ಮೈಸೂರು : ಬಿಜೆಪಿಗೆ (bjp) ಆಡಳಿತ ವಿರೋಧಿ ಅಲೆ ಇತ್ತು. ಆ ವಿರೋಧಿ ಅಲೆಯ ಜೊತೆಗೆ ನಮ್ಮ ಗ್ಯಾರೆಂಟಿಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ಕೊಟ್ಟಿದ್ದಾರೆ.
ಈಗ ಬಿಜೆಪಿ ತಮ್ಮ ಆಡಳಿತ ವಿರೋಧಿ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಉಗುಳು ಅಚ್ಚುವ ಕೆಲಸವನ್ನು ಮಾಡುತ್ತಿದೆ.
ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಬಿಜೆಪಿ ರಾಜ್ಯದಲ್ಲಿ ತಿರಸ್ಕೃತವಾಗಿದೆ. ಈ ಚರ್ಚೆಯನ್ನು ಮರೆ ಮಾಚಲು ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡ್ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಡಾ.ಹೆಚ್.ಸಿಮಹದೇವಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನೂ ಸರ್ಕಾರ ಕುಳಿತೇ ಇಲ್ಲ. ಅಷ್ಟು ತರಾತುರಿಯಲ್ಲಿ ಗ್ಯಾರಂಟಿಗಳ ಅನುಷ್ಟಾನಕ್ಕೆ ಬಿಜೆಪಿಯವರು ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿಯ ಈ ತಂತ್ರ ಜನರಿಗೂ ಅರ್ಥವಾಗುತ್ತಿದೆ. ಪ್ರಧಾನಿ ಮೋದಿಯವರು 2014ರಲ್ಲಿ ಕೊಟ್ಟ ಭರವಸೆ ಈಡೇರಿದೆಯಾ? 15 ಲಕ್ಷ ಹಣ ಜನರ ಖಾತೆಗೆ ಬಂದಿದೆಯಾ?
ಬಿಜೆಪಿಯವರು ಮೊದಲು ಇದಕ್ಕೆ ಉತ್ತರ ಕೊಡಲಿ. ನಾವು ಗ್ಯಾರಂಟಿಯ ಬಗ್ಗೆ ಜನರಿಗೆ ಏನು ಹೇಳಿದ್ದೆವೋ ಅದನ್ನು ಮಾಡುತ್ತೇವೆ. ಸಿಎಂ ಈ ವಿಚಾರದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಸಚಿವ ಡಾ.ಹೆಚ್. ಸಿ.ಮಹದೇವಪ್ಪ ಹೇಳಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವ ವಿಚಾರ. ಬಿಜೆಪಿ ಪಠ್ಯ ಪುಸ್ತಕ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ.
ಇತಿಹಾಸ ಪುರುಷರನ್ನೇ ಇವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಈ ತಪ್ಪನ್ನು ತಿದ್ದಬೇಕು ತಾನೇ. ನಾವು ಚುನಾವಣೆಗೆ ಮುನ್ನವೂ ಈ ವಿಚಾರವನ್ನು ಹೇಳಿದ್ದೇವೆ.
ಈಗ ಅದನ್ನು ಮಾಡುತ್ತೇವೆ. ಅವರು ಬರೆದಿದ್ದೇ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಇಡುತ್ತೇವೆ. ಸತ್ಯ ಅಲ್ಲದ್ದನ್ನು ತೆಗೆದು ಹಾಕುತ್ತೇವೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.