ಒಂದೆಡೆ ಸಿಎಂ ಬಸವರಾಜ್ ಬೊಮ್ಮಾಯಿ ಅಣ್ಣಾಮಲೈ ಧರಣಿಯಾದರೂ ಕೂರಲೀ, ಪ್ರತಿಭಟನೆಯಾದರೂ ಮಾಡಲೀ. ನಮ್ಮ ನೀರು, ನಮ್ಮ ಹಕ್ಕು. ತಮಿಳುನಾಡಿನ ಯಾವುದೇ ರಾಜಕೀಯ ಪಕ್ಷ ಏನು ಬೇಕಾದರೂ ಮಾಡಲೀ. ನಾನು ಮಾತ್ರ ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇನೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಇತ್ತೀಚೆಗಷ್ಟೇ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆ. ಅಣ್ಣಾಮಲೈ ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಮಾಡಲು ಬಿಡೋದಿಲ್ಲ ಎಂದಿದ್ದಾರೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಮಾತ್ರ ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ದಾರೆ. ಹೀಗಿರುವಾಗಲೇ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ಅನುಮತಿ ಅಗತ್ಯ ಎಂದು ಹೇಳಿದೆ. ಇದನ್ನೆಲ್ಲಾ ನೋಡಿದ್ರೆ ಮೇಕೆದಾಟು ವಿಚಾರದಲ್ಲಿ ಬಿಜೆಪಿ ಡಬಲ್ ಗೇಮ್ ಆಡುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ.
ಹೌದು, ತಮಿಳುನಾಡು ನಾಯಕರು ಎಷ್ಟೇ ಪ್ರತಿಭಟನೆ ಮಾಡಲೀ, ನಾನಂತೂ ಕೇರ್ ಮಾಡಲ್ಲ. ಅಣ್ಣಾಮಲೈ ಉಪವಾಸ ಕೂತರೂ, ಧರಣಿ ಮಾಡಿದ್ರೂ ಐ ಡೋಂಟ್ ಕೇರ್. ಈತನನ್ನು ನೀವು ದೊಡ್ಡ ಮನುಷ್ಯ ಮಾಡುತ್ತಿದ್ದೀರಿ. ನಮ್ಮ ನೀರು, ನಮ್ಮ ಹಕ್ಕು. ಮೇಕೆದಾಟು ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸುಪ್ರೀಕೋರ್ಟ್ ತೀರ್ಪು ಕೂಡ ನಮ್ಮ ಪರವೇ ಇದೆ. ಹಾಗಾಗಿ ನಾನು ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಅಗ್ರೆಸ್ಸಿವ್ ಆಗಿ ಮುನ್ನುಗ್ಗುತ್ತಿದ್ದಾರೆ.
ಕರ್ನಾಟಕದ ಪ್ರಮುಖ ಬಿಜೆಪಿ ನಾಯಕ ಮತ್ತು ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಹೇಳಿಕೆ ಮಾತ್ರ ಬೊಮ್ಮಾಯಿಗೆ ತದ್ವಿರುದ್ಧವಾಗಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ನೀವು ಕರ್ನಾಟಕ ಪರವೋ, ತಮಿಳುನಾಡು ಪರವೋ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿ.ಟಿ ರವಿ ನೀಡಿರುವ ಉತ್ತರ ಕನ್ನಡಿಗರಿಗೆ ಅಚ್ಚರಿ ಮೂಡಿಸಿದೆ. ನಾನು ಕರ್ನಾಟಕ ಪರವೂ ಅಲ್ಲ, ತಮಿಳುನಾಡು ಪರವೂ ಅಲ್ಲ, ಬದಲಿಗೆ ನಾನು ಭಾರತದ ಪರ ಎಂದಿದ್ದಾರೆ ಸಿ.ಟಿ ರವಿ.
ಮುಂದುವರಿದು, ನೀವು ನನ್ನ ಹೇಳಿಕೆಯನ್ನ ಹೇಗೆ ವಿಶ್ಲೇಷಿಸುತ್ತೀರಿ ಎಂಬುದು ಮುಖ್ಯವಲ್ಲ. ನಾನು ಏನು ಹೇಳ್ತೇನೆ ಅನ್ನೋದು ಮುಖ್ಯ. ಕಾವೇರಿ ನೀರಿನ ಹಂಚಿಕೆಯಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ಮಾಡಿಕೊಂಡರೆ ಯಾವುದೇ ಅಡ್ಡಿಯಿಲ್ಲ. ಕರ್ನಾಟಕ ಸರ್ಕಾರವೂ ತಮಿಳುನಾಡು ಜತೆಗೆ ಮಾತಾಡಿ ಯೋಜನೆ ರೂಪಿಸಿದ್ದರೆ ಯಾವುದೇ ಅಡ್ಡಿ ಬರೋದಿಲ್ಲ.. ನೀರು ಎಲ್ಲರಿಗೂ ಅತ್ಯವಶ್ಯಕ. ಕುಡಿಯೋ ನೀರಿಗೆ ಗಡಿಯಿಲ್ಲ.. ನೀರಿಗೆ ರಾಜಕೀಯವಿಲ್ಲ ಎಂದು ತಟಸ್ಥರಾಗಿದ್ದಾರೆ.
ಇನ್ನು, ಸಿಟಿ ರವಿ ಮತ್ತು ಬೊಮ್ಮಾಯಿ ಹೇಳಿಕೆ ಗಮನಿಸಿದರೆ ಬಿಜೆಪಿ ಒಂದೇ ವಿಚಾರವನ್ನ ಇಟ್ಟುಕೊಂಡು ಡಬಲ್ ಗೇಮ್ ಆಡುತ್ತಿದೆ ಎಂಬ ಗುಮಾನಿ ಶುರುವಾಗಿದೆ. ಬಿಜೆಪಿ ನಾಯಕರು ತಮಿಳುನಾಡಿನಲ್ಲೊಂದು, ಕರ್ನಾಟಕದಲ್ಲೊಂದು ನಿಲವು ತಾಳಿರುವುದು ಕೇವಲ ರಾಜಕೀಯ ಎಂದು ಹೇಳಲಾಗುತ್ತಿದೆ. ಎರಡು ರಾಜ್ಯಗಳಲ್ಲೂ ಡಬಲ್ ಗೇಮ್ ಆಡಿ ಮತದಾರರನ್ನು ಸೆಳೆಯೋ ಪ್ರಯತ್ನ ಮಾಡುತ್ತಿದೆ ಎಂಬುದು ಮಾತ್ರ ಸ್ಪಷ್ಟವಾಗಿದೆ.
ಮೇಕೆದಾಟು ವಿಚಾರವನ್ನೇ ಮುಂದಿಟ್ಟುಕೊಂಡು ಸಿಎಂ ಬಸವರಾಜ್ ಬೊಮ್ಮಾಯಿ ಅಗ್ರೆಸ್ಸಿವ್ ಇಮೇಜ್ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೇಕಂತಲೇ ಬಿಜೆಪಿ ಮೇಕೆದಾಟು ವಿಚಾರವನ್ನು ವಿಚಾರ ಮಾಡುತ್ತಿದೆ. ಇದು ವಿವಾದವಾದಷ್ಟೂ ಬಿಜೆಪಿಗೆ ಅಲ್ಲೂ ಲಾಭ ಇಲ್ಲೂ ಲಾಭ. ಯೋಜನೆ ವಿಚಾರವಾಗಿ ವಿರೋಧಿಗಳು ಸಿಡಿದೆದ್ದಷ್ಟೂ ಬಿಜೆಪಿಗೆ ರಾಜಕೀಯ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಈ ವಿವಾದದ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿದಾಗಲೆಲ್ಲ ಯೋಜನೆ ಪರ ಗಟ್ಟಿಯಾದ ನಿಲುವು ಪ್ರದರ್ಶನ ಮಾಡುವುದು. ಈ ಮೂಲಕವೇ ಹಳೇ ಮೈಸೂರು ಭಾಗದಲ್ಲಿ ಜನರ ಮನಸಲ್ಲಿ ನೆಲೆಯೂರಲು ಪ್ರಯತ್ನ ಮಾಡುವುದು ರಾಜ್ಯ ಬಿಜೆಪಿಯ ಪ್ಲಾನ್.
ಅತ್ತ ತಮಿಳುನಾಡಿನಲ್ಲೂ ಬಿಜೆಪಿ ನೆಲೆ ಕಂಡುಕೊಳ್ಳಲು ಮುಂದಾಗಿದೆ. ಅದಕ್ಕಾಗಿಯೇ ಅಣ್ಣಾಮಲೈ ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯನ್ನು ಗಟ್ಟಿಗೊಳಿಸಲು ಈ ಯೋಜನೆಯೇ ದೊಡ್ಡ ಅಸ್ತ್ರವಾಗಿದೆ.