ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟ ನಾಟಕೀಯ ಎಂದು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರ ನಗರದಲ್ಲಿಂದು 15 ರಿಂದ 18 ವರ್ಷದ ವಯೋಮಾನದವರಿಗೆ ಕೊರೊನಾ ಲಸಿಕಾಕರಣ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಯತ್ನಾಳ್, ಮೇಕೆದಾಟು ಯೋಜನೆ ಜಾರಿಗೆ ವಿಚಾರವಾಗಿ ಕಾಂಗ್ರೆಸ್ ಹೋರಾಟಕ್ಕೆ ಟಾಂಗ್ ನೀಡಿದರು.
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಇದೆಲ್ಲಾ ನಾಟಕವಾಗಿದೆ. ಫಿಲ್ಮ ಶೂಟಿಂಗ್ ಗೆ ಹೋದಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರಂತೂ ಮನೆಯಲ್ಲಿ ಮೇಕೆದಾಟು ಯೋಜನೆ ಬೋರ್ಡ್ ಹಿಂದೆ ಇಟ್ಟುಕೊಂಡು ನಡೆದುಕೊಂಡು ಹೋದಂತೆ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು 2013 ರಲ್ಲಿ ಅಧಿಕಾರಕ್ಕೆ ಬರುವಾಗ ಸಿದ್ದರಾಮಯ್ಯ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆಗೆ ವರ್ಷಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಕಟ ಮಾಡಿದ್ದರು. ಜೊತೆಗೆ ಕೂಡಲಸಂಗಮದಲ್ಲಿ ಆಣೆ ಪ್ರಮಾಣ ಮಾಡಿದ್ದರು. ನಂತರ ಆಧಿಕಾರಕ್ಕೆ ಬಂದ ಬಳಿಕ ಕೆಬಿಜೆಎನ್ಎಲ್ ಗೆ ಕೊಟ್ಟಿದ್ದು ಎಷ್ಟು? ಇದೇ ವಿಚಾರವನ್ನು ಬೆಳಗಾವಿಯ ಆಧಿವೇಶನದಲ್ಲಿ ಮಾತನಾಡೋವಾಗ ತಪ್ಪು ಮಾಹಿತಿ ನೀಡಿದರು. ಉಲ್ಟಾ ಹೊಡೆದು ಮಾತನಾಡಿ ನಾನು ಹೇಳಿದ್ದು ರಾಜ್ಯದಲ್ಲಿನ ಇಡೀ ನೀರಾವರಿ ಯೋಜನೆಗಳಿಹೆ ಹತ್ತು ಸಾವಿರ ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದೇ ಎಂದರು.

2013 ರ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ ಹತ್ತು ಸಾವಿರ ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದನ್ನೇ ಕೊಟ್ಟಿಲ್ಲ. ಈಗ ಮೇಕೆದಾಟು ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ನವರು ಮಾಡುತ್ತಿರುವುದು ಎಲ್ಲವೂ ಸ್ಟಂಟ್. ಈ ಹಿಂದೆ ಆಗ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನವರ ತಂತ್ರಗಳನ್ನು ಯಾರು ಕೇಳಲ್ಲ ಫಿಲಂ ಶೂಟಿಂಗ್ ಮಾಡಿದಂತೆ ನಾಟಕ ನಡೆಸಿದ್ದನ್ನು ನೋಡಲ್ಲ. ರಾಜ್ಯದಲ್ಲೀಗ ಕರೊನಾ ಮತ್ತೆ ವ್ಯಾಪಕವಾಗಿ ಹರಡುತ್ತಿದೆ. ಇಂಥ ವೇಳೆಯಲ್ಲಿ ಹೋರಾಟ ಮಾಡೀ ಮೂಲಕ ಕಾಂಗ್ರೆಸ್ ನವರು ಕೊರೊನಾ ಹರಡೋ ಪ್ರಯತ್ನವೋ ಅಥವಾ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.