ಶಿವಮೊಗ್ಗ: ಏ.10: ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುತ್ತಿರುವುದೇ ಕಾಂಗ್ರೆಸ್ ಗೆ ತಳಮಳವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯಕ್ಕೆ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಬಂದು ಹೋಗುತ್ತಿದ್ದಾರೆ.ಅದೇ ರೀತಿ ಗೃಹ ಸಚಿವ ಅಮಿತ್ ಶಾ, ಅಧ್ಯಕ್ಷರಾದ ಜೆಪಿ ನಡ್ಡಾ ಎಲ್ಲರೂ ಬಂದು ಹೋಗ್ತಿದ್ದಾರೆ. ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುತ್ತಿರುವುದೇ ಕಾಂಗ್ರೆಸ್ ಗೆ ತಳಮಳ. ಅದಕ್ಕೆ ಟೀಕೆ ಮಾಡ್ತಾ ಇದ್ದಾರೆ ಎಂದರು.
ಇವರಿಗೆ ನಾಯಕರು ಇಲ್ವಾ. ಅವರು ಮುಖ ನೋಡಿದ್ರೇ ಮಾತ್ರ ವೋಟ್ ಬರೋದಾ. ಕಾಂಗ್ರೆಸ್‌ನವರು ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕರೆಯಿಸಿ ಅವರ ಮುಖ ತೋರಿಸಿ, ವೋಟ್ ತೆಗೆದುಕೊಳ್ಳಿ. ನಮ್ಮ ಅಭ್ಯಂತರ ಏನು ಇಲ್ಲ. ರಾಹುಲ್ ಗಾಂಧಿ ಬರ್ತಾರೆ ಬರ್ತಾರೆ ಎಂದು ಹೇಳ್ತಾನೇ ಇದ್ದಾರೆ. ಕೋಲಾರ ಕಾರ್ಯಕ್ರಮಕ್ಕೆ ಬರ್ತಾರೆ ಎಂದು ಮೂರು ಬಾರಿ ಮುಂದೆ ಹಾಕಿದ್ದಾರೆ. ಇವುರುಗಳಿಗೆ ನಾಯಕರುಗಳೇ ಇಲ್ಲ ಎಂದು ವ್ಯಂಗ್ಯವಾಡಿದರು.
ದೇಶ, ವಿಶ್ವ ಮೆಚ್ಚುವ ನಾಯಕರು ಬಿಜೆಪಿಯಲ್ಲಿದ್ದಾರೆ. ಅದೇ ನಮಗೆ ಹೆಮ್ಮೆ.ಮೋದಿ, ಅಮಿತ್ ಶಾ ರಂತಹ ನಾಯಕರ ನಾಯಕತ್ವ ಪಕ್ಷಕ್ಕಿದೆ ಎಂದ ಅವರು,ರಾಜ್ಯದಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬೆಳೆದಿದೆ.ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯ ಜನ ಮೆಚ್ಚಿದ್ದಾರೆ. ಹೀಗಾಗಿ ಪೂರ್ಣ ಬಹುಮತ ಬಿಜೆಪಿಗೆ ಸ್ಪಷ್ಟವಾಗಿ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಬಂಡೀಪುರ ಭೇಟಿ ಬಗ್ಗೆ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಟೀಕೆ ಮಾಡೋದು ಬಿಟ್ಟರೆ, ಕಾಂಗ್ರೆಸ್ ನವರಿಗೆ ಏನು ಗೊತ್ತಿದೆ.ಹುಲಿ ಕಾಣಲಿಲ್ಲ ಅಂದರೂ ಒಂದು ಟೀಕೆ.ಅಕಸ್ಮಾತ್ ಹುಲಿ ಬಂದರೂ ಒಂದೇ ಹುಲಿ ಬಂತು ಎಂದು ಟೀಕೆ. ಹೀಗೆ ಟೀಕೆ ಮಾಡುತ್ತಲ್ಲೇ ಅವರ ಜೀವನ ಕಳೆದುಕೊಂಡು ಬಿಟ್ಟರು.ಇನ್ನು ಮುಗೀತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಪ್ರಶ್ನೆ ಉದ್ಭವವಾಗಲ್ಲ.ಹಾಗಾಗೀಯೇ ಅವರು ಎಲ್ಲರನ್ನು ಟೀಕೆ ಮಾಡ್ತಾ ಇದ್ದಾರೆ. ಹುಲಿ ಬರಲಿಲ್ಲ ಅನ್ನೋದಕ್ಕಿಂತ ಮೋದಿನೇ ದೊಡ್ಡ ಹುಲಿ. ಇಡೀ ಪ್ರಪಂಚದ ಹುಲಿ ಮೋದಿ. ಅವರ ನೇತೃತ್ವ ನಮಗೆ ಸಿಕ್ಕಿರುವುದು ಪುಣ್ಯ ಎಂದರು. ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ 224 ಕ್ಷೇತ್ರಗಳಿಗೂ ಅಭ್ಯರ್ಥಿ ಹಾಕುತ್ತಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಕ್ಕೂ ಮೂರು-ನಾಲ್ಕು ಜನರ ಹೆಸರು ಕಳುಹಿಸಲಾಗಿದೆ ಎಂದರು.
ಕೇಂದ್ರದ ನಾಯಕರು, ಚುನಾವಣಾ ಸಮಿತಿ ಕುಳಿತು ಚರ್ಚೆ ಮಾಡಿದ್ದಾರೆ.ಈಗಾಗಲೇ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ೧೭೦-೧೮೦ ಕ್ಷೇತ್ರಗಳಿಗೆ ಅಭ್ಯರ್ಥಿ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.ಯಾವುದೇ ಗೊಂದಲ ಇಲ್ಲದೇ, ಪಕ್ಷದ ಪಟ್ಟಿ ಬಿಡುಗಡೆಯಾಗುತ್ತೆ. ಕಾರ್ಯಕರ್ತರ ಅಪೇಕ್ಷೆಯಂತೆ ಅಭ್ಯರ್ಥಿ ಹಾಕಲಿದ್ದು, ಪೂರ್ಣ ಬಹುಮತ ಬರುತ್ತೇ.ಚುನಾವಣೆಗೋಸ್ಕರ ನಾವು ತಯಾರಿ ಮಾಡಲ್ಲ. ನಾಲ್ಕು ವರ್ಷವೂ ಸಂಘಟನೆ, ಸಮಾಜ ಸೇವೆ, ಹೋರಾಟ ಎಲ್ಲಾ ಮಾಡ್ತಾ ಜನರ ಮಧ್ಯೆ ಇರ್ತಾರೆ ಎಂದರು. ಆಯನೂರು ಮಂಜುನಾಥ್ ಕಛೇರಿ ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೇ ಆಫೀಸ್ ಮಾಡಿದರೂ ನಮ್ಮದೇನು ತಕಾರವಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಅವಕಾಶವಿದೆ ಎಂದರು.
ಸಿದ್ದರಾಮಯ್ಯ ಅವರು ಎಲ್ಲೇ ಕಾರ್ಯಕ್ರಮಕ್ಕೆ ಹೋದರು ಆರ್ ಎಸ್ ಎಸ್ ನ್ನು ನಿರ್ನಾಮ ಮಾಡಬೇಕು ಎಂದು ಹೇಳುತ್ತಾರೆ.ಆರ್ ಎಸ್ ಎಸ್ ಪ್ರಜಾಪ್ರಭುತ್ವವನ್ನು ಉಳಿಸಿದೆ ಎಲ್ಲಾ ಹಿಂದುಳಿದವರಿಗೆ ದಲಿತರಿಗೆ ನ್ಯಾಯ ಸಿಗುವಂತೆ ಮಾಡಿದೆ. ಹೀಗಾಗಿ ಸಿದ್ದರಾಮಯ್ಯನವರು ಆರ್‌ಎಸ್ ಟೀಕೆ ಮಾಡುವುದನ್ನು ಬಿಡದಿದ್ದರೆ ಅವರು ನಿರ್ನಾಮವಾಗುತ್ತಾರೆ. ಪಕ್ಷವು ನಿರ್ನಾಮವಾಗುತ್ತೆ ನಿರ್ಮಾಣವಾಗುತ್ತೆ ಎಂದು ಹೇಳಿದರು.