ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ರಾಯಚೂರಿನ ಐಐಐಟಿ ಕ್ಯಾಂಪಸ್‌ನಲ್ಲಿ ₹12 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (AI) ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ ಆಯೋಜಿಸಿದ್ದ ‘ತಯಾರಿಕೆಗಾಗಿ ಕೃತಕ ಬುದ್ಧಿಮತ್ತೆ: ನಾಳಿನ ಕರ್ನಾಟಕದ ನಿರ್ಮಾಣ’ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಎಐ ಆಧಾರಿತ ಕೈಗಾರಿಕೆಗಳು ಮತ್ತು ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

ಅಮೆರಿಕದ ಕಂಪನಿಗಳು ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮುಂದಿನ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲೂ ಅಮೆರಿಕದ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಡೇಟಾ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ನೀತಿ ಜಾರಿಗೆ ತರಲಿದೆ. ಬೆಂಗಳೂರು ಉತ್ತರ, ಮಂಗಳೂರು ಹಾಗೂ ಎರಡನೇ ಹಂತದ ನಗರಗಳಲ್ಲಿ ತಲಾ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಅಭಿವೃದ್ಧಿಪಡಿಸಲಾಗುತ್ತಿರುವ ಕ್ವಿನ್ ಸಿಟಿಯಲ್ಲಿ ಭಾರತದ ಮೊದಲ ಎಐ ಸಿಟಿಯನ್ನೂ ಸ್ಥಾಪಿಸುವ ಯೋಜನೆ ಇದೆ. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ‘ನಿಪುಣ ಕರ್ನಾಟಕ’ ಯೋಜನೆಯಡಿ 100ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕೈಗಾರಿಕೆಗಳು ದತ್ತು ಪಡೆಯುತ್ತಿವೆ. ವಿಶ್ವಬ್ಯಾಂಕ್ ನೆರವಿನಿಂದ 30ಕ್ಕೂ ಹೆಚ್ಚು ಐಟಿಐಗಳನ್ನು ಉತ್ಕೃಷ್ಟತಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪಾಟೀಲ ಹೇಳಿದರು.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ದೊರೆಯಲಿರುವ ₹2,500 ಕೋಟಿ ಅನುದಾನವನ್ನು ಬಳಸಿಕೊಂಡು ಉನ್ನತ ಶಿಕ್ಷಣ ಕ್ಷೇತ್ರವನ್ನು ಆಧುನೀಕರಿಸಲಾಗುತ್ತಿದೆ ಎಂದರು.

ಬೋಯಿಂಗ್, ಜಿಇ ಏರೋಸ್ಪೇಸ್, ಹನಿವೆಲ್, ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಟಿಮ್ಕೆನ್‌ನಂತಹ ಜಾಗತಿಕ ಕಂಪನಿಗಳು ಈಗಾಗಲೇ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಭವಿಷ್ಯದ ಪ್ರೊಪಲ್ಶನ್ ತಂತ್ರಜ್ಞಾನ, ಎಐ ಎಂಜಿನ್ ಡಯಾಗ್ನಾಸ್ಟಿಕ್ಸ್, ಕೈಗಾರಿಕಾ ಐಒಟಿ, ಪ್ರಿಸಿಷನ್ ಎಂಜಿನಿಯರಿಂಗ್ ಹಾಗೂ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ, ಬಯೋಟೆಕ್, ಮಷಿನ್ ಟೂಲ್ಸ್ ಹಾಗೂ ಎಲೆಕ್ಟ್ರಾನಿಕ್ ವಿನ್ಯಾಸ ಕ್ಷೇತ್ರಗಳಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಡೀಪ್ ಎಐ ತಂತ್ರಜ್ಞಾನದ ವ್ಯಾಪಕ ಅಳವಡಿಕೆಯಿಂದ ರಾಜ್ಯದ ಕೈಗಾರಿಕಾ ಕ್ಷೇತ್ರ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವರ್ಲ್ಡ್ ಎಕನಾಮಿಕ್ ಫೋರಂ ವರದಿ ಪ್ರಕಾರ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಕಾರ್ಮಿಕಶಕ್ತಿಯ ಉತ್ಪಾದಕತೆ ಶೇ.53ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕವು ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ನೀಡಲಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ (ಅಮ್ಚಮ್) ಸಂಘಟನೆಯ ರಂಜನಾ ಖನ್ನಾ, ಸಲೀಲ್ ಗುಪ್ತೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






