಗ ಸೃಷ್ಟಿಯ ವಲಯಗಳೇ ದೊಡ್ಡ ಕೊಡುಗೆ ಕೊಟ್ಟಿವೆ.
ಬಜೆಟ್ ಮುನ್ನ ಇದೇ ತೇಜಸ್ವಿ ಸೂರ್ಯ ಅವರ ಪಕ್ಷದ ನಾಯಕಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರವೇ, ಉತ್ಪಾದನಾ ವಲಯದ ಒಟ್ಟು ಉದ್ಯೋಗ ಪ್ರಮಾಣ 2018-19ರಲ್ಲಿ ಶೇ.5.65ರಷ್ಟಿತ್ತು. ಆದರೆ, 2019-20ರಲ್ಲಿ ಆ ಪ್ರಮಾಣದಲ್ಲಿ ಅರ್ಧಕ್ಕಿಂತ ಹೆಚ್ಚು ಕಡಿತವಾಗಿ ಶೇ.2.41ಕ್ಕೆ ಕುಸಿದಿದೆ. ನಿರ್ಮಾಣ ವಲಯದಲ್ಲಂತೂ ಈ ಕುಸಿತ ಮೂರು ಪಟ್ಟಿಗೂ ಅಧಿಕ. 2018-19ರಲ್ಲಿ ಶೇ.26.26ರಷ್ಟಿದ್ದ ಉದ್ಯೋಗ ಪ್ರಮಾಣ, 2019-20ರ ಸುಮಾರಿಗೆ ಕೇವಲ ಶೇ.7.36 ಕ್ಕೆ ಕುಸಿದಿದೆ.
ಸಿಎಂಐಇ ಮತ್ತು ಸಿಇಡಿಎ ಜಂಟಿ ಸಮೀಕ್ಷೆಯೊಂದರ ಪ್ರಕಾರ, 2016-17ರಲ್ಲಿ ದೇಶದ ಉತ್ಪಾದನಾ ವಲಯದಲ್ಲಿ 5.1 ಕೋಟಿ ಮಂದಿ ಉದ್ಯೋಗ ಪಡೆದಿದ್ದರೆ, 2020-21ರ ಹೊತ್ತಿಗೆ ಆ ಸಂಖ್ಯೆ ಕೇವಲ 2.7 ಕೋಟಿಗೆ ಕುಸಿದಿತ್ತು. ಅಂದರೆ, ಸರಿಸುಮಾರು ಅರ್ಧದಷ್ಟು ಮಂದಿ ತಯಾರಿಕಾ ವಲಯವೊಂದರಲ್ಲೇ ಕೇವಲ ನಾಲ್ಕು ವರ್ಷದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ! ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವಲಯದಲ್ಲಿ ಕೂಡ 2016-17ರಲ್ಲಿ ಸುಮಾರು 7 ಕೋಟಿ ಮಂದಿ ಉದ್ಯೋಗ ಕಂಡುಕೊಂಡಿದ್ದರು. ಆದರೆ, 2020-21ರಲ್ಲಿ ಆ ಪ್ರಮಾಣ 5.3 ಕೋಟಿಗೆ ಕುಸಿದಿದೆ. ಅಂದರೆ ಶೇ.25ರಷ್ಟು ಮಂದಿ ಆ ವಲಯದಲ್ಲಿ ನಾಲ್ಕು ವರ್ಷದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗಣಿ ಉದ್ಯಮದಲ್ಲಿ ಕೂಡ ಈ ಅವಧಿಯಲ್ಲಿ ಶೇ.38ರಷ್ಟು ಉದ್ಯೋಗ ನಷ್ಟ ಸಂಭವಿಸಿದ್ದು 2016-17ರಲ್ಲಿ 14 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದ ಆ ವಲಯ, 2020-21ರ ಹೊತ್ತಿಗೆ ಕೇವಲ 8 ಲಕ್ಷ ಮಂದಿಗೆ ಮಾತ್ರ ಉದ್ಯೋಗ ಒದಗಿಸಿದೆ!
ಒಟ್ಟಾರೆ, 2016-17ರ ಅವಧಿಯಲ್ಲಿ ದೇಶದಲ್ಲಿ ಉದ್ಯೋಗಸ್ಥರ ಪ್ರಮಾಣ 40.7 ಕೋಟಿಯಷ್ಟಿದ್ದದ್ದು 2020-21ರ ಹೊತ್ತಿಗೆ 37.8 ಕೋಟಿಗೆ ಕುಸಿದಿದೆ. ಅಂದರೆ, ಕೇವಲ ನಾಲ್ಕು ವರ್ಷದಲ್ಲಿ ದೇಶದ ಬರೋಬ್ಬರಿ ಮೂರು ಕೋಟಿ ಉದ್ಯೋಗಸ್ಥರು ಉದ್ಯೋಗ ಕಳೆದುಕೊಂಡಿದ್ದಾರೆ. ಅದೇ ಅವಧಿಯಲ್ಲಿ ಶಿಕ್ಷಣ, ತರಬೇತಿ ಮುಗಿಸಿ ಉದ್ಯೋಗ ಮಾರುಕಟ್ಟೆಗೆ ಕಾಲಿಟ್ಟ ಹೊಸ ಯುವಕರ ಸಂಖ್ಯೆಯನ್ನೂ ಪರಿಗಣಿಸಿದರೆ, ಒಟ್ಟಾರೆ ದೇಶದ ನಿರುದ್ಯೋಗದ ಬಿಕ್ಕಟ್ಟು ಎಷ್ಟು ಅಗಾಧವಿದೆ ಎಂಬುದನ್ನು ಅಂದಾಜಿಸುವುದು ಕಷ್ಟವಾಗದು.
ಈ ಮೇಲಿನ ಎಲ್ಲಾ ಅಂಕಿಅಂಶಗಳೂ ಅದೇ ಬೆಂಗಳೂರಿನ ಸಂಸದ, ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಅವರ ಸರ್ಕಾರ ಮತ್ತು ಆ ಸರ್ಕಾರದ ವಿವಿಧ ಸಂಸ್ಥೆಗಳೇ ಮಂಡಿಸಿರುವ ಮಾಹಿತಿ. ಎಲ್ಲಾ ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿದೆ ಕೂಡ. ಹಾಗಿದ್ದರೂ ಸತ್ಯದ ತಲೆಯ ಮೇಲೆ ಹೊಡೆದಂತೆ ದೇಶದಲ್ಲಿ ನಿರುದ್ಯೋಗ ಎಂಬುದೇ ಇಲ್ಲ. ಯಾವುದೇ ಉದ್ಯೋಗ ನಷ್ಟವೇ ಆಗಿಲ್ಲ ಎಂಬುದು ಕೇವಲ ಪ್ರತಿ ಪಕ್ಷ ಕಾಂಗ್ರೆಸ್ ನಾಯಕರ ಮಾತನ್ನು ತಳ್ಳಿಹಾಕುವ ತಂತ್ರಗಾರಿಕೆ ಮಾತ್ರವಲ್ಲದೆ, ಕೆಲಸ ಕಳೆದುಕೊಂಡು, ಹೊಸ ಕೆಲಸ ಸಿಗುವ ಭರವಸೆಯೂ ಇಲ್ಲದೆ ನಿತ್ಯ ಆತಂಕದ ದಿನಗಳನ್ನು ಕಳೆಯುತ್ತಿರುವ ಕೋಟ್ಯಂತರ ಭಾರತೀಯರಿಗೆ ಮಾಡುವ ಅವಮಾನ!
ಇಂತಹ ನಾಚಿಕೆಗೇಡಿನ ಹೇಳಿಕೆ ನೀಡುವ ಮುನ್ನ ಕನಿಷ್ಟ ಹೋಂವರ್ಕ್ ಮಾಡುವ ಪ್ರಾಮಾಣಿಕತೆಯೂ ಇಲ್ಲದ ಈ ಸಂಸದರಿಗೆ ಮೊದಲು ಬಡವರು ಎಂದರೆ ಯಾರು ಎಂಬುದನ್ನು ತೋರಿಸಿಕೊಡಬೇಕಿದೆ. ಕೇವಲ ನಾಲ್ಕು ವರ್ಷದ ಹಿಂದೆ ಊಟಬಟ್ಟೆಗೆ ಅನುಕೂಲವಿದ್ದ ದೇಶದ ಸಾವಿರಾರು ಕುಟುಂಬಗಳು ಇಂದು ಹೊತ್ತು ಅನ್ನಕ್ಕೆ ಪರದಾಡುವ ಹೇಯ ಪರಿಸ್ಥಿತಿಯನ್ನೂ ಮುಖಕ್ಕೆ ರಾಚುವಂತೆ ತೋರಿಸಬೇಕಿದೆ. ಧರ್ಮ ದ್ವೇಷ, ಭೋಳೇತನದ ಹುಸಿ ರಾಷ್ಟ್ರೀಯತೆಯ ಅಮಾಯಕ ಜನರನ್ನು ಯಾಮಾರಿಸಿ ಮತ ಪಡೆಯಬಹುದೆ ಹೊರತು, ದೇಶ ಕಟ್ಟಲಾಗದು ಎಂಬುದಕ್ಕೆ ಮೋದಿ ಆಡಳಿತದ ಈ ಏಳು ವರ್ಷಗಳೇ ನಿದರ್ಶನ ಎಂಬುದು ಆತ್ಮವಂಚಕ ಅವಿವೇಕಿಗಳಿಗೆ ಅರಿವಾಗುವುದೆ?