ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣದ ಸಂತ್ರಸ್ತೆಯರು ಸುಪ್ರೀಂ ಕೋರ್ಟ್ನಲ್ಲಿ ಸೋಮವಾರ (ಜು.31) ದಾವೆ ಹೂಡಿದ್ದಾರೆ ಎಂದು ಲೈವ್ ಲಾ ಸುದ್ದಿ ವಾಹಿನಿ ವರದಿ ಮಾಡಿದೆ.
ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಸಂತ್ರಸ್ತೆಯರು ಅರ್ಜಿಯಲ್ಲಿ ಕೋರಿದ್ದಾರೆ. ಅಲ್ಲದೇ ತಮ್ಮ ಗುರುತನ್ನು ಬಹಿರಂಗಪಡಿಸಕೂಡದು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿರುವ ಪೀಠ ಸೋಮವಾರವೇ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.
ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಸಂಬಂಧ ಪ್ರಕರಣವನ್ನು ಮಣಿಪುರದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಬೇಕು ಎಂದು ಭಿನ್ನವಿಸಲಾದ ಅರ್ಜಿಯ ವಿಚಾರಣೆಯೂ ಇಂದೇ ನಡೆಯಲಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, “ಈ ಘಟನೆ ಸಾಂವಿಧಾನಿಕ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ” ಎಂದು ಅಭಿಪ್ರಾಯಪಟ್ಟಿತ್ತು.
ಈ ಸುದ್ದಿ ಓದಿದ್ದೀರಾ? ಗುಜರಾತ್ | ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಅಗ್ನಿ ಅವಘಡ ; 125 ರೋಗಿಗಳ ಸ್ಥಳಾಂತರ
ಮಣಿಪುರ ಬೆತ್ತಲೆ ಮೆರವಣಿಗೆಯ ಪ್ರಕರಣ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜುಲೈ 20 ರಂದು ಮಣಿಪುರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತ್ತು.
ಇದಕ್ಕೆ ಗುರುವಾರ ಉತ್ತರ ನೀಡಿದ್ದ ಕೇಂದ್ರ ಸರ್ಕಾರ, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದಾಗಿಯೂ, ಘಟನೆ ಸಂಬಂಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಮಣಿಪುರದ ಹೊರಗೆ ವರ್ಗಾಯಿಸಲು ಮನವಿ ಮಾಡಿದ್ದಾಗಿಯೂ ತಿಳಿಸಿತ್ತು.