ಹಿರೇಕೇರೂರು ಬಿಜೆಪಿ ಮಾಜಿ ಶಾಸಕ ಯು ಬಿ ಬಣಕಾರ್, ಬಿಜಾಪುರದ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಗಿಯ ಜೆಡಿಎಸ್ ಮುಖಂಡ ಡಾ. ಎನ್ ಟಿ ಶ್ರೀನಿವಾಸ್ ತಮ್ಮ ಅಪಾರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ನಾಯಕತ್ವವನ್ನು ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಹಾಗೂ ಇತರ ನಾಯಕರು ಪಕ್ಷದ ಬಾವುಟ ಹಾಗೂ ಶಾಲು ನೀಡಿ ಈ ನಾಯಕರು ಹಾಗೂ ಅವರ ಬೆಂಬಲಿಗರನ್ನು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡರು.
ಡಿ.ಕೆ.ಶಿವಕುಮಾರ್
ಬಹಳ ಜನ ಕಾಂಗ್ರೆಸ್ ಖಾಲಿಯಾಗಿರುವ ಮನೆ. ಅಲ್ಲಿಗೆ ಯಾರು ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಕರೆಯುತ್ತಿದ್ದಾರೆ ಎಂದು ಕೆಲವು ಸ್ನೇಹಿತರು ಮಾತನಾಡುತ್ತಿದ್ದಾರೆ.
ನಮ್ಮ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಇದನ್ನು ಒಂದೇ ಬಾರಿ ಬಿಡುಗಡೆ ಮಾಡುವುದಿಲ್ಲ. ಇಂದು ಶುಭ ಮುಹೂರ್ತ, ಶುಭ ಗಳಿಗೆಯಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಹಿರೇಕೆರೂರಿನ ಮಾಜಿ ಶಾಸಕರಾದ ಯು.ಬಿ ಬಣಕಾರ್ ಅವರು ಬಹಳ ದಿನದಿಂದ ಪಕ್ಷ ಸೇರ್ಪಡೆಯಾಗ ಬೇಕಿತ್ತು. ಅವರ ತಂದೆ ಕೂಡ ಜನರ ಸೇವೆ ಮಾಡಿದ್ದು, ಇಂದು ಅವರ ಮಗ ಬಿಜೆಪಿಯಲ್ಲಿ ಅಧಿಕಾರ ತ್ಯಾಗ ಮಾಡಿ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಗೆ ಅರ್ಜಿ ಹಾಕಿದ್ದರು.

ನಾನು ಪಕ್ಷದ ಹಿರಿಯ ನಾಯಕರು ಹಾಗೂ ಕೋಳಿವಾಡ ಅವರು, ಡಿ.ಆರ್. ಪಾಟೀಲ್ ಸೇರಿದಂತೆ ಆ ಭಾಗದ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿದ್ದೇನೆ. ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಇವರ ಸೇರ್ಪಡೆಗೆ ಒಮ್ಮತದ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಅವರಿಗೆ ತುಂಬು ಹೃದಯದ ಸ್ವಾಗತ ಬಯಸುತ್ತೇನೆ. ಬಣಕಾರ್ ಅವರ ಜತೆ ಮಂಜಣ್ಣ, ಶಿವರಾಜ್ ಹರಿಜನ್, ಮಹೇಂದ್ರ, ಹೇಮಣ್ಣ, ಷನ್ಮುಗಯ್ಯ ಅವರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ.
ಈ ನಾಯಕರೆಲ್ಲರೂ ಪಕ್ಷದ ಸಿದ್ಧಾಂತ ಒಪ್ಪಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಒಪ್ಪಿ, ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷ ಸಿದ್ಧಾಂತ, ನಾಯಕತ್ವ ನಂಬಿ ಬಿಜೆಪಿ, ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಬಣಕಾರ್ ಅವರು ಬಿಜೆಪಿ ತೊರೆದು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರನ್ನು ಸ್ವಾಗತಿಸಿ ಶುಭವಾಗಲಿ ಎಂದು ಹಾರೈಸುತ್ತೇನೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಆಪರೇಶನ್ ಕಮಲ ಮೂಲಕ ಶಾಸಕರಿಗೆ ಕೋಟ್ಯಂತರ ರೂಪಾಯಿ ಕೊಟ್ಟು ಪಕ್ಷಕ್ಕೆ ಕರೆದುಕೊಂಡು ಅಧಿಕಾರ ಹಿಡಿದರು. ಮೂರು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ ಲೂಟಿ ಹೊಡೆಯುವುದು ಸುಳ್ಳು ಹೇಳುವುದು ಇವರ ಸಾಧನೆ. ಈ ಸರ್ಕಾರವನ್ನು 40% ಸರ್ಕಾರ ಎಂದು ಹೆಸರು ಪಡೆದಿದೆ. ಹಣ ನೀಡದೆ ಈ ಸರ್ಕಾರದಲ್ಲಿ ಯಾವುದೇ ಕೆಲಸ, ನೇಮಕಾತಿ, ವರ್ಗಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಮಂತ್ರಿಗಳು ಲೂಟಿಗೆ ಇಳಿದಿದ್ದು, ರಾಜ್ಯ ಹಾಳು ಮಾಡುತ್ತಿದ್ದಾರೆ.
ಮತ್ತೊಂದೆಡೆ ದ್ವೇಷದ ರಾಜಕಾರಣ ಮಾಡಿ ಸಮಾಜದಲ್ಲಿ ಸಾಮರಸ್ಯ ನಾಶ ಮಾಡುತ್ತಿದ್ದಾರೆ. ಜನ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.
