ಬೆಂಗಳೂರು: ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಸಾರ್ವಜನಿಕರಿಗೂ ಗೌರವಯುತವಾದ ಆಸನ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ಪತ್ರ ಬರೆದಿರುವ ಮೋಹನ್ ಕುಮಾರ್ ದಾನಪ್ಪನ ಅವರು, ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ಶಾಂತಿ ಸಭೆ, ಎಸ್‌ಸಿ, ಎಸ್‌ಟಿ ಜನರ ಕುಂದುಕೊರತೆ ಸೇರಿದಂತೆ ಇತರೆ ಜಾಗೃತಿ ಸಭೆಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರನ್ನು ನೆಲದ ಮೇಲೆ ಕೂರಿಸಿ ಅಧಿಕಾರಿಗಳು ಕುರ್ಚಿಗಳ ಮೇಲೆ ಕುಳಿತು ನಡೆಸುತ್ತಿರುವ ಅಸಮಾನತೆ ಪದ್ಧತಿಯನ್ನು ತಡೆದು, ಸಾರ್ವಜನಿಕರಿಗೂ ಗೌರವಯುತವಾಗಿ ಕುರ್ಚಿ ಅಥವಾ ಆಸನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಿಂದ ಪೊಲೀಸ್ ಠಾಣೆ ಮಟ್ಟದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಹಾಗೂ ವಲಯ ಪೊಲೀಸ್ ಮಹಾನಿರೀಕ್ಷಕರ ನೇತೃತ್ವದಲ್ಲಿ ವಿವಿಧ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ನಡೆಸುವ ಶಾಂತಿ ಸಭೆ, ಎಸ್‌ಸಿ, ಎಸ್‌ಟಿ ಜನರ ಕುಂದುಕೊರತೆ ಸಭೆ, ಮಾಸಿಕ ಜನಸಂಪರ್ಕ ಸಭೆ ಸೇರಿದಂತೆ ವಿವಿಧ ಜಾಗೃತಿ ಸಭೆಗಳನ್ನು ನಡೆಸುವುದು ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸುವ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪ್ರಮುಖ ಕ್ರಮವಾಗಿರುತ್ತದೆ.

ಕೆಲವು ಸ್ಥಳಗಳಲ್ಲಿ ಇಂತಹ ಶಾಂತಿ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರನ್ನು ನೆಲದ ಮೇಲೆ ಕೂರಿಸಿ ಪೊಲೀಸ್ ಅಧಿಕಾರಿಗಳು ಹಾಗೂ ಆ ಸಂದರ್ಭದಲ್ಲಿ ಪಾಲ್ಗೊಂಡ ಇತರೆ ಅಧಿಕಾರಿಗಳು ಮಾತ್ರ ಕುರ್ಚಿಗಳ ಮೇಲೆ ಕುಳಿತು ಸಭೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಪೊಲೀಸ್ ಇಲಾಖೆಯ ಅಧಿಕೃತ ಖಾತೆಗಳಲ್ಲಿ ಕಂಡುಬಂದಿದೆ.

ಈ ರೀತಿಯ ವ್ಯವಸ್ಥೆಯು ಸಾರ್ವಜನಿಕರ ಸ್ವಾಭಿಮಾನ ಮತ್ತು ಘನತೆ, ಗೌರವಕ್ಕೆ ಧಕ್ಕೆ ತರುವುದಲ್ಲದೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಅಸಮಾನತೆಯ ಭಾವನೆ ಮೂಢಿಸುವ ಸಾಧ್ಯತೆ ಹೆಚ್ಚಾಗಿದ್ದು ಜನಸ್ನೇಹಿ ಪೊಲೀಸ್ ಪರಿಕಲ್ಪನೆಯ ವಿರುದ್ಧವಾಗಿರುತ್ತದೆ. ಪೊಲೀಸರು ಸಾರ್ವಜನಿಕರ ರಕ್ಷಕರು ಹಾಗೂ ಸೇವಕರು ಎಂಬುವ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಅನುಗುಣವಾಗಿ, ಸಾರ್ವಜನಿಕರೊಂದಿಗೆ ಗೌರವಯುತವಾಗಿ ಮತ್ತು ಸೌಹಾರ್ದಯುತವಾಗಿ ವರ್ತಿಸುವುದು ಅತ್ಯಂತ ಅಗತ್ಯವಾಗಿದೆ.

ಶಾಂತಿ ಸಭೆ, ಕುಂದುಕೊರತೆ ಸಭೆ, ಜನಸಂಪರ್ಕ ಸಭೆಗಳು ಎಂಬುದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರೊಂದಿಗೆ ವಿಶ್ವಾಸ ಮತ್ತು ಸಹಕಾರವನ್ನು ಬೆಳೆಸುವ ವೇದಿಕೆಯಾಗಿರಬೇಕೇ ಹೊರತು, ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಸಾಮಾಜಿಕ ಅಥವಾ ಸ್ಥಾನಮಾನ ಆಧಾರಿತ ಅಂತರವನ್ನು ಪ್ರದರ್ಶಿಸುವ ವೇದಿಕೆಯಾಗುವುದ್ದರಿಂದ ಜನಸ್ನೇಹಿ ಪೊಲೀಸ್ ಆಗಲು ಕಷ್ಟಸಾಧ್ಯವಾಗುತ್ತದೆ. ಈ ತಾರತಮ್ಯ, ಅಸಮಾನತೆಯನ್ನು ತೊಡೆದುಹಾಕಲು ಪತ್ರವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆ ಹಾಗೂ ಎಲ್ಲಾ ಪೊಲೀಸ್ ಕಛೇರಿಗಳಿಂದ, ಬೀಟ್ ಪೊಲೀಸ್ ಸಿಬ್ಬಂದಿಯಿಂದ ಎಲ್ಲಾ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸುವ ಶಾಂತಿ ಸಭೆ, ಕುಂದುಕೊರತೆ ಸಭೆ ಸೇರಿದಂತೆ ಪೊಲೀಸ್-ಸಾರ್ವಜನಿಕ ಸಂವಾದದಂತಹ ಎಲ್ಲಾ ರೀತಿಯ ಸಭೆ, ಜಾಗೃತಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಕುಳಿತುಕೊಳ್ಳುವಂತೆಯೇ ಸಾರ್ವಜನಿಕರಿಗೂ ಸಹ ಸಮಾನವಾಗಿ ಕೂರಿಸಲು ಕಡ್ಡಾಯವಾಗಿ ಸೂಕ್ತ ಆಸನ ವ್ಯವಸ್ಥೆಯನ್ನು ಕಲ್ಪಿಸಿ ಸಭೆಗಳನ್ನು ನಡೆಸುವಂತೆ ರಾಜ್ಯದ ಎಲ್ಲಾ ವಿಭಾಗಗಳ ಎಲ್ಲಾ ಘಟಕಾಧಿಕಾರಿಗಳಿಗೆ ಸೂಕ್ತ ಎಚ್ಚರಿಕೆಯೊಂದಿಗೆ ಸೂಕ್ತ ಆದೇಶ ಹೊರಡಿಸುವಂತೆ ಮೋಹನ್ ಕುಮಾರ್ ದಾನಪ್ಪನ ಆಗ್ರಹಿಸಿದ್ದಾರೆ.







