ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸೋಮವಾರ ಬೆಳಗ್ಗೆ ಬಿಜೆಪಿ ಸಚಿವ ಆನಂದ್ ಸಿಂಗ್ ಅವರು ಖಾಸಗಿಯಾಗಿ ಭೇಟಿ ಮಾಡಿದ್ದು, ರಾಜ್ಯ ಸರ್ಕಾರದ ಇತ್ತೀಚಿನ ಬದಲಾವಣೆಗಳಿಂದ ಹಲವು ಸಚಿವರು ಅತೃಪ್ತರಾಗಿದ್ದಾರಾ ಎಂಬ ಅನುಮಾನ ಹುಟ್ಟುಹಾಕಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶಿವಕುಮಾರ್ ಭೇಟಿ ಸೌಜನ್ಯದ ಭೇಟಿ ಎಂದು ಹೇಳಿದ್ದು, “ಮನೆಗೆ ಭೇಟಿ ನೀಡುವುದು ರಾಜಕೀಯವಲ್ಲ. ರಾಜಕೀಯ ಮಾತನಾಡಲು ನಾವು ರೆಸಾರ್ಟ್ ಅಥವಾ ಹೋಟೆಲ್‌ಗೆ ಹೋಗುತ್ತೇವೆ. ಅವರ ಸಹೋದರನ ಕ್ಷೇತ್ರಗಳಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚಿಸಲು ಹೋಗಿದ್ದೆ ಎಂದಿದ್ದಾರೆ. ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆಗಳ ಜವಾಬ್ದಾರಿಯಿಂದ ಸಚಿವರನ್ನು ಕೈಬಿಟ್ಟು ಮತ್ತು ಅವರಿಗೆ ಯಾವುದೇ ರಾಜಕೀಯ ಹಕ್ಕನ್ನು ಹೊಂದಿರದ ಪ್ರದೇಶಗಳ ಉಸ್ತುವಾರಿ ವಹಿಸಿದ ಬೆನ್ನಲ್ಲೇ ಡಿಕೆಶಿ ಅವರನ್ನು ಮಾಜಿ ಕಾಂಗ್ರೆಸ್ ನಾಯಕ ಸಿಂಗ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಹೊಸದಾಗಿ ರಚಿಸಲಾದ ವಿಜಯನಗರ ಜಿಲ್ಲೆಯ ಉಸ್ತುವಾರಿ ಬಿಟ್ಟು ಕೊಪ್ಪಳ ಜಿಲೆಯ ಉಸ್ತುವಾರಿ ನೀಡಲಾಗಿದೆ. ಅವರನ್ನು ವಿಜಯನಗರಕ್ಕೆ ಉಸ್ತುವಾರಿ ಮಾಡದಿದ್ದಕ್ಕ ಹೊಸಪೇಟೆಯಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಗಮನಿಸಬಹುದು. ಸಂಪುಟದಲ್ಲಿರುವ ಹಲವರು ಆಡಳಿತಾರೂಢ ಬಿಜೆಪಿಯ ಹೊಸ ನೀತಿಯಿಂದ ಅತೃಪ್ತರಾಗಿದ್ದಾರೆ ಎನ್ನುವುದು ಗುಟ್ಟಾದ ಸಂಗತಿಯಲ್ಲ. ಹಿರಿಯ ಸಚಿವರಾದ ಜೆ ಸಿ ಮಾಧುಸ್ವಾಮಿ ಮತ್ತು ಆರ್ ಅಶೋಕ ಅವರಿಗೆ ಉಸ್ತುವಾರಿ ಸ್ಥಾನವೇ ಸಿಕ್ಕಿಲ್ಲ. ಇವರಿಬ್ಬರಲ್ಲಿ ಅಸಮಾಧಾನ ಇದ್ದರೂ ಸಾರ್ವಜನಿಕವಾಗಿ ಅವರು ತೋರ್ಪಡಿಸಿಲ್ಲ.
2019 ರಲ್ಲಿ ಕಾಂಗ್ರೆಸ್ ತೊರೆದ ಮೊದಲ ಶಾಸಕರಲ್ಲಿ ಸಿಂಗ್ ಒಬ್ಬರು. ಇದು ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ ಮತ್ತು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಯಿತು. ಬೊಮ್ಮಾಯಿ ಅವರು ತಮ್ಮ ಅರಣ್ಯ ಖಾತೆಯನ್ನು ತೆಗೆದುಕೊಂಡಾಗ ಅವರು ಈ ಹಿಂದೆ ಅವರು ಅತೃಪ್ತರಾಗಿದ್ದರು. ನಂತರ ಯಡಿಯೂರಪ್ಪ ಅವರು ಪ್ರವಾಸೋದ್ಯಮ ಖಾತೆಯನ್ನು ತೆಗೆದುಕೊಳ್ಳಲು ಸೂಚಿಸಿದ್ದರಿಂದ ಸಿಂಗ್ ಒಪ್ಪಿಕೊಂಡಿದ್ದರು.
೨ ದಿನ ಹಿಂದಷ್ಟೇ ಬೊಮ್ಮಾಯಿ ಮತ್ತು ಯಡಿಯೂರಪ್ಪರನ್ನು ಭೇಟಿ ಮಾಡಿದ ಆನಂದ್ ಸಿಂಗ್ ಬೇಟಿ ಮಾಡಿದ್ದಾರೆ. ಬರುವ ದಿನಗಳಲ್ಲಿ ಸಂಪುಟ ಪುನರ್ ರಚನೆಯಾದರೆ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚುವ ಸಾಧ್ಯತೆ ಇದ್ದು, ಈ ಊಹಾಪೋಹಗಳ ಬೆನ್ನಲ್ಲೇ ಆನಂದ್ ಸಿಂಗ್ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಆಶ್ಚರ್ಯ ಹುಟ್ಟಿಸಿದೆ.
ಕ್ಯಾಬಿನೆಟ್ ಸ್ಥಾನಗಳ ಬಗ್ಗೆ ಆಡಳಿತ ಪಕ್ಷದ ಶಾಸಕರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ಸಿ ಎಂ ಇಬ್ರಾಹಿಂ ಬೇರೆ ಹೇಳಿದ್ದಾರೆ.