ʻನಾನು ಮಂಡ್ಯ(Mandya) ಬಿಟ್ಟು ಬೇರೆ ಎಲ್ಲೂ ಹೋಗಲ್ಲ, ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳಬೇಕು, ಬಿಜೆಪಿ(BJP Karnataka) ಮಂಡ್ಯ ಟಿಕೆಟ್ ಉಳಿಸಿಕೊಳ್ಳುತ್ತೆ ಎಂಬ ವಿಶ್ವಾಸ ಇದೆʼ ಎಂದು ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರದ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಬೆಂಗಳೂರು ಉತ್ತರದ ಬಗ್ಗೆ ಮಾತಾಡಿಲ್ಲ. ಆದರೆ ನಾನು ಮಂಡ್ಯ ಬಿಟ್ಟು ಬೇರೆ ಎಲ್ಲೂ ಹೋಗಲ್ಲ. ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳಬೇಕು. ಬಿಜೆಪಿ ಮಂಡ್ಯ ಟಿಕೆಟ್ ಉಳಿಸಿಕೊಳ್ಳುತ್ತೆ ಎಂಬ ವಿಶ್ವಾಸ ಇದೆ. ಬಿಜೆಪಿ ಸಂಘಟನೆ ಚೆನ್ನಾಗಿದೆ. ಈ ಬಾರಿ ವಿಧಾನಸಭೆಯಲ್ಲಿ ಉತ್ತಮ ಮತ ಬಂದಿದೆ. ಬಿಜೆಪಿಗೆ ಮಂಡ್ಯ ಉಳಿಸಿಕೊಂಡರೆ ಪಕ್ಷ ಕಟ್ಟಲು ಸಹಕಾರಿಯಾಗಲಿದೆ. ಅಲ್ಲದೇ ನಾನು ಯಾವತ್ತು ನನಗಾಗಿ ಟಿಕೆಟ್ ಕೊಡಿ ಎಂದು ಲಾಭಿ ಮಾಡಿಲ್ಲ. ಪಕ್ಷ ಸೇರ್ಪಡೆಗೆ ತಾಂತ್ರಿಕವಾಗಿ ಅಡ್ಡಿಯಾಗಿದೆ. ಆ ಕಾರಣಕ್ಕಾಗೆ ನಾನು ಬಾಹ್ಯ ಬೆಂಬಲ ನೀಡಿದ್ದು. ಇದು ಬಿಜೆಪಿ ರಾಷ್ಟ್ರೀಯ ನಾಯಕರೆ ನನಗೆ ಹೇಳಿದ್ದಾರೆ ಎಂದರು.

ಅಲ್ಲದೇ ಸುಮಲತಾ ಸ್ಥಳೀಯ ಬಿಜೆಪಿಗರ ವಿಶ್ವಾಸದಲ್ಲಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಪಕ್ಷ ಸೇರುವವರೆಗೂ ಸಭೆಗಳಿಗೆ ನಾನಾಗೆ ಹೋಗಲು ಆಗಲ್ಲ. ಪಕ್ಷದ ವತಿಯಿಂದ ಆಹ್ವಾನ ಬರುವುದು ಪದ್ದತಿ. ಈಗಲೂ ಬಿಜೆಪಿ ಜಿಲ್ಲಾ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದು, ನಮ್ಮ ಹಾಗೂ ಅವರಲ್ಲಿ ಯಾವುದೇ ಗೊಂದಲ ಇಲ್ಲ. ಇದು ಯಾಕೆ, ಯಾರು ಮಾಡಿಸುತ್ತಾರೆ ಎಂದು ಗೊತ್ತಿರೋ ವಿಚಾರ ಎಂದು ಹೇಳಿದರು.
ಕಾಂಗ್ರೆಸ್‌ಗೆ ಯಾರು ಆಹ್ವಾನ ಕೊಟ್ಟರು ಹೇಳಲಿ ಎಂದು ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ 25 ವರ್ಷ ಅಂಬರೀಶ್ ಇದ್ದರು. ಪರಿಚಯಸ್ಥರು ಇರುವ ಪಕ್ಷ. ಯಾವುದಾದರೂ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಪಕ್ಷಕ್ಕೆ ಕರೆದಿದ್ದಾರೆ. ಆದರೆ ಅದನ್ನ ಅಧಿಕೃತ ಆಹ್ವಾನ ಎನ್ನಲು ಆಗಲ್ಲ. ಚಲುವರಾಯಸ್ವಾಮಿ ನನ್ನನ್ನು ವಯಕ್ತಿಕವಾಗಿ ಕೇಳಿದ್ರೆ ಹೇಳ್ತೀನಿ, ಆದರೆ ಕರೆದವರ ಹೆಸರು ಬಹಿರಂಗ ಮಾಡಿ ಮುಜುಗರ ಮಾಡಲ್ಲ ಎಂದು ತಿರುಗೇಟು ನೀಡಿದರು.

ನಾಟಿ ಬ್ರೀಡ್(ಸ್ಥಳೀಯ) ಅಭ್ಯರ್ಥಿ ಮಾಡ್ತೀವಿ ಎಂಬ ಚಲುವರಾಯಸ್ವಾಮಿ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ನಾಟಿ ಎನ್ನೋದು ಅಡುಗೆ ಮನೆಯಲ್ಲಿ ಇರಬೇಕು. ಪಾರ್ಲಿಮೆಂಟ್ ಅಲ್ಲಿ ಅಲ್ಲ ನಾಟಿ. ಚಲುವರಾಯಸ್ವಾಮಿ ಅವರ ಹೇಳಿಕೆಯನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲ್ಲ. ನಾನು ಗಂಭೀರವಾಗಿಯೂ ಮಾತಾಡಲ್ಲ. ನಾಟಿ ಪಾರ್ಲಿಮೆಂಟ್‌ಗೆ ಸೂಟ್ ಆಗಲ್ಲ, ನಮ್ಮ ಜಲ, ನೆಲ, ಭಾಷೆಯ ಬಗ್ಗೆ ಮಾತಾಡೋರು ಪಾರ್ಲಿಮೆಂಟ್‌ಗೆ ಬೇಕಿರೋದು. ಚಲುವಣ್ಣ ನಾಟಿಯನ್ನು ಅಡುಗೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಟಾಂಗ್ ನೀಡಿದರು.
#Sumalatha #Ambreesh #Mandya #MPelection #BJPKarnataka