ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಎಂದರೆ ಯುದ್ಧ ಎಂಬಂತ ಸನ್ನಿವೇಶ ಸೃಷ್ಟಿಯಾಗಿಬಿಡುತ್ತದೆ. ಇಲ್ಲಿನ ಬಹುತೇಕ ಟಿವಿ ಮಾಧ್ಯಮಗಳು ರಣತಂತ್ರ, ಇಂಡೋ-ಪಾಕ್ ಯುದ್ಧ ಎಂಬಂತೆ ಯುದ್ದೋನ್ಮಾದದ ರೀತಿಯಲ್ಲಿ ಕ್ರೀಡಾ ವರದಿಯನ್ನು ಬಿಂಬಿಸುತ್ತಿದೆ.
ಅದಕ್ಕೆ ತಕ್ಕಂತೆ, ಇದೀಗ ಪಾಕ್ ಎದುರು ಸೋತ ಭಾರತ ತಂಡದ ವೇಗದ ಬೌಲರ್ ಮಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಬರಹಗಳು ಹರಿದಾಡುತ್ತಿದೆ. ಶಮಿಯನ್ನು ಪಾಕ್ ಪ್ರೇಮಿ ಹಾಗೂ ಪಾಕ್ ಪರ ಒಲವುಳ್ಳವರು ಎಂದು ಧ್ವೇಷಪೂರಿತ ಕಮೆಂಟ್ ಹಾಕುತ್ತಿದ್ದಾರೆ.
ಶಮಿ ವಿರುದ್ಧ ಧರ್ಮಾದರಿತ ನಿಂದನೆಗಳು ವ್ಯಕ್ತವಾಗುತ್ತಿದ್ದಂತೆ ನಿಜವಾದ ಕ್ರೀಡಾಭಿಮಾನಿಗಳು ಶಮಿ ಬೆನ್ನಿಗೆ ನಿಂತಿದ್ದಾರೆ. ಶಮಿ ಎಂದಿಗೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಅಜರಾಮರಾಗಿರುತ್ತಾರೆ ಎಂದು ಶಮಿ ಬೆಂಬಲಕ್ಕೆ ಬಂದಿದ್ದಾರೆ.
ಕ್ರೀಡಾಭಿಮಾನಿಗಳು ಮಾತ್ರವಲ್ಲದೆ, ಭಾರತ ತಂಡದ ಹಿರಿಯ ಆಟಗಾರರಾದ ವೀರೇಂದ್ರ ಸೆಹವಾಗ್, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಮೊದಲಾದವರು ಶಮಿ ಬೆಂಬಲಕ್ಕೆ ನಿಂತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ನಿಜಕ್ಕೂ ಆಘಾತವಾಗಿದೆ. ಮೊಹಮ್ಮದ್ ಶಮಿ ಚಾಂಪಿಯನ್ ಬೌಲರ್. ಭಾರತ ತಂಡದ ಕ್ಯಾಪ್ ಧರಿಸಿದ ಆಟಗಾರ, ಭಾರತವನ್ನು ಅತೀಯಾಗಿ ಪ್ರೀತಿಸುತ್ತಾನೆ ಸಾಮಾಜಿಕ ಜಾಲತಾಣದಲ್ಲಿನ ದಾಳಿಕೋರರಿಗಿಂತ ದೇಶದ ಮೇಲೆ ಹೆಚ್ಚು ಪ್ರೀತಿ ಟೀಂ ಇಂಡಿಯಾ ಆಟಗಾರನಿಗಿದೆ. ನಾವು ಶಮಿ ಪರ ಇದ್ದೇವೆ. ಮುಂದಿನ ಪಂದ್ಯದಲ್ಲಿ ಜಲ್ವಾ ತೋರಿಸಿ ಎಂದು ಶಮಿ ಪರ ವೀರೂ ಟ್ವೀಟ್ ಮಾಡಿದ್ದಾರೆ.
ಇರ್ಫಾನ್ ಪಠಾಣ್ ಕೂಡಾ ಶಮಿ ಬೆಂಬಲಕ್ಕೆ ನಿಂತಿದ್ದು, ಆಟದಲ್ಲಿ ಸೋಲು ಗೆಲುವು ಇದ್ದಿದ್ದೆ. ನಾನು ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಭಾಗವಾಗಿದ್ದೆ. ನಾವು ಸೋತಿದ್ದೇವೆ. ಆದರೆ ಪಾಕಿಸ್ತಾನಕ್ಕೆ ಹೋಗಲು ಹೇಳಿಲ್ಲ. ಈ ರೀತಿಯ ಟೀಕೆ ನಿಲ್ಲಬೇಕು ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.
ಹರ್ಭಜನ್ ಸಿಂಗ್ ಕೂಡಾ ಶಮಿಗೆ ಪ್ರೀತಿ ವ್ಯಕ್ತಪಡಿಸಿದ್ದು, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಶಮಿ ಎಂದು ಟ್ವೀಟ್ ಮಾಡಿದ್ದಾರೆ.