ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಬಳಿಕ ಬಿಜೆಪಿ ಶಾಸಕರು ಕಾಂಗ್ರೆಸ್ ಕಡೆಗೆ ಮುಖ ಮಾಡುತ್ತಿದ್ದಾರೆ..? ಅನ್ನೋ ಅನುಮಾನ ರಾಜ್ಯದ ಜನರನ್ನು ಕಾಡುವುದಕ್ಕೆ ಶುರು ಮಾಡಿದೆ. ಅದರಲ್ಲೂ ಕಳೆದ ಬಾರಿ ಕಾಂಗ್ರೆಸ್ನಿಂದ ಬಿಜೆಪಿ ಕಡೆಗೆ ಪ್ರಯಾಣ ಮಾಡಿದ್ದ ಕಾಂಗ್ರೆಸ್ನ ಕಲಿಗಳು ಇದೀಗ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಇನ್ನು ಕೆಲವರು ಗೆದ್ದರೂ ಅಧಿಕಾರ ಇಲ್ಲದೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಹೀಗಾಗಿ ಮತ್ತೆ ತವರು ಮನೆಗೆ ವಾಪಸ್ ಬರುವ ಮನಸ್ಸು ಮಾಡಿದ್ದಾರಾ..? ಎನ್ನಲಾಗ್ತಿದೆ. ಕಳೆದೊಂದು ವಾರದಿಂದ ಕಾಂಗ್ರೆಸ್ ನಾಯಕರನ್ನು ಹೊಗಳುತ್ತಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ..? ಅನ್ನೋ ಚರ್ಚೆ ಹುಟ್ಟುಹಾಕಿದೆ. ಆದರೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಮಾತ್ರ ನಾನು ಬಿಜೆಪಿಯಲ್ಲೇ ಇರುತ್ತೇನೆ, ಕಾಂಗ್ರೆಸ್ ಸೇರಲ್ಲ ಎಂದಿದ್ದಾರೆ.
ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂವವರಿಗೆ ಸ್ವಾಗತ..!
ಲೋಕಸಭಾ ಚುನಾವಣೆಗೂ ಮುನ್ನ ಆಪರೇಷನ್ ಹಸ್ತ ಮಾಡುವ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮೊದಲು ಪಾರ್ಲಿಮೆಂಟ್ ಎಲೆಕ್ಷನ್ ಮುಖ್ಯ. ನಮ್ಮ ಕಾರ್ಯಕರ್ತರಿಗೆ ಈಗಾಗಲೇ ಹೇಳಿದ್ದೇವೆ. ಕೆಲವೊಮ್ಮೆ ಲೋಕಲ್ ಅಂಡರ್ ಸ್ಟ್ಯಾಂಡಿಂಗ್ ಇರಬೇಕಾಗುತ್ತದೆ, ದ್ವೇಷ ಮಾಡಬೇಡಿ. ಜನರನ್ನ, ಕಾರ್ಯಕರ್ತರು ವೋಟ್ ಶೇರ್ ಜಾಸ್ತಿ ಮಾಡಿಕೊಳ್ಳಿ ಎಂದು ಲೋಕಲ್ ಲೀಡರ್ಸ್‌ಗೆ ಹೇಳಿದ್ದೇವೆ. ಕೆಲವೊಮ್ಮೆ ಪಕ್ಷದ ಅಸ್ತಿತ್ವ ಇರೋದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ಶಕ್ತಿ ಹೆಚ್ಚಳ ಮಾಡಿಕೊಳ್ಳಬೇಕು. ದೊಡ್ಡ ಲೀಡರ್ ಅಲ್ಲ, ಅನೇಕರು ಪಕ್ಷಕ್ಕೆ ಸೇರಲು ಬರ್ತಿದ್ದಾರೆ ಮುಂದೆ ನೋಡೋಣ ಎಂದಿದ್ದಾರೆ. ಇನ್ನು ಆಪರೇಶನ್ ಹಸ್ತ ವಿಚಾರವಾಗಿ ಸಂಸದ ಡಿಕೆ ಸುರೇಶ್ ಮಾತನಾಡಿದ್ದು, ಯಾರೇ ಪಕ್ಷಕ್ಕೂ ಬಂದ್ರೂ ಸ್ವಾಗತ. ಪ್ರಾಥಮಿಕವಾಗಿ ನನಗೆ ಯಾವ ವಿಚಾರವೂ ಗೊತ್ತಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ..? ಬೇಡ್ವಾ..? ಅನ್ನೋದನ್ನ ವರಿಷ್ಟರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ನನ್ನ ಜೊತೆಗೂ ಕೆಲವರು ಚಚಿಸಿದ್ದಾರೆ.. ನಾನಂತೂ ಹೋಗಲ್ಲ..!
ಸಾಕಷ್ಟು ಜನರು ಕಾಂಗ್ರೆಸ್ ಸೇರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕೆಲವರು ನನ್ನ ಜೊತೆಗೂ ಚರ್ಚೆ ಮಾಡಿದ್ದಾರೆ. ಯಾರೇ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತ. ಆದರೆ ಕ್ಲಾಸ್ ರೂಂ ಸೇರಿಕೊಳ್ಳಬಹುದು, ಆದರೆ ಫಸ್ಟ್ ಬೆಂಚ್ ಸದ್ಯಕ್ಕೆ ಸಿಗಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಮುನಿರತ್ನ, ನಮಗೆ ಬಿಜೆಪಿಯೇ ಭವಿಷ್ಯ, ಬಿಜೆಪಿಯ ಚಿಹ್ನೆಯೇ ಆಧಾರ. ನಾನು ಕಾಂಗ್ರೆಸ್‌ಗೆ ಹೋಗಲ್ಲ, ಇದು ನನ್ನ ಗಟ್ಟಿ ನಿರ್ಧಾರ. ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಬಗ್ಗೆ ನನಗೆ ಯಾವುದೇ ದ್ವೇಷ ಇಲ್ಲ. ರಾಜಕೀಯವಾಗಿ ಅವರು ನನ್ನ ಕ್ಷೇತ್ರದಲ್ಲಿ ಸೋಲಿಸಲು ಪ್ರಯತ್ನಿಸಿದವರು. ಹೀಗಾಗಿ ನಾನಂತೂ ಕಾಂಗ್ರೆಸ್‌ಗೆ ಹೋಗಲ್ಲ ಎಂದಿದ್ದಾರೆ. ಮಾಜಿ ಶಾಸಕ ಸಿ.ಟಿ.ರವಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಊಹಾಪೋಹ, ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ನಮಗೆ ನಮ್ಮ ಶಾಸಕರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.
ಗುತ್ತಿಗೆದಾರರ ಬಗ್ಗೆ ತನಿಖೆ.. ಶಾಸಕರು ಬೆದರಿ ಬೆಂಡಾದ್ರಾ..?
ಬೆಂಗಳೂರಿನಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಲ ಬಿಲ್ ಬಿಡುಗಡೆ ಆಗಿಲ್ಲ. ಕಾಮಗಾರಿ ನಡೆಸದೇ ಬಿಲ್ ಮಾಡಲಾಗಿದೆ ಎನ್ನುವುದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನೇರ ಆರೋಪ. ಇದೇ ಕಾರಣಕ್ಕೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಇದೇ ಕಾರಣಕ್ಕೆ ಕೆಲವು ಬಿಜೆಪಿ ನಾಯಕರು ಡಿ.ಕೆ ಶಿವಕುಮಾರ್ ಭೇಟಿ ಮಾಡಿ, ಪರೋಕ್ಷ ಅಥವಾ ನೇರವಾಗಿಯೇ ಕಾಂಗ್ರೆಸ್‌ಗೆ ನೆರವಾಗುವ ಬಗ್ಗೆ ಮಾತನಾಡಿದ್ದಾರೆ. ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರ ಬಗ್ಗೆ ಹೊಗಳಿಕೆ ಮಾತನಾಡಿದ್ದಾರೆ. ಇನ್ನು ರಾಜ್ಯಾದ್ಯಂತ ಹಲವಾರು ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ಹಾಗು ಜೆಡಿಎಸ್ ಶಾಸಕರು ಹಾಗು ಮಾಜಿ ಶಾಸಕರು ಸೇರಿದಂತೆ ಘಟಾನುಘಟಿ ನಾಯಕರನ್ನು ಸೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗ್ತಿದೆ. ಯಾರೇ ಬಂದರೂ ಕಾಂಗ್ರೆಸ್‌ಗೆ ಲಾಭ ಆಗುತ್ತಾ..? ಅನ್ನೋ ಆಧಾರದಲ್ಲಿ ಪಕ್ಷ ಸೇರ್ಪಡೆ ನಿರ್ಧಾರ ಮಾಡುತ್ತಾರೆ ಅನ್ನೋದು ಸದ್ಯಕ್ಕಿರುವ ಮಾಹಿತಿ.
ಕೃಷ್ಣಮಣಿ