ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಮನೆಯಲ್ಲಿ ಸಾಮೂಹಿಕ ನಮಾಝ್ ಮಾಡಿದ ಕಾರಣಕ್ಕಾಗಿ ಸ್ಥಳೀಯ ಪೊಲೀಸರು ಎರಡು ಮನೆಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾಮೂಹಿಕ ನಮಾಝ್ ಮಾಡಲು ಯಾವುದೇ ಅನುಮತಿ ಪಡೆಯದೆ ಜನರು ಅಲ್ಲಿ ನೆರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ನಮಾಝ್ ಮಾಡಿದ ಕಾರಣಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ನಡೆಯ ಬಗ್ಗೆ ಈಗ ಪ್ರಶ್ನೆಗಳು ಎದ್ದಿದ್ದು, ನಮಾಝ್ ಮಾಡಲೂ ಪೊಲೀಸರ ಅನುಮತಿ ಬೇಕಾಗಿದೆಯೇ ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಛಾಜ್ಲೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ದುಲ್ಹೇಪುರ್ ಗ್ರಾಮದಲ್ಲಿ ಆಗಸ್ಟ್ 24 ರಂದು ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.
“ಅಲ್ಲಿ ಯಾವುದೇ ಮಸೀದಿ ಇಲ್ಲ, ಕೇವಲ ಎರಡು ಮನೆಗಳು ಮಾತ್ರ ಇದೆ. ಆರೋಪಿಗಳು ತಮ್ಮ ಮನೆಗಳಲ್ಲಿ ನಮಾಜ್ ಮಾಡುವ ಮೊದಲು ಅನುಮತಿಯನ್ನು ತೆಗೆದುಕೊಂಡಿಲ್ಲ” ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ. ಚಂದ್ರ ಪಾಲ್ ಸಿಂಗ್ ಎಂಬ ವ್ಯಕ್ತಿಯ ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505-2 (ಧಾರ್ಮಿಕ ಪೂಜೆಯಲ್ಲಿ ತೊಡಗಿರುವ ಸಭೆಯಲ್ಲಿ ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಅಡಿಯಲ್ಲಿ ಎಫ್‌ಐಆರ್ ಸಲ್ಲಿಸಿದ್ದಾರೆ.
“ಇನ್ನೊಂದು ಸಮುದಾಯಕ್ಕೆ ಸೇರಿದ ನೆರೆಹೊರೆಯವರ ಆಕ್ಷೇಪಣೆಯನ್ನು ಅನುಸರಿಸಿ, ಮನೆಯಲ್ಲಿ ಇಂತಹ ಅಭ್ಯಾಸದಲ್ಲಿ ಪಾಲ್ಗೊಳ್ಳದಂತೆ ಅವರಿಗೆ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ” ಎಂದು ಸಂದೀಪ್ ಕುಮಾರ್ ಹೇಳಿದ್ದಾರೆ.
“ಭಾರತದಲ್ಲಿರುವ ಮುಸ್ಲಿಮರು ಇನ್ನು ಮುಂದೆ ಮನೆಯಲ್ಲಿಯೂ ನಮಾಜ್ ಮಾಡಲು ಸಾಧ್ಯವಿಲ್ಲವೇ? ಈಗ ಪ್ರಾರ್ಥನೆ ಸಲ್ಲಿಸಲು ಸರ್ಕಾರದಿಂದ ಅಥವಾ ಪೊಲೀಸರಿಂದ ಅನುಮತಿ ಪಡೆಯಬೇಕೇ ” ಎಂದು ಓವೈಸಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಮುಸ್ಲಿಮರನ್ನು ಯಾವಾಗ ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ ಓವೈಸಿ, ಪೊಲೀಸ್ ಕ್ರಮವನ್ನು “ಅನ್ಯಾಯ” ಎಂದು ಬಣ್ಣಿಸಿದ್ದಾರೆ. “ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಮನೆಯಲ್ಲಿ ನಮಾಝ್ ಮಾಡಲು ಏಕೆ ವಿರೋಧ ವ್ಯಕ್ತವಾಗಿದೆ?” ಎಂದು ಓವೈಸಿ ಪ್ರಶ್ನಿಸಿದ್ದಾರೆ.