ಕರೋನಾ 2ನೇ ಅಲೆಗೆ ‌ಮೋದಿಯೇ ಕಾರಣ: ಇನ್ನಾದರೂ ಸತ್ಯ ಒಪ್ಪಿಕೊಂಡು ಕಾರ್ಯತಂತ್ರ ಮಾಡಲಿ: ರಾಹುಲ್ ಗಾಂಧಿ

ಕರೋನಾ ಅಲೆ ಮೊದಲ ಬಾರಿಗೆ ದೇಶಕ್ಕೆ ಅಪ್ಪಳಿಸಿದಾಗ ಯಾರಿಗೂ ಅದರ ಅಂದಾಜಿರಲಿಲ್ಲ.‌ ಅದರಿಂದಾಗಿ ಆ ಸಂದರ್ಭದಲ್ಲಿ ಒಕ್ಕೂಟ ಸರ್ಕಾರವನ್ನಾಗಲಿ ಅಥವಾ ರಾಜ್ಯ ಸರ್ಕಾರಗಳನ್ನಾಗಲಿ ಸಂಪೂರ್ಣ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಾಗಿರಲಿಲ್ಲ. ಆದರೀಗ ಎರಡನೇ ಅಲೆ ನಿಜಕ್ಕೂ ‘ಸ್ವಯಂಕೃತ’ ಅಪರಾಧ. ಸ್ವಯಂಕೃತ ಎಂದರೆ ದೇಶದ ಸರ್ಕಾರ ಎಂದೇ ಅರ್ಥ. ಮೊದಲ ಅಲೆಯ ವೇಳೆ ಏಕಾಏಕಿ ಲಾಕ್ಡೌನ್ ಹೇರಿದ್ದು, ವಲಸೆ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡದೇ ಇದ್ದುದು, ಬಡವರಿಗೆ ಸಕಾಲಕ್ಕೆ ಹಣ ನೀಡುವಂತಹ ಪ್ಯಾಕೇಜ್ ಘೋಷಣೆ ಮಾಡದೇ ಇದ್ದುದು ತಪ್ಪು. (20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಸಮರ್ಪಕವಾಗಿ ಅರ್ಹರಿಗೆ ತಲುಪಿಲ್ಲ ಎಂಬ ಹಿನ್ನಲೆಯಲ್ಲಿ). ಆದರೆ ಎರಡನೇ ಅಲೆಯ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಡಿಗಡಿಗೆ ತಪ್ಪು ಮಾಡಿದ್ದಾರೆ.

ಇದನ್ನು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘಂಟಾಘೋಷವಾಗಿ ಹೇಳಿದ್ದಾರೆ. ದೇಶದಲ್ಲಿ ಈಗ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರಾದೇಶಿಕ ಪಕ್ಷಗಳ ನಾಯಕರಲ್ಲಿ ‘ಅದೆಂಥದೋ’ ಭಯವೊಂದು ಆವರಿಸಿದೆ. ಅವರುಗಳು ಬಾಯಿ ಬಿಡುತ್ತಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಹೇಳಲಾಗುವ ಮಾಧ್ಯಮ ಕೇಂದ್ರ ಸರ್ಕಾರದ ತಪ್ಪುಗಳನ್ನು ಪರೋಕ್ಷವಾಗಿ ಕೂಡ ಖಂಡಿಸುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ಮುಖವಾಣಿಗಳಂತೆ ಸುದ್ದಿ (ವರದಿ ಅಲ್ಲ) ಮಾಡುತ್ತಿವೆ. ಇಂಥ ಭಯದ ವಾತಾವರಣದಲ್ಲಿ ನೇರವಾಗಿ, ಸ್ಪಷ್ಟವಾಗಿ ಮಾತನಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆದ ಸಂಸದ ರಾಹುಲ್ ಗಾಂಧಿ ಒಬ್ಬರೇ.

ರಾಹುಲ್ ಗಾಂಧಿ ಅವರು ಕರೋನಾ ಮೊದಲ ಅಲೆಯ ಸಂದರ್ಭದಲ್ಲೂ 2020ರ ಫೆಬ್ರವರಿ 12ರಂದು ಎಲ್ಲರಿಗಿಂತ ಮೊದಲು ಎಚ್ಚರಿಸಿದ್ದರು. ಎರಡನೇ ಅಲೆಯ ವೇಳೆ ಕೂಡ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ‘ಕರೋನಾ ಎರಡನೇ ಅಲೆ ತಡೆಯಲು ಲಾಕ್ಡೌನ್ ಒಂದೇ ಮದ್ದು, ಬಡವರಿಗೆ ಆರ್ಥಿಕ ನೆರವು ನೀಡುವಂತಹ ಪ್ಯಾಕೇಜ್ ಕೊಟ್ಟು ಲಾಕ್ಡೌನ್ ಜಾರಿಗೆ ತನ್ನಿ ಎಂಬ ಸಮಯೋಚಿತವಾದ ಸಲಹೆ ನೀಡಿದ್ದರು. ರಾಹುಲ್ ಗಾಂಧಿ ಅವರ ಸಲಹೆಯನ್ನು ಎಂದಿನಂತೆ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದರು. ಬೇಜವಾಬ್ದಾರಿತನದಿಂದ ವರ್ತಿಸಿದರು. ಪರಿಣಾಮ ದೇಶಾದ್ಯಂತ ಲಕ್ಷಾಂತರ ಜೀವ ಕಳೆದುಕೊಳ್ಳಬೇಕಾಯಿತು ಎಂಬುದು ಈಗ ಇತಿಹಾಸ.

ರಾಹುಲ್ ಗಾಂಧಿ ಈಗ ಮತ್ತೇ ಅಷ್ಟೇ ಸ್ಪಷ್ಟವಾಗಿ ಮಾತನ್ನಾಡಿದ್ದಾರೆ. ‘ದೇಶದಲ್ಲಿ ಕರೋನಾ ಎರಡನೇ ಅಲೆ ತಾರಕ್ಕೇರಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಕಾರಣ’ ಎಂದಿದ್ದಾರೆ. ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿರುವ ವಿಧಾನವನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಸುಳ್ಳು ಮತ್ತು ಪ್ರಚಾರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಸಾವಿನ ಪ್ರಮಾಣವನ್ನು ಕುರಿತು ಸುಳ್ಳುಗಳು ಹರಡಲಾಗುತ್ತಿದೆ. ಇದು ರಾಜಕೀಯ ಮಾಡುವ ವಿಷಯ ಅಲ್ಲ. ಜನರ ಜೀವ ಉಳಿಸುವ ವಿಷಯ ಎಂದಿದ್ದಾರೆ. ಅಲ್ಲದೆ “ನಾನು ಮತ್ತು ಇತರರು ಕೋವಿಡ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದೆವು. ಆದರೆ ಅವರು ನಮ್ಮನ್ನು ಅಪಹಾಸ್ಯ ಮಾಡುತ್ತಲೇ ಇದ್ದರು. ಸಮಸ್ಯೆಯೆಂದರೆ ಪ್ರಧಾನಿ ಮೋದಿಗೆ ಕೋವಿಡ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಕೇವಲ ಒಂದು ರೋಗವಲ್ಲ, ವಿಕಾಸಗೊಳ್ಳುತ್ತಿರುವ ರೋಗ. ಮುಂದೆ ಇನ್ನಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ” ಎಂದು ವಿವರವಾಗಿ ಹೇಳಿದ್ದಾರೆ.

ಮೊದಲಿನಿಂದಲೂ ಕೇಂದ್ರ ಸರ್ಕಾರವೇ ಉಚಿತವಾಗಿ ಎಲ್ಲರಿಗೂ ಕರೋನಾ ಲಸಿಕೆ ನೀಡಬೇಕು ಎಂದು ಪ್ರತಿಪಾದಿಸುತ್ತಿರುವ ರಾಹುಲ್ ಗಾಂಧಿ ಅವರು ಅದಕ್ಕಾಗಿ ಹೆಚ್ಚೆಚ್ಚು ವಿದೇಶಿ ಕಂಪನಿಗಳಿಗೆ ದೇಶದಲ್ಲಿ ಕರೋನಾ ಲಸಿಕೆ ಉತ್ಪಾದನೆ ಮಾಡಲು ಅವಕಾಶ ಕೊಡಿ ಎಂದಿದ್ದರು. ಹೆಚ್ಚೆಚ್ಚು ಆಮದು ಮಾಡಿಕೊಳ್ಳಿ ಎಂಬ ಸಲಹೆ ನೀಡಿದ್ದರು. ಅದೂ ಅಲ್ಲದೆ ಭಾರತದಲ್ಲೇ ಲಸಿಕೆ ಕೊರತೆ ಇರುವಾಗ ವಿದೇಶಗಳಿಗೆ ಏಕೆ ಲಸಿಕೆ ಕೊಡುತ್ತಿದ್ದೀರಿ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ‘ನಮ್ಮ ಮಕ್ಕಳಿಗೆ ಇಲ್ಲದ ಲಸಿಕೆಯನ್ನು ವಿದೇಶಗಳಿಗೆ ಏಕೆ ಮಾರುತ್ತಿದ್ದೀರಿ? ಅಂಬ ಅಭಿಯಾನ ನಡೆಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬರನ್ನು ಬಂಧಿಸಿದಾಗ ‘ತನ್ನನ್ನು ಬಂಧಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು. ಹೀಗೆ ಲಸಿಕೆ ಬಗ್ಗೆ ಕೂಡ ಸ್ಪಷ್ಟವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರಕ್ಕೆ ಲಸಿಕೆ ಬಗ್ಗೆ ನಿರ್ದಿಷ್ಟವಾದ ಕಾರ್ಯತಂತ್ರವೇ ಇಲ್ಲ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿನ ಸಾವುಗಳು ಸಹ ತಪ್ಪಾಗಿ ವರದಿಯಾಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೂ ‘ನಾವು ಸತ್ಯವನ್ನು ಹೇಳಲು ಅಂಜಬಾರದು. ಅವರು ಸುಳ್ಳನ್ನು ಹೇಳುತ್ತಿರಲಿ. ಅದರಿಂದ ಅವರಿಗೇ ಹಾನಿಯಾಗುತ್ತದೆ.   ವಾಸ್ತವವನ್ನು ಒಪ್ಪಿಕೊಳ್ಳಬೇಕು. ನಿಜವಾದ ಸಾವಿನ ಸಂಖ್ಯೆಗಳು ಗೊಂದಲಕ್ಕೊಳಗಾಗಬಹುದು ಆದರೆ ನಾವು ಸತ್ಯವನ್ನು ಹೇಳುವಲ್ಲಿ ಅಂಜಿಕೊಳ್ಳಬಾರದು’ ಎಂದು ತಿಳಿಸಿದ್ದೇನೆ ಎಂದಿದ್ದಾರೆ.

ಈ ವೈರಸ್ ತಾಳಬಹುದಾದ ರೂಪಾಂತರದ ಅಪಾಯಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈವರೆಗೆ ಕೇವಲ ಶೇಕಡಾ 3ರಷ್ಟು ಜನರಿಗೆ ಲಸಿಕೆ ಹಾಕಿ ಶೇಕಡಾ 97ಜನರ ಮೇಲೆ ವೈರಸ್‌ ಆಕ್ರಮಣ ಮಾಡಲು ಬಿಡಲಾಗಿದೆ. ಲಸಿಕೆಯೊಂದೇ ಶಾಶ್ವತ ಪರಿಹಾರವಾಗಿದೆ. ಆದರೆ ಮೋದಿ ತಾತ್ಕಾಲಿಕ ಪರಿಹಾರಗಳಾದ ಲಾಕ್‌ಡೌನ್‌, ಮಾಸ್ಕ್ ಗಳ ಬಗ್ಗೆಯಷ್ಟೇ ಮಾತನಾಡುತ್ತಿದ್ದಾರೆ.‌ ಅವರು ಇನ್ನಾದರೂ ಸತ್ಯವನ್ನು ಒಪ್ಪಿಕೊಳ್ಳಬೇಕು‌. ಪೂರಕ ಕಾರ್ಯತಂತ್ರ ಅನುಸರಿಸಬೇಕು ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಸಲಹೆ ನೀಡಿದ್ದಾರೆ. ಎಂದಿನಂತೆ ರಾಹುಲ್ ಗಾಂಧಿ ಅವರ ಸಲಹೆಯನ್ನು ಕೇಂದ್ರ ಸರ್ಕಾರ ಹೇಗೆ ಪರಿಗಣಿಸುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...