ಉತ್ತರ ಪ್ರದೇಶದಲ್ಲಿ ಪ್ಯಾಲೆಸ್ತೇನ್‌ ಪರ ನಿಲ್ಲುವುದೆಂದರೆ ಸಾರ್ವಜನಿಕ ಕಿಡಿಗೇಡಿತನದಲ್ಲಿ ಭಾಗಿಯಾಗುವುದೇ?

ಸ್ವಾತಂತ್ರ್ಯೋತ್ತರ ಭಾರತ ಇಸ್ರೇಲ್-ಪ್ಯಾಲೆಸ್ತೀನ್ ಕದನದಲ್ಲಿ ಸದಾ ಪ್ಯಾಲೆಸ್ತೀನ್ ಪರ ವಹಿಸಿಕೊಂಡೇ ಬಂದಿದೆ. ಅದರಲ್ಲೂ ಯಾಸಿರ್ ಅರಾಫತ್ ಪ್ಯಾಲೆಸ್ತೀನ್ ಅಧ್ಯಕ್ಷರಾಗಿದ್ದಾಗ ಭಾರತ ಪ್ಯಾಲೆಸ್ತೀನ್ ಜೊತೆ ಅತ್ಯಂತ ಸುಸ್ಥಿರ ಸಂಬಂಧ ಹೊಂದಿತ್ತು. ಭಾರತ ಮತ್ತು ಪ್ಯಾಲೆಸ್ತೀನಿನ ಕೊಡುಕೊಳ್ಳುವಿಕೆಗೆ ಸುಮಾರು ಏಳು ದಶಕಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಇದೇ ಕಾರಣಕ್ಕೆ ವಿಶ್ವ ಸಂಸ್ಥೆಯ ರಕ್ಷಣಾ ಸಮಾವೇಶದಲ್ಲಿ ಭಾರತದ ರಾಯಭಾರಿ ಇಸ್ರೇಲಿನ‌ ಪರ ನಿಲ್ಲದೆ ಪ್ಯಾಲೆಸ್ತೀನಿನ ಪರ ನಿಂತದ್ದು.

ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತೀನನ ನಡುವಿನ ರಕ್ತಸಿಕ್ತ ಇತಿಹಾಸ, ಭಾರತ ಮತ್ತು ಪ್ಯಾಲೆಸ್ತೀನಿನ ನಡುವಿನ ಸಂಬಂಧ ಗೊತ್ತಿಲ್ಲದೆ ಇಸ್ರೇಲ್‌ ಪರ ನಿಲ್ಲುವವರ ಸಂಖ್ಯೆ ಅಧಿಕವಾಗತೊಡಗಿವೆ.  ಭಾರತ ಪ್ಯಾಲೆಸ್ತೇನ್‌ ಪರವಿದ್ದರೂ ಇಲ್ಲಿನ ಹಿಂದುತ್ವವಾದಿಗಳು ಇಸ್ರೇಲ್‌ ಪರ ನಿಲ್ಲುತ್ತಿದ್ದಾರೆ. ನಾಗರಿಕರ ಈ ಪರ ವಿರೋಧ ಅಭಿಪ್ರಾಯಗಳು ಆಡಳಿತಾತ್ಮಕವಾಗಿ ಯಾವ ಮಹತ್ತರ ಸ್ಥಿತ್ಯಂತರಗಳಿಗೂ ಕಾರಣವಾಗುವುದಿಲ್ಲ ಎನ್ನುವುದೇ ನಿಜ.

ಪೊಲೀಸರ ವಶದಲ್ಲಿ ಯಾಸರ್‌ ಅರಾಫತ್‌ (ದಿ ವೈರ್‌ ಕೃಪೆ)

ಪ್ಯಾಲೇಸ್ತೀನ್‌ ಪರ ನಿಲ್ಲುವುದು ಭಾರತದ ಭದ್ರತೆಗೆ ಆಗಲಿ, ರಾಷ್ಟ್ರೀಯ ಹಿತಾಸಕ್ತಿಗಾಗಲೀ ಯಾವುದೇ ಕೇಡುಂಟು ಮಾಡುವುದಿಲ್ಲವೆಂದರೂ ಪ್ಯಾಲೆಸ್ತೀನ್‌ ಪರ ವಹಿಸಿದ ಸಾಮಾಜಿಕ ಪೋಸ್ಟ್‌ ಒಂದರ ನೆಪದಲ್ಲಿ ಉತ್ತರ ಪ್ರದೇಶ ಪೊಲೀಸರು 32 ರ ನಾಗರಿಕ ಪತ್ರಕರ್ತನೊರ್ವನನ್ನು (Citizen Journalist) ಬಂಧಿಸುವ ಮೂಲಕ ಯುವಕನಲ್ಲಿ ವಿನಾ ಕಾರಣ ಅಭದ್ರತೆ ಮೂಡಿಸಿದ್ದಾರೆ. ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ.

ಪ್ಯಾಲೆಸ್ತೀನಿನಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆಂಬ ಒಂದೇ ಕಾರಣಕ್ಕೆ ಪ್ಯಾಲೆಸ್ತೇನ್‌ ಮೇಲೆ ದೌರ್ಜನ್ಯ ಎಸಗುತ್ತಿರುವ ಇಸ್ರೆಲ್‌ ಪರವಾಗಿ ಭಾರತದ ಹಿಂದುತ್ವವಾದಿಗಳು ಬೆಂಬಲ ನೀಡುತ್ತಿರುವುದು ಹೆಚ್ಚುತ್ತಿರುವುದರ ಮಧ್ಯೆಯೇ ಉತ್ತರ ಪ್ರದೇಶ ಪೊಲೀಸರ ಈ ನಡೆ ಚರ್ಚೆಗೆ ಗ್ರಾಸವಾಗಿದೆ.

ಮೇ 19ರಂದು ಉತ್ತರ‌ ಪ್ರದೇಶದ ಅಝಮ್‌ಘರ್ ಜಿಲ್ಲೆಯ ಅರಾಫತ್   ‘ಅಝಮ್‌ಘರ್ ಎಕ್ಸ್ಪ್ರೆಸ್’ ಎನ್ನುವ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಸ್ಥಳೀಯ ಸುದ್ದಿಗಳನ್ನು ತನ್ನ ವಿಶ್ಲೇಷಣೆಗಳನ್ನು ಹಂಚಿಕೊಳ್ಳುತ್ತಿದ್ದರು. ಅದೇ ಪೇಜಿನಲ್ಲಿ ತಾನು ಪ್ಯಾಲೆಸ್ತೀನನ ಪರ ನಿಲ್ಲುತ್ತೇನೆ ಎಂದು ಒಂದು ಚಿತ್ರ ಶೇರ್ ಮಾಡಿ ಕಮೆಂಟ್ ಹಾಕಿದ್ದರು ಮತ್ತು ಮುಂದಿನ ಶುಕ್ರವಾರ ಗಾಝಾದ ಪ್ರತಿ ಮನೆ ಹಾಗೂ ವಾಹನದಲ್ಲಿ ಪ್ಯಾಲೇಸ್ತೀನ್ ಧ್ವಜ ಹಾರಲಿದೆ ಎಂದೂ ಬರೆದಿಕೊಂಡಿದ್ದರು. ಸುಮಾರು ಹದಿನೇಳು ಲಕ್ಷ ಫಾಲೋವರ್ಸ್ ಇರುವ ಆ ಪೇಜಿನ ಇಸ್ರೇಲ್‌ಗೆ ಬೆಂಬಲಿಸುವ ಭಾರತೀಯರು ಕೂಡಲೇ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಅಝಮ್‌ಘರ್‌ನ ಮುಸ್ಲಿಮರು ಪ್ಯಾಲೆಸ್ತೀನನ ಧ್ವಜ ಹಾರಿಸಬೇಕು ಎಂಬುವುದಾಗಿ ಅರಾಫತ್ ಹೇಳಿದ್ದಾರೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡ ಕೆಲವರು, ಭಾರತೀಯರಾಗಿದ್ದುಕೊಂಡು ಇನ್ನೊಂದು ದೇಶದ ಧ್ವಜ ಹಾರಿಸಬೇಕೆಂದು ಅರಾಫತ್‌ ಯಾಕೆ ಕರೆಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅರಾಫತ್ ತನ್ನ‌ ಪೋಸ್ಟ್‌ಗೆ ಸ್ಪಷ್ಟನೆ ಕೊಟ್ಟರೂ ಆ‌‌‌ ಪೋಸ್ಟ್ ಅದಾಗಲೇ ವೈರಲ್ ಆಗಿತ್ತು.

ಅಷ್ಟು ಮಾತ್ರ ಅಲ್ಲದೆ ಮೇ 20ರಂದು ಅಝಮ್‌ಘರ್ ಪೊಲೀಸರು ಅವರನ್ನು ಬಂಧಿಸಿ ಜೈಲಿಗಟ್ಟಿದರು. ಮೇ 21ರಂದು ಜಾಮೀನಿನ‌ ಮೇಲೆ ಅವರು ಬಿಡುಗಡೆಯಾದರೂ ಇನ್ನೂ ಅವರು ಆ ಆಘಾತದಿಂದ ಚೇತರಿಸಿಕೊಂಡಿಲ್ಲ ಎಂದು ಮನೆಯವರು ಬೇಸರ ವ್ಯಕ್ತಪಡಿಸುತ್ತಾರೆ.

ಅಝಂಘರದ ಪೊಲೀಸರು 2020ರ ಸಿಎಎ ವಿರೋಧಿ ಹೋರಾಟದಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಥಳಿಸಿ ಅಲ್ಪಸಂಖ್ಯಾತ ವಿರೋಧಿ ಅನ್ನಿಸಿಕೊಂಡಿದ್ದರು. ಅದಾಗಿ‌‌ ಒಂದು ವರ್ಷದ ಬಳಿಕವೂ  ಅಝಮ್‌ಘರ್ ಪೊಲೀಸರ ಮನಸ್ಥಿತಿ ಬದಲಾಗಿಲ್ಲ ಎನ್ನುವುದು ದುರಂತ.

ಅರಾಫತ್ ಅವರ ಕುಟುಂಬಸ್ಥರ ಪ್ರಕಾರ ಕೆಲವು ಓದುಗರು ತೀವ್ರವಾಗಿ ಪ್ರತಿಕ್ರಿಯಿಸಿದ ತಕ್ಷಣ ಅವರು‌ ಸ್ವ ಇಚ್ಛೆಯಿಂದ ತಮ್ಮ‌ ಪೋಸ್ಟ್‌ನಲ್ಲಿದ್ದ ‘ಆಕ್ಷೇಪಾರ್ಹ’ ಭಾಗವನ್ನು ತೆಗೆದು ಹಾಕಿದ್ದಾರೆ ಮತ್ತು ತಮ್ಮ ಉದ್ದೇಶದ ಬಗ್ಗೆ‌ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ ಅಷ್ಟಾರಲ್ಲಾಗಲೇ ಟ್ರೋಲ್ ಗುಂಪ್ ಆ ಪೋಸ್ಟ್‌ಗೆ ಕೋಮು ಬಣ್ಣ ನೀಡಿ‌ಯಾಗಿತ್ತು.

ಪೊಲೀಸರು ಅವರನ್ನು ಬಂಧಿಸಿದ ಕೂಡಲೇ special operations group ಅವರ ಮನೆಯ ಮೇಲೆ ದಾಳಿ ಮಾಡಿತ್ತು. ಆದರೆ ಸಂಶಯಾಸ್ಪದವಾದದ್ದು ಏನೂ ದೊರೆತಿಲ್ಲ ಎಂದು ಅವರ ಕುಟುಂಬಿಕರು ‘ದಿ ವೈರ್’ಗೆ ತಿಳಿಸಿದ್ದಾರೆ . “ಅಧಿಕಾರಸ್ಥರನ್ನು ತೃಪ್ತಿಪಡಿಸುವ ಏಕೈಕ ಉದ್ದೇಶದಿಂದ ನನ್ನ ಸಹೋದರನನ್ನು ಬಂಧಿಸಲಾಯಿತು” ಎಂದೂ ಅವರ ಸಹೋದರ ಶಾಹಿದ್ ಅಭಿಪ್ರಾಯ ಪಟ್ಟಿದ್ದಾರೆ.

ಅರಾಫತ್ ಅವರು ‘ಸಾರ್ವಜನಿಕ ಕಿಡಿಗೇಡಿತನದಲ್ಲಿ ಪಾಲ್ಗೊಂಡಿ’ರುವುದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು‌ ಸರಾಯ್‌ಮಿರ್‌ನ ಪೊಲೀಸ್ ಅಧಿಕಾರಿ ಅನಿಲ್ ಸಿಂಗ್ ತಿಳಿಸಿದ್ದಾರೆ. “ಅವರ ಪೋಸ್ಟ್ ವೈರಲ್ ಆದ ಬಳಿಕ ಕೋಮುಭಾವನೆಗಳು ಭುಗಿಲೆದ್ದವು.  ಅನಪೇಕ್ಷಿತ ಘಟನೆಗಳು ನಡೆಯಬಾರದೆಂದು ಅವರನ್ನು ಬಂಧಿಸಲಾಯಿತು” ಅನಿಲ್ ಸಿಂಗ್ ‘ದಿ ವೈರ್’ಗೆ ತಿಳಿಸಿದ್ದಾರೆ. ಆದರೆ ಪೋಸ್ಟ್ ‌ಗೆ ಕೋಮು ಬಣ್ಣ ನೀಡಿದವರ ಬಗ್ಗೆ ಯಾಕೆ ಕ್ರಮ ಕೈಗೊಳಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. 

ಅರಾಫತ್ ಈಗ ಯಾರ ಜೊತೆಯೂ ಮಾತಾಡುವ ಸ್ಥಿತಿಯಲ್ಲಿ ಇಲ್ಲ. “ಅವರು ಇನ್ನೂ ಆಘಾತದಿಂದ ಹೊರಗೆ ಬಂದಿಲ್ಲ. ‌ಪೊಲೀಸ್ ಸ್ಟೇಷನ್‌ನಿಂದ ಹೊರಗೆ ಬಂದ ಮೇಲೆ ಯಾರ ಜೊತೆಯೂ ಮಾತಾಡುತ್ತಿಲ್ಲ” ಎಂದು ಅವರ ಸಹೋದರ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

ಪ್ಯಾಲೆಸ್ತೀನನ್ನು ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು. ಹಾಗಾಗಿಯೇ ಭಾರತ ಪ್ರತಿ ಬಾರಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ಯಾಲೆಸ್ತೀನನ ಪರ ವಹಿಸುತ್ತಾ ಬಂದಿದೆ. ಆದರೆ ಮುಸ್ಲಿಂ ದ್ವೇಷವನ್ನು ಉಸಿರಾಗಿಸಿಕೊಂಡಿರುವವರಿಗೆ ದೇಶದ ಹಿತಾಸಕ್ತಿ ಮುಖ್ಯವಾಗಿಲ್ಲ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...