ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೇರಿದಂತೆ ಹಲವು ಮುಖಂಡರು ಮತ ಚಲಾಯಿಸಿದ್ದಾರೆ.
ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಮತ್ತು NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣದಲ್ಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಹಾಗೂ ಎಲ್ಲ ರಾಜ್ಯಗಳ ಶಾಸಕರ ಒಟ್ಟು ಮತಗಳ ಮೌಲ್ಯ 10,86,431 ಆಗಿದ್ದು, ಗೆಲುವಿಗೆ ಅಭ್ಯರ್ಥಿ ಶೇಕಡ 50ಕ್ಕಿಂತ ಅಧಿಕ ಮತಗಳನ್ನು ಪಡೆಯಬೇಕಾಗುತ್ತದೆ.
ಜುಲೈ 21ಕ್ಕೆ ಮತ ಎಣಿಕೆ ನಡೆಯಲಿದ್ದು, ಜುಲೈ 25ಕ್ಕೆ ಹೊಸ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಅವಧಿಯು ಜುಲೈ 25ಕ್ಕೆ ಕೊನೆಯಾಗಲಿದೆ.
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 12ಕ್ಕೆ ಮುಕ್ತಾಯವಾಗಲಿದೆ.