ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಸಂಸತ್ ಭವನದಲ್ಲಿ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೈರುಹಾಜರಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. 36 ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು, ಸಲಹೆಗಳನ್ನು ನೀಡಿದರು ಮತ್ತು ಕೆಲವು ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು.
ಕಾಂಗ್ರೆಸ್ ಸಂಸದ ಎಆರ್ ಚೌಧರಿ ಮಾತನಾಡಿ, “ಪ್ರಧಾನಿ ಸರ್ವಪಕ್ಷ ಸಭೆಗೆ ಬರಬೇಕಿತ್ತು, ಆದರೆ ಅವರು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆಂದು ನಮಗೆ ತಿಳಿಸಲಾಗಿದೆ” ಎಂದು ಹೇಳಿದರು.
ಮುಂದುವರೆದು, “ರಾಜಸ್ಥಾನದಲ್ಲಿ ಚುನಾವಣೆಗೆ ಮುಂಚಿತವಾಗಿ ಜಾಟ್ ಸಮುದಾಯದ ಮತಗಳನ್ನು ತನ್ನೆಡೆಗೆ ಸೆಳೆಯಲು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಜಗದೀಪ್ ಧಂಖರ್ ಅವರನ್ನು ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ. ಅವರ ಉಮೇದುವಾರಿಕೆಗೆ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮಧ್ಯಪ್ರವೇಶಿಸಬೇಕು ಎಂದು ಎಐಎಡಿಎಂಕೆಯ ಮುನಿಸಾಮಿ ತಂಬಿದುರೈ ಮತ್ತು ಟಿಆರ್ ಬಾಲು ಹೇಳಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟಿನ ಕುರಿತು ಕೇಂದ್ರವು ಮಂಗಳವಾರ ಸಂಜೆ 5.30 ಕ್ಕೆ ಮತ್ತೊಂದು ಸರ್ವಪಕ್ಷ ಸಭೆ ನಡೆಸಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, “ಶ್ರೀಲಂಕಾ ವಿಷಯದ ಕುರಿತು ಮಂಗಳವಾರ ಸಭೆಯನ್ನು ನಿಗದಿಪಡಿಸಲಾಗಿದೆ, ಇದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಿನ್ನೆಯೂ ಪ್ರತಿಪಕ್ಷಗಳ ಜತೆ ಸಭೆ ನಡೆಸಿದ್ದೇವೆ. ನಾವು ಯಾವುದೇ ಚರ್ಚೆಗೆ ಮುಕ್ತರಾಗಿದ್ದೇವೆ, ಆದರೆ ಅವರು ಗದ್ದಲವನ್ನು ಸೃಷ್ಟಿಸಿ ಮೇಲ್ಮನೆಯ ಕಾರ್ಯವಿಧಾನವನ್ನು ಸ್ಥಗಿತಗೊಳಿಸಿದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಸಂಸದೀಯ ಪದಗಳ ವಿಚಾರವಾಗಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, “ಲೋಕಸಭಾ ಸಚಿವಾಲಯವು ಕಾಲಕಾಲಕ್ಕೆ ಅಸಂಸದೀಯ ಪದಗಳ ಪಟ್ಟಿಯನ್ನು ಪ್ರಕಟಿಸುತ್ತಿದೆ. ಅಂತಹ ಪದಗಳನ್ನು 1954 ರಿಂದ ಪ್ರಕಟಿಸಲಾಗಿದೆ.

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ರೈತರ ಆಂದೋಲನದಿಂದ ಪಂಜಾಬ್ ಭಾರಿ ಪ್ರಕ್ಷುಬ್ಧತೆಗೆ ಒಳಗಾಗಿರುವ ವಿಷಯವನ್ನು ಪ್ರಸ್ತಾಪಿಸಿದರು.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸರ್ವಪಕ್ಷ ಸಭೆಯಲ್ಲಿ 13 ವಿಷಯಗಳ ಪ್ರಸ್ತಾಪ ಮಾಡಿದ್ದೇವೆ. ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರ 32 ಮಸೂದೆಗಳನ್ನು ಮಂಡಿಸಲಿದ್ದು, ಅದರಲ್ಲಿ 14 ಮಾತ್ರ ಸಿದ್ಧವಾಗಿವೆ. ಆ 14 ಬಿಲ್‌ಗಳ ಯಾಔಉದು ಎಂಬುದರ ಬಗ್ಗೆ ನಮಗೆ ಹೇಳಿಲ್ಲ. ಅಧಿವೇಶನದಲ್ಲಿ ನಮಗೆ ಕೇವಲ 14 ಅಧಿವೇಶನದ ದಿನಗಳಿವೆ. ಅದರಲ್ಲಿ ನಾವು 20 ವಿಷಯಗಳನ್ನು ಚರ್ಚಿಸಬೇಕು ಮತ್ತು 32 ಮಸೂದೆಗಳನ್ನು ಅಂಗೀಕರಿಸಬೇಕು ಎಂದು ಹೇಳಿದ್ದಾರೆ.
ಮುಂದುವರೆದು, “ನಾವು ಒಟ್ಟಾಗಿ ಪ್ರಸ್ತುತಪಡಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸಲು ನಮ್ಮ ವಿರೋಧ ಪಕ್ಷದ ನಾಯಕರ ಸಭೆಯು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ” ಎಂದು ಅವರು ಹೇಳಿದರು. ಅವರು ಅಗ್ನಿಪಥ್ ಯೋಜನೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಎಎಪಿ ಸಂಸದ ಸಂಜಯ್ ಸಿಂಗ್ ಅವರು, ನಾನು ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಮೂರು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ, ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ವಿಶ್ವ ನಗರ ಶೃಂಗಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ಮತ್ತು ಕಲ್ಲಿದ್ದಲು ದರ ಬಗ್ಗೆ ಎಂದು ಹೇಳಿದ್ದಾರೆ.
ಮುಂದುವರೆದು, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.. ಪ್ರತಿಪಕ್ಷಗಳನ್ನು ಗುರಿಯಾಗಿಸಲು ಮಾತ್ರ ಬಳಸಲಾಗುತ್ತಿದೆ,” ಎಂದು ಹೇಳಿದರು.