ಜಾತಿನಿಂದನೆ ಹಾಗು ಜೀವ ಬೆದರಿಕೆ ಪ್ರಕರಣದಲ್ಲಿ ರಾಜರಾಜೇಶವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನನ ಬಂಧನ ಆಗಿದ್ದು, ಇಂದು ಆರೋಗ್ಯದಲ್ಲಿ ಏರುಪೇರು ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯ ಸಮಸ್ಯೆ ಇದೆ ಎನ್ನುವ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೊಂಡಿದ್ದರು. ಈ ವೇಳೆ ದಿನನಿತ್ಯ ಆರೋಗ್ಯ ತಪಾಸಣೆಗೆ ಜಡ್ಜ್ ಸೂಚನೆ ನೀಡಿದ್ದರು. ಅದರಂತೆ ಇಂದು ಆರೋಗ್ಯ ತಪಾಸಣೆ ಮಾಡಲಾಯ್ತು. ಈ ವೇಳೆ ಮೂರು ಸಮಸ್ಯೆಗಳು ಪತ್ತೆ ಆಗಿದ್ದವು.
ಶಾಸಕ ಮುನಿರತ್ನ ಅವರನ್ನು ಮೆಡಿಕಲ್ ಟೆಸ್ಟ್‌ಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶಾಸಕ ಮುನಿರತ್ನ ಮೂರು ಆರೋಗ್ಯ ಸಮಸ್ಯೆ ಇರುವ ಬಗ್ಗೆ ಬೌರಿಂಗ್ ಆಸ್ಫತ್ರೆ ವೈದ್ಯರು ವರದಿ ನೀಡಿದ್ದಾರೆ. ಹೃದಯ ಸಂಬಂಧಿ ಕಾಯಿಲೆ, ಮಲಬದ್ದತೆ ಹಾಗು ಡಯಾಬಿಟಿಸ್ , ಹರ್ನಿಯಾ ಸಮಸ್ಯೆ ಇದೆ ಎಂದು ವರದಿ ಬಂದಿದ್ದು, ಮೆಡಿಕಲ್ ಚೆಕಪ್ ಮುಗಿಸಿದ ಬಳಿಕ ಮತ್ತೆ ಅಶೋಕನಗರ ಠಾಣೆಗೆ ಕರೆತರಲಾಗಿತ್ತು. ಆ ಬಳಿಕ ಆರೋಗ್ಯದಲ್ಲಿ ಏರುಪೇರು ಆಗಿದ್ರಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿರುವ ಮಾಜಿ ಸಚಿವ ಮುನಿರತ್ನ, ಠಾಣೆಯಲ್ಲಿ ಎದೆನೋವು ಹೆಚ್ಚಾಗಿ ಕೂಗಾಡಿದ್ದಾರೆ. ಈ ವೇಳೆ ಶಾಸಕ ಮುನಿರತ್ನ ಅವರನ್ನು ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೃದಯ ಸಂಬಂಧಿ ಸಮಸ್ಯೆ ಹಿನ್ನಲೆ ಬೌರಿಂಗ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಲಾಗಿತ್ತು. ಜಯದೇವದಲ್ಲಿ ವೈದ್ಯರಿಂದ ತಪಾಸಣೆಗೆ ಸೂಚನೆ ಹಿನ್ನಲೆ ಕರೆದೊಯ್ಯಲಾಗಿದೆ. ಜಯದೇವ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ ಶಾಸಕ ಮುನಿರತ್ನಗೆ ಚಿಕಿತ್ಸೆ ನೀಡಲಾಗ್ತಿದೆ. ಮೈಕೋಲೇಔಟ್ ಹಾಗೂ ತಿಲಕ್ ನಗರ ಪೊಲೀಸ್ರು ಬ್ಯಾರಿಕೇಡ್ ಹಾಕಿ ಭದ್ರತೆ ಕೈಗೊಂಡಿದ್ದಾರೆ.