ಮಂಗಳೂರು :ಮಂಗಳೂರಿನ ಕಾವೂರಿನಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಆಝಾನ್ ಮೊಳಗಿದಾಗ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಮಸೀದಿಯಿಂದ ಆಝಾನ್ ಮೊಳಗುತ್ತಿದ್ದಂತೆಯೇ ಸಿಟ್ಟಾದ ಈಶ್ವರಪ್ಪ, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್ನಲ್ಲಿ ಕೂಗಿದರೆ ಮಾತ್ರ ಅಲ್ಲಾನಿಗೆ ಕೇಳೋದಾ..? ಇದು ಇಂದಲ್ಲ ನಾಳೆ ಕೊನೆಯಾಗುತ್ತೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು. ಈಶ್ವರಪ್ಪರ ಈ ಹೇಳಿಕೆ ಇದೀಗ ವಿಪಕ್ಷಗಳಿಗೆ ಆಹಾರವಾಗಿದೆ.

ಈ ವಿಚಾರವಾಗಿ ಇಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೋಯಿದ್ದೀನ್ ಬಾವ ಆಕ್ರೋಶ ಹೊರಹಾಕಿದ್ದಾರೆ. 2 ನಿಮಿಷದ ಆಝಾನ್ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ ಅಂತಾ ಈಶ್ವರಪ್ಪ ಹೇಳುತ್ತಾರೆ. ಆದರೆ ಮೂರು ಗಂಟೆ ಅದೇ ಸ್ಥಳದಲ್ಲಿ ಬಿಜೆಪಿ ಸಮಾವೇಶ ಮಾಡಿದಾಗ ಯಾರಿಗೂ ತೊಂದರೆ ಆಗಿರಲಿಲ್ವಾ.? ಎಂದು ಪ್ರಶ್ನೆ ಮಾಡಿದ್ದಾರೆ.

ಪಾಪ ಇವರಿಗೆ ಬಿಜೆಪಿ ಬಗ್ಗೆ ತುಂಬಾನೆ ಕಾಳಜಿ ಇರುವಂತೆ ಕಾಣ್ತಿದೆ. ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಆಝಾನ್ ಮೊಳಗಿದಾಗ ಭಾಷಣ ನಿಲ್ಲಿಸಿ ಅದಕ್ಕೆ ಗೌರವ ನೀಡಿದ್ದರು. ಇವರು ಪ್ರಧಾನಿಯನ್ನು ನೋಡಿ ಇನ್ನಾದರೂ ಬೇರೆ ಧರ್ಮಕ್ಕೆ ಹೇಗೆ ಗೌರವ ನೀಡಬೇಕು ಅನ್ನೋದನ್ನ ಕಲಿತುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಮೊಯಿದ್ದೀನ್ ಬಾವ ಗುಡುಗಿದ್ದಾರೆ.