ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿ ಅಪ ಪ್ರಚಾರ ಮಾಡಿರುವ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿದೆ.
ಆಜ್ ತಕ್ ರಾಷ್ಟ್ರೀಯ ಸುದ್ದಿ ವಾಹಿನಿ ಹಾಗೂ ಆ ವಾಹಿನಿಯ ಮುಖ್ಯ ಸಂಪಾದಕ ಸುದೀರ್ ಚೌದರಿ ಎಂಬುವರ ವಿರುದ್ದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ದೂರು ದಾಖಲಿಸಿ ದ್ದಾರೆ.



ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಗೂಡ್ಸ್, ಟ್ಯಾಕ್ಸಿ ಖರೀದಿಗೆ ಶೇ.50 ರಷ್ಟು ಅಂದರೆ ಗರಿಷ್ಟ 3ಲಕ್ಷ ರೂ. ವರೆಗೆ ಸಬ್ಸಿಡಿ ನೀಡುವ ಯೋಜನೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಷ್ಟೇ ಅಲ್ಲದೆ ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಂಬಾವ ಅಭಿವೃದ್ಧಿ ನಿಗಮ ದಲ್ಲೂ ಇದೆ. ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲದೆ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಅನುಷ್ಠಾನ ದಲ್ಲಿದೆ. ಈ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲೂ ಜಾರಿಯಲ್ಲಿತ್ತು.
ಆದರೆ ಸುದ್ದಿ ವಾಹಿನಿಯಲ್ಲಿ ಇದನ್ನು ತಿರುಚಿ ಕೇವಲ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಅಷ್ಟೇ ಜಾರಿಯಲ್ಲಿದೆ. ಹಿಂದೂ ಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದು ಇದು ಸುಳ್ಳು ಹಾಗೂ ದುರುದ್ದೇಶ ಪೂರಿತ ಉದ್ದೇಶ ದಿಂದ ಕೂಡಿದೆ. ಇದು ಸಮಾಜದಲ್ಲಿ ಕೋಮು ಭಾವನೆ ಕೆರಳುವಂತ ಮಾಡುವ ಉದ್ದೇಶ ಹೊಂದಿದೆ. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾನೂನು ಸಮರಕ್ಕೆ ಸಿದ್ಧ: ಚೌಧರಿ
ಸುಧೀರ್ ಚೌಧರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿರುದ್ಧದ ಎಫ್‌ಐಆರ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ಕಾನೂನು ಹೋರಾಟಕ್ಕೆ ಸಿದ್ದತೆ ನಡೆಸುತ್ತಿರುವುದಾಗಿ ಮತ್ತು ಕರ್ನಾಟಕ ಸರ್ಕಾರವನ್ನು ನ್ಯಾಯಾಲಯದಲ್ಲಿ ಎದುರಿಸುವುದಾಗಿ ಹೇಳಿದ್ದಾರೆ.