ಸಂಸತ್ತು ಮುಂಗಾರು ಅಧಿವೇಶನದಲ್ಲಿ ಸೋಮವಾರ (ಜು.31) ಮಣಿಪುರ ಹಿಂಸಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆ ವಿಚಾರ ಸದ್ದು ಮಾಡಿವೆ. ಪ್ರತಿಪಕ್ಷಗಳು ಈ ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿವೆ. ತೀವ್ರ ಗದ್ದಲದ ನಡುವೆ ಲೋಕಸಭೆ ಹಾಗೂ ರಾಜ್ಯಸಭೆಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.
ಮಣಿಪುರ ವಿಚಾರವಾಗಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಇದರಿಂದ ಲೋಕಸಭೆಯ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.
ಸಂಸತ್ತು ಉಭಯ ಸದನಗಳ ಕಲಾಪ ಬೆಳಿಗ್ಗೆ 11 ಗಂಟೆಗೆ ಆರಂಭವಾಯಿತು. ಮಲಾವಿ ದೇಶದಿಂದ ಬಂದಿರುವ ಸಂಸದೀಯ ನಿಯೋಗವು ಸದನದ ಕಲಾಪಗಳನ್ನು ವೀಕ್ಷಿಸುತ್ತಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ಅವರು ವಿದೇಶಿ ನಿಯೋಗವನ್ನು ಸ್ವಾಗತಿಸಿದರು.
ಸ್ಪೀಕರ್ ತಮ್ಮ ಮಾತು ಮುಗಿಸುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಕೂಡಲೇ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಂಸತ್ತು ಲೋಕಸಭೆ ಕಲಾಪದಲ್ಲಿ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಶಿಕ್ಷಣ ಮತ್ತು ಹಣಕಾಸು ಸಚಿವಾಲಯಗಳಿಗೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಪ್ರತಿಭಟನೆ ಮುಂದುವರಿದಾಗ ಸ್ಪೀಕರ್ ಅವರು ಪ್ರತಿಪಕ್ಷದ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ತೆರಳಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಆದರೆ, ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಸ್ಪೀಕರ್, ಮೊದಲಿಗೆ 15 ನಿಮಿಷಗಳ ಕಾಲ. ನಂತರ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಿದರು.
‘ಮಧ್ಯಾಹ್ನ 2 ಗಂಟೆಗೆ ಮಣಿಪುರ ಹಿಂಸಾಚಾರ ಕುರಿತ ಚರ್ಚೆಗೆ ಸಿದ್ಧ’
ಬೆಳಿಗ್ಗೆ 11 ಗಂಟೆಗೆ ಸಂಸತ್ತು ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಣಿಪುರ ಹಿಂಸಾಚಾರದ ಕುರಿತು ಚರ್ಚೆ ನಡೆಸಲು ಒತ್ತಾಯಿಸಿದರು. ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಪಕ್ಷಗಳು ಕಳೆದ 10 ದಿನಗಳಲ್ಲಿ ನಿಯಮ 267ರ ಅಡಿಯಲ್ಲಿ ಹಲವು ಬಾರಿ ರಾಜ್ಯಸಭಗೆ ನೋಟಿಸ್ ನೀಡಿವೆ ಎಂದು ಖರ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗುಜರಾತ್ | ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಅಗ್ನಿ ಅವಘಡ ; 125 ರೋಗಿಗಳ ಸ್ಥಳಾಂತರ
ಮಣಿಪುರದ ಕುರಿತು ಚರ್ಚೆ ನಡೆಸಲು ಸರ್ಕಾರವು ಮಧ್ಯಾಹ್ನ 2 ಗಂಟೆಗೆ ಸಿದ್ಧವಾಗಿದೆ ಎಂದು ರಾಜ್ಯಸಭೆ ಸಭಾಪತಿ ಹೇಳಿದರು. ಇದಕ್ಕೆ ಒಪ್ಪದ ಸದಸ್ಯರು ಕೂಡಲೇ ಚರ್ಚೆಗೆ ಒತ್ತಾಯಿಸಿ ಗದ್ದಲ ನಡೆಸಿದ್ದರಿಂದ ಸದನವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು.
‘”ಮಣಿಪುರದ ಹಿಂಸಾಚಾರ ಕುರಿತು ಇಂದು ಮಧ್ಯಾಹ್ನ 2 ಗಂಟೆಗೆ ಸಂಸತ್ತು ಕಲಾಪದಲ್ಲಿ ಚರ್ಚೆ ಸಬೇಕೆಂದು ನಾವು ಉದ್ದೇಶಿಸಿದ್ದೇವೆ. ಆದರೆ, ವಿರೋಧ ಪಕ್ಷಗಳ ಸದಸ್ಯರು ತಮಗೆ ಇರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಚರ್ಚೆಗೆ ಸಿದ್ಧವಿದೆ” ಎಂದು ರಾಜ್ಯಸಭೆಯ ಸಭಾನಾಯಕ ಪೀಯೂಷ್ ಗೋಯಲ್ ಹೇಳಿದ್ದಾರೆ.