
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಹತ್ಯೆ ಬಳಿಕ ಮುನ್ನೆಚ್ಚರಿಕೆ ನಡೆ ಅನುಸರಿಸುತ್ತಿದೆ ಕಾರ್ಮಿಕ ಇಲಾಖೆವಲಸೆ ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಲು ಕಾರ್ಮಿಕ ಸಚಿವ ಲಾಡ್ ನಿರ್ಧಾರ
ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಕೆಲಸ ಅರಸಿ ಬರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಉದ್ಯೋಗದಾತರು ಸಂಗ್ರಹಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೂಚಿಸಿದರು.
ವಿಕಾಸಸೌಧದಲ್ಲಿ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳ ಉನ್ನತ ಅಧಿಕಾರಿಗಳು, ಮಾನವ ಸಂಪನ್ಮೂಲ ಹಾಗೂ ಉದ್ಯೋಗದಾತರೊಡನೆ ನಡೆದ ಉನ್ನತಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಐದು ವರ್ಷದ ಬಾಲಕಿ ಹತ್ಯೆ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ಸಚಿವರು, ಬೇರೆ ರಾಜ್ಯದ ಕಾರ್ಮಿಕರ ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟವಿದೆ. ಅದು ನಮಗೆ ಸವಾಲು. ಆದರೂ ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಘಟನೆ ತುಂಬಾ ನೋವಿನ ಘಟನೆ. ಇಂತಹ ಘಟನೆ ದೇಶದ ಯಾವುದೇ ಮೂಲೆಯಲ್ಲಿ ಯಾವಾಗ ಬೇಕಾದರೂ ನಡೆಯಬಹುದು. ಅಂತಹ ಸಂದರ್ಭದಲ್ಲಿ ಕೃತ್ಯ ಎಸಗಿದವರ ಮಾಹಿತಿ ಸಂಗ್ರಹವಿದ್ದರೆ ಸುಲಭವಾಗಲಿದೆ. ಈ ಬಗ್ಗೆ ಗುತ್ತಿಗೆದಾರರು ಮಾಹಿತಿ ನೀಡಬೇಕು. ಜನರಲ್ಲಿ ಅರಿವು ಮೂಡಿಸಬೇಕು. ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಬೇಕು. ಯಾವುದೇ ಗುತ್ತಿಗೆ ಕಾರ್ಮಿಕ ಬೇರೆ ರಾಜ್ಯದಿಂದ ಬಂದರೆ ಅವರ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿದರು.
ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರ ಎಲ್ಲಾ ಮಾಹಿತಿ ಸಿಗಲಿದೆ. ಆದರೆ ಅಸಂಘಟಿ ತವಲಯದ ಕಾರ್ಮಿಕರ ವಿವರ ಸಿಗುವುದಿಲ್ಲ. ವಿಶೇಷವಾಗಿ ನಿರ್ಮಾಣ ಕಾರ್ಮಿಕರ ಬಗ್ಗೆ. ಇಂತಹ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಯಾವುದಾದರೂ ಮಾರ್ಗೋಪಾಯಗಳಿದ್ದರೆ ತಿಳಿಸಿ ಎಂದರು.
ಗುತ್ತಿಗೆದಾರರು ನೋಂದಣಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಮಾಡುವುದಿಲ್ಲ. ಯಾರು ಎಲ್ಲಿ ಏನು ಕೆಲಸ ಮಾಡ್ತಾ ಇದ್ದಾರೆ ಎಂಬುದು ತಿಳಿಯುವುದಿಲ್ಲ. ಕೇವಲ ಕಾರ್ಮಿಕ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಯ ಕಾರ್ಮಿಕರ ವಿವರ ಸಿಗುವಂತಾಗಬೇಕು ಎಂದು ಹೇಳಿದರು.