ಅಲ್ಲದೆ ಅಂತರ್ಜಾತಿ ಮತ್ತು ಅಂತರ್-ಧರ್ಮೀಯ ವಿವಾಹಗಳು ಸಾವಿಗೆ ಕಾರಣವಾಗುವ ಈ ದೇಶದಲ್ಲಿ, ಅಂತಹ ಕಾನೂನುಗಳನ್ನು ಪೋಷಕರು ಹೆಚ್ಚಾಗಿ ಹೀಗೆ ವಿವಾಹವಾಗಬಯಸುವ ಮಕ್ಕಳ ವಿರುದ್ಧ ಬಳಸುವ ಸಂಭವವೂ ಇದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಮದುವೆಯ ಈ ಹೊಸ ಕಾನೂನು ಅಪರಾಧದ ಜಾಲವನ್ನು ವ್ಯಾಪಕವಾಗಿ ಬಿತ್ತರಿಸಬಹುದು ಎಂಬ ಆತಂಕವೂ ಇದೆ. ಆದ್ದರಿಂದ, ಈ ಹೊಸ ಕಾನೂನುಬದ್ಧ
ಈ ವಾರ ನರೇಂದ್ರ ಮೋದಿ ಸರ್ಕಾರವು ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆಯನ್ನು ಪರಿಚಯಿಸಿ “ಮಹಿಳೆಯರು ತಮ್ಮ ದೈಹಿಕ, ಮಾನಸಿಕ ಮತ್ತು ಸಂತಾನೋತ್ಪತ್ತಿ, ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುವ ಕ್ರಮವಾಗಿ” ಇದನ್ನು ಮಂಡಿಸಲಾಗಿದೆ ಎಂದಿದೆ. ಈ ಮಸೂದೆಯ ಪ್ರಕಾರ ಮಹಿಳೆಯರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸಲಾಗಿದೆ. ಇದರಿಂದಾಗಿ ಪುರುಷ ಮತ್ತು ಮಹಿಳೆಯರಿಬ್ಬರ ವಿವಾಹದ ವಯಸ್ಸು ಏಕರೂಪವಾದಂತಾಗಿದೆ.
ಇದೊಂದು ಅತ್ಯಂತ ಪ್ರಗತಿಪರ ಮಸೂದೆಯೆಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರವು ಏಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ. ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ, ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯಿದೆ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯಿದೆ, ವಿಶೇಷ ವಿವಾಹ ಕಾಯಿದೆ, ಹಿಂದೂ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆ. ಇದರೊಂದಿಗೆ, ಯಾವುದೇ ಕಾನೂನು, ಪದ್ಧತಿ ಅಥವಾ ಆಚರಣೆಯನ್ನು ಲೆಕ್ಕಿಸದೆ, ಧರ್ಮಗಳಾದ್ಯಂತ ಏಕರೂಪದ ಮದುವೆಯ ವಯಸ್ಸನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದೀಗ ಹಲವು ವಿರೋಧ ಪಕ್ಷದ ನಾಯಕರ ಗದ್ದಲದ ನಂತರ ಮಸೂದೆಯನ್ನು ಸ್ಥಾಯಿ ಸಮಿತಿಗೆ ಸಲ್ಲಿಸಲಾಗಿದೆ.
ಮಸೂದೆಯ ಸುತ್ತಲಿನ ಚರ್ಚೆಗಳಲ್ಲಿ ಪ್ರಮುಖವಾಗಿ ಇದು ಮಹಿಳೆಯರಿಗೆ ಅಧಿಕಾರ ನೀಡುವ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ನ್ಯಾಯಯುತವಾಗಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.
ಬಾಲ್ಯವಿವಾಹಗಳನ್ನು ಕಾನೂನುಬಾಹಿರಗೊಳಿಸಲು ಮತ್ತು ಅಪ್ರಾಪ್ತರ ಮೇಲಿನ ದೌರ್ಜನ್ಯವನ್ನು ತಡೆಯಲು ಮೂಲಭೂತವಾಗಿ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗುತ್ತದೆ. ಭಾರತದಲ್ಲಿ ಮದುವೆಯಾಗಲಿರುವ ಕಾನೂನುಬದ್ಧ ವಯಸ್ಸನ್ನು ಕಾಲ ಕ್ರಮೇಣ ಏರಿಸಲಾಗಿದೆ. 1929 ರಲ್ಲಿ ಮೊದಲಬಾರಿಗೆ ಈ ಕಾನೂನನ್ನು ಅಂಗೀಕರಿಸಿದಾಗ, ಮದುವೆಯಾಗಲು ಕಾನೂನುಬದ್ಧ ವಯಸ್ಸನ್ನು ಹುಡುಗಿಯರಿಗೆ 14 ವರ್ಷಗಳು ಮತ್ತು ಹುಡುಗರಿಗೆ 18 ವರ್ಷಗಳು ಎಂದು ನಿಗದಿಪಡಿಸಲಾಯಿತು. ಇದನ್ನು ನಂತರ 15 ವರ್ಷಗಳಿಗೆ ಮತ್ತು ನಂತರ 1978 ರಲ್ಲಿ ಹುಡುಗಿಯರಿಗೆ 18 ವರ್ಷಗಳಿಗೆ ಮತ್ತು ಹುಡುಗರಿಗೆ 21 ವರ್ಷಗಳಿಗೆ ಹೆಚ್ಚಿಸಲಾಯಿತು.
ಈ ಮದುವೆಯ ವಯಸ್ಸಿನ ವ್ಯತ್ಯಾಸವು ಮಹಿಳೆಯರು ಪುರುಷರಿಗಿಂತ ಮೊದಲೇ ಪ್ರಬುದ್ಧರಾಗುತ್ತಾರೆ ಮತ್ತು ಆದ್ದರಿಂದ ಮದುವೆಯ ವಯಸ್ಸು ಕಡಿಮೆ ಇರಬೇಕು ಎನ್ನುವ ತೆಳು ಗ್ರಹಿಕೆಯಿಂದ ಹುಟ್ಟಿಕೊಂಡಿತ್ತು. ಸುಧಾರಿತ ತಿಳುವಳಿಕೆಯೊಂದಿಗೆ, ಮದುವೆಗೆ ಸಮಾನ ವಯಸ್ಸಿನ ಕೂಗು ಬೆಳೆಯಿತು. ಅಲ್ಲದೆ ಈ ವಯಸ್ಸಿನ ವ್ಯತ್ಯಾಸವು ಹಲವಾರು ಇತರ ವೈಪರೀತ್ಯಗಳನ್ನು ಸಹ ಸೃಷ್ಟಿಸಿತು. ಉದಾಹರಣೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನು ಪುರುಷ ಅಥವಾ ಮಹಿಳೆ ಮದುವೆಯ ವಯಸ್ಸಿನ ಎರಡು ವರ್ಷಗಳೊಳಗೆ ವಿವಾಹದ ಬಗ್ಗೆ ಪ್ರಶ್ನೆಗಳನ್ನೆತ್ತಿದರೆ ಬಾಲ್ಯವಿವಾಹವನ್ನು ಅನೂರ್ಜಿತ ಎಂದು ಘೋಷಿಸಲು ಅನುಮತಿಸುತ್ತದೆ. ಅಂದರೆ ಪುರುಷನು ತನ್ನ 23 ವರ್ಷ ವಯಸ್ಸಿನವರೆಗೆ ಅಂತಹ ಅರ್ಜಿಯನ್ನು ಸಲ್ಲಿಸಬಹುದಾದರೆ, ಮಹಿಳೆ 20 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹಾಗಾಗಿ 2004ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಮಹಿಳೆಯರು ಮತ್ತು ಪುರುಷರಿಬ್ಬರಿಗೂ 18 ವರ್ಷಗಳ ಸಾಮಾನ್ಯ ವಯಸ್ಸನ್ನು ಪ್ರಸ್ತಾಪಿಸುವ ಅಭಿಪ್ರಾಯಗಳನ್ನು ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.
ಫೆಬ್ರವರಿ 2008 ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ 205 ನೇ ಭಾರತದ ಕಾನೂನು ಆಯೋಗದ ವರದಿಯು 18 ವರ್ಷಗಳ ಮದುವೆಯ ಏಕರೂಪದ ವಯಸ್ಸನ್ನು ದೃಢವಾಗಿ ಶಿಫಾರಸು ಮಾಡಿ “ಹುಡುಗ ಮತ್ತು ಹುಡುಗಿಯರ ವಯಸ್ಸು ವಿಭಿನ್ನವಾಗಿರಲು ಯಾವುದೇ ವೈಜ್ಞಾನಿಕ ಕಾರಣವಿಲ್ಲ” ಎಂದು ಹೇಳಿತು. ಆ ನಂತರ 2018 ರ ಆಗಸ್ಟ್‌ನಲ್ಲಿ ಸಮಾಲೋಚನಾ ಪತ್ರ ಬರೆದ ಕಾನೂನು ಆಯೋಗವು 18 ವರ್ಷಗಳನ್ನು ಮದುವೆಗೆ ಏಕರೂಪದ ವಯಸ್ಸಾಗಿ ನಿಗದಿಪಡಿಸಬೇಕು ಎಂದು ಹೇಳಿತ್ತು.
ಹೀಗಾಗಿಯೇ ಪುರುಷ ಮತ್ತು ಮಹಿಳೆಯರಿಗೆ ಮದುವೆಯ ವಯಸ್ಸಿನಲ್ಲಿ ಏಕರೂಪತೆಯನ್ನು ತರುವ ಕ್ರಮವನ್ನು ಹಲವು ತಜ್ಞರು ಶ್ಲಾಘಿಸಿದ್ದಾರೆ, ಆದರೆ ಮಹಿಳೆಯರ ವಯಸ್ಸನ್ನು 18 ವರ್ಷಕ್ಕೆ ನಿಗದಿಪಡಿಸುವ ಬದಲು 21 ವರ್ಷಕ್ಕೆ ಹೆಚ್ಚಿಸುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.
“ಮಹಿಳೆಯರ ಸಮಸ್ಯೆಗಳನ್ನು ಸಮಗ್ರ ರೀತಿಯಲ್ಲಿ ಪರಿಹರಿಸಲು ಈ ಕಾನೂನು ಪ್ರಯತ್ನಿಸುತ್ತದೆ. ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕ್ರಮವಾಗಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಲಿದೆ” ಎನ್ನುತ್ತದೆ ಸರ್ಕಾರ. ಮಹಿಳೆಯರ ಮದುವೆಯ ವಯಸ್ಸಿನ ಹೆಚ್ಚಳದ ವಾದಗಳು ಗರ್ಭಾವಸ್ಥೆಯಲ್ಲಿನ ಅಪಾಯಗಳನ್ನು ಕಡಿಮೆ ಮಾಡುವುದರ ಸುತ್ತಲೇ ಸುತ್ತುತ್ತವೆ.
ಆದರೆ, ತಜ್ಞರು ಬೇರೆಯದೇ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದು ಸಾಮಾಜಿಕ ಕಳಂಕ, ಹೆಚ್ಚುತ್ತಿರುವ ವರದಕ್ಷಿಣೆ, ಕಡು ಬಡತನ ಮತ್ತು ಸ್ತ್ರೀ ಶಿಕ್ಷಣದ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಈವರೆಗೆ ಕಾನೂನು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-2021) ಪ್ರಕಾರ, 20-24 ವರ್ಷ ವಯಸ್ಸಿನ 23.3% ಮಹಿಳೆಯರು 18 ಕ್ಕಿಂತ ಮೊದಲು ವಿವಾಹವಾಗಿದ್ದಾರೆ. ಆದ್ದರಿಂದ ತಳಮಟ್ಟದ ಪರಿಹಾರದ ಅಗತ್ಯವಿರುವ ಬಹುಪದರದ ಸಮಸ್ಯೆಗೆ ವಯಸ್ಸಿನ ಹೆಚ್ಚಳವೆನ್ನುವುದು ತ್ವರಿತ ಪರಿಹಾರವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.
ಅಲ್ಲದೆ ಅಂತರ್ಜಾತಿ ಮತ್ತು ಅಂತರ್-ಧರ್ಮೀಯ ವಿವಾಹಗಳು ಸಾವಿಗೆ ಕಾರಣವಾಗುವ ಈ ದೇಶದಲ್ಲಿ, ಅಂತಹ ಕಾನೂನುಗಳನ್ನು ಪೋಷಕರು ಹೆಚ್ಚಾಗಿ ಹೀಗೆ ವಿವಾಹವಾಗಬಯಸುವ ಮಕ್ಕಳ ವಿರುದ್ಧ ಬಳಸುವ ಸಂಭವವೂ ಇದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಮದುವೆಯ ಈ ಹೊಸ ಕಾನೂನು ಅಪರಾಧದ ಜಾಲವನ್ನು ವ್ಯಾಪಕವಾಗಿ ಬಿತ್ತರಿಸಬಹುದು ಎಂಬ ಆತಂಕವೂ ಇದೆ. ಆದ್ದರಿಂದ, ಈ ಹೊಸ ಕಾನೂನುಬದ್ಧ ವಿವಾಹದ ವಯಸ್ಸು ಅದು ಸಾಧಿಸಲು ಉದ್ದೇಶಿಸಿರುವ ಯಾವುದೇ ಮಹತ್ವಾಕಾಂಕ್ಷೆಯ ಬದಲಾವಣೆಗಳನ್ನು ತರುತ್ತದೆಯೇ ಅಥವಾ 21 ವರ್ಷ ಅನ್ನುವುದು ಪರಿಹರಿಸಲು ಸಾಧ್ಯವಾಗದ ಮತ್ತೊಂದು ಸಮಸ್ಯೆಯ ಗಂಟಾಗಿ ಉಳಿದು ಬಿಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.