ಬೆಂಗಳೂರು : ಬ್ಯಾನರ್ ಗಲಾಟೆಯ ಬಳಿಕ ಬಳ್ಳಾರಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಶಾಸಕ ಜನಾರ್ದನ ರೆಡ್ಡಿ ಹಾಗು ಮಾಜಿ ಸಚಿವ ಬಿ. ಶ್ರೀರಾಮುಲು ಒಡೆತನದ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ.
ಬಳ್ಳಾರಿಯ ಕಂಟೋನ್ಮೆಂಟ್ ಹತ್ತಿರದ ರೆಡ್ಡಿ ಲೇಔಟ್‌ನಲ್ಲಿ ಇರುವ ಹೌಸ್ ಧಗ ಧಗ ಹೊತ್ತಿ ಉರಿದಿದ್ದು, ಸ್ಥಳದಲ್ಲಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಸಹ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಜಗತ್ತಿನಲ್ಲೇ ಈ ವಿಚಾರದಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ
ಬ್ಯಾನರ್ ಗಲಾಟೆ ತಣ್ಣಗಾಗುವ ಹೊತ್ತಿನಲ್ಲಿಯೇ ಮತ್ತೆ ರಾಜಕೀಯ ಹೊತ್ತಿಕೊಂಡಿದ್ದು, ಜಿ ಸ್ಕೈರ್ ಲೇಔಟ್‌ನಲ್ಲಿರುವ ಅಂದಾಜು 100 ಎಕರೆ ವ್ಯಾಪ್ತಿ ಪ್ರದೇಶದಲ್ಲಿನ ಬೃಹತ್ ವಸತಿ ವಿನ್ಯಾಸ ಸುಟ್ಟು ಕರಲಾಗಿದೆ. ಪ್ರಮುಖವಾಗಿ ನಿವೇಶನ ಖರೀದಿಸಲು ಬರುವವರಿಗೆ ಮಾಡೆಲ್ ಆಗಿ ತೋರಿಸಲು ಸುಸಜ್ಜಿತವಾದ ಈ ಹೌಸ್ ನಿರ್ಮಾಣ ಮಾಡಲಾಗಿತ್ತು. ಆದರೆ ಇಂದು ಸಂಜೆ ಸುಮಾರು 6:30ರ ವೇಳೆಗೆ ಈ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ಮಾಡೆಲ್ ಬಹುಪಾಲು ಬೂದಿಯಾಗಿದೆ.

ಇನ್ನೂ ಈ ಘಟನೆಯ ಹಿಂದೆ ಕಾಂಗ್ರೆಸ್‌ನವರ ಕೈವಾಡವಿದೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಗಂಭೀರವಾದ ಆರೋಪ ಮಾಡಿದ್ದಾರೆ. ಇದು ಆಕಸ್ಮಿಕವಾದ ಹೊತ್ತಿಕೊಂಡಿರುವ ಬೆಂಕಿಯಲ್ಲ, ಇದು ಉದ್ದೇಶ ಪೂರ್ವಕವಾದ ಕೃತ್ಯವಾಗಿದೆ. ಬ್ಯಾನರ್ ಗಲಾಟೆಯ ವೇಳೆ ಬೆಂಕಿ ಹಚ್ತೀನಿ ಎಂಬ ಬೆದರಿಕೆಯ ಮಾತನ್ನಾಡಿದ್ದರು ಅದೇ ಇದು ಎಂದು ಕಿಡಿಕಾರಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನಾರ್ದನ ರೆಡ್ಡಿ ಕೂಡ ಎಸ್‌ಪಿ ಜೊತೆ ದೂರವಾಣಿಯಲ್ಲಿ ಮಾಹಿತಿ ಪಡೆದಿದ್ದಾರೆ.
ಸದ್ಯ ವಿಧಾನಮಂಡಲ ವಿಶೇಷ ಅಧಿವೇಶನದ ಹಿನ್ನೆಲೆ ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.












