ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಲ್ಗ್ರಾಮ್‌ನ ಶಿವ ದೇವಾಲಯದಲ್ಲಿ ಮಾಂಸವನ್ನು ಎಸೆದ ಪ್ರಕರಣಕ್ಕೀಗ ದೊಡ್ಡ ತಿರುವು ಸಿಕ್ಕಿದೆ. ದೇವಸ್ಥಾನದಲ್ಲಿ ಮಾಂಸದ ತುಣುಕುಗಳು ಕಂಡು ಬಂದ ಬಳಿಕ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು. ನಿರ್ದಿಷ್ಟ ಸಮುದಾಯದವರ ಅಂಗಡಿಗಳ ಮೇಲೆ ದಾಳಿಯೂ ನಡೆದಿತ್ತು ಎಂದು ಡಿಎನ್‌ಎ ಇಂಡಿಯಾ ವರದಿ ಮಾಡಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಚಂಚಲ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಈತ ಮಾಂಸ ಎಸೆಯಲು ಕಸಾಯಿ ಖಾನೆಯ ವ್ಯಕ್ತಿಯೊಬ್ಬನಿಗೆ 10,000 ರುಪಾಯಿಯನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಮೇಲಿದ್ದ ಹಗೆತನಕ್ಕೆ ಈ ಕೃತ್ಯ!
ಬಂಧಿತ ವ್ಯಕ್ತಿ ಚಂಚಲ್ ತ್ರಿಪಾಠಿ ಮಾಂಸ ದೇವಾಲಯಕ್ಕೆ ಹಾಕಲು ನೀಡಿದ ಕಾರಣ ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಹರಿ ಶ್ಯಾಮ್ ಸಿಂಗ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ತ್ರಿಪಾಠಿ ಊರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಭಂಗದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಅಧಿಕಾರಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಯೋಜನೆ ಹಾಕಿಕೊಂಡಿದ್ದು ಈ ಎಲ್ಲಾ ದುಷ್ಕೃತ್ಯ ನಡೆಸಿದ್ದಾನೆ.
![](https://pratidhvani.com/wp-content/uploads/2022/08/1266617-kannoj-mandir.jpg)
ಪರಿಣಾಮ ಒಂದು ಸಮುದಾಯದವರ ಅಂಗಡಿ ನಾಶಗೊಂಡಿದ್ದು, ಮಾಂಸ ಎಸೆದಿದ್ದ ಮನ್ಸೂರ್ ಕಸಾಯಿ ಸೇರಿದಂತೆ ಇತರೆ 17 ಮಂದಿ ಬಂಧನಕ್ಕೂ ಒಳಗಾಗಿದ್ದಾರೆ.
ಘಟನೆಯ ಬಳಿಕ, ಆಡಳಿತವು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಮಿಶ್ರಾ, ಪೊಲೀಸ್ ಅಧೀಕ್ಷಕ ರಾಜೇಶ್ ಶ್ರೀವಾಸ್ತವ ಮತ್ತು ತಾಲ್ಗ್ರಾಮ್ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ವರ್ಗಾವಣೆ ಮಾಡಿದ್ದರಿಂದ ತ್ರಿಪಾಠಿಯು ತನ್ನ ಪಿತೂರಿಯಲ್ಲಿ ಯಶಸ್ವಿಯಾಗಿದ್ದರೂ, ಪ್ರಕರಣದ ಸತ್ಯಾಂಶವನ್ನು ಬೇಧಿಸಿದ ಪೊಲೀಸರು ತ್ರಿಪಾಠಿಯನ್ನು ಬಂಧಿಸಿ ಒಳ ಹಾಕಿದ್ದಾರೆ.