ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಮಂದಿ ರೋಗಿಗಳು ದಿಢೀರ್ ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಸೈಯ್ಯದ್, ಆರೀಫ್ ಪಾಷ (80), ಹರೀಶ್ ಬಿ.ಆರ್.(40), ಬಾಲಶಂಕರ್ (65), ಸಂಶುನ್ನೀಶ (70), ರಾಜು (54), ನಿಂಗೇಗೌಡ (70), ಮಸೀನಾ ಬಾನು (58), ಗೋಪಾಲರಾಜು (55), ಬೈರೋಜಿ ರಾವ್ (80), ಸುಹಾಲ್ ಖಾನ್ (43) ಮತ್ತು ನೀಲಿ (79) ಮೃತ ರೋಗಿಗಳು ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಮೃತಪಟ್ಟವರೆಲ್ಲರೂ ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಸೋಮವಾರ ಜೂನ್ 15ರ ಬೆಳಗ್ಗೆ 4 ಮಂದಿ ರಾತ್ರಿ 6 ಮಂದಿ ಹಾಗೂ ಮಂಗಳವಾರ ಜೂನ್ 16ರ ಬೆಳಗ್ಗೆ ಇಬ್ಬರು ಸಾವನ್ನಪ್ಪಿದ್ದು, ಆಸ್ಪತ್ರೆಯ ಇತರ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ತೀವ್ರ ಆತಂಕ ಹೆಚ್ಚಾಗಿದೆ.

ರೋಗಿಗಳ ಸರಣಿ ಸಾವಿನ ಬೆನ್ನಲ್ಲೇ ಮೃತರ ಸಂಬಂಧಿಕರು ಆಸ್ಪತ್ರೆ ಮಂಡಳಿ ಮತ್ತು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕಿತ್ಸೆಯಲ್ಲಿ ಏನಾಗುತ್ತಿದೆ ಎಂಬ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






