—-ನಾ ದಿವಾಕರ—
ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ರಾಜಕೀಯವಾಗಿ ಪರಿಸ್ಥಿತಿಯ ಕೂಸು
ಸಮಾಜಮುಖಿಯಾಗಿ ಚಿಂತಿಸುವ ಯಾವುದೇ ವ್ಯಕ್ತಿಗಳು ತಾವು ಬದುಕಿದ ಸಮಾಜಕ್ಕೆ ಸಲ್ಲಿಸುವ ಸಾಹಿತ್ಯಕ, ಬೌದ್ಧಿಕ, ಸಾಂಸ್ಕೃತಿಕ ಅಥವಾ ರಾಜಕೀಯ ಸೇವೆಗಳಿಗೆ ಒಂದು ತಾತ್ವಿಕ ಆಯಾಮ-ಸ್ಪರ್ಶ ನೀಡಲು ಯತ್ನಿಸುತ್ತಾರೆ. ʼ ತಮ್ಮ ಅಗಲಿಕೆಯ ನಂತರ ಸಮಾಜ ಅಥವಾ ದೇಶ ತಮ್ಮನ್ನು ಹೇಗೆ ನೆನೆಯುತ್ತದೆ ʼ ಎಂಬ ಆತಂಕ ಹಾಗೂ ಕುತೂಹಲದ ನಡುವೆಯೇ , ಭವಿಷ್ಯದಲ್ಲಿ ಬಿಟ್ಟು ಹೋಗಬೇಕಾದ ಮಾರ್ಗದಲ್ಲಿ ವಿಶಾಲ ಸಮಾಜಕ್ಕೆ ಅಗತ್ಯ ಎನಿಸಿದ ಬೌದ್ಧಿಕ ಸರಕುಗಳನ್ನು ನೆಟ್ಟು ವಿರಮಿಸಲು ಇಚ್ಛಿಸುತ್ತಾರೆ. ʼ ಇತಿಹಾಸ ನಮ್ಮನ್ನು ಕ್ಷಮಿಸಲಾರದು,,, ʼ ಎಂಬ ತಾತ್ವಿಕ ಆತಂಕಗಳ ನಡುವೆಯೇ ಮೇಧಾವಿಗಳು, ವಿದ್ವಾಂಸರು ಹಾಗೂ ರಾಜಕೀಯದ ಧುರೀಣರು ವರ್ತಮಾನದ ಬೌದ್ಧಿಕ-ಭೌತಿಕ ಕ್ರಿಯೆಗಳಲ್ಲಿ ತೊಡಗಿರುತ್ತಾರೆ. ವರ್ತಮಾನದಲ್ಲಿ ಚರಿತ್ರೆಗೆ ಸೇರಿದ ಸಾರ್ವಜನಿಕ ವ್ಯಕ್ತಿತ್ವಗಳನ್ನು ಭವಿಷ್ಯದ ಸಮಾಜ ಹೇಗೆ ನೋಡುತ್ತದೆ ? ಈ ಜಿಜ್ಞಾಸೆಗೆ ಬಹುಆಯಾಮದ ಉತ್ತರಗಳು ಸಾಧ್ಯ.
ಚರಿತ್ರೆಗೆ ಸೇರಿದವರನ್ನು ಈ ರೀತಿಯ ವಿಮರ್ಶೆಗೊಳಪಡಿಸುವಾಗ ಸಹಜವಾಗಿಯೇ ವರ್ತಮಾನದ ಸಂದರ್ಭಗಳು ಮತ್ತು ವಾಸ್ತವ ಸ್ಥಿತಿಗತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ಇಲ್ಲಿ ಸಮಾಜಮುಖಿ ಅಥವಾ ಜನಮುಖಿ ಎಂದು ನಿರ್ವಚಿಸುವಾಗಲೇ ಯಾವ ಸಮಾಜ ಮಾತನಾಡುತ್ತಿದೆ ಎನ್ನುವುದು ಮುನ್ನಲೆಗೆ ಬರುತ್ತದೆ. ಭಾರತದಂತಹ ಜಾತಿ ಪೀಡಿತ ವರ್ಗ ಸಮಾಜದಲ್ಲಿ ಸಾರ್ವಜನಿಕ ಸಂಕಥನವನ್ನು ಪ್ರಧಾನವಾಗಿ ನಿರ್ದೇಶಿಸುವುದು ಜಾತಿ ಅಸ್ಮಿತೆ ಮತ್ತು ಅದನ್ನು ಮೀರಿದಂತಹ ವರ್ಗಪ್ರಜ್ಞೆ. ಸಾಮಾನ್ಯವಾಗಿ ಮಧ್ಯಮ ವರ್ಗ ಎಂದು ಪರಿಭಾವಿಸಲಾಗುವ ಒಂದು ಫಲಾನುಭವಿ ಹಿತವಲಯ ಸಂವಹನ ಜಗತ್ತಿನ ಎಲ್ಲ ಮಾರ್ಗಗಳನ್ನೂ ಆಕ್ರಮಿಸಿರುತ್ತದೆ. ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಇದನ್ನು ವಿದ್ಯುನ್ಮಾನ ಮಾಧ್ಯಮ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
ಮೇಲ್ಪದರ ಸಮಾಜದ ನಿರ್ವಚನೆಗಳು
ಈ ಸೀಮಿತ ವಲಯದ ಚಿಂತನಾಧಾರೆ ಅಥವಾ ಬೌದ್ಧಿಕ ನೆಲೆಯಲ್ಲೇ ನಿಷ್ಕರ್ಷೆಗೊಳಪಡುವ ಚಾರಿತ್ರಿಕ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸಾಧನೆಗಳು, ಸಹಜವಾಗಿಯೇ ತಳಮಟ್ಟದ ಸಮಾಜಕ್ಕೆ ಅಪ್ಯಾಯಮಾನವಾಗಿರುವುದು ಅಪರೂಪ. ಹಾಗೆಯೇ ತಳಸಮಾಜಕ್ಕೆ ಆಪ್ತವೆನಿಸುವ ವ್ಯಕ್ತಿತ್ವಗಳು ಮೇಲ್ಪದರದ ಸಮಾಜಕ್ಕೆ (Elite society) ಸೈದ್ದಾಂತಿಕ-ತಾತ್ವಿಕ ನೆಲೆಗಳಲ್ಲಿ ಅಪಥ್ಯವಾಗಿಬಿಡುತ್ತವೆ. ಆದರೆ ವರ್ತಮಾನ ಭಾರತದಲ್ಲಿರುವಂತಹ ಕಾರ್ಪೋರೇಟ್ ಮಾರುಕಟ್ಟೆ ವಾತಾವರಣದಲ್ಲಿ ಸಾರ್ವಜನಿಕ ಸಂಕಥನಗಳನ್ನು ಈ ಮೇಲ್ಪದರ ಸಮಾಜವೇ ನಿಯಂತ್ರಿಸುವುದರಿಂದ, ಸಹಜವಾಗಿ ಚರ್ಚೆಗೊಳಗಾಗಬೇಕಾದ ಅಭಿಪ್ರಾಯ ವಿಚಾರಗಳು ಸಾರ್ವತ್ರೀಕರಣಕ್ಕೊಳಗಾಗುತ್ತವೆ. ವ್ಯತಿರಿಕ್ತ ಎನಿಸಿಕೊಳ್ಳುವ ಭಿನ್ನ ಧ್ವನಿಗಳು ಎಷ್ಟೇ ಸತ್ವಯುತವಾಗಿದ್ದರೂ ಸಾರ್ವಜನಿಕವಾಗಿ ಕ್ಷೀಣ ದನಿಗಳಾಗಿಬಿಡುತ್ತವೆ.
ಇಂತಹ ಸನ್ನಿವೇಶದಲ್ಲೇ ಭಾರತ ತನ್ನ ಸಮಕಾಲೀನ ಇತಿಹಾಸದಲ್ಲಿ ಕಂಡ ಅಪ್ರತಿಮ ವಿದ್ವಾಂಸ, ಮೇಧಾವಿ, ಅರ್ಥಶಾಸ್ತ್ರಜ್ಞ , ಅರೆಮನಸ್ಕ ರಾಜಕಾರಣಿ ಹಾಗೂ ಈಗಿನ ರಾಜಕಾರಣದಲ್ಲಿ ಇಲ್ಲವೇ ಇಲ್ಲ ಎನ್ನಬಹುದಾದ ʼ ಸಜ್ಜನ-ಸಂಭಾವಿತ ʼವ್ಯಕ್ತಿತ್ವದ ಮನಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ವಿದಾಯ ಹೇಳಿದ್ದಾರೆ. ಔದ್ಯೋಗಿಕ ಕ್ರಾಂತಿಯ ನಾಲ್ಕನೆ ಹಂತ, ʼಡಿಜಿಟಲ್ ಯುಗ ʼದಲ್ಲಿ ದಾಪುಗಾಲು ಹಾಕುತ್ತಾ ವಿಕಸಿತ ಭಾರತ ಆಗುವತ್ತ ಸಾಗುತ್ತಿರುವ ನವ ಉದಾರವಾದಿ ಭಾರತದ ದೃಷ್ಟಿಯಲ್ಲಿ ಮಾಜಿ ಪ್ರಧಾನಿ ಸಿಂಗ್ ನವಯುಗದ ಹರಿಕಾರರಂತೆ ಕಾಣುತ್ತಾರೆ. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಆಧುನಿಕ ಭಾರತದ ಶಿಲ್ಪಿ ಎಂದು ಕರೆಯಲ್ಪಡುವಂತೆಯೇ ಮನಮೋಹನ್ ಸಿಂಗ್ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ನೆಲೆಯಲ್ಲಿ ನವಭಾರತ ಶಿಲ್ಪಿ ಎಂದೇ ಪರಿಗಣಿಸಲ್ಪಡುತ್ತಾರೆ.
ಆದರೆ ವಿಕಸಿತ ಭಾರತದಲ್ಲಿ ಹಸಿವೆ, ಬಡತನ, ನಿರುದ್ಯೋಗ, ನಿರ್ವಸತಿ ಸಮಸ್ಯೆಗಳನ್ನು ಎದುರಿಸುತ್ತಿರುವ ತಳಸಮಾಜದ ಕೋಟ್ಯಂತರ ಜನರ ದೃಷ್ಟಿಯಲ್ಲಿ ಈ ಶಿಲ್ಪಿ ಅನಾದರಣೀಯವಾಗಿ ಕಂಡರೆ ಅಚ್ಚರಿಯೇನಲ್ಲ. ಏಕೆಂದರೆ ನೆಹರೂ ಅನುಸರಿಸಿದ ಆಧುನಿಕ ಭಾರತದ ಕಲ್ಪನೆಗಳು, ವಸಾಹತು ದಾಸ್ಯದಿಂದ ತನ್ನ ಸಂಪತ್ತು ಸಂಪನ್ಮೂಲಗಳನ್ನು ಕಳೆದುಕೊಂಡಿದ್ದ ಸ್ವತಂತ್ರದ ದೇಶವೊಂದನ್ನು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲವರ್ಧನೆಗೊಳಿಸುವ ಉದಾತ್ತ ಚಿಂತನೆಯಿಂದ ಕೂಡಿದ್ದವು. ಗಾಂಧಿ ಪ್ರಣೀತ ಗ್ರಾಮೀಣ ಆರ್ಥಿಕತೆ ಮತ್ತು ಔದ್ಯೋಗೀಕರಣದ ನಡುವಿನ ತಾತ್ವಿಕ ಸಂಘರ್ಷದಲ್ಲಿ ನೆಹರೂ, ಉದಯಿಸುತ್ತಿರುವ ಭಾರತಕ್ಕೆ ಅತ್ಯವಶ್ಯವಾಗಿದ್ದ ಔದ್ಯೋಗೀಕರಣ, ಆಧುನಿಕತೆ, ವೈಜ್ಞಾನಿಕ ಅರಿವು ಮತ್ತು ವೈಚಾರಿಕ ಚಿಂತನಾವಾಹಿನಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಇದನ್ನು ಸಂಪೂರ್ಣ ತಲೆಕೆಳಗು ಮಾಡುವ ಹಾದಿಯ ನಿರ್ಮಾತೃ ದಿವಂಗತ ಮನಮೋಹನ್ ಸಿಂಗ್.
ಸಮಾಜವಾದ Vs ಬಂಡವಾಳಶಾಹಿ
ಸ್ವಾತಂತ್ರ್ಯಾನಂತರದ ನಾಲ್ಕು ದಶಕಗಳ ಅವಧಿಯಲ್ಲಿ ಭಾರತದ ಸಾಂವಿಧಾನಿಕ ಆಳ್ವಿಕೆಯು ಅನುಸರಿಸಿದ ಪ್ರಭುತ್ವ ಸಮಾಜವಾದಿ (State Socialism) ನೀತಿಗಳು ಸಮಾಜವಾದವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಲಿಲ್ಲ. ಬದಲಾಗಿ ಬಂಡವಾಳಶಾಹಿ ಆರ್ಥಿಕತೆಯನ್ನೂ ಸಮಾನಾಂತರವಾಗಿ ಪೋಷಿಸುವ ಮೂಲಕ ಸರ್ಕಾರಗಳು ಒಂದೆಡೆ ಬಂಡವಾಳ ಜಗತ್ತಿಗೆ ಪ್ರೋತ್ಸಾಹ ನೀಡುತ್ತಲೇ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿದ್ದ ಬಹುಸಂಖ್ಯಾತ ಜನತೆಯ ಜೀವನ ಮತ್ತು ಜೀವನೋಪಾಯ ಮಾರ್ಗಗಳನ್ನು ಸುಗಮಗೊಳಿಸಲು ಸಾರ್ವಜನಿಕ ವಲಯದ ಉದ್ಯಮಗಳಿಗೆ (Public sector Enterprises) ಉತ್ತೇಜನ ನೀಡಿದ್ದವು. 1960ರ ದಶಕದ ಆಹಾರ ಕೊರತೆ, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು 1970ರ ದಶಕದಲ್ಲಿ ಅನುಸರಿಸಿದ ಕಲ್ಯಾಣ ಆರ್ಥಿಕತೆಯ (Welfare Economics) ಯೋಜನೆಗಳೇ ರಾಜಕೀಯ ಸಂಕಥನದಲ್ಲಿ ಸಮಾಜವಾದಿ ಎನಿಸಿಕೊಂಡಿದ್ದು ವಾಸ್ತವ.
1980ರ ದಶಕದಿಂದಲೇ ಮಾರುಕಟ್ಟೆ ಆರ್ಥಿಕತೆಗೆ ತೆರೆದುಕೊಳ್ಳಲಾರಂಭಿಸಿದ್ದ ಭಾರತದ ಅರ್ಥವ್ಯವಸ್ಥೆ 90ರ ದಶಕದ ಆರಂಭದಲ್ಲಿ ಎದುರಿಸಿದ ಸವಾಲುಗಳು ಮತ್ತು ಜಟಿಲ ಸಮಸ್ಯೆಗಳು ವ್ಯವಸ್ಥೆಯ ಬಿಕ್ಕಟ್ಟು (Systemic Crisis) ಆಗಿತ್ತೇ ಹೊರತು ಭಾರತ ತಲುಪಿದ ಆರ್ಥಿಕ ದುಸ್ಥಿತಿಗೆ ಅರೆ-ಸಮಾಜವಾದಿ ನೀತಿಗಳೇ ಪ್ರಧಾನ ಕಾರಣವಾಗಿರಲಿಲ್ಲ. ಆದರೆ 1990ರ ಸೋವಿಯತ್ ಪತನದ ನಂತರದಲ್ಲಿ ಜಾಗತಿಕ ವಲಯದಲ್ಲಿ ಸಂಭವಿಸಿದ ಪಲ್ಲಟಗಳು ಮುಕ್ತ ಮಾರುಕಟ್ಟೆ ನೀತಿಗಳನ್ನು ಸಾರ್ವತ್ರೀಕರಿಸುವ ಚಿಮ್ಮು ಹಲಗೆಯಾಗಿ ಪರಿಣಮಿಸಿತ್ತು. ಆ ವೇಳೆಗಾಗಲೇ ಸೋವಿಯತ್ ಮಾದರಿಯ ಅಂತ್ಯಕ್ಕೆ ಜಾಗತಿಕ ಬಂಡವಾಳಶಾಹಿಯು ನೀಲನಕ್ಷೆಯನ್ನೂ ಸಿದ್ಧಪಡಿಸಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಮತ್ತು ವಿಶ್ವಬ್ಯಾಂಕ್ ( World Bank ) ಹಾಗೂ ವಿಶ್ವ ವ್ಯಾಪಾರ ಸಂಸ್ಥೆ (WTO) ,ಈ ತ್ರಿವಳಿ ಸಂಸ್ಥೆಗಳ ನಿರ್ದೇಶನದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಭಾರತವನ್ನೂ ಒಳಗೊಂಡಂತೆ ತೃತೀಯ ವಿಶ್ವದ ಬಹುತೇಕ ಸಮಾಜವಾದಿ ದೇಶಗಳನ್ನು ಬಂಡವಾಳಶಾಹಿ ಮುಕ್ತ ಮಾರುಕಟ್ಟೆಯೆಡೆಗೆ ಆಕರ್ಷಿಸಿತ್ತು.
ಈ ಸಂದಿಗ್ಧ ಪರಿಸ್ಥಿತಿಗಳಲ್ಲಿ ಭಾರತ ಎದುರಿಸಿದ ಆರ್ಥಿಕ ಮುಗ್ಗಟ್ಟು ಗಂಭೀರ ಸ್ವರೂಪ ಪಡೆದದ್ದು ವಾಸ್ತವ. 1980ರ ದಶಕದ ಉತ್ತರಾರ್ಧದಲ್ಲಿ ಭಾರತದಲ್ಲಿ ಉಗಮಿಸಿದ ಬಲಪಂಥೀಯ ರಾಜಕಾರಣಕ್ಕೆ ಪೂರಕವಾಗಿ ರಾಜೀವ್ ಗಾಂಧಿ ಸರ್ಕಾರವು ಅನುಸರಿಸಿದ ಆರ್ಥಿಕ ನೀತಿಗಳು ಬಂಡವಾಳಶಾಹಿಯ ಪ್ರಾಬಲ್ಯವನ್ನು ಮತ್ತಷ್ಟು ಬಿಗಿಗೊಳಿಸಿದ್ದನ್ನು ಗುರುತಿಸಲೇಬೇಕು. 1991ರಲ್ಲಿ ಈ ರಾಜಕೀಯ ಸನ್ನಿವೇಶದ ನಡುವೆಯೇ ಉದ್ಭವಿಸಿದ ಮಾರುಕಟ್ಟೆ ಬಿಕ್ಕಟ್ಟಿಗೆ ಭಾರತದ ಆಳುವ ವರ್ಗಗಳು ಪರಿಹಾರ ಕಂಡುಕೊಂಡಿದ್ದು GATT ಒಪ್ಪಂದ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಯಲ್ಲಿ. ಈ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಮನಮೋಹನ್ ಸಿಂಗ್ ಸಹಜವಾಗಿಯೇ ಭಾರತದ ಆರ್ಥಿಕ ಸ್ವರೂಪವನ್ನೇ ಬದಲಿಸಿದ್ದು ಈಗ ಇತಿಹಾಸ. ಆರ್ಥಿಕತೆಯ ಮೇಲೆ ಪ್ರಭುತ್ವದ ನಿಯಂತ್ರಣವನ್ನು ಸಡಿಲಗೊಳಿಸಿ ಮಾರುಕಟ್ಟೆ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡುವ ಮೂಲಕ ಭಾರತ ತನ್ನ ಸಮಾಜವಾದಿ ಪೊರೆಯನ್ನು ಕಳಚಿಕೊಂಡು ಜಾಗತೀಕರಣಕ್ಕೆ ತೆರೆದುಕೊಳ್ಳಬೇಕಾಯಿತು.
ಜಾಗತೀಕರಣ ಕಟ್ಟಿದ ಅರ್ಥವ್ಯವಸ್ಥೆ
ತದನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಳೆದ ಮೂರು ದಶಕಗಳಲ್ಲಿ ಯಾವ ಸರ್ಕಾರವೂ ಜಾಗತೀಕರಣದ ನೀತಿಗಳನ್ನಾಗಲೀ, ಮುಕ್ತ ಮಾರುಕಟ್ಟೆಯನ್ನಾಗಲೀ ವಿಮರ್ಶಾತ್ಮಕವಾಗಿ ನೋಡುವ ಪ್ರಯತ್ನವನ್ನೂ ಮಾಡದಿರುವುದನ್ನು ಕಾಣಬಹುದು. 1991ರ ಚುನಾವಣೆಗಳ ಸಂದರ್ಭದಲ್ಲೇ ಭಾರತದ ಬಂಡವಾಳಶಾಹಿಗಳು ಜಾಗತೀಕರಣಕ್ಕೆ ಅಗತ್ಯವಾದ ರಾಜಕೀಯ ಬೆಂಬಲವನ್ನು ಪಡೆದುಕೊಂಡಿದ್ದರು. ಮುಕ್ತ ಆರ್ಥಿಕತೆಯನ್ನು ಪ್ರತಿಪಾದಿಸುವ ಬಿಜೆಪಿ , ಆ ವೇಳೆಗಾಗಲೇ ರಾಜಕೀಯ ಪ್ರಾಬಲ್ಯ ಪಡೆದುಕೊಂಡಿತ್ತು. 80ರ ದಶಕದಲ್ಲಿ ಉಗಮಿಸಿದ ಪ್ರಾದೇಶಿಕ ಪಕ್ಷಗಳೂ ಸಹ ಜಾಗತೀಕರಣ ಪ್ರಕ್ರಿಯೆಗೆ ಮುಕ್ತವಾಗಿದ್ದವು. ಈ ಸಂದರ್ಭದಲ್ಲಿ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಮನಮೋಹನ್ ಸಿಂಗ್ ನೆರವಾಗಿದ್ದು ಈಗ ಇತಿಹಾಸ. ಈಗಲೂ ಸಹ ಯಾವುದೇ ಪ್ರಾದೇಶಿಕ ಪಕ್ಷವನ್ನೂ ತಾತ್ವಿಕವಾಗಿ ʼ ಸಮಾಜವಾದಿ ʼ ಎಂದು ವರ್ಗೀಕರಿಸಲಾಗುವುದಿಲ್ಲ.
ಮುಕ್ತ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡು, ಗ್ಯಾಟ್ ಮತ್ತಿತರ ಒಪ್ಪಂದಗಳಿಗೆ ಸಹಿ ಮಾಡದೆ ಭಾರತಕ್ಕೆ ಪರ್ಯಾಯ ಮಾರ್ಗವಿಲ್ಲ (TINA – There is no alternative) -ಎಂಬ ಒಂದು ವಾದವನ್ನು ಹುಟ್ಟುಹಾಕಲಾಯಿತು. ನಾಲ್ಕು ದಶಕಗಳಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಸಮತೋಲನದೊಂದಿಗೆ ಕಾಪಾಡಿಕೊಂಡುಬಂದಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಬದಿಗೆ ಸರಿಸಿ, ದೇಶೀ ಮತ್ತು ವಿದೇಶಿ ಖಾಸಗೀ ಬಂಡವಾಳಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಮನಮೋಹನ್ ಸಿಂಗ್ ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡುವುದರಲ್ಲಿ ಸಫಲರಾಗಿದ್ದರು. ಗ್ಯಾಟ್ ಮತ್ತು ಡಬ್ಲ್ಯುಟಿಒ ವಿರುದ್ಧ ಎಡಪಕ್ಷಗಳು ದೇಶವ್ಯಾಪಿ ಹೋರಾಟಗಳನ್ನು ನಡೆಸಿದರೂ, ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ಜಾಗತೀಕರಣದ ಪರವಾಗಿದ್ದುದು ಸಿಂಗ್ ಅವರ ಮಾರುಕಟ್ಟೆ ಸುಧಾರಣಾ ಕ್ರಮಗಳಿಗೆ ಅನುಕೂಲಕರವಾಗಿತ್ತು ಈ ಸಂದರ್ಭದಲ್ಲಿ ಬಿಜೆಪಿ ಪ್ರತಿಪಾದಿಸಿದ ಸ್ವದೇಶಿ ಆರ್ಥಿಕತೆಯ ತಾತ್ವಿಕ ತಳಹದಿಯೇ ದುರ್ಬಲವಾಗಿತ್ತಲ್ಲದೆ, ಮೂಲತಃ ಬಿಜೆಪಿ ಬಂಡವಾಳಶಾಹಿ ಆರ್ಥಿಕತೆಯ ಪರವಾಗಿಯೇ ಇದ್ದುದು 1998ರ ಚುನಾವಣೆಗಳಲ್ಲಿ ಸ್ಪಷ್ಟವಾಗಿತ್ತು.
ಈ ಪಲ್ಲಟಗಳ ನಂತರದ ಅವಧಿಯಲ್ಲಿ ಭಾರತ ಹಿಂತಿರುಗಿ ನೋಡಿಲ್ಲ. ಅಥವಾ ಈ ಅವಧಿಯಲ್ಲಿ ́ ಒಂದು ಪರ್ಯಾಯ ಇದೆ ́(There is an altiernative) ಎಂದು ದೃಢವಾಗಿ ಹೇಳುವಂತಹ ಪರ್ಯಾಯ ಆರ್ಥಿಕ ಚಿಂತನೆಯನ್ನು ಜನತೆಯ ಮುಂದಿಡಲಾಗಿಲ್ಲ. 1998ರಿಂದ 2004ರ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, ತದನಂತರ 2014ರವರೆಗಿನ ಮನಮೋಹನ್ ಸಿಂಗ್ ಸರ್ಕಾರ 1991ರ ಮುಕ್ತ ಮಾರುಕಟ್ಟೆ ನೀತಿಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದವು. ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತನ್ನ ಎರಡು ಅವಧಿಯುದ್ದಕ್ಕೂ ಅನುಸರಿಸಿದ ಆರ್ಥಿಕ ನೀತಿಗಳು ಭಾರತದ ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸಿದ್ದೇ ಅಲ್ಲದೆ, ಅರ್ಥವ್ಯವಸ್ಥೆಯ ಜೀವ ನಾಡಿಗಳೆಲ್ಲವನ್ನೂ ಕಾರ್ಪೋರೇಟ್ ಮಾರುಕಟ್ಟೆಯ ಪಾಲಾಗಿಸಿದ್ದವು. ಇದರ ನೇರ ಪರಿಣಾಮ 2014ರಲ್ಲಿ ಕಾರ್ಪೋರೇಟ್ ಪ್ರಭಾವದೊಂದಿಗೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಳ್ವಿಕೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಸಂಪೂರ್ಣ ಕಾರ್ಪೋರೇಟ್ ಮಾರುಕಟ್ಟೆ ಹಿಡಿತಕ್ಕೆ ಒಳಗಾಗಿದ್ದು, ನೆಹರೂ ಯುಗದ ಮತ್ತು 70ರ ದಶಕದ ಸಾರ್ವಜನಿಕ ವಲಯದ ಆರ್ಥಿಕತೆ ಬಹುಮಟ್ಟಿಗೆ ನಿಶ್ಶೇಷವಾಗಿದೆ.
ವರ್ತಮಾನದ ಸನ್ನಿವೇಶದಲ್ಲಿ
2024ರಲ್ಲಿ ನಿಂತು ನೋಡಿದಾಗ ನಮಗೆ ಮನಮೋಹನ್ ಸಿಂಗ್ ನವ ಯುಗದ ಹರಿಕಾರರಾಗಿ ಕಾಣುತ್ತಾರೆ. ಭಾರತ ಜಾಗತಿಕ ಮಾರುಕಟ್ಟೆಯ ಒಂದು ಭಾಗವಾಗಿ ಜಿಡಿಪಿ ಆಧಾರಿತ ಅಭಿವೃದ್ಧಿ ಮಾದರಿಗೆ ಒಂದು ನಿದರ್ಶನವಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲೇ ಇಂದು ಮನಮೋಹನ್ ಸಿಂಗ್ ಆರ್ಥಿಕವಾಗಿ ಆಧುನಿಕ ಭಾರತದ ಶಿಲ್ಪಿ ಎಂದೇ ಬಣ್ಣಿಸಲಾಗುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಪ್ರಧಾನ ಮಾರುಕಟ್ಟೆ ಶಕ್ತಿಯಾಗಿರುವ ಡಿಜಿಟಲ್ ಆರ್ಥಿಕತೆ ಭಾರತವನ್ನು ಮತ್ತಷ್ಟು ಉನ್ನತಿಗೇರಿಸುತ್ತಿದೆ. ಹಾಗಾಗಿಯೇ ನವ ಭಾರತ ಮನಮೋಹನ್ ಸಿಂಗ್ ಅವರ ಮಾರುಕಟ್ಟೆ ಸುಧಾರಣಾ ಕ್ರಮಗಳನ್ನು ವಿಮರ್ಶಾತ್ಮಕವಾಗಿ ನೋಡುವ ದ್ವನಿಗಳು ಕೇಳಿಬರುತ್ತಿಲ್ಲ. ಇಡೀ ಸಂವಹನ ವಲಯವನ್ನು ನಿಯಂತ್ರಿಸುವ ಕಾರ್ಪೋರೇಟ್ ಮಾರುಕಟ್ಟೆಗೆ ಈ ಸುಧಾರಣೆಗಳಿಂದ ಬಾಧಿತರಾಗಿರುವ ತಳಸಮಾಜದ ಕೋಟ್ಯಂತರ ಜನರ ಬದುಕು, ಬವಣೆ ಮತ್ತು ಸಂಕಷ್ಟಗಳೂ ಗೋಚರಿಸುವುದೂ ಇಲ್ಲ.
ಆದರೆ ವಸ್ತುನಿಷ್ಠವಾಗಿ ನೋಡಿದಾಗ 1991ರಲ್ಲಿ ದಿಕ್ಕು ಬದಲಿಸಿದ ಭಾರತ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಶಸ್ತ ಸ್ಥಾನ ಪಡೆದುಕೊಂಡಿದ್ದರೂ, ಈ ನವ ಉದಾರವಾದಿ ಆರ್ಥಿಕ ನೀತಿಯಿಂದ ನಲುಗಿ ಹೋಗಿರುವ ಸಮಾಜಗಳು ಕಣ್ಣಿಗೆ ರಾಚುತ್ತವೆ. ಇಂದು ಆರ್ಥಿಕವಾಗಿ ದೇಶ ಸುಭಿಕ್ಷವಾಗಿದೆ ಎಂದಾದರೂ, ಆ ಸುಭಿಕ್ಷತೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೌದು ಎನ್ನಲು ಯಾವುದೇ ಪುರಾವೆಗಳಿಲ್ಲ. ಏಕೆಂದರೆ ಈ ಮೂರು ದಶಕಗಳ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಬಡತನ, ಹಸಿವೆ, ನಿರುದ್ಯೋಗ ಮತ್ತಿತರ ತಳಸಮಾಜದ ಸಂಕೀರ್ಣತೆಗಳನ್ನು ಸರಿಪಡಿಸಲಾಗಿಲ್ಲ. ಇಂದು ಅರ್ಥವ್ಯವಸ್ಥೆಯ ಎಲ್ಲ ವಲಯಗಳೂ ಗಂಭೀರ ಬಿಕ್ಕಟ್ಟು ಎದುರಿಸುತ್ತಿವೆ. ಕೃಷಿ, ಕೈಗಾರಿಕೆ, ಉದ್ಯಮ, ವಾಣಿಜ್ಯ, ಶಿಕ್ಷಣ ಮತ್ತು ಗ್ರಾಮೀಣ ಆರ್ಥಿಕತೆ ಎಲ್ಲವೂ ಸಹ ವಿಶಾಲ ಮಾರುಕಟ್ಟೆಯ ಆಧಿಪತ್ಯಕ್ಕೊಳಗಾಗಿದ್ದು, ದೇಶದ ಶೇಕಡಾ 40ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಬೃಹತ್ ಸಮಾಜವು ಪರಾಧೀನ ಸ್ಥಿತಿಯನ್ನು ತಲುಪಿದೆ.
ಇತ್ತೀಚಿನ ಅಂಕಿಅಂಶಗಳು ಹೇಳುವಂತೆ, ದೇಶದ ಮೇಲ್ಪದರದ ಶೇಕಡಾ 1ರಷ್ಟು ಜನರ ಬಳಿ ಶೇಕಡಾ 22.6ರಷ್ಟು ರಾಷ್ಟ್ರೀಯ ಆದಾಯ ಕ್ರೋಢೀಕೃತವಾಗಿದೆ. ಈ ಅಲ್ಪಜನಸಂಖ್ಯೆಯೇ ದೇಶದ ಶೇಕಡಾ 40ರಷ್ಟು ಸಂಪತ್ತನ್ನು ಹೊಂದಿವೆ. ಮತ್ತೊಂದು ಬದಿಯಲ್ಲಿ ವಾಣೀಜ್ಯೀಕರಣಗೊಂಡ ಶಿಕ್ಷಣ ವ್ಯವಸ್ಥೆ ಪ್ರತಿ ವರ್ಷ ಹೊರಹಾಕುವ 15 ಲಕ್ಷ ಇಂಜಿನಿಯರಿಂಗ್ ಪದವೀಧರರ ಪೈಕಿ ಶೇಕಡಾ 20ರಷ್ಟು ಮಾತ್ರ ಉದ್ಯೋಗಾರ್ಹರಾಗಿರುತ್ತಾರೆ. 25 ವರ್ಷಕ್ಕೂ ಮೇಲ್ಪಟ್ಟ ಪದವೀಧರರ ಪೈಕಿ ಶೇಕಡಾ 42ರಷ್ಟು ನಿರುದ್ಯೋಗಿಗಳಾಗಿದ್ದಾರೆ. ಡಿಜಿಟಲ್ ಮಾರುಕಟ್ಟೆ ಸೃಷ್ಟಿಸಿರುವ ಗಿಗ್ ಆರ್ಥಿಕತೆಯಲ್ಲಿ ದೇಶದ ಯುವಸಂಕುಲ ಅನಿಶ್ಚಿತತೆಯ ನಡುವೆಯೇ ಬದುಕಬೇಕಿದೆ. ವಿಶ್ವವಿದ್ಯಾಲಯದಿಂದ ಹೊರಬೀಳುವ ಕೋಟ್ಯಂತರ ವಿದ್ಯಾವಂತರು ನಿಶ್ಚಿತ-ಸುರಕ್ಷಿತ ನೌಕರಿಯ ಆಕಾಂಕ್ಷೆಯನ್ನೇ ಹೊಂದರೆ, ಮಾರುಕಟ್ಟೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಇದರ ಮತ್ತೊಂದು ಆಯಾಮವನ್ನು ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಗುರುತಿಸಬಹುದು. ಹಳ್ಳಿಗಳಲ್ಲಿ ಕೃಷಿ ಮಾಡಲಾಗದೆ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ನಗರಗಳ ಅನೌಪಚಾರಿಕ ಉದ್ಯೋಗಗಳ ಮೂಲಕ ತಮ್ಮ ಕುಟುಂಬಗಳನ್ನು ನಿರ್ವಹಿಸಲಾಗದ ಕೋಟ್ಯಂತರ ಶ್ರಮಜೀವಿಗಳು ಮರಳಿ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಗಿಗ್ ಆರ್ಥಿಕತೆ ಮತ್ತು ಅನೌಪಚಾರಿಕ ವಲಯವನ್ನು ಹೊರತುಪಡಿಸಿ ಮತ್ತಾವುದೇ ಜೀವನೋಪಾಯ ಮಾರ್ಗ ಕಾಣದ ಅಸಂಖ್ಯಾತ ಜನತೆ ಇಂದು ಮಾರುಕಟ್ಟೆ ವ್ಯತ್ಯಯಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಈ ಪರಾಧೀನತೆಯ ನಡುವೆಯೇ ಸಮಾಜದ ಒಂದು ಹಿತವಲಯ ಎಲ್ಲ ಸಾಂವಿಧಾನಿಕ ಸವಲತ್ತುಗಳನ್ನೂ ಬಾಚಿಕೊಳ್ಳುವ ಮೂಲಕ, ಬಂಡವಾಳಿಗ ಪಕ್ಷಗಳಿಗೆ (Bourgeous parties) ಬೆನ್ನುಲುಬಾಗಿ ನಿಂತಿದೆ. ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟಿರುವ ಸಮಾಜಗಳಲ್ಲೂ ಒಂದು ವರ್ಗ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯಿಂದ ಆಕರ್ಷಿತವಾಗಿರುವುದು, ಬಂಡವಾಳಶಾಹಿಯ ಬಲವರ್ಧನೆಗೆ ಪುಷ್ಟಿ ನೀಡುತ್ತಿದೆ.
ಭವಿಷ್ಯತ್ತಿನ ಜಟಿಲ ಪ್ರಶ್ನೆಗಳು
ಇಲ್ಲಿ ಸೃಷ್ಟಿಯಾಗಿರುವ ಮತ್ತು ಹಿಗ್ಗುತ್ತಲೇ ಇರುವ ಅಸಮಾನತೆಗಳಿಗೆ ಯಾರು ಕಾರಣ ? ಈ ಅಸಮಾನತೆ ಮತ್ತು ಅದರಿಂದ ಸೃಷ್ಟಿಯಾಗುವ ಶೋಷಣೆಗಳು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ವಿದ್ಯಮಾನಗಳು ಎನ್ನುವುದಾದರೆ, ಈ ಸಹನಶೀಲತೆಗೆ ಬಲಿಯಾಗುವ ಜನರು ಯಾರು ? ಪರಾಧೀನತೆ ಮತ್ತು ಪರಾವಲಂಬಿ ಬದುಕನ್ನು ಸಹಿಸಿಕೊಳ್ಳಬೇಕಾದ ಈ ಅಸಂಖ್ಯಾತ ಜನರಲ್ಲಿ ಉಂಟಾಗಬಹುದಾದ ಅಸಮಾಧಾನ, ಆಕ್ರೋಶ ಮತ್ತು ಹತಾಶೆಗಳನ್ನು ಅದುಮಿಡುವ ಸಲುವಾಗಿಯೇ ಎಲ್ಲ ರಾಜಕೀಯ ಪಕ್ಷಗಳೂ ಮತ್ತೊಮ್ಮೆ ಕಲ್ಯಾಣ ಆರ್ಥಿಕತೆಯ (Welfare Economy) ಹಾದಿ ಹಿಡಿದಿವೆ. ಮನಮೋಹನ್ ಸಿಂಗ್ ಕಾಲದ ನರೇಗಾ ಯೋಜನೆಯನ್ನೂ ಸೇರಿದಂತೆ ಜನಪರ ಎನಿಸಿಕೊಳ್ಳುವ ನೀತಿಗಳೆಲ್ಲವೂ ಜನಜೀವನವನ್ನು ಸುಸ್ಥಿರಗೊಳಿಸುವುದಕ್ಕಿಂತಲೂ, ಯಥಾಸ್ಥಿತಿಯಲ್ಲಿರುವ ಉಪಕ್ರಮಗಳಾಗಿವೆ. ವರ್ತಮಾನದ ರಾಜಕೀಯ ಪರಿಭಾಷೆಯಲ್ಲಿ ಉಚಿತ/ರೇವ್ಡಿ/ಗ್ಯಾರಂಟಿ ಎಂದು ಕರೆಯಲಾಗುತ್ತಿರುವ ಈ ಸವಲತ್ತುಗಳು ದೇಶದ ಬಹುಸಂಖ್ಯಾತರ ಜನರನ್ನು ಶಾಶ್ವತವಾಗಿ ಪರಾವಲಂಬಿಗಳನ್ನಾಗಿ ಮಾಡುತ್ತಿದೆ.
ಸಮಾಜವಾದಿ ಪರಿಕಲ್ಪನೆಯ ಸಮಾಧಿಯ ಮೇಲೆ ನಿರ್ಮಾಣವಾಗಿರುವ ನವ ಉದಾರವಾದದ ಸೌಧ ಭಾರತವನ್ನು ಉಜ್ವಲವಾಗಿ ಬಿಂಬಿಸುತ್ತಿದೆಯಾದರೂ, ಅದರೊಳಗಿನ ಅಸಂಖ್ಯಾತ ಭಾರತೀಯರು ನಿತ್ಯ ಬದುಕಿನಲ್ಲಿ ಎದುರಿಸುತ್ತಿರುವ ಜಟಿಲ ಸವಾಲುಗಳಿಗೆ ಶಾಶ್ವತ ಪರಿಹಾರೋಪಾಯಗಳನ್ನು ಸೂಚಿಸಲಾಗುತ್ತಿಲ್ಲ. ತಳಸಮಾಜಕ್ಕೆ ಸುಲಭವಾಗಿ ಎಟುಕಬೇಕಾದ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗಗಳೂ ಕಾರ್ಪೋರೇಟ್ ಮಾರುಕಟ್ಟೆ ಹಿಡಿತದಲ್ಲಿರುವ ಈ ಪರಿಸ್ಥಿತಿಯಲ್ಲಿ, ಶೋಷಿತ ಸಮುದಾಯಗಳು ತಮ್ಮ ನಾಳೆಗಳನ್ನು ಎಣಿಸುತ್ತಿವೆ. ಈ ಜನಗಳ ನಡುವೆ ನಿಂತು ನೋಡಿದಾಗ ನಮಗೆ ಮನಮೋಹನ್ ಸಿಂಗ್ ಹೇಗೆ ಕಾಣುತ್ತಾರೆ ? ಅಥವಾ ಡಿಜಿಟಲ್ ಸಂವಹನ ಜಗತ್ತಿನಲ್ಲಿ ಈ ಜನಗಳ ಧ್ವನಿಗೆ ಕೊಂಚ ಸ್ಥಳಾವಕಾಶವಾದರೂ ಸಿಗಲು ಸಾಧ್ಯವೇ ? ನವ ಭಾರತದ ಹರಿಕಾರ ಮನಮೋಹನ್ ಸಿಂಗ್ ಇಲ್ಲಿ ಅಗ್ನಿಪರೀಕ್ಷೆಗೊಳಗಾಗುತ್ತಾರೆ.
ಈ ಅಸಮಾನತೆಯ ನಡುವೆಯೇ ಬದುಕು ಸವೆಸುತ್ತಿರುವ ಬಹುಸಂಖ್ಯಾತ ಭಾರತೀಯರಿಗೆ ಮನಮೋಹನ್ ಸಿಂಗ್ ದಿಕ್ಕು ಬದಲಿಸಿದ ನಾವಿಕನಂತೆ ಕಾಣುತ್ತಾರೆ. ಬದಲಾದ ದಿಕ್ಕಿನಲ್ಲಿ ಸಾಗುತ್ತಿರುವ ಭಾರತ ಹೆಚ್ಚು ಹೆಚ್ಚು ಜನರನ್ನು ಸಮಾಜದ ಅಂಚಿಗೆ, ಆರ್ಥಿಕತೆಯ ತಳಕ್ಕೆ ನೂಕುತ್ತಿದೆ. ಭಾರತದ ಶ್ರಮಜೀವಿಗಳ ಈ ದುರವಸ್ಥೆಗೆ ಮನಮೋಹನ್ ಸಿಂಗ್ ಒಬ್ಬರೇ ಕಾರಣರಲ್ಲ. ಆದರೆ ಅವರು ಮೂರು ದಶಕಗಳ ಹಿಂದೆ ನೀಡಿದ ತಿರುವು ಕಾರಣವಾಗಿ ಕಾಣುತ್ತದೆ. ಈ ತಿರುವಿನಲ್ಲೇ ಸಾಗಿಬಂದಿರುವ ಪ್ರತಿಯೊಂದು ಸರ್ಕಾರವೂ, ರಾಜಕೀಯ ಪಕ್ಷವೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೊಂದೆಡೆ ನವ ಉದಾರವಾದಿ ಜಾಗತೀಕರಣವನ್ನು ಇಂದಿಗೂ ವಿರೋಧಿಸುವ ಸೈದ್ದಾಂತಿಕ ವಲಯಗಳಲ್ಲಿ “ಸಮಾಜವಾದದೆಡೆಗೆ ಭಾರತೀಯ ಮಾರ್ಗ“ (Indian Road to Socialism) ಯಾವುದು ಎಂದು ನಿರ್ವಚಿಸಲಾಗಿಲ್ಲ. ಈ ಸೈದ್ಧಾಂತಿಕ ಕೊರತೆಯೇ ಬಂಡವಾಳಶಾಹಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿದೆ.
ಇತಿಹಾಸ ಮನಮೋಹನ್ ಸಿಂಗ್ ಅವರನ್ನು ವಿಸ್ಮೃತಿಗೆ ಜಾರಲು ಬಿಡುವುದಿಲ್ಲ. ಆದರೆ ಯಾವ ಕಾರಣಕ್ಕಾಗಿ ಅವರು ಸ್ಮರಣೀಯರಾಗುತ್ತಾರೆ ? ಸರಿಪಡಿಸಲಾಗದ ರೀತಿಯಲ್ಲಿ ಭಾರತದ ದಿಕ್ಕನ್ನು ಬದಲಿಸಿದ್ದಕ್ಕಾಗಿಯೋ ಅಥವಾ ಬಹುಸಂಖ್ಯಾತ ಶೋಷಿತ ಜನರನ್ನು ಮತ್ತಷ್ಟು ಶೋಷಿಸುವ ಒಂದು ಹೊಸ ಹಾದಿಯಲ್ಲಿ ಕರೆದೊಯ್ದಿದ್ದ ಕಾರಣಕ್ಕೋ ? 2024ರಲ್ಲಿ ನಿಂತು ಊಹಿಸಿಕೊಳ್ಳಲೂ ಆಗದ ʼ ಸರಳ ಸಜ್ಜನಿಕೆಯ ಸಂಭಾವಿತ ʼ ರಾಜಕಾರಣಿಯಾಗಿ, ದೇಶ ಕಂಡ ಅತ್ಯುತ್ಕೃಷ್ಟ ಅರ್ಥಶಾಸ್ತ್ರಜ್ಞರಾಗಿ ಸದಾ ಸ್ಮರಣೀಯರಾಗಿ ಉಳಿಯುವ ಮನಮೋಹನ್ ಸಿಂಗ್, ಭಾರತದ ಶೋಷಿತ ಶ್ರಮಜೀವಿಗಳ ದೃಷ್ಟಿಯಲ್ಲಿ ಪ್ರಶ್ನಾರ್ಹರಾಗಿಯೇ ಉಳಿಯುತ್ತಾರೆ. ವರ್ತಮಾನದ ಸಾರ್ವಜನಿಕ ಜೀವನದಲ್ಲಿ ಪ್ರಭಾವಶಾಲಿಯಾಗಿ ಬಾಳುವ ವ್ಯಕ್ತಿ ಭವಿಷ್ಯದಲ್ಲಿ ವೈಯುಕ್ತಿಕ ನಿಷ್ಠೆ ಮತ್ತು ಪ್ರಾಮಾಣಿಕತೆಗಾಗಿ ಸ್ಮರಣೀಯರಾಗುವಂತೆಯೇ ಅವರ ಸೈದ್ಧಾಂತಿಕ ನಿಲುವು ಮತ್ತು ಅದರಿಂದಾಗುವ ಪರಿಣಾಮಗಳ ನೆಲೆಯಲ್ಲೂ ನೆನೆಯಲ್ಪಡುತ್ತಾರೆ. ಇದು ಚಾರಿತ್ರಿಕ ಸತ್ಯ.
ಮನಮೋಹನ್ ಸಿಂಗ್ ಈ ಎರಡೂ ನೆಲೆಗಳಲ್ಲಿ ಸದಾ ಚರ್ಚೆಯಲ್ಲೇ ಉಳಿಯವಂತಹ ಒಂದು ವ್ಯಕ್ತಿತ್ವ. ಈ ವ್ಯಕ್ತಿತ್ವಕ್ಕೆ ಅಂತಿಮ ಸಲಾಂ.
-೦-೦-೦-