• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಾಧ್ಯಮ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಶ್ರೀರಕ್ಷೆ

ನಾ ದಿವಾಕರ by ನಾ ದಿವಾಕರ
February 16, 2023
in ಅಂಕಣ
0
ಮಾಧ್ಯಮ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಶ್ರೀರಕ್ಷೆ
Share on WhatsAppShare on FacebookShare on Telegram

ADVERTISEMENT

ಪ್ರಜಾಪ್ರಭುತ್ವದ  ಉಳಿವಿಗೆ  ಮಾಧ್ಯಮಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ  ಅತ್ಯವಶ್ಯ

ಪ್ರಜಾಪ್ರಭುತ್ವದ ನೆಲೆಗಳು ಭದ್ರವಾಗಿರಬೇಕೆಂದರೆ ಸಂವಿಧಾನರೀತ್ಯಾ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಪ್ರಜಾತಂತ್ರದ ಎಲ್ಲ ಅಂಗಗಳೂ ತಮ್ಮದೇ ಆದ ಸ್ವಂತಿಕೆ, ಸ್ವಾಯತ್ತತೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಮುಕ್ತವಾಗಿರಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ದೇಶದ ಆಡಳಿತನೀತಿಗಳನ್ನು ರೂಪಿಸುವ ಮತ್ತು ನಿರೂಪಿಸುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವಂತೆಯೇ, ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎಂದೇ ಪರಿಗಣಿಸಲ್ಪಡುವ ಮಾಧ್ಯಮ ಈ ಜವಾಬ್ದಾರಿಯುತ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ತಪ್ಪುಒಪ್ಪುಗಳನ್ನು ಎತ್ತಿ ತೋರಿಸುತ್ತಾ, ಸರ್ಕಾರಗಳು ಅಥವಾ ಆಡಳಿತಶಾಹಿಯು ಇಡುವ ತಪ್ಪು ಹೆಜ್ಜೆಗಳನ್ನು ಜನತೆಯ ಮುಂದಿಟ್ಟು ದುರಸ್ತಿ ಮಾಡುವ ನೈತಿಕ ಜವಾಬ್ದಾರಿಯನ್ನು ಹೊತ್ತಿರುತ್ತವೆ. ಒಂದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಗುಣಾವಗುಣಗಳನ್ನು ಅಳೆಯುವ ಮಾಪನದ ಮಾನದಂಡಗಳು ಇರುವುದು ಕೇವಲ ಕಾಲಿಕ ಚುನಾವಣೆಗಳಲ್ಲಲ್ಲ. ಬದಲಾಗಿ ಆಡಳಿತಾರೂಢ ಸರ್ಕಾರಗಳ ಮೇಲೆ ಸೂಕ್ಷ್ಮ ನಿಗಾವಹಿಸಿ, ಜನತೆಯ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿರುವ ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯಲ್ಲಿ.

ಕಳೆದ ಐದಾರು ದಶಕಗಳಲ್ಲಿ  ಭಾರತದ ಮಾಧ್ಯಮಗಳ ಸ್ವರೂಪ ಮತ್ತು ಮೂಲ ಲಕ್ಷಣಗಳು ಸಾಕಷ್ಟು ಬದಲಾಗುತ್ತಲೇ ಬಂದಿವೆ. 1970ರ ದಶಕದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳು ಎದುರಿಸಿದ ಸವಾಲುಗಳು ಮತ್ತು ಈ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ ರೀತಿ, ಭಾರತದ ಮಾಧ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕಿತ್ತು. ಆಡಳಿತಾರೂಢ ಸರ್ಕಾರಗಳ ಸರ್ವಾಧಿಕಾರಿ ಧೋರಣೆ ಮತ್ತು ನಿಯಂತ್ರಕ ಆಡಳಿತನೀತಿಗಳ ವಿರುದ್ಧ ದನಿ ಎತ್ತಿದ ಆ ಕಾಲಘಟ್ಟದ ಪತ್ರಿಕಾ ಸಮೂಹಗಳು ಇಡೀ ವಿಶ್ವವನ್ನೇ ಬೆರಗುಗೊಳಿಸುವ ರೀತಿಯಲ್ಲಿ ಇಂದಿರಾಗಾಂಧಿ ಸರ್ಕಾರದ ನಿರಂಕುಶಾಧಿಕಾರವನ್ನು ಹಿಮ್ಮೆಟ್ಟಿಸಿದ್ದವು. ತುರ್ತುಪರಿಸ್ಥಿತಿಯಂತಹ ಪ್ರಜಾತಂತ್ರ ವಿರೋಧಿ ಕ್ರಮದ ವಿರುದ್ಧ ಜನಾಭಿಪ್ರಾಯ ಮೂಡಿಸುವುದಷ್ಟೇ ಅಲ್ಲದೆ, ದೇಶವ್ಯಾಪಿಯಾಗಿ ಜನಸಾಮಾನ್ಯರಲ್ಲಿ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಅಂದು ಪತ್ರಿಕೆಗಳು ಮುಂಚೂಣಿಯಲ್ಲಿದ್ದವು. 1977ರ ಚುನಾವಣೆಗಳಲ್ಲಿ ಇಂದಿರಾಗಾಂಧಿಯ ಪರಾಭವದ ಹಿಂದೆ ಮತ್ತು ಜನತಾಪಕ್ಷದ ಗೆಲುವಿನ ಹಿಂದೆ, ಪತ್ರಿಕಾ ಸಮೂಹಗಳ ಪ್ರಭಾವವೂ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ.

ಇದು ಯಾವುದೇ ಪ್ರಜಾಪ್ರಭುತ್ವಕ್ಕೆ ಇರಬೇಕಾದ ಲಕ್ಷಣ.  ಚುನಾಯಿತ ಸರ್ಕಾರಗಳು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಈ ನಿಟ್ಟಿನಲ್ಲಿ ತಮ್ಮದೇ ಆದ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮಾಧ್ಯಮಗಳನ್ನು ಬಳಸಿಕೊಳ್ಳುವುದು ಸಾರ್ವತ್ರಿಕ ವಿದ್ಯಮಾನ. ಎಲ್ಲ ದೇಶಗಳಲ್ಲೂ ಇದು ಜನಜನಿತವಾಗಿದೆ. ಭಾರತವೂ ಹೊರತಲ್ಲ. ಮುದ್ರಣ ಮಾಧ್ಯಮಗಳು ಪ್ರಧಾನ ಭೂಮಿಕೆ ನಿರ್ವಹಿಸುತ್ತಿದ್ದ ಕಾಲಘಟ್ಟದಲ್ಲಿಯೂ ಸಹ ಸರ್ಕಾರಗಳು ಪತ್ರಿಕಾ ಸಮೂಹಗಳ ಮೇಲೆ ಒತ್ತಡ ಹೇರುವ ಮೂಲಕ, ಸಾಂವಿಧಾನಿಕ ಕಾಯ್ದೆ ಕಾನೂನುಗಳ ಅಡಿಯಲ್ಲೇ, ಸುದ್ದಿಪ್ರಸರಣವನ್ನು ನಿಯಂತ್ರಿಸುವ ಉದಾಹರಣೆಗಳು ನಮ್ಮೆದುರು ಸಾಕಷ್ಟಿವೆ. ಹಾಗೆಯೇ ಈ ನಿಯಂತ್ರಣಾಧಿಕಾರವನ್ನೂ ಮೀರಿ ಪತ್ರಿಕಾ ಸಮೂಹಗಳು, ಸಂಪಾದಕರು, ಪತ್ರಿಕಾ ಸಮೂಹದ ಮಾಲೀಕರು ಸರ್ಕಾರದ ನೀತಿಗಳನ್ನು ವಿಮರ್ಶಿಸುವ, ಪರಾಮರ್ಶಿಸುವ, ಟೀಕಿಸುವ ಮತ್ತು ಅವಶ್ಯವಿದ್ದಲ್ಲಿ ಖಂಡಿಸುವ ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಬಳಸಿಕೊಂಡು, ಜನಜಾಗೃತಿ ಮೂಡಿಸಿರುವುದನ್ನೂ ಕಂಡಿದ್ದೇವೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ರಾಮನಾಥ ಗೋಯೆಂಕಾ ಅಂಥವರು ಈ ಕಾರಣಕ್ಕಾಗಿಯೇ ದಂತಕತೆಗಳಾಗಿ ಕಾಣುತ್ತಾರೆ.

ನವ ಉದಾರವಾದ ಮತ್ತು ಮಾಧ್ಯಮ

ಆದರೆ ನವ ಉದಾರವಾದ  ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯನ್ನು ಭಾರತ ಒಪ್ಪಿಕೊಂಡ ನಂತರ ಪರಿಸ್ಥಿತಿಗಳು ಬದಲಾಗಿವೆ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿರಬೇಕಾದ ಮಾಧ್ಯಮ ಜಗತ್ತು ಕಳೆದ ಮೂರು ದಶಕಗಳಲ್ಲಿ ಔದ್ಯಮಿಕ ಮಾರುಕಟ್ಟೆಯ ಒಂದು ಭಾಗವಾಗಿ  ಮನ್ವಂತರ ಹೊಂದಿದ್ದು, ಕಾರ್ಪೋರೇಟ್‌ ಮಾರುಕಟ್ಟೆ ಹಿತಾಸಕ್ತಿಗಳನ್ನು ಸಂರಕ್ಷಿಸುವ ಸಾಂಸ್ಥಿಕ ನೆಲೆಗಳಾಗಿ ಪರಿವರ್ತಿತವಾಗಿವೆ. ಡಿಜಿಟಲ್‌ ಯುಗದಲ್ಲಿ ಮುದ್ರಣ ಮಾಧ್ಯಮಗಳ ಮೂಲ ನೆಲೆ ಬಂಡವಾಳ ಮತ್ತು ಮಾರುಕಟ್ಟೆ ಕೇಂದ್ರಿತವಾಗುತ್ತಿರುವಂತೆಯೇ, ಈ ಪತ್ರಿಕಾ ಸಮೂಹಗಳ ಪ್ರಾಶಸ್ತ್ಯವೂ ಸಹ ಕ್ಷೀಣಿಸುತ್ತಿದೆ.  ಪತ್ರಿಕೆಯ ಸಂಪಾದಕತ್ವ ಮತ್ತು ಒಡೆತನ ಇವರೆಡರ ನಡುವೆ ಇದ್ದ ಅಂತರ ಬಹುತೇಕ ಇಲ್ಲವಾಗಿರುವುದರಿಂದ, ಒಡೆತನದ ಔದ್ಯಮಿಕ ಹಿತಾಸಕ್ತಿಗಳೇ ಸಂಪಾದಕತ್ವದ ಆದ್ಯತೆ ಮತ್ತು ಆಸಕ್ತಿಯೂ ಆಗಿ ಪರಿಣಮಿಸಿದೆ. ವಿದ್ಯುನ್ಮಾನ ಸುದ್ದಿ ಮಾಧ್ಯಮಗಳು  ಈ ಮಾರುಕಟ್ಟೆಯ ಪ್ರಧಾನ ಭಾಗಿದಾರರಾಗಿದ್ದರೂ, ಈ ಹಿಂದೆ ತಮ್ಮದೇ ಆದ ಸ್ವಾಯತ್ತ ವೃತ್ತಿಪರತೆಯನ್ನು ಕಾಪಾಡಿಕೊಂಡಿದ್ದ ಪತ್ರಿಕಾ ಸಮೂಹಗಳೂ ಬದಲಾದ ಸನ್ನಿವೇಶದಲ್ಲಿ, ಪ್ರಭುತ್ವದ ಕೃಪಾಕಟಾಕ್ಷಕ್ಕೆ ಹಾತೊರೆಯುವ ಹಂತಕ್ಕೆ ತಲುಪಿವೆ. ಕೆಲವೇ ಪತ್ರಿಕೆಗಳು ಮಾತ್ರ ತಮ್ಮ ಸ್ವಂತಿಕೆಯನ್ನು ಕೊಂಚ ಮಟ್ಟಿಗೆ ಉಳಿಸಿಕೊಂಡು, ತೆವಳುತ್ತಿವೆ.

ಮಾರುಕಟ್ಟೆ, ಬಂಡವಾಳ ಮತ್ತು ಪ್ರಭುತ್ವದ ನಿಯಂತ್ರಣಕ್ಕೊಳಪಡಬೇಕಾದ ಮಾಧ್ಯಮಗಳು ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದೂ ಕಷ್ಟವಾಗುತ್ತಿರುವುದನ್ನು ಎನ್‌ಡಿಟಿವಿಯ ಸಂದರ್ಭದಲ್ಲಿ ಗಮನಿಸಿದ್ದೇವೆ. ಆಪ್ತ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಸರ್ಕಾರಗಳ ನೆರವಿನೊಂದಿಗೇ ತಮ್ಮ ಮಾರುಕಟ್ಟೆ ಮತ್ತು ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಬಂಡವಾಳಿಗರು ಪತ್ರಿಕಾ ಸಮೂಹಗಳನ್ನೂ, ವಿದ್ಯುನ್ಮಾನ ವಾಹಿನಿಗಳನ್ನೂ ಸಹ ಸ್ವಾಧೀನಪಡಿಸಿಕೊಂಡಿರುವುದನ್ನು ಕಂಡಿದ್ದೇವೆ. ಎನ್‌ಡಿಟಿವಿಯನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡಿರುವುದು ಸ್ವಾಯತ್ತ ಮಾಧ್ಯಮದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎನ್ನಬಹುದು. ಕಳೆದ ಮೂರು ದಶಕಗಳಲ್ಲಿ ಮಾಧ್ಯಮ ಸಮೂಹಗಳು ಮಾರುಕಟ್ಟೆ ಮತ್ತು ಔದ್ಯಮಿಕ ವಲಯದ ಒಂದು ಭಾಗವಾಗಿಯೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ತಮ್ಮ ಅಳಿವು ಉಳಿವಿಗಾಗಿ ಅವಲಂಬಿಸುವ ಮಾರುಕಟ್ಟೆಯನ್ನು ಪೋಷಿಸುವ ಸಲುವಾಗಿ, ಸರ್ಕಾರಗಳ ಕಾರ್ಪೋರೇಟ್‌ ಮಾರುಕಟ್ಟೆ ಕೇಂದ್ರಿತ ಆಡಳಿತ ನೀತಿಗಳನ್ನೂ ಪ್ರೋತ್ಸಾಹಿಸುವುದು ಈ ಮಾಧ್ಯಮ ಸಮೂಹಗಳಿಗೆ ಅನಿವಾರ್ಯವೂ ಆಗಿದೆ. ಹಾಗಾಗಿಯೇ ಮಾಧ್ಯಮ ವಲಯದ ಮೇಲೆ ಸರ್ಕಾರದ ನಿಯಂತ್ರಣ, ನಿಬಂಧನೆ ಮತ್ತು ಒತ್ತಡಗಳೂ ಹೆಚ್ಚಾಗುತ್ತಿವೆ. ಈ ನಿಯಂತ್ರಣಕ್ಕೊಳಪಡದ ಮಾಧ್ಯಮ ಸಮೂಹಗಳು ಬಹುಪಾಲು ಸಂದರ್ಭಗಳಲ್ಲಿ ಸರ್ಕಾರಗಳ ಕಾಕದೃಷ್ಟಿಗೆ ಒಳಗಾಗುತ್ತವೆ.

ಬಿಬಿಸಿ ಮೇಲಿನ  ದಾಳಿ ಕಾಕತಾಳೀಯವೇ ?

ಈ ಸಾಂದರ್ಭಿಕ ಹಿನ್ನೆಲೆಯಲ್ಲೇ ಬಿಬಿಸಿಯ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅನಿರೀಕ್ಷಿತ ದಾಳಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಿಬಿಸಿ ಇತ್ತೀಚೆಗಷ್ಟೇ “ Inida : The Modi Question ” ಎಂಬ ಸಾಕ್ಷ್ಯ ಚಿತ್ರವೊಂದನ್ನು ಬಿಡುಗಡೆ ಮಾಡಿ ವಿವಾದಕ್ಕೀಡಾಗಿತ್ತು. 2002ರಲ್ಲಿ ಗೋದ್ರಾ ಹತ್ಯಾಕಾಂಡದ ನಂತರದಲ್ಲಿ ನಡೆದ ಸಾಮೂಹಿಕ ನರಮೇಧದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆಯ ಸುತ್ತ ಬಿಬಿಸಿ ನಿರ್ಮಿಸಿರುವ ಈ ಸಾಕ್ಷ್ಯಚಿತ್ರವು ಕೆಲವು ಪ್ರತ್ಯಕ್ಷದರ್ಶಿಗಳು ಮತ್ತು ಪತ್ರಿಕಾ ವರದಿಗಳು ಹಾಗೂ ಪತ್ರಕರ್ತರ ಸತ್ಯಶೋಧನೆಯ ವರದಿಗಳನ್ನಾಧರಿಸಿ ನಿರ್ಮಿತವಾಗಿದೆ. ಈ ಸಾಕ್ಷ್ಯಚಿತ್ರವು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆ ಬರುವಂತಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳು, ಯುಟ್ಯೂಬ್‌ ಸೇರಿದಂತೆ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ. ಡಿಜಿಟಲ್‌ ತಂತ್ರಜ್ಞಾನ ಯುಗದಲ್ಲಿ ಇಂತಹ ನಿಷೇಧಗಳು ಫಲಕಾರಿಯಾಗುವುದಿಲ್ಲ. ವಿದ್ಯುನ್ಮಾನ ಕ್ಷೇತ್ರದ ಆಧುನಿಕ ಸಂಶೋಧನೆಗಳು ದತ್ತಾಂಶ ಮತ್ತು ಮಾಹಿತಿಗಳನ್ನು ಸಂಗ್ರಹಿಸಿ ಪ್ರಸಾರ ಮಾಡುವ ಹಲವು ಸಾಧನಗಳನ್ನು ಸೃಷ್ಟಿಸಿದ್ದು, ಒಂದು ಮೈಕ್ರೋ ಚಿಪ್‌ ಮೂಲಕ ಮಾಹಿತಿಯನ್ನು ಪ್ರಸರಣ ಮಾಡಲು ಸಾಧ್ಯವಿದೆ.

ಆದಾಗ್ಯೂ ಕೇಂದ್ರ ಸರ್ಕಾರವು ಬಿಬಿಸಿಯ ಸಾಕ್ಷ್ಯಚಿತ್ರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಭಾರತ ಸರ್ಕಾರದ ವಿರುದ್ಧ ನಡೆಸಿರುವ ಪಿತೂರಿ ಎಂದೇ ಪರಿಗಣಿಸಿದೆ. ಸರ್ಕಾರದ ಮತ್ತು ಪ್ರಧಾನಮಂತ್ರಿಗಳ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ಬಿಬಿಸಿ ಇಂತಹ ಒಂದು ಪಿತೂರಿಯ ಭಾಗವಾಗಿದೆ ಎಂದೂ ಸಹ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ʼ ವಿಷಪೂರಿತ ವರದಿಗಾರಿಕೆ ಎಂದು ಬಣ್ಣಿಸಿರುವ ಬಿಜೆಪಿ ನಾಯಕರು ಬಿಬಿಸಿಯನ್ನು ಜಗತ್ತಿನ ಅತ್ಯಂತ ಭ್ರಷ್ಟ ಸಂಸ್ಥೆ ಎಂದೂ ಆರೋಪಿಸಿದ್ದಾರೆ. ಈ ಆರೋಪ ಪ್ರತ್ಯಾರೋಪಗಳ ಸತ್ಯಾಸತ್ಯತೆಗಳು ಏನೇ ಇರಲಿ, ಈ ವಿವಾದಾಸ್ಪದ ಸಾಕ್ಷ್ಯಚಿತ್ರ ಸೃಷ್ಟಿಸಿದ ಪ್ರಕ್ಷುಬ್ಧತೆಯ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮುಂಬಯಿ ಮತ್ತು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿರುವುದು ಕಾಕತಾಳೀಯವಾಗಿದೆ. ಸಾಕ್ಷ್ಯಚಿತ್ರಕ್ಕೂ, ಆದಾಯ ತೆರಿಗೆ ದಾಳಿಗೂ ಸಂಬಂಧವಿಲ್ಲ ಎಂದು ಸರ್ಕಾರ ಹೇಳಿದ್ದರೂ, ರಾಜಕೀಯ ಸೂಕ್ಷ್ಮಗಳನ್ನು ಬಲ್ಲವರಿಗೆ ಇದರ ಒಳಸುಳಿಗಳು ಅರಿವಾಗದೆ ಇರುವುದಿಲ್ಲ.

ಬಿಬಿಸಿ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯು ಶೋಧನೆ ನಡೆಸಿಲ್ಲ, ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕೃತವಾಗಿ ಹೇಳಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 132 ಅಡಿಯಲ್ಲಿ ನಡೆಸುವ ಶೋಧನೆಗೂ, ಸೆಕ್ಷನ್‌ 133ಎ ಅಡಿಯಲ್ಲಿ ನಡೆಸುವ ಪರಿಶೀಲನೆಗೂ ವ್ಯತ್ಯಾಸವಿರುತ್ತದೆ. ಶೋಧನೆ ನಡೆಸುವ ಸಂದರ್ಭದಲ್ಲಿ ಅಪರಾಧ ದಂಡ ಸಂಹಿತೆಯ ನಿಯಮಗಳನ್ನು ಅನ್ವಯಿಸಲಾಗುತ್ತದೆ. ಸಂಸ್ಥೆಗೆ ಅಥವಾ ಉದ್ದಿಮೆಗೆ  ಸಂಬಂಧಿಸಿದ ಎಲ್ಲ ರೀತಿಯ ಸ್ಥಿರಾಸ್ತಿ, ಚರಾಸ್ತಿಗಳನ್ನೂ ವಶಕ್ಕೆ ಪಡೆದುಕೊಂಡು ಎರಡು ತಿಂಗಳ ಕಾಲ ಶೋಧನೆ ಮಾಡುವ ಅಧಿಕಾರ ಇಲಾಖೆಗೆ ಇರುತ್ತದೆ. ಸೆಕ್ಷನ್‌ 133ಎ ಅಡಿಯಲ್ಲಿ ನಡೆಸುವ ಪರಿಶೀಲನೆಯ ಸಂದರ್ಭದಲ್ಲಿ ಅಪರಾಧ ದಂಡ ಸಂಹಿತೆ ಅನ್ವಯಿಸುವುದಿಲ್ಲ. ಉದ್ದಿಮೆಯ ಕಚೇರಿ ಅಥವಾ ಆಡಳಿತ ಕೇಂದ್ರಗಳಲ್ಲಿ ಮಾತ್ರ ಪರಿಶೀಲಿಸಬಹುದಾಗಿದ್ದು, ಯಾವುದೇ ದಾಖಲೆಗಳನ್ನು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಳ್ಳಲಾಗುವುದಿಲ್ಲ.  ಬಿಬಿಸಿ ಕಚೇರಿಯಲ್ಲಿ ತಾವು ಈ ರೀತಿಯ ಪರಿಶೀಲನೆ ನಡೆಸುತ್ತಿರುವುದಾಗಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ ಪಾವತಿ, ಬಿಬಿಸಿಯ ಅಂಗ ಸಂಸ್ಥೆಗಳಿಗೆ ಸರಕು, ಸೇವೆ ಮತ್ತು ಸಿಬ್ಬಂದಿ ವರ್ಗಾವಣೆಯ ವೆಚ್ಚಗಳ ನಿರ್ವಹಣೆಯಲ್ಲಿ ಅವ್ಯವಹಾರಗಳು ನಡೆದಿದೆಯೇ ಎಂದು ಪರಿಶೀಲಿಸುವ ಸಲುವಾಗಿ ಈ ಕ್ರಮ ಜರುಗಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ತನಿಖಾ ಸಂಸ್ಥೆಗಳಿಗೆ ಸ್ವತಂತ್ರವಾಗಿ ಅವುಗಳ ಕೆಲಸ ಮಾಡಲು ಬಿಡಬೇಕು ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮತ್ತು ಬಿಜೆಪಿ ನಾಯಕ ಗೌರವ್‌ ಭಾಟಿಯಾ ಹೇಳಿದ್ದಾರೆ.  ಅವ್ಯವಹಾರಗಳು ನಡೆದಿರುವ ಸುಳಿವು ದೊರೆತಿರುವ ಸಾಧ್ಯತೆಗಳಿದ್ದು ಈ ಕಾರಣಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ ಎಂದು ಕೇಂದ್ರ ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಆದರೆ ಮೇಲ್ನೋಟಕ್ಕೆ ಕಾಣುವ ಅಂಶಗಳು ವಾಸ್ತವದಲ್ಲಿ ಭಿನ್ನವಾಗಿರುತ್ತವೆ ಎಂದು ಗ್ರಹಿಸಲು ಸಾರ್ವಜನಿಕರ ಮುಂದೆ ಹಲವು ನಿದರ್ಶನಗಳಿವೆ. ಸರ್ಕಾರದ ಆಡಳಿತ ನೀತಿಗಳನ್ನು ಟೀಕಿಸುವ ಅಥವಾ ಖಂಡಿಸುವ ಮಾಧ್ಯಮ ಸಮೂಹಗಳನ್ನು ಈ ರೀತಿಯ ದಾಳಿಗೆ ಒಳಪಡಿಸುವ ಒಂದು ಪರಂಪರೆಯನ್ನೇ ಕಳೆದ ಹಲವು ವರ್ಷಗಳಲ್ಲಿ ಕಾಣಬಹುದಾಗಿದೆ. 2021ರ ಸೆಪ್ಟಂಬರ್‌ನಲ್ಲಿ ನ್ಯೂಸ್‌ ಕ್ಲಿಕ್‌ ಮತ್ತು ನ್ಯೂಸ್‌ ಲಾಂಡ್ರಿ ಮಾಧ್ಯಮ ಸಮೂಹಗಳು ಆದಾಯ ತೆರಿಗೆ ಇಲಾಖೆಯ ದಾಳಿಗೆ ತುತ್ತಾಗಿದ್ದವು.  ನ್ಯೂಸ್‌ಕ್ಲಿಕ್‌ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯವೂ ದಾಳಿ ನಡೆಸಿತ್ತು. ಇದೇ ವರ್ಷದ ಜೂನ್‌ ತಿಂಗಳಲ್ಲಿ ದೈನಿಕ್‌ ಭಾಸ್ಕರ್‌ ಮತ್ತು ಭಾರತ್‌ ಸಮಾಚಾರ್‌ ಪತ್ರಿಕಾ ಸಮೂಹಗಳ ಮೇಲೆ ದಾಳಿ ನಡೆಸಲಾಗಿತ್ತು.  ಈಗ ವಿದೇಶಿ ಒಡೆತನದ ಬಿಬಿಸಿ ಸಂಸ್ಥೆಯೂ ದಾಳಿಗೊಳಗಾಗಿದೆ.

ಈ ಸಮರ್ಥನೆಗಳು ಏನೇ ಇದ್ದರೂ, ಗುಜರಾತ್‌ ಗಲಭೆಗಳನ್ನು ಕುರಿತ ಬಿಬಿಸಿ ಸಾಕ್ಷ್ಯಚಿತ್ರವು ದೇಶಾದ್ಯಂತ ಉಂಟುಮಾಡಿರುವ ಸಂಚಲನ ಮತ್ತು ಜಾಗತಿಕ ಮಟ್ಟದಲ್ಲಿ ಮೂಡಿಸಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ನೋಡಿದಾಗ, ಈ ದಾಳಿಗಳು ಸರ್ಕಾರದ ಪ್ರತೀಕಾರದ ಕ್ರಮದಂತೆಯೇ ಕಾಣುವುದು ಸಹಜ.  ಬಹುತೇಕ ಒಂದು ಶತಮಾನದಿಂದ ( ಬಿಬಿಸಿಯ ಮೊದಲ ಭಾರತೀಯ ಶಾಖಾ ಕಚೇರಿ 1924ರಲ್ಲಿ ಸ್ಥಾಪನೆಯಾಗಿತ್ತು) ಭಾರತದಲ್ಲಿ ತನ್ನ ಕಚೇರಿಯನ್ನು ಹೊಂದಿರುವ ಬಿಬಿಸಿ ತನ್ನ ನಿಷ್ಪಕ್ಷಪಾತ ತನಿಖಾ ವರದಿಗಳಿಗೆ ಮತ್ತು ವಸ್ತುನಿಷ್ಟ ವರದಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಜಗತ್ತಿನಾದ್ಯಂತ ಕಳೆದ ಒಂದು ಶತಮಾನದಲ್ಲಿ ನಡೆದ ಭೀಕರ ಯುದ್ಧಗಳು, ಅಂತರ್‌ ಕಲಹಗಳು, ಭಯೋತ್ಪಾದಕ ಕೃತ್ಯಗಳು ಮತ್ತು ವಿವಿಧ ದೇಶಗಳ ಆಂತರಿಕ ಕ್ಷೋಭೆಗಳನ್ನು ಪರಿಶೋಧಿಸುವಾಗ, ಅಷ್ಟೇಕ ಪ್ರಕೃತಿ ವಿಕೋಪದ ಘಟನೆಗಳು ನಡೆದಾಗಲೂ ಸಹ,  ಸಹಜವಾಗಿಯೇ ಎಲ್ಲರ ಗಮನ ಬಿಬಿಸಿ ವರದಿಗಳ ಕಡೆ ಹರಿಯತ್ತದೆ. ಈ ಪ್ರಾಮಾಣಿಕ ವರದಿಗಾರಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಒಮ್ಮೆ ಪ್ರಶಂಸೆಗೊಳಗಾಗಿತ್ತು. ಸರ್ಕಾರಗಳ ವಿರುದ್ಧ ದನಿಎತ್ತಿದ ಕಾರಣಕ್ಕಾಗಿ ಬಿಬಿಸಿ ನಿಷೇಧವನ್ನೂ ಎದುರಿಸಿದೆ. 1970ರಲ್ಲಿ ಇಂದಿರಾಗಾಂಧಿ ಸರ್ಕಾರವೂ ಸಹ ಬಿಬಿಸಿಯನ್ನು ಪಕ್ಷಪಾತಿ ವರದಿಗಾರಿಕೆಗಾಗಿ ನಿಷೇಧಿಸಿದ್ದನ್ನು ಸ್ಮರಿಸಬಹುದು.

ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಅತ್ಯವಶ್ಯ

ಕೇಂದ್ರ ಸರ್ಕಾರವೂ ಇದೇ ಪ್ರತೀಕಾರ ಕ್ರಮವನ್ನು ಅನುಸರಿಸಿದೆ ಎಂದು ವಿರೋಧ ಪಕ್ಷಗಳು, ಮಾಧ್ಯಮ ಸಮೂಹಗಳು ಆರೋಪಿಸುತ್ತಿವೆ. ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಹರಣ ನಿರಂತರವಾಗಿ ನಡೆಯುತ್ತಿರುವುದು ಗುಟ್ಟಿನ ಮಾತೇನಲ್ಲ. ಸರ್ಕಾರದ ವಿರುದ್ಧ ಮಾತನಾಡುವ ಪತ್ರಿಕೆಗಳನ್ನು, ವಿದ್ಯುನ್ಮಾನ ವಾಹಿನಿಗಳನ್ನು ನಿಯಂತ್ರಿಸಲು ಸರ್ಕಾರದ ಸಾಂಸ್ಥಿಕ ಸಾಧನಗಳನ್ನು ಬಳಸಿಕೊಳ್ಳುವುದೂ ಸಹ ಹೊಸತೇನಲ್ಲ. ಸಿಬಿಐ, ಆದಾಯತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮುಂತಾದ ಇಲಾಖೆಗಳನ್ನು ಆಡಳಿತಾರೂಢ ಸರ್ಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪರಂಪರೆ ಇಂದಿರಾ ಕಾಲದಿಂದಲೂ ಜಾರಿಯಲ್ಲಿದೆ. ಕಳೆದ ಎಂಟು ವರ್ಷಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿದೆ. ಈಗ ಬಿಬಿಸಿ ಕಚೇರಿಗಳ ಮೇಲೆ ನಡೆಸಲಾಗಿರುವ ಆದಾಯತೆರಿಗೆ ದಾಳಿಯನ್ನೂ ಭಾರತೀಯ ಪ್ರೆಸ್‌ ಕ್ಲಬ್‌ ಮತ್ತು ಭಾರತೀಯ ಸಂಪಾದಕರ ಕೂಟ, ಪತ್ರಕರ್ತರ ರಕ್ಷಣಾ ಸಮಿತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( ಕೆಯುಡಬ್ಲ್ಯುಜೆ) ಖಂಡಿಸಿವೆ. ಸರ್ಕಾರದ ಸಮಜಾಯಿಸಿ ಏನೇ ಇದ್ದರೂ, ಬಿಬಿಸಿ ಕಚೇರಿಗಳ ಮೇಲಿನ ದಾಳಿಗಳು ಕಾಕತಾಳೀಯವಲ್ಲ ಎನ್ನುವುದು ನಿಶ್ಚಿತ. ನೂರು ವರ್ಷಗಳ ಚರಿತ್ರೆ ಇರುವ ಒಂದು ಮಾಧ್ಯಮ ಸಮೂಹದ ಮೇಲೆ ಏಕಾಏಕಿ ಅನುಮಾನಗಳು ಮೂಡುವುದು ಅಸಹಜವೆನಿಸುವುದಿಲ್ಲವೇ ?

Reporters Without Borders ಎಂಬ ಜಾಗತಿಕ ಸಂಸ್ಥೆಯೊಂದು ನಡೆಸುವ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸಮೀಕ್ಷೆಯಲ್ಲಿ ಭಾರತ ಕುಸಿಯುತ್ತಲೇ ಇದೆ. 2022ರ ಸಮೀಕ್ಷೆಯಲ್ಲಿ ಭಾರತ 180 ರಾಷ್ಟ್ರಗಳ ಪೈಕಿ 142ನೆಯ ಸ್ಥಾನದಿಂದ 150ನೆಯ ಸ್ಥಾನಕ್ಕೆ ಕುಸಿದಿದೆ. ಈ ಸಮೀಕ್ಷೆಗಳೂ ಸಹ ಭಾರತದ ವಿರುದ್ಧ ನಡೆಸುವ ಪಿತೂರಿ ಎಂಬ ಆರೋಪಗಳು ಕೇಳಿಬರುತ್ತಿದ್ದರೂ , ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಪದೇ ಪದೇ ಧಕ್ಕೆ ಉಂಟಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. Rights and Risks Analysis Group ನಡೆಸುವ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಸಮೀಕ್ಷಾ ವರದಿಯ ಅನುಸಾರ 2021ರಲ್ಲಿ ಭಾರತದಲ್ಲಿ ಆರು ಪತ್ರಕರ್ತರು ಹತ್ಯೆಗೊಳಗಾಗಿದ್ದರೆ, 108 ಪತ್ರಕರ್ತರ ಮೇಲೆ ದೈಹಿಕವಾಗಿ ದಾಳಿ ನಡೆದಿದೆ. 13 ಮಾಧ್ಯಮ ಸಮೂಹ ಕೇಂದ್ರಗಳು ದಾಳಿಗೊಳಗಾಗಿವೆ. ಈ ದಾಳಿಗಳಿಗೆ ಸರ್ಕಾರೇತರ ಸಂಘಟನೆ, ವ್ಯಕ್ತಿ ಮತ್ತು ಸಂಸ್ಥೆಗಳೂ ಕಾರಣವಾಗಿರಬಹುದು. ಆದರೆ ಇದರಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ‍ ಧಕ್ಕೆ ಉಂಟಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಒಂದು ಆರೋಗ್ಯಕರ ಪ್ರಜಾಪ್ರಭುತ್ವ ತನ್ನ ಮೌಲ್ಯಗಳನ್ನು ಉಳಿಸಿಕೊಳ್ಳಲು ಮತ್ತು ತನ್ನ ಪ್ರಜಾಸತ್ತಾತ್ಮಕ ನೆಲೆಗಳನ್ನು ರಕ್ಷಿಸಿಕೊಳ್ಳಲು ಮಾಧ್ಯಮ ಸ್ವಾತಂತ್ರ್ಯ ಒಂದು ಮಾಪಕವಾಗಿ ಕಾಣುತ್ತದೆ. ಮಾಧ್ಯಮಗಳ ಕತ್ತು ಹಿಸುಕಿದಷ್ಟೂ ಜನಸಾಮಾನ್ಯರ ದೃಷ್ಟಿಯಿಂದ ಸುತ್ತಲಿನ ಸಮಾಜದ ಸುಡುವಾಸ್ತವಗಳು ಮರೆಯಾಗುತ್ತಾ ಹೋಗುತ್ತವೆ. ಬದಲಾದ ಭಾರತದಲ್ಲಿ ಮಾಧ್ಯಮ ಸಮೂಹಗಳೂ ಸಹ ಮಾರುಕಟ್ಟೆ ಆರ್ಥಿಕತೆಯ ಒಂದು ಭಾಗವಾಗಿ ತಮ್ಮ ವೃತ್ತಿಪರತೆಯನ್ನೂ ಕಳೆದುಕೊಂಡು, ನಿಷ್ಕ್ರಿಯವಾಗುತ್ತಿರುವ ಸಂದರ್ಭದಲ್ಲಿ, ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಬಿಬಿಸಿ ಸಾಕ್ಷ್ಯಚಿತ್ರ ಒಂದು ಪಿತೂರಿಯೇ ಆಗಿದ್ದಲ್ಲಿ ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿ,  ಸಂಸ್ಥೆಯ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಅಂಗಳದಲ್ಲಿ ಕ್ರಮ ಜರುಗಿಸಲು ಭಾರತಕ್ಕೆ ಅಧಿಕಾರವಿದೆ. ಹಾಗೆಯೇ ಆಂತರಿಕವಾಗಿ ಬಿಬಿಸಿಯನ್ನೂ ಒಳಗೊಂಡಂತೆ, ಸ್ವತಂತ್ರ ಹಾಗೂ ಸ್ವಾಯತ್ತ ಮಾಧ್ಯಮದ ಅಭಿಪ್ರಾಯ ಸ್ವಾತಂತ್ರ್ಯವನ್ನು, ವೃತ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಸರ್ಕಾರಗಳು ಈ ಜವಾಬ್ದಾರಿಯನ್ನು ಮನಗಾಣಬೇಕಿದೆ.

Tags: ನರೇಂದ್ರ ಮೋದಿಬಿಜೆಪಿ
Previous Post

ಭಾರತ ವಿರೋಧಿಗಳು ಸುಪ್ರೀಂ ಕೋರ್ಟ್‌ಅನ್ನು ಉಪಕರಣದಂತೆ ಬಳಸುತ್ತಿದ್ದಾರೆ: RSS ಸಂಯೋಜಿತ ವಾರಪತ್ರಿಕೆ

Next Post

ಮಂಡ್ಯದಲ್ಲಿ ಇರೋ ಒಂದು ಸ್ಥಾನವನ್ನು ಕಳೆದುಕೊಳ್ಳುತ್ತಾ ಕೇಸರಿ..?

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಮಂಡ್ಯದಲ್ಲಿ ಇರೋ ಒಂದು ಸ್ಥಾನವನ್ನು ಕಳೆದುಕೊಳ್ಳುತ್ತಾ ಕೇಸರಿ..?

ಮಂಡ್ಯದಲ್ಲಿ ಇರೋ ಒಂದು ಸ್ಥಾನವನ್ನು ಕಳೆದುಕೊಳ್ಳುತ್ತಾ ಕೇಸರಿ..?

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada