ಕೇರಳದಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಬಳಿಕ ಕರ್ನಾಟಕದಲ್ಲೂ ಲೈಂಗಿಕ ದೌರ್ಜನ್ಯದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಮಾಡುವಂತೆ FIRE ಸಂಸ್ಥೆ ಒತ್ತಾಯ ಮಾಡಿತ್ತು. ಕಲಾವಿದರೂ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ಸಹಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯಗೆ ಮನವಿ ಕೊಟ್ಟ ಬಳಿಕ ಮಹಿಳಾ ಆಯೋಗ ಈ ಬಗ್ಗೆ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸಭೆ ಆಯೋಜನೆಗೆ ಸೂಚಿಸಿತ್ತು. ಅದರಂತೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಸಭೆ ಅಪೂರ್ಣವಾಗಿ ಮುಕ್ತಾಯವಾಗಿದೆ.
ಮೀಟೂ ಆರೋಪ ವಿಚಾರವಾಗಿ ಫಿಲ್ಮ್ ಚೇಂಬರ್‌ನಲ್ಲಿ ಮಹತ್ವದ ಸಭೆ ನಡೆಸಲಾಯ್ತು. ಕನ್ನಡ ಚಿತ್ರರಂಗಕ್ಕೆ ಕೇರಳ ಮಾದರಿ ಕಮಿಟಿ ಬೇಕು ಅಂತಾ ಸಿಎಂಗೆ ಮನವಿ ಸಲ್ಲಿಸಿದ ಬಳಿಕ ಫಿಲ್ಮ್ ಚೇಂಬರ್‌ನಲ್ಲಿ ಸಭೆ ನಡೆಸಿ ಕಮಿಟಿ ಬೇಕಾ..? ಬೇಡವಾ..? ಅನ್ನೋ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ರು. ಸಭೆಯಲ್ಲಿ ಮೀಟೂ ಪರ ವಿರೋಧ ಇರುವ ಸದಸ್ಯರ ನಡುವೆ ಜಟಾಪಟಿ ನಡೆದಿದ್ದು, ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಮಹಿಳಾ ಆಯೋಗದ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಗಲಾಟೆ ನಡುವೆ ಸಭೆಗೆ ಆಗಮಿಸಿದ್ದ ಕಲಾವಿದರು ವಾಪಸ್ ಎದ್ದು ಹೋಗಿದ್ದಾರೆ.
ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಇವತ್ತು ಕಲಾವಿದರು, ನಿರ್ಮಾಪಕರ ಜೊತೆ ಚರ್ಚೆ ನಡೆಸಿದ್ದೇವೆ. ಕಮಿಟಿ ಆದ್ರೆ ಸಮಸ್ಯೆ ಹೊರ ಬರುತ್ತೆ ಅಂತ ಅಲ್ಲ. ಇಂತಹ ಕಮಿಟಿ ಆದ್ರೆ ವ್ಯಾಪಾರ ವ್ಯವಹಾರಕ್ಕೆ ಸಮಸ್ಯೆ ಆಗುತ್ತದೆ. ಇದರಿಂದ ಸಣ್ಣಪುಟ್ಟ ನಿರ್ಮಾಪಕರಿಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ. ಇನ್ನು ನಟಿ ನೀತು ಮಾತನಾಡಿ, ಪಾಶ್ ಕಮಿಟಿ ಆಗಬೇಕು ಅನ್ನೋದು ಗೆಜೆಟ್ ಅಲ್ಲೇ ಇದೆ. ಇವತ್ತಿನ ಸಭೆಯಲ್ಲಿ ಸಮಸ್ಯೆ ಕೇಳಬೇಕು ಅಂತ ಬಂದಿರೋದು. ಕೆಲವರು ಇದೆಲ್ಲ ಎನು ಇಲ್ಲ ಅಂದ್ರು. ನನಗೆ ಆಗಿರೋ ಸಮಸ್ಯೆ ಬಗ್ಗೆ ನಾನು ಒಪೆನ್ ಆಗಿ ಮಾತನಾಡಿದ್ದೀನಿ. ಮಾತನಾಡಲು ನನಗೆ ಬಿಡಲಿಲ್ಲ ಆದ್ರು ಸಹ ಮಾತನಾಡಿದ್ದೀನಿ. ಸಾರಾ ಗೋವಿಂದ್ ನನ್ನನ್ನು ಹತ್ತಿಕ್ಕುವ ಕೆಲಸ ಮಾಡಿದ್ರು. ನನಗೆ ವಾಯ್ಸ್ ಕೊಡಲಿಲ್ಲ ಎಂದಿದ್ದಾರೆ.
ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ, ದೌರ್ಜನ್ಯ ಅಂದಾಗ ದೈಹಿಕ ಇರಬಹುದು ಅಥವಾ ಬೇರೆ ಇರಬಹುದು. ಭಾರತ ಸರ್ಕಾರದ ಗೆಜೆಟೆಡ್ ಕಮಿಟಿ ಇದೆ. ಇದರ ವಿರುದ್ದ ನಾವು ಯಾರು ಮಾತನಾಡೊಕೆ ಆಗಲ್ಲ. ಚಿತ್ರರಂಗಕ್ಕೆ ಮಕ್ಕಳು ಬರಬೇಕಾದರೆ ತಂದೆ ತಾಯಿ ಖುಷಿಯಿಂದ ಕಳಿಸಬೇಕು. ಇದನ್ನೇ ಮಹಿಳಾ ಅಯೋಗವೂ ಬಯಸುತ್ತದೆ. ಪಾಶ್ ಕಮಿಟಿ ಮಾಡಬೇಕು ಅಂತ ಹೇಳಿದ್ದೀವಿ. ಇವತ್ತಿನ ಮೀಟಿಂಗ್‌ಗೆ ಬಹಳ ಕಡಿಮೆ ನಟಿಯರು ಬಂದಿದ್ದರು. ಇಲ್ಲೊಂದು ಕಮಿಟಿ ಆದಾಗ ಎಲ್ಲರು ಬರಬೇಕು. ಕಮಿಟಿ ಹೆಂಗಿರಬೇಕು ಅಂತ ಕಾನೂನು ಇದೆ. ಮುಂದಿನ ಸಭೆಗೆ 10 ಜನ ಅಲ್ಲ, ಎಲ್ಲಾ ನಟಿಯರನ್ನು ಕರೆಯಿರಿ. ಹೆಣ್ಣು ಮಗಳು ಶೂಟಿಂಗ್‌ನಲ್ಲಿ ಭಾಗಿಯಾದಾಗ ಏನೆಲ್ಲ ವ್ಯವಸ್ಥೆ ಕೊಡಬೇಕು ಕೊಡಿ. ನಾವು ಅಯೋಗದಿಂದಲೂ ಒಂದು ಸರ್ವೆ ಮಾಡ್ತೇವೆ ಎಂದಿದ್ದಾರೆ.