ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮ ವಧೆಯಿಂದ ಉಳಿಸಲಾಗಿದೆ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಜಾರಿಯಾದ ನಂತರ ರಾಜ್ಯದಲ್ಲಿ ಅಕ್ರಮ ಸಾಗಣೆ, ಗೋಹತ್ಯೆ ಕೇಸಿನಲ್ಲಿ 900 ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿವೆ ಎಂದು ಹೇಳಿದರು.
ಗೋಹತ್ಯೆ ನಿಷೇಧ ಕಾಯಿದೆ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪಶು ಸಹಾಯವಾಣಿ ಕೇಂದ್ರ ಸ್ಥಾಪನೆ, 400 ಪಶು ವೈದ್ಯಾಧಿಕಾರಿಗಳ ನೇಮಕಾತಿ, 250 ಗೋ ನಿರೀಕ್ಷಕರ ನೇಮಕಾತಿ, ಗೋ ಮಾತಾ ಸಹಕಾರಿ ಸಂಘ, ಪುಣ್ಯಕೋಟಿ ದತ್ತು ಸ್ವೀಕಾರ ಯೋಜನೆಯನ್ನು ಸ್ಥಾಪಿಸಿದ್ದೇವೆ. ಮುಖ್ಯವಾಗಿ ರಾಜ್ಯದಲ್ಲಿ ಗೋಶಾಲೆ ಆರಂಭಿಸಿದ್ದು ಇದು ದೇಶದಲ್ಲೇ ಪ್ರಥಮ ಎಂದು ಚೌಹಾಣ್ ತಿಳಿಸಿದರು.

ಬಕ್ರೀದ್ ವೇಳೆ ಹಸು, ಎತ್ತು, ಎಮ್ಮೆ ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಿದ್ದೇವೆ. ಕರ್ನಾಟಕದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಕ್ರೀದ್ ಸಂದರ್ಭದಲ್ಲಿ ಶೇ 50-60 ರಷ್ಟು ಗೋವುಗಳನ್ನು ಉಳಿಸಲಾಗಿದೆ ಎಂದು ಅನೇಕ ಜಾನುವಾರು ಪ್ರೇಮಿಗಳು ಸಂತೋಷಪಟ್ಟಿದ್ದಾರೆ ಎಂದು ಅವರು ವಿವರಿಸಿದರು.