ಕೋವಿಡ್ ಸೋಂಕಿತರ ಜೀವ ಉಳಿಸಬಹುದಾಗಿದ್ದ ಆಕ್ಸಿಜನ್ ಕೊರತೆ, ರೈತರ ಹೆಸರಿಗೆ ಮಸಿ ಬಳಿಯಲು ಗಣರಾಜ್ಯೋತ್ಸವ ದಿನದಂದು ಆಡಳಿತಾರೂಢ ಪಕ್ಷ ನಡೆಸಿದ ಸಂಚಿನಿಂದ ಕೆಂಪುಕೋಟೆಯಲ್ಲಿ ನಡೆದ ಹಿಂಸೆ, ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಸೇರಿದಂತೆ ಪ್ರಮುಖ ಘಟನೆಗಳ ನಡುವೆಯೂ 2021ರಲ್ಲಿ ದೇಶದ ಆರ್ಥಿಕತೆ ಚೇತರಿಕೆಯತ್ತ ಹೊರಳಲು ಪ್ರಯತ್ನಿಸಿರುವುದು ನಿಚ್ಛಳವಾಗಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏರುಹಾದಿಯತ್ತ ಚಲಿಸತೊಡಗಿದೆ. ಆದರೆ, ಕೋವಿಡ್ ಪೂರ್ವದಲ್ಲಿದ್ದ ಆರ್ಥಿಕ ಅಭಿವೃದ್ಧಿ ಪರಿಸ್ಥಿತಿ ಇನ್ನೂ ಮರಳಿಲ್ಲ. ಅದಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಬೇಕಿದೆ.
ಆದೆರೆ, ದೇಶದಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಮಾತ್ರ ಸ್ವರ್ಗಸದೃಶ ಬೆಳವಣಿಗೆಗಳಾಗಿವೆ. ಈ ಕಾರಣಕ್ಕಾಗಿಯೇ ಜಿಡಿಪಿ ಕೋವಿಡ್ ಪೂರ್ವದ ಮಟ್ಟಕ್ಕೆ ಏರದಿದ್ದರೂ, ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ. ಈ ನಡುವೆ ಕಂಡುಬಂದ ಓಮಿಕ್ರಾನ್ ರೂಪಾಂತರಿ ಹಾವಳಿಯಿಂದ ಪೇಟೆ ಕುಸಿತದ ಹಾದಿಯಲ್ಲಿದ್ದರೂ, ಒಟ್ಟಾರೆ ವರ್ಷವಿಡೀ ಷೇರುಪೇಟೆಯಲ್ಲಿ ಸಂಭ್ರಮವೋ ಸಂಭ್ರಮ.
ಅದಕ್ಕೆ ಮುಖ್ಯ ಕಾರಣ ಕೋವಿಡ್ ಸಂಕಷ್ಟದಿಂದ ಪಾರಾಗುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಪ್ರಕಟಿಸಿದ ಆರ್ಥಿಕ ಪ್ರೋತ್ಸಾಹಕ ಕ್ರಮಗಳು. ಇದರಿಂದಾಗಿ ಮಾರುಕಟ್ಟೆಗೆ ನಗದು ಹರಿವು ಪ್ರವಾಹದೋಪಾದಿಯಲ್ಲಿ ಅಪ್ಪಳಿಸಿತು. ಬ್ಯಾಂಕ್ ಬಡ್ಡಿದರಗಳು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಪರಿಣಾಮ ಬಹುತೇಕ ನಗದು ಹರಿವು ಷೇರುಪೇಟೆಯತ್ತಲೇ ನುಗ್ಗಿತು. ಈ ಕಾರಣಕ್ಕಾಗಿ ಷೇರುಪೇಟೆಯಲ್ಲಿ ಸ್ವರ್ಗಸದೃಶ ವಾತವರಣ ಸೃಷ್ಟಿಯಾಯಿತು. ಅದು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಮೂಲಕವೂ ಪ್ರತಿಬಿಂಬಿತವಾಯಿತು. ಸುಮಾರು 70 ಹೆಚ್ಚು ಕಂಪನಿಗಳು ಐಪಿಓ ಮೂಲಕ 1.9 ಲಕ್ಷ ಕೋಟಿ ರುಪಾಯಿ ಬಂಡವಾಳ ಸಂಗ್ರಹಿಸಿದವು. ಶೇ.80ರಷ್ಟು ಐಪಿಓಗಳು ಹೂಡಿಕೆದಾರರಿಗೆ ಆರಂಭದಲ್ಲೇ ಲಾಭತಂದುಕೊಟ್ಟವು.
ನಗದು ಹರಿವು ನಿರೀಕ್ಷೆ ಮೀರಿ ಹೆಚ್ಚಿದ್ದ ಕಾರಣ ಹಣದುಬ್ಬರವೂ ಅಂದಾಜಿಸಿದ್ದ ಪ್ರಮಾಣಕ್ಕಿಂತ ಮೇಲೆ ಜಿಗಿಯಿತು. ಇದು ಪರೋಕ್ಷವಾಗಿ ಬೇಡಿಕೆ ಕುಸಿತಕ್ಕೆ ಕಾರಣವಾಯಿತು. ಬಡ್ಡಿದರ ಏರಿಕೆ ಮಾಡುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ಈಗ ತಲೆದೋರಿದೆ. ಒಟ್ಟಾರೆ ಹಣಕಾಸು ಮಾರುಕಟ್ಟೆಯ ಸಾಧನೆ ಅತ್ಯುತ್ತಮವಾಗಿತ್ತು.
ಹಣಕಾಸು ಮಾರುಕಟ್ಟೆಯಲ್ಲಿನ ಸ್ವರ್ಗಸದೃಶ ಪರಿಸ್ಥಿತಿಯೇ ಇದೇ ದೇಶದ ಆರ್ಥಿಕ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಬೇಕಿಲ್ಲ. ಹಾಗೆ ಭಾವಿಸುವಂತೆ ಮಾಡಲು ಆಡಳಿತಾರೂಢ ಪಕ್ಷ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂಬುದು ಬೇರೆ ಮಾತು. ಹಣಕಾಸು ಮಾರುಕಟ್ಟೆ ಹೊರತು ಪಡಿಸಿ ಆರ್ಥಿಕತೆಯನ್ನು ವಿಶ್ಲೇಷಿಸುವುದಾದರೆ, ಪರಿಸ್ಥಿತಿ ಅಷ್ಟೇನೂ ಚನ್ನಾಗಿಲ್ಲ. ದೇಶದಲ್ಲಿ ವಿತ್ತೀಯ ಕೊರತೆ ಹಿಗ್ಗುತ್ತಲೇ ಇದೆ. ಸರ್ಕಾರದ ಆದಾಯ ಮತ್ತು ಖರ್ಚುಗಳ ನಡುವಿನ ವ್ಯತ್ಯಾಸವೇ ವಿತ್ತೀಯ ಕೊರತೆ. ಅಂದರೆ ಸರ್ಕಾರಕ್ಕೆ ಬರುತ್ತಿರುವ ಆದಾಯಕ್ಕಿಂತ ಹೆಚ್ಚು ಖರ್ಚಾಗುತ್ತಿದೆ. ವಿತ್ತೀಯ ಕೊರತೆ ಪ್ರಮಾಣವೇ 12 ಲಕ್ಷ ಕೋಟಿ ರುಪಾಯಿ ದಾಟುವ ಅಂದಾಜು ಇದೆ. ಚಾಲ್ತಿ ಖಾತೆ ಕೊರತೆ ಮತ್ತು ವ್ಯಾಪಾರ ಕೊರತೆಯೂ ಆತಂಕಕಾರಿ ಪ್ರಮಾಣದಲ್ಲಿವೆ. ಚಾಲ್ತಿ ಖಾತೆ ಕೊರತೆ ದಿನ ನಿತ್ಯದ ವಹಿವಾಟಿಗೆ ದಕ್ಕುವ ನಗದು ಒಳಹರಿವು ಮತ್ತು ಹೊರ ಹರಿವಿನ ಲೆಕ್ಕಾಚಾರ. ವ್ಯಾಪಾರ ಕೊರತೆಯು ದೇಶದ ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸವನ್ನು ದಾಖಲಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ರಫ್ತು ಏರಿಕೆಯ ಹಾದಿಯಲ್ಲಿ ಇದ್ದರೂ ಆಮದು ಪ್ರಮಾಣ ಭಾರಿ ಪ್ರಮಾಣದಲ್ಲಿ ಹಿಗ್ಗಿದೆ. ಹೀಗಾಗಿ ಆಮದು -ರಫ್ತು ನಡುವಿನ ಅಂತರ ತೀವ್ರ ಪ್ರಮಾಣದಲ್ಲಿದೆ. ಅದು ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ.

ಈ ವರ್ಷದ ಅತಿ ಪ್ರಮುಖ ಘಟನೆ ಎಂದರೆ ಸುಮಾರು ಏಳು ದಶಕಗಳ ನಂತರ ‘ಏರ್ ಇಂಡಿಯಾ’ ಟಾಟಾ ಸಮೂಹದ ತೆಕ್ಕೆಗೆ ಮರಳಿದ್ದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಏಳೂವರೆ ವರ್ಷಗಳು ಕಳೆದರೂ ‘ಏರ್ ಇಂಡಿಯಾ’ವನ್ನು ಲಾಭದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಮಾರಾಟ ಮಾಡುವುದೇ ಮೋದಿ ಸರ್ಕಾರದ ಉದ್ದೇಶವಾಗಿದ್ದರಿಂದಾಗಿ ‘ಏರ್ ಇಂಡಿಯಾ’ ಮತ್ತೆ ಟಾಟಾ ಸಮೂಹದ ಪಾಲಾಗುತ್ತಿದೆ. ‘ಏರ್ ಇಂಡಿಯಾ’ ಮಾರಾಟದಿಂದಾಗಿ ಮೋದಿ ಸರ್ಕಾರ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ವಾಯುಯಾನ ಸಂಸ್ಥೆಯೊಂದನ್ನು ಅತ್ಯಂತ ಕಡಮೆ ಬೆಲೆಯೊಂದಿಗೆ ಭಾರತದ ಸರ್ಕಾರದಿಂದ ಕೈಜಾರಿದೆ.
ಮೋದಿ ಸರ್ಕಾರ ಬರೀ ‘ಏರ್ ಇಂಡಿಯಾ’ ಮಾತ್ರ ಮಾರಾಟ ಮಾಡುತ್ತಿಲ್ಲ. ‘ಏರ್ ಇಂಡಿಯಾ’ ಅಲ್ಲದೇ, ದೇಶದ ವಿವಿಧ ವಿಮಾನ ನಿಲ್ದಾಣಗಳು, ರೈಲ್ವೆ ಮಾರ್ಗಗಳು, ರೈಲ್ವೆ ನಿಲ್ದಾಣಗಳು, ಸರ್ಕಾರಿ ಸ್ವಾಮ್ಯದ ಕಂಪನಿಗೆ ಸೇರಿದ ಭೂಮಿ, ಮೂಲಭೂತ ಸೌಲಭ್ಯಗಳು ಹೀಗೆ ಏನೇನು ಸಿಗುತ್ತದೋ ಎಲ್ಲವನ್ನೂ ಮಾರಾಟ ಮಾಡಲು ಸಿದ್ಧವಾಗಿದೆ. ಆಗಸ್ಟ್ 23 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಮಾರಾಟ ಕ್ರಿಯಾಯೋಜನೆ ಪ್ರಕಾರ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರುಪಾಯಿಗಳಷ್ಟು ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತದೆ. ಇದಕ್ಕೆ ‘ಆಸ್ತಿಗಳ ನಗದೀಕರಣ’ ಎಂಬ ನಾಜೂಕಿನ ಹೆಸರು ನೀಡಲಾಗಿದೆ.
2021ರಲ್ಲಿನ ಐತಿಹಾಸಿಕ ಘಟನೆ ಎಂದರೆ, ರೈತರನ್ನು ದೇಶದ್ರೋಹಿಗಳಂತೆ ನಡೆಸಿಕೊಂಡು ಅಹಂಕಾರ ಮೆರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅದೇ ರೈತರ ಮುಂದೆ ಮಂಡಿಯೂರಿ ಕುಳಿತು ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡುವ ನಿರ್ಧಾರ ಪ್ರಕಟಿಸಿದ್ದು, ಮತ್ತು ಪರೋಕ್ಷವಾಗಿ ಕ್ಷಮೆ ಯಾಚಿಸಿದ್ದು. ಮೂರು ರೈತ ವಿರೋಧಿ ಮತ್ತು ಕಾರ್ಪೊರೆಟ್ ಸ್ನೇಹಿ ಕಾನೂನುಗಳು ಜಾರಿಯಾಗಿ ಚಾಲ್ತಿಗೆ ಬಂದಿದ್ದರೆ, ರೈತರ ಬದುಕು ಮೂರಾಬಟ್ಟೆಯಾಗಿರುತ್ತಿತ್ತು. ಆ ಕಾರಣಕ್ಕಾಗಿ ರೈತರ ದಿಟ್ಟ ಹೋರಾಟ ಐತಿಹಾಸಿಕವಾದದ್ದು. ಏಕಮೇವಾದ್ವೀತನಾಗಿ ಮೆರೆಯುತ್ತಿದ್ದ ಪ್ರಧಾನಿ ಮೋದಿಯೇ ಮಂಡಿಯೂರುವಂತೆ ಮಾಡಿದ್ದು, ಆಡಳಿತಾರೂಢ ಪಕ್ಷದ ಮತ್ತು ಖುದ್ದು ಪ್ರಧಾನಿ ಮೋದಿಯ ‘ಅಹಂ’ಗೆ ಬಿದ್ದ ಅತಿದೊಡ್ಡ ಪೆಟ್ಟು!
ಉತ್ತರ ಪ್ರದೇಶ ಚುನಾವಣೆ ಗೆಲ್ಲುವ ಸಲುವಾಗಿ ಮಂಡಿಯೂರಿರುವ ಪ್ರಧಾನಿ ಮೋದಿ ಒಂದು ವೇಳೆ ಉತ್ತರಪ್ರದೇಶ ಚುನಾವಣೆಯಲ್ಲಿ ಗೆದ್ದರೆ, ರೈತರನ್ನು ಬೇರೊಂದು ಸ್ವರೂಪದಲ್ಲಿ ಕಾಡುತ್ತಾರೆಯೇ ಇಲ್ಲವೇ ಎಂಬುದು 5 ಟ್ರಿಲಿಯನ್ ಡಾಲರ್ ಪ್ರಶ್ನೆ!