ರಾಜ್ಯದಲ್ಲಿ ಹರಿಪ್ರಸಾದ್ ಜನನಾಯಕನಲ್ಲ. ಆದರೂ ಸದಾಕಾಲ ಅಧಿಕಾರ ಅನುಭವಿಸುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಯಾವುದೇ ಒಂದೇ ಒಂದು ಚುನಾವಣೆಯಲ್ಲು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಅಥವಾ ಯಾರೊಬ್ಬರನ್ನು ಗೆಲ್ಲಿಸಿಕೊಂಡು ಬರುವಂತಹ ಸಾಮರ್ಥ್ಯವೂ ಇಲ್ಲ. ಆದರೂ ಹೈಕಮಾಂಡ್ ಅಂಗಳದಲ್ಲಿ ಸದಾಕಾಲ ಕಾಣಿಸಿಕೊಂಡು, ತನಗೆ ಬೇಕಾದ ಹುದ್ದೆಗಳನ್ನು ಪಡೆದುಕೊಳ್ಳುವುದು. ತನಗೆ ಬೇಕಾದವರಿಗೆ ಟಿಕೆಟ್ ಕೊಡಿಸುವ ಕೆಲಸ ಮಾಡುವುದು ಹರಿಪ್ರಸಾದ್ಗೆ ಮೂರ್ನಾಲ್ಕು ದಶಕಗಳಿಂದ ಹೇಳಿ ಮಾಡಿಸಿದ ಕೆಲಸ. ಇದೀಗ ರಾಜ್ಯದಲ್ಲಿ ಎಂಎಲ್ಸಿ ಆಗಿದ್ದು, ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಮಾನಮನಸ್ಕ ವೇದಿಕೆ ಎಂದು ಹೆಸರಿಟ್ಟು ಸ್ವತಃ ಕಾಂಗ್ರೆಸ್ ಪಕ್ಷ ಹಾಗು ಸಿದ್ದರಾಮಯ್ಯ ವಿರುದ್ಧ ಹರಿಹಾಯುವುದಕ್ಕೆ ವೇದಿಕೆ ಮಾಡಿಕೊಂಡಿದ್ದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.
10 ದಿನದಲ್ಲಿ ಉತ್ತರಿಸುವಂತೆ ಬಿ.ಕೆ.ಹರಿಪ್ರಸಾದ್ಗೆ ನೋಟಿಸ್!
ಕಾಂಗ್ರೆಸ್ MLC ಬಿ.ಕೆ ಹರಿಪ್ರಸಾದ್ಗೆ AICC ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಮುಂದಿನ 10 ದಿನಗಳ ಒಳಗೆ ಉತ್ತರ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘನೆ ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪದೇ ಪದೇ ಮಾತನಾಡುತ್ತಿರುವುದಕ್ಕೆ ಕಾರಣ ಕೇಳಲಾಗಿದೆ. ಸೆಪ್ಟೆಂಬರ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಸಮಾನ ಮನಸ್ಕರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರಿಂದ ನೊಟೀಸ್ ಜಾರಿ ಮಾಡಲಾಗಿದೆ. ಬಿಜೆಪಿ ಸೇರಿದಂತೆ ಇತರೆ ಪಕ್ಷಗಳ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೂ ಪ್ರಶ್ನೆ ಮಾಡಲಾಗಿದೆ. ಇಂತಹ ಹೇಳಿಕೆಗಳಿಂದ OBC ಹಾಗು SC ಸಮುದಾಯದ ಮೇಲೆ ಪ್ರತಿಕೂಲ ಪ್ರಭಾವ ಬೀರಲಿದೆ. ಹಿರಿಯ ನಾಯಕರಾಗಿದ್ದುಕೊಂಡು ಹೇಳಿಕೆಗಳ ಬಗ್ಗೆ ಜಾಗೃತರಾಗಿರಬೇಕು. ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಸರಿಯಲ್ಲ ಎಂದು ಸಲಹೆ ಕೂಡ ನೀಡಲಾಗಿದೆ.
ಹೈಕಮಾಂಡ್ ಅಂಗಳದಲ್ಲಿ ಪ್ರಭಾವ ಕಡಿಮೆ ಆಯ್ತಾ..?
ಕಾಂಗ್ರೆಸ್ ಹೈಕಮಾಂಡ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಾಯಕ ಅನ್ನೋ ರೀತಿ ಪ್ರತಿಕ್ರಿಯೆ ನೀಡುತ್ತಿದ್ದ ಹರಿಪ್ರಸಾದ್ ವಿರುದ್ಧ ಹೈಕಮಾಂಡ್ ಕೂಡ ಕೆಂಡಾಮಂಡಲ ಆಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ವಿರುದ್ಧ ಪರೋಕ್ಷ ನಿಂದನೆಗೆ ಹೈಕಮಾಂಡ್ ಕೆಂಡಾಮಂಡಲವಾಗಿದ್ದು, ರಾಹುಲ್ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೇ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ. ಹರಿಪ್ರಸಾದ್ ಭಾಷಣದ ಸಂಪೂರ್ಣ ವಿಡಿಯೋ ಭಾಷಾಂತರ ಮಾಡಿ ಹೈಕಮಾಂಡ್ಗೆ ಕಳುಹಿಸಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ಡ್ಯಾಮೇಜ್ ಕಂಟ್ರೋಲ್ಗೆ ಹೈಕಮಾಂಡ್ ಯತ್ನ ಮಾಡಿದೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆಯಾದ್ರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಸಿದ್ದರಾಮಯ್ಯ ಬಣ ತಿರುಗಿ ಬಿದ್ದಾಗಲೂ ವ್ಯಂಗ್ಯ ಮಾಡಿದ್ದ ಹರಿಪ್ರಸಾದ್..!
ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆ ಟೀಕಿಸಿದ್ದ ಹರಿಪ್ರಸಾದ್ ಮಾತಿಗೆ ಸಿದ್ದರಾಮಯ್ಯ ನುಣುಚಿಕೊಳ್ಳುವ ಹೇಳಿಕೆ ನೀಡಿದ್ದರು. ನನ್ನ ಹೆಸರು ಹೇಳಿದ್ದಾರಾ..? ಎಂದು ಪ್ರಶ್ನೆ ಮಾಡುವ ಮೂಲಕ ಜನರಲ್ ಸ್ಟೇಟ್ಮೆಂಟ್ಗೆ ನಾನು ಉತ್ತರ ಕೊಡಲ್ಲ ಎಂದಿದ್ದರು. ಆದರೆ ಸಿದ್ದರಾಮಯ್ಯ ಬಣ ಮಾತ್ರ ತಿರುಗಿ ಬಿದ್ದಿತ್ತು. ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೆ, ಹೈಕಮಾಂಡ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎನ್ನುವ ಆಶಯ ಕೂಡ ವ್ಯಕ್ತವಾಗಿತ್ತು. ಇಷ್ಟೆಲ್ಲಾ ಆದ ಬಲಿಕವೂ ದೂರು ನೀಡುವುದಾದರೆ ನೀಡಲಿ ಎನ್ನುವ ಮೂಲಕ ನಾನು ಡೋಂಟ್ಕೇರ್ ಮಾಸ್ಟರ್ ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದರು. ಇದೀಗ AICC ಖುದ್ದು ನೋಟಿಸ್ ನೀಡಿದ್ದು, ಇದೀಗ ಹರಿಪ್ರಸಾದ್ ಉತ್ತರ ಏನು ಅನ್ನೋದು ಯಕ್ಷಪ್ರಶ್ನೆ ಆಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ನೋಟಿಸ್ ಕೊಟ್ಟಿದ್ದಾರಾ..? ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ.
ಕೃಷ್ಣಮಣಿ