ಸಾಮಾಜಿಕ ಬದ್ಧತೆ, ಜನಪರ ಕಾಳಜಿ ಮತ್ತು ದನಿಯಿಲ್ಲದವರ ದನಿ ಎಂಬುದು ಒಂದು ಕಾಲದಲ್ಲಿ ಪತ್ರಿಕಾವೃತ್ತಿಯ ಚಹರೆಗಳೇ ಆಗಿದ್ದವು. ಆದರೆ, ಈಗ ಪತ್ರಕರ್ತರಿಗೂ ಆ ಮೌಲ್ಯಗಳಿಗೂ ಏನು ಸಂಬಂಧ ಎಂದು ಸ್ವತಃ ಪತ್ರಕರ್ತರೇ ಕೇಳುವ ಮಟ್ಟಿಗೆ ಪತ್ರಿಕಾ ರಂಗ ಬದಲಾಗಿದೆ.
ಇಂತಹ ವಿಪರ್ಯಾಸದ ಹೊತ್ತಲ್ಲೂ ಸಾಮಾಜಿಕ ಬದ್ಧತೆ ಮತ್ತು ಜನಪರ ಕಾಳಜಿಯನ್ನೇ ಉಸಿರಾಡುತ್ತಿರುವ, ಅದರಿಂದಾಗಿಯೇ ಎಲ್ಲ ವ್ಯತಿರಿಕ್ತ ಪರಿಸ್ಥಿತಿಗಳ ನಡುವೆಯೂ ಪತ್ರಿಕಾ ವೃತ್ತಿಗೆ ಅಂಟಿಕೊಂಡಿರುವ ಪತ್ರಕರ್ತರ ಸಣ್ಣ ಗುಂಪೊಂದು ಅಲ್ಲಲ್ಲಿ ಚದುರಿದಂತಿದೆ. ಹಾಗೇ ವಿರಳರಲ್ಲಿ ವಿರಳರಾಗಿ ಇದ್ದವರು ‘ಪ್ರತಿಧ್ವನಿ’ ಬಳಗಕ್ಕೆ ಇತ್ತೀಚೆಗೆ ತಾನೆ ಸೇರಿಕೊಂಡಿದ್ದ ಪಿ ಕೆ ಮಲ್ಲನಗೌಡರ್.
ಅಪರೂಪದ ಜನಪರ ಕಾಳಜಿ, ದಲಿತರು, ದಮನಿತರ ಪರ ಇನ್ನಿಲ್ಲದ ಕಕ್ಕುಲತೆ, ಪಟ್ಟಭದ್ರ ವ್ಯವಸ್ಥೆಯ ವಿರುದ್ಧ ಆಕ್ರೋಶ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಪರ ಅಪಾರ ಒಲವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಮಾಣಿಕತೆ. ಇದು ಗೌಡರ ವ್ಯಕ್ತಿತ್ವದ ಒಂದು ಮುಖ. ಹಾಗೇ ವರದಿಗಾರಿಕೆ, ವಿಶ್ಲೇಷಣೆಗಳ ವಿಷಯದಲ್ಲಿ ಗೌಡರಿಗೆ ತಮ್ಮದೇ ಆದ ಒಂದು ದಾಟಿ ಸಿದ್ಧಿಸಿತ್ತು. ಒಂದು ವಿಷಯವನ್ನು ಕೈಗೆತ್ತಿಕೊಂಡರೆ ಅದರ ಎಲ್ಲಾ ಆಯಾಮವನ್ನು ಶೋಧಿಸಿ, ಹಲವು ತಜ್ಞರು, ಅನುಭವಿಗಳ ಅಭಿಪ್ರಾಯ ಮತ್ತು ಮಾಹಿತಿ ಸಂಗ್ರಹಿಸಿ ಒಂದು ಪರಿಪೂರ್ಣ ವರದಿಯನ್ನು ಸಂಪಾದಕರ ಮುಂದಿಡುವ ವೃತ್ತಿಪರತೆ ಇತ್ತು. ವೃತ್ತಿಬದುಕಿನ ಕೌಶಲಗಳನ್ನು ಜನರ ದನಿಯಾಗಿ ಬಳಸುವ ಬದಲು ದಂಧೆಯಾಗಿ, ದುಡ್ಡು ಮಾಡುವ ಅಸ್ತ್ರವಾಗಿ ಬಳಸುವ ಚಾಣಾಕ್ಷಮತಿ ಪತ್ರಕರ್ತರ ನಡುವೆ ಗೌಡರ ಈ ವೃತ್ತಿಬದ್ದತೆಯ ಜೊತೆಗೆ ಇದ್ದ ಪ್ರಾಮಾಣಿಕತೆ ಮತ್ತು ಬದ್ಧತೆ ಬೆಲೆ ಕಟ್ಟಲಾಗದ್ದು.
ವಿದ್ಯಾರ್ಥಿ ದಿಸೆಯಲ್ಲಿಯೇ ಪ್ರತಿಭಾವಂತರಾಗಿದ್ದ ಗೌಡರು, ಎಂಜಿಯರಿಂಗ್ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಾಸು ಮಾಡಿದ್ದರು. ಆ ವೇಳೆಯೇ ತಮ್ಮ ಜನಪರ ಕಾಳಜಿಯ ಕಾರಣಕ್ಕೆ ಯಾರಿಗೋ ನೆರವಾಗಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಬಳಿಕ ಪತ್ರಿಕಾರಂಗಕ್ಕೆ ಕಾಲಿಟ್ಟಿದ್ದರು. ಲಂಕೇಶ್ ಪತ್ರಿಕೆ, ವಿಕ್ರಾಂತ ಕರ್ನಾಟಕ, ನಾನೂ ಗೌರಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದ ಗೌಡರು, ಜನಪರ ವರದಿಗಾರಿಕೆ ಮತ್ತು ವಿಶ್ಲೇಷಣೆಗಳ ಮೂಲಕ ಪತ್ರಿಕಾರಂಗದಲ್ಲಿ ಗುರುತಿಸಿಕೊಂಡಿದ್ದರು. ಗೌರಿ ಲಂಕೇಶ್, ರವೀಂದ್ರ ರೇಷ್ಮೆ ಅವರಂಥ ಘಟಾನುಘಟಿ ಪತ್ರಕರ್ತರ ಜೊತೆ ಗೌಡರು ಪಳಗಿದ್ದರು.
ಕಳೆದ ಕೆಲವು ತಿಂಗಳಿಂದ ಪ್ರತಿಧ್ವನಿಯ ಭಾಗವಾಗಿದ್ದ ಅವರು, ಆರಂಭದಲ್ಲಿ ತಮ್ಮ ಮೂಲ ಊರು ಗದಗದಿಂದಲೇ ವರದಿ ಮತ್ತು ವಿಶ್ಲೇಷಣೆ ಮಾಡುತ್ತಿದ್ದರು. ಉತ್ತರಕರ್ನಾಟಕದ ರಾಜಕಾರಣ, ಸಾಮಾಜಿಕ ಬದುಕಿನ ಕುರಿತ ಅವರ ಹಲವು ವರದಿಗಳು ಗಮನ ಸೆಳೆದಿದ್ದವು. ಬಳಿಕ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಬಳಿಕ ಕೂಡ ರಾಜ್ಯದ ಗಮನ ಸೆಳೆಯುವ ಹಲವು ವರದಿ ಮತ್ತು ವಿಶ್ಲೇಷಣೆಗಳನ್ನು ಮಾಡಿದ್ದರು. ಮುಖ್ಯವಾಗಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾದ ಸರ್ಕಾರದ ಕ್ರಮವನ್ನು ವಿರೋಧಿಸಿದ ಮಠಾಧೀಶರ ಧೋರಣೆ ಕುರಿತ ವಿಶ್ಲೇಷಣೆ, ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರ ಅವರು ಆರ್ ಎಸ್ ಎಸ್ ಮುಖ್ಯಸ್ಥರಿಗೆ ಬರೆದ ಪತ್ರ ವಿವಾದದ ಕುರಿತ ಗೌಡರ ವರದಿಗಳು ಸಂಚಲನ ಸೃಷ್ಟಿಸಿದ್ದವು.

ನಿಜವಾಗಿಯೂ ಒಬ್ಬ ಪತ್ರಕರ್ತನಿಗೆ ಇರಬೇಕಾದ ಅರ್ಹತೆ ಮತ್ತು ಮೌಲ್ಯಗಳಿಗೆ ಮಾದರಿಯಂತಿದ್ದ ಮಲ್ಲನಗೌಡರು, ಪ್ರತಿಧ್ವನಿಯ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಂತಿದ್ದರು. ಅಂತಹ ಗೌಡರು ಇದೀಗ ಇದ್ದಕ್ಕಿದ್ದಂತೆ ಎದ್ದು ಹೊರಟುಹೋಗಿದ್ದಾರೆ. ಅವರ ಅಕಾಲಿಕ ಅಗಲಿಕೆ ಆಘಾತ ತಂದಿದೆ. ಅವರ ಈ ಆಘಾತಕಾರಿ ಅಗಲಿಕೆ ಕೇವಲ ‘ಪ್ರತಿಧ್ವನಿ’ ಸುದ್ದಿಜಾಲತಾಣಕ್ಕೆ ಮಾತ್ರವಲ್ಲ; ಕನ್ನಡ ಪತ್ರಿಕಾರಂಗಕ್ಕೂ ತುಂಬಲಾರದ ನಷ್ಟವೇ(ಈ ಮಾತು ಕ್ಲೀಷೆ ಎನಿಸಿದರೂ, ಅದುವೇ ನಿಜ!).
ಹೀಗೆ ನಮ್ಮನ್ನು ಬಿಟ್ಟು ಅಕಾಲಿಕವಾಗಿ ಅಗಲಿದ ಮಲ್ಲನಗೌಡರಿಗೆ ‘ಪ್ರತಿಧ್ವನಿ’ ತಂಡದ ಕಂಬನಿ ತುಂಬಿದ ವಿದಾಯ. ಆತ್ಮ, ಪುನರ್ ಜನ್ಮದಲ್ಲಿ ನಂಬಿಕೆ ಇರದ ಗೌಡರಿಗೆ, ಅವರ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಗಳು ನಮ್ಮ ನಡುವೆ ಬಹುಕಾಲ ಇರುತ್ತವೆ. ಅದೇ ನಾವು ಅವರಿಗೆ ಸಲ್ಲಿಸುವ ದೊಡ್ಡ ಗೌವರ ಎಂದಷ್ಟೇ ಹೇಳಬಹುದು.
ಶ್ರದ್ದಾಂಜಲಿಗಳು ಸಾಮಾಜಿಕ ಬದ್ಧತೆಯನ್ನೇ ಬದುಕಿನ ಅಪರೂಪದ ಪತ್ರಕರ್ತ ಮಲ್ಲನಗೌಡರಿಗೆ..