ನರೇಂದ್ರ ಮೋದಿ ಸರ್ಕಾರ ವಿದೇಶದಲ್ಲಿ ʻಭಾರತೀಯ ಸಾಂಪ್ರದಾಯಿಕ ಔಷಧಿʼ ಎಂಬ ವ್ಯಾಖ್ಯಾನದೊಂದಿಗೆ ಆಯುರ್ವವೇದವನ್ನು ಕೊರೋನಾ ಸೋಂಕಿಗೆ ಸೂಕ್ತ ಔಷಧಿ ಎಂದು ಪ್ರಚಾರ ಪಡಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಯುಕೆ ಅನ್ನು ಆಯ್ಕೆ ಮಾಡಿಕೊಂಡಿದೆ. ಆಂಟಿ ಆಕ್ಸಿಡೆಂಟ್ (anti-oxidant) ಮತ್ತು ಆಂಟಿ ಇನ್ಫ್ಲಮೆಟರಿ (anti-inflammatory – ಉರಿಯೂತ ನಿವಾರಕ) ಮೂಲಿಕೆಯಾದ ಅಶ್ವಗಂಧವನ್ನು ವಿಪರೀತ ಆಯಾಸ, ತೀವ್ರ ಒತ್ತಡ, ನಿದ್ರಾಹೀನದಂತಹ ಸಮಸ್ಯೆ ಇರುವ ಕೊರೋನಾ ಸೋಂಕಿತ ರೋಗಿಗಳ ಮೇಲೆ ಪರೀಕ್ಷಿಸಲು ಮುಂದಾಗಿದೆ. ಇದಕ್ಕೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಈ ಅಧ್ಯಯನವನ್ನು ಆಯುಷ್ ಸಚಿವಾಲಯದ ಅಂಗವಾದ ಆಲ್ ಇಂಡಿಯಾ ಇನಿಸ್ಟಿಟ್ಯೂಟ್ ಆಫ್ ಆಯುರ್ವೇದ ಸಂಸ್ಥೆ (AIIA) ಹಾಗೂ ಲಂಡನ್‌ನ ಸ್ಕೂಲ್ ಆಫ್ ಹೈಜೀನಿಕ್ ಆಂಡ್ ಟ್ರಾಪಿಕಲ್ ಮೆಡಿಸಿನ್ (LSHTM) ವೈದ್ಯಕೀಯ ಸಂಸ್ಥೆಯೂ ಜಂಟಿಯಾಗಿ ನಡೆಸಲಿದೆ.
ಈ ಆಧ್ಯಯನಕ್ಕೆ ಯುಕೆಯ ಮೂರು ಪ್ರಮುಖ ನಗರಳಾದ ಲೀಸೆಸ್ಟರ್, ಬರ್ಮಿಂಗ್ಹ್ಯಾಮ್ ಮತ್ತು ಲಂಡನ್ನ 2 ಸಾವಿರ ಮಂದಿಯನ್ನು ಅಧ್ಯಯನಕ್ಕೆ ಒಳಪಡಲಿದ್ದಾರೆ. ಅಧ್ಯಯನವನ್ನು ಆಲ್ ಇಂಡಿಯಾ ಇನಿಸ್ಟಿಟ್ಯೂಟ್ ಆಫ್ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ತನುಜಾ ನೆರ್ಸೈ ಹಾಗೂ ಲಂಡನ್‌ನ ಸ್ಕೂಲ್ ಆಫ್ ಹೈಜೀನಿಕ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿರುವ ಡಾ. ಸಂಜಯ್ ಕಿನ್ರಾ ಮುಂದಾಳತ್ವದಲ್ಲಿ ನಡೆಯಲಿದೆ. ಈಗಾಗಲೇ ಈ ಅಧ್ಯಯನ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಯನ್ನು ಪಡೆದುಕೊಂಡಿದೆ. ಈ ರೀತಿಯಾದ ಸಮಸ್ಯೆ ಇರುವ 2 ಸಾವಿರ ಜನರಿಗೆ ಅಶ್ವಗಂಧ ಔಷಧಿ ಮೂರು ತಿಂಗಳ ಕಾಲ ನೀಡಲಾಗುತ್ತದೆ. ಅದಾದ ಬಳಿಕ ಅದರ ಪರಿಣಾಮವೇನು ಎಂಬುವುದನ್ನು ಈ ಎರಡು ವೈದ್ಯಕೀಯ ಸಂಸ್ಥೆಗಳು ಜಂಟಿಯಾಗಿ ಕಲೆ ಹಾಕಲಿದೆ. ಅಂದದಾಗೆ, ಈ ಅಧ್ಯಯನವನ್ನು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಆರಂಭಿಸಲು ಚಿಂತಿಸಲಾಗಿದೆ. ಅಕಸ್ಮಾತ್ ಇದೊಂದು ಯಶಸ್ವಿ ಅಧ್ಯಯನವಾದರೆ ಜಾಗತಿಕ ಮಟ್ಟದಲ್ಲಿ ಕೇಂದ್ರ ಸರ್ಕಾರ ಆಯುರ್ವೇದ ಔಷಧಿಗೆ ಉತ್ತೇಜನ ನೀಡಲು ಮೋದಿ ಸರ್ಕಾರ ಚಿಂತಿಸಿದೆ ಎಂದು ಕೆಲ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ಆಯುರ್ವೇದ ಔಷಧಿಯನ್ನು ಅಲೋಪಥಿ ಔಷಧಿಯ ಜೊತೆ ಹೋಲಿಕೆ :
ಈ ಅಶ್ವಗಂಧ ಔಷಧಿಯನ್ನು 500gm ಅನುಸಾರ ಪ್ರತಿ ದಿನ ಎರಡು ಬಾರಿ ಮೂರು ತಿಂಗಳ ಕಾಲ ಅಧ್ಯಯನಕ್ಕೊಳಗಾಗುವರಿಗೆ ನೀಡಲಾಗುತ್ತದೆ. ಅಲ್ಲದೆ ಪ್ರತಿ ದಿನ ಅಧ್ಯಯನಕ್ಕೊಳಗಾದ ಅಭ್ಯರ್ಥಿಗಳು ತಮ್ಮ ಅನಿಸಿಕೆಯನ್ನು ಖುದ್ದಾಗಿ ದಾಖಲಿಸಿ ಈ ಎರಡು ಸಂಸ್ಥೆಗಳಿಗೆ ವರದಿ ಮಾಡಲಿದ್ದಾರೆ. ಇದೇ ವೇಳೆ ಅಶ್ವಗಂಧ ಔಷಧಿಯನ್ನು ಅಲೋಪಥಿಯ ಪ್ಲಸೀಬೊ ಮಾತ್ರೆಯ (placebo pill) ಜೊತೆಗೆ ತಾರತಮ್ಯ ಮಾಡಲಿದೆ ಅಧ್ಯಯನ ತಂಡ. ಇದು ಲಂಡನ್‌ನ ಸ್ಕೂಲ್ ಆಫ್ ಹೈಜೀನಿಕ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆಯ ಚೊಚ್ಚಲ ಆಯುರ್ವೇದ ಅಧ್ಯಯನವಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಸೆಪ್ಟಂಬರ್ ಆರಂಭಕ್ಕೆ ಯುಕೆಗೆ ಅಶ್ವಗಂಧ ರವಾನಿಸಲಿರುವ ಕೇಂದ್ರ ಸರ್ಕಾರ :
ಈ ಬಗ್ಗೆ ದಿ ಪ್ರಿಂಟ್ ಜೊತೆ ಮಾಹಿತಿ ಹಂಚಿಕೊಂಡಿರುವ ಆಲ್ ಇಂಡಿಯಾ ಇನಿಸ್ಟಿಟ್ಯೂಟ್ ಆಫ್ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ತನುಜಾ ನೆರ್ಸೈ, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಅಗತ್ಯವಿರುವ ಎಲ್ಲಾ ನಿಯಂತ್ರಕ ಅನುಮೋದನೆಗಳು ಪೂರ್ಣಗೊಂಡ ನಂತರ ಔಷಧವನ್ನು ಸೆಪ್ಟೆಂಬರ್‌ನ ಆರಂಭದ ಹೊತ್ತಿಗೆ ಯುಕೆಗೆ ಕಳುಹಿಸಿಕೊಡಲಾಗುತ್ತೆ ಎಂದಿದ್ದಾರೆ. ಸದ್ಯ ಅಶ್ವಗಂಧ ಔಷಧಿಯನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂಗೀಕೃತಗೊಂಡ ಫಾರ್ಮ ಕಂಪೆನಿಗಳು ಬೆಂಗಳೂರಲ್ಲಿ ಮತ್ತು ಚೆನ್ನೈನ್‌ನಲ್ಲಿ ತಯಾರಿಸಲಾಗುತ್ತಿದೆ. ಇನ್ನು ಈ ಅಧ್ಯಯನಕ್ಕೆ ಲಂಡನ್‌ನ ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಒಪ್ಪಿಗೆ ಕೊಟ್ಟಿದೆ.






