ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಮದ್ಯದ ಬಾಟೆಲ್ಗಳ ಮೇಲೆಯೇ ಬರೆದಿರುತ್ತದೆ. ಆದರೂ ಮದ್ಯಪಾನ ಮಾಡುವ ಜನರ ಸಂಖ್ಯೆ ಮಾತ್ರ ಇಳಿಮುಖ ಆಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಅಬಕಾರಿ ಇಲಾಖೆಗೆ ಬರುವ ಆದಾಯ ಹೆಚ್ಚುತ್ತಲೇ ಇರುತ್ತದೆ. ಅಂದರೆ ಮದ್ಯಪಾನ ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದರ್ಥ. ಇದೀಗ ಹೆಚ್ಚಾಗಿ ಯುವ ಜನಾಂಗ ಮದ್ಯಪಾನ ಮಾಡಲು ಬಯಸುವ ಕಿಂಗ್ ಫಿಶರ್ ಮನುಷ್ಯರು ಸೇವನೆಗೆ ಯೋಗ್ಯವಲ್ಲ ಅನ್ನೋ ಬಗ್ಗೆ ವರದಿಗಳು ಬಂದಿವೆ.
ಕಿಂಗ್ ಫಿಶರ್ ಬಿಯರ್ನಲ್ಲಿ ವಿಷಕಾರಿ ಅಂಶ ಪತ್ತೆ..!

ಪ್ರತಿಷ್ಟಿತ ಕಿಂಗ್ ಫಿಶರ್ ಬಿಯರ್ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಕಿಂಗ್ ಫಿಶರ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರಿಸ್ ಘಟಕದಲ್ಲಿ ತಯಾರಾಗಿದ್ದ ಬಿಯರ್ ಬಾಟಲ್ಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಆತಂಕಕಾರಿ ಆಗಿರುವ ಸೆಡಿಮೆಂಟ್ ಅಂಶ ಪತ್ತೆಯಾಗಿದೆ ಎಂದು ಅಬಕಾರಿ ಡೆಪ್ಯೂಟಿ ಕಮಿಷನರ್ ಎ. ರವಿಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
25 ಕೋಟಿ ಮೌಲ್ಯದ ಬಿಯರ್ ಬಾಟೆಲ್ ಸೀಝ್..!
ಕಿಂಗ್ ಫಿಶರ್ ಬಿಯರ್ನಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲ ಅನ್ನೋ ಪ್ರಯೋಗಾಲಯದ ವರದಿ ಬಳಿಕ 25 ಕೋಟಿ ರೂಪಾಯಿ ಮೌಲ್ಯದ 78,678 ಬಾಕ್ಸ್ ಬಿಯರನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಂಗ್ ಫಿಶರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಶರ್ ಅಲ್ಟ್ರಾ ಲ್ಯಾಗರ್ ಬಿಯರ್ನಲ್ಲಿ ವಿಶಕಾರಿ ಅಂಶ ಪತ್ತೆಯಾಗಿದೆ. 7C ಹಾಗು 7E ಬ್ಯಾಚ್ನಲ್ಲಿ ಎಲ್ಲಾ ಬಿಯರ್ ಸೀಝ್ ಮಾಡಿದ್ದು, ಕೆಮಿಕಲ್ ಪರೀಕ್ಷೆಯಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ. ಅಷ್ಟೂ ಪ್ರಮಾಣದ ಬಿಯರ್ ಬಾಟೆಲ್ ನಾಶ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.
ಜುಲೈ 17ರಂದು ತಪಾಸಣೆ, ಆಗಸ್ಟ್ 2ರಂದು ರಿಪೋರ್ಟ್..!

ಜುಲೈ 17ರಂದು ಬಿಯರ್ನ ಸ್ಯಾಂಪಲ್ ಪಡೆದು ತಪಾಸಣೆಗಾಗಿ ರವಾನೆ ಮಾಡಲಾಗಿತ್ತು. ಆಗಸ್ಟ್ 2 ರಂದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಮಾನವರು ಸೇವಿಸಲು ಯೋಗ್ಯವಲ್ಲ ಅನ್ನೋ ಬೆಂಗಳೂರಿನ ಲ್ಯಾಬ್ನಿಂದ ಬಂದಿದೆ. ನಾವು ಮೈಸೂರು ಡಿಸಿ ಹಾಗು ಅಬಕಾರಿ ಡಿಸಿ ಇಬ್ಬರಿಗೂ ಪತ್ರ ಬರೆದು ಮುಂದಿನ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಮೈಸೂರು ಗ್ರಾಮಾಂತರ ಡೆಪ್ಯೂಟಿ ಅಬಕಾರಿ ಕಮಿಷನರ್ ಎ. ರವಿಶಂಕರ್ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗೆ 78,678 ಬಿಯರ್ ಪೂರೈಕೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಎಲ್ಲಾ ಬಾಟೆಲ್ಗಳ ಮಾರಾಟ ತಡೆ ಹಿಡಿಯಲಾಗಿದೆ.
ಕಂಪನಿ ವಿರುದ್ಧ ದೂರು, ಕಳಪೆ ಮದ್ಯ ಮಾರಾಟ ಆಗಿದ್ಯಾ..?
ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣಕ್ಕಾಗಿ ಯುನೈಟೆಡ್ ಬ್ರಿವರಿಸ್ ಕಂಪನಿ ವಿರುದ್ಧ ಅಬಕಾರಿ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಇಲಾಖಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಎಸ್.ಎಲ್ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ಆದರೆ ಬೆಂಗಳೂರಿಗೆ 11 ಸಾವಿರ ಬಿಯರ್ ಬಾಟೆಲ್ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸರಬರಾಜು ಆಗಿದೆ. ಆದರೆ ಅದರಲ್ಲಿ ಎಷ್ಟು ಮಾರಾಟ ಆಗಿದೆ ಅನ್ನೋ ಲೆಕ್ಕವನ್ನು ಅಧಿಕಾರಿಗಳು ನೀಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಆದರೂ ಆರೋಗ್ಯಕ್ಕೆ ಹಾನಿಕರ ಅನ್ನೋದನ್ನು ಮದ್ಯದ ಬಾಟೆಲ್ ಮೇಲೆ ನೋಡಿದ ಬಳಿಕವೂ ಮದ್ಯಪಾನ ಮಾಡುವ ಜನರು ಇದನ್ನು ನಿರ್ಲಕ್ಷ್ಯ ಮಾಡಬಹುದು. ಆದರೆ ಕುಟುಂಬಸ್ಥರು ಮದ್ಯಪಾನಿಗಳಿಂದ ಸಂಕಷ್ಟಕ್ಕೆ ಒಳಗಾಗುತ್ತಾರೆ ಎನ್ನುವುದು ಸತ್ಯ.
ಕೃಷ್ಣಮಣಿ






