ಉದ್ಯೋಗ ಕೇಳಿದ ಯುವಜನತೆಗೆ ʼಪಕೋಡ ಮಾರಿʼ ಎಂದು ಸಲಹೆ ನೀಡಿದ್ದ ಪ್ರಧಾನಿ ಮೋದಿ ಇದೀಗ ಮತ್ತೆ ಅಂತಹದ್ದೇ ಸಲಹೆ ನೀಡಿ ಟ್ರಾಲ್‌ಗೆ ಒಳಗಾಗಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದ 75ನೇ ವರ್ಷದ ಸ್ವಾತಂತ್ರ್ಯದ ಆಚರಣೆಗಳ ಭಾಗವಾಗಿ ಜನಪ್ರಿಯ ಪ್ರಾದೇಶಿಕ ಹಾಡುಗಳಿಗೆ ಲಿಪ್ ಸಿಂಕ್ ವೀಡಿಯೊಗಳನ್ನು ಮಾಡಲು ಕರೆ ನೀಡಿದ್ದಾರೆ.
ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್ ವಿಡಿಯೋಗಳನ್ನು ಮಾಡಿ ಜನಪ್ರಿಯರಾಗಿರುವ ತಾಂಜಾನಿಯಾ ಮೂಲದ ಕಿಲಿ ಪೌಲ್ ಹಾಗೂ ಅವರ ಸಹೋದರಿ ನೀಮಾ ಅವರನ್ನು ಉಲ್ಲೇಖಿಸಿರುವ ಮೋದಿ ಒಡಹುಟ್ಟಿದ ಈ ಜೋಡಿಗೆ ಭಾರತೀಯ ಸಂಗೀತದೆಡೆಗೆ ಇರುವ ಒಲವನ್ನು ಕೊಂಡಾಡಿದ್ದಾರೆ. ಮಾತ್ರವಲ್ಲ, ಅವರ ಹಾಗೆ ಹಾಡುಗಳಿಗೆ ತುಟಿಯಾಡಿಸಿ ವಿಡಿಯೋ ಮಾಡಿ ಎಂದು ಕರೆ ನೀಡಿದ್ದಾರೆ.
ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಮೋದಿ, “ನಾನು ಪೌಲ್ ಹಾಗೂ ನೀಮಾರಿಗೆ ಕೃತಜ್ಞಗಿದ್ದೇನೆ. ಅವರಂತೆಯೇ ನಮ್ಮ ಮಕ್ಕಳೂ (ಲಿಪ್ ಸಿಂಕ್) ಮಾಡಿದರೆ ಹೇಗೆ?..ಕನ್ನಡದ ವಿದ್ಯಾರ್ಥಿಗಳು ಕಾಶ್ಮೀರಿ ಭಾಷೆ ಹಾಡುಗಳಿಗೆ ಲಿಪ್ ಸಿಂಕ್ ಮಾಡಬಹುದು. ಕೇರಳದವರು ಇನ್ನೊಂದು ಇನ್ನೊಂದು ಪ್ರಾದೇಶಿಕ ಭಾಷೆಯಲ್ಲಿ ಲಿಪ್ ಸಿಂಕ್ ಮಾಡಲಿ. ʼಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಅಂಗವಾಗಿ, ಯುವಜನಾಂಗ ತಮ್ಮದೇ ಆದ ರೀತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳ ಹಾಡುಗಳಿಗೆ ಲಿಪ್ ಸಿಂಕ್ ವಿಡಿಯೊಗಳನ್ನು ಮಾಡಬಹುದು.” ಎಂದು ಮೋದಿ ಸಲಹೆ ನೀಡಿದ್ದಾರೆ.
ನಾನು ಎಲ್ಲರಿಗೂ (ಲಿಪ್ ಸಿಂಕ್ ವಿಡಿಯೋ ಮಾಡಲು) ಒತ್ತಾಯಿಸುತ್ತೇನೆ. ವಿಶೇಷವಾಗಿ, ಮಕ್ಕಳು ಇತರೆ ರಾಜ್ಯದ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಲಿ. ನಾವು ʼಒಂದು ಭಾರತ-ಶ್ರೇಷ್ಟ ಭಾರತʼವನ್ನು ಮರು ವ್ಯಾಖ್ಯಾನ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇದೀಗ ಮನ್ ಕಿ ಬಾತ್ ನಲ್ಲಿ ಮೋದಿ ನೀಡಿದ ಈ ಸಲಹೆಯು ಟ್ರಾಲ್ ವಿಷಯವಾಗಿ ಬದಲಾಗಿದ್ದು, ನೆಟ್ಟಿಗರು ಈ ಹಿಂದೆ ʼಪಕೋಡ ಮಾರಲು ನೀಡಿದ ಸಲಹೆʼ ʼಮೋಡಗಳಿಂದಾಗಿ ರಾಡಾರ್ ನಿಂದ ತಪ್ಪಿಸಬಹುದು ಎಂದು ನೀಡಿದ ಹೇಳಿಕೆʼ ಮೊದಲಾದ ಈ ಹಿಂದಿನ ಕೆಲವು ವಿಷಯಗಳನ್ನು ಇಟ್ಟುಕೊಂಡು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡುತ್ತಿದ್ದಾರೆ.

ಉದ್ಯೋಗ ಕೇಳಿದ್ರೆ ಪಕೋಡ ಮಾರೋಕೆ ಹೇಳುತ್ತಿದ್ದವರು ಈಗ ಲಿಪ್ ಸಿಂಕ್ ವಿಡಿಯೋ ಮಾಡಲು ಹೇಳುತ್ತಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಇನ್ನೊಬ್ಬರು ಪಕೋಡ ಮಾರುವುದರಿಂದ, ಹಸುವಿನ ಸೆಗಣಿ ಮಾರುವುದರಿಂದ, ಲಿಪ್ ಸಿಂಕ್ ವಿಡಿಯೋ ಮಾಡುವುದರಿಂದ ದೇಶ ಅಭಿವೃದ್ಧಿಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಕೋ ಆರ್ಡಿನೇಟರ್ ವಿನಯ್ ಕುಮಾರ್ ದೊಕಾನಿಯಾ ಈ ಕುರಿತು ಟ್ವೀಟ್ ಮಾಡಿದ್ದು, “ನಿನ್ನೆ ಅವರು ವಿದೇಶಕ್ಕೆ ಅಧ್ಯಯನಕ್ಕೆ ಯಾಕೆ ಹೋಗುತ್ತೀರಿ ಎಂದು ಪ್ರಶ್ನಿಸಿದರು, ಇವತ್ತು, ವಿಡಿಯೋಗಳಿಗೆ ಲಿಪ್ ಸಿಂಕ್ ಮಾಡಲು ಸಲಹೆ ನೀಡಿದ್ದಾರೆ, ಆದರೆ, ಜನ ಉಕ್ರೇನ್ ಕಾಮೆಡಿಯನ್‌ನನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಆಡಿಕೊಳ್ಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.