ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ಲಖನೌ ಸೂಪರ್ ಜೈಂಟ್ಸ್ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ ಎಸ್ ಜಿಗೆ ಕೊನೆಯ ಎಸೆತದಲ್ಲಿ 1 ವಿಕೆಟ್ ಅಂತರದ ಗೆಲುವು ದಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಚೇಸಿಂಗ್ ನಡೆಸಿದ ಲಖನೌ, ಪೂರನ್ ಮತ್ತು ಸ್ಟೋಯ್ನಿಸ್ ದಾಖಲೆಯ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ಗೆದ್ದು ಬೀಗಿತು.
ಒಂದು ಹಂತದಲ್ಲಿ ಲಖನೌ ಸುಲಭವಾಗಿ ಗುರಿ ತಲುಪುವ ಹಂತಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ ಪಂದ್ಯ ರೋಚಕ ಹಂತ ತಲುಪಿತು. ಆದರೆ, ಕೊನೆಯ ಎಸೆತದಲ್ಲಿ ರವಿ ಬಿಷ್ಣೋಯ್ ಮತ್ತು ಆವೇಶ ಖಾನ್ ಒಂದು ರನ್ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್‌ಸಿಬಿ ನೀಡಿದ ಬೃಹತ್ ಗುರಿ ಬೆನ್ನತ್ತಿದ ಲಖನೌ ಆರಂಭ ಉತ್ತಮವಾಗಿರಲಿಲ್ಲ. ಆರೇಂಜ್ ಕ್ಯಾಪ್ ರೇಸ್‌ನಲ್ಲಿದ್ದ ಕೈಲ್ ಮೇಯರ್ಸ್, ಮೊದಲ ಓವರ್‌ನಲ್ಲೇ ಮೊಹಮ್ಮದ್ ಸಿರಾಜ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಅವರ ಬೆನ್ನಲ್ಲೇ 9 ರನ್ ಗಳಿಸಿದ್ದ ದೀಪಕ್ ಹೂಡಾ ಕೂಡಾ ಔಟಾದರು. ಕ್ರುನಾಲ್ ಪಾಂಡ್ಯ ಡಕೌಟ್ ಆದರು. ಇವರಿಬ್ಬರಿಗೂ ಆರ್‌ಸಿಬಿ ಬಳಗ ಸೇರಿಕೊಂಡ ಹೊಸ ಆಟಗಾರ ಪರ್ನೆಲ್ ಡಕೌಟ್ ದಾರಿ ತೋರಿಸಿದರು.
ಈ ವೇಳೆ ನಾಯಕ ರಾಹುಲ್ ಜೊತೆ ಸೇರಿಕೊಂಡು ಸ್ಫೋಟಕ ಆಟವಾಡಿದ ಸ್ಟೋಯ್ನಿಸ್, ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 65 ರನ್ ಸಿಡಿಸಿದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಅವರನ್ನು ಕರ್ಣ್ ಶರ್ಮಾ ಔಟ್ ಮಾಡಿ ನಿರ್ಣಾಯಕ ವಿಕೆಟ್ ಪಡೆದರು. ಅವರ ಬೆನ್ನಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.