ಈಶಾನ್ಯ ರಾಜ್ಯವಾದ ಮಣಿಪುರ್ನಲ್ಲಿ ಬಹಳಷ್ಟು ಪ್ರಸಿದ್ಧಿ ಹೊಂದಿರುವ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಚುನಾವಣಾ ರಾಜಕಾರಣಕ್ಕೆ (Manipur Elections 2022) ಇಳಿದಿದ್ದು, ಇವರ ಸ್ಪರ್ಧೆಯಿಂದ ಬೆದರಿರುವ ಬಿಜೆಪಿ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ (Home Minister Amit Shah) ಶಾರನ್ನೇ ಇವರ ವಿರುದ್ಧ ಪ್ರಚಾರಕ್ಕೆ ಇಳಿಸಿದೆ ಎಂದು ವರದಿ ಆಗಿದೆ.
ಬೃಂದಾ ತೌನೋಜಮ್ (Brinda Thounaojam) ಅವರು ಜೆಡಿ(ಯು) ಪಕ್ಷದಿಂದ (JD(U) ticket) ಸ್ಪರ್ಧಿಸಿದ್ದು, ಬಿಜೆಪಿಯ (BJP) ಹಾಲಿ ಶಾಸಕ ಮತ್ತು ಮಣಿಪುರ ಕಾನೂನು ಸಚಿವ ತೊಕ್ಚೋಮ್ ಸತ್ಯಬ್ರತ ಸಿಂಗ್ ರನ್ನು ಚುನಾವಣಾ ಕಣದಲ್ಲಿ ಎದುರಿಸುತ್ತಿದ್ದಾರೆ.
Manipur ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಕ್ಕೆ (Drug Mafia) ಕಡಿವಾಣ ಹಾಕಿದ್ದ ಮಣಿಪುರದ ಲೇಡಿ ‘ಸೂಪರ್ ಕಾಪ್’ ಬೃಂದಾ ತೌನೋಜಮ್ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಇಂಫಾಲ್ ಪೂರ್ವದ ಯೈಸ್ಕುಲ್ ಅಸೆಂಬ್ಲಿ ಕ್ಷೇತ್ರದಲ್ಲಿ ಅವರ ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.
ಮಣಿಪುರದಲ್ಲಿ ತಮ್ಮ ದಕ್ಷ ನಿಲುವಿನಿಂದ ʼಸೂಪರ್ ಕಾಪ್ʼ ಆಗಿ ಜನಪ್ರಿಯಗೊಂಡಿರುವ ಪೊಲೀಸ್ ಅಧಿಕಾರಿ ಬೃಂದಾ ತೌನೋಜಮ್, ಡ್ರಗ್ಸ್ ಮಾಫಿಯಾದ ವಿರುದ್ಧ ಕೈಗೊಂಡ ಕ್ರಮಗಳಿಗಾಗಿ ರಾಜ್ಯದಲ್ಲಿ ಪ್ರಸಿದ್ಧಿಗೊಂಡವರು. 2012 ರ ಬ್ಯಾಚ್ನ ಮಣಿಪುರ ಪಬ್ಲಿಕ್ ಸರ್ವಿಸ್ ಕಮಿಷನ್ ಕೇಡರ್, ತೌನೊಜಮ್ ಬೃಂದಾ ಅವರು ಮಣಿಪುರದ ಇತಿಹಾಸದಲ್ಲಿ ನಾರ್ಕೋಟಿಕ್ಸ್ ವಿಭಾಗದ ಮೊದಲ ಪೊಲೀಸ್ ಅಧಿಕಾರಿಯಾಗಿದ್ದರು.
43 ವರ್ಷದ ಬೃಂದಾ ತೌನೋಜಮ್ ಅಪಾರ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಮಣಿಪುರ ಪೊಲೀಸರ ಮಾದಕ ದ್ರವ್ಯ ವಿರೋಧಿ ಘಟಕದ ಉಪ ಮುಖ್ಯಸ್ಥರಾಗಿದ್ದ ಅವರು ತಮ್ಮ ನೇತೃತ್ವದಲ್ಲಿ 2018 ರಲ್ಲಿ ₹ 27 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದ ನಂತರ ಇನ್ನಷ್ಟು ಜನಪ್ರಿಯರಾದರು.
ಅದೇ ವರ್ಷ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಬೃಂದಾ ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಆದರೆ, ತಾನು ಹಿಡಿದ ಆ ಡ್ರಗ್ಸ್ ಪ್ರಕರಣದ ಮುಖ್ಯ ಆರೋಪಿ ಪ್ರಕರಣದಿಂದ ರಕ್ಷಿಸಿಕೊಳ್ಳಲು ಸಿಎಂ ಸಹಾಯ ಮಾಡಿದ್ದಾರೆ ಎಂದು ಬೃಂದಾ ತೌನೋಜಮ್ ಆರೋಪಿಸುತ್ತಾರೆ. ಮಾತ್ರವಲ್ಲ, ಸಿಎಂ ಮೇಲಿನ ಪ್ರತಿಭಟನಾ ಕ್ರಮವಾಗಿ ಪ್ರಶಸ್ತಿ ವಾಪಸ್ ಮಾಡುತ್ತಾರೆ, ಈ ಜಗಳವು ಸರ್ಕಾರದೊಂದಿಗೆ ಮನಸ್ತಾಪವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ.
ಯುವ ಸಮೂಹದಲ್ಲಿ ಅಪಾರ ಬೆಂಬಲಿಗರು ಬೃಂದಾ ಅವರಿಗೆ ಇದ್ದಾರೆ. ಅದರಲ್ಲೂ ದೊಡ್ಡ ಮಟ್ಟದ ಡ್ರಗ್ಸ್ ಪ್ರಕರಣ, ಸರ್ಕಾರದೊಂದಿಗಿನ ಪ್ರತಿಭಟನಾತ್ಮಕ ಕ್ರಮಗಳು ಬೃಂದಾ ಅವರನ್ನು ಯುವ ಜನಾಂಗದೆಡೆಯಲ್ಲಿ ಹೆಚ್ಚು ಪ್ರಚಾರ ನೀಡಿದೆ.

ವಿಶಾಲ ದೃಷ್ಟಿಕೋನದಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ಬೃಂದಾ, ಪೊಲೀಸ್ ಅಧಿಕಾರಿಯಾಗಿ ಡ್ರಗ್ಸ್ ವಿರುದ್ಧ ಕೆಲಸ ಮಾಡುವುದಕ್ಕೆ ಮಿತಿಗಳಿತ್ತು, ಶಾಸಕಿಯಾಗಿ ಇನ್ನು ಪರಿಣಾಮಕಾರಿಯಾಗಿ ಡ್ರಗ್ಸ್ ವಿರುದ್ಧ ಹೋರಾಡುವುದಾಗಿ ಅವರು ತಿಳಿಸಿದ್ದಾರೆ.
ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಮತ್ತು ಎಲ್ಜಿಬಿಟಿ ಸಮುದಾಯ ಸೇರಿದಂತೆ ಎಲ್ಲರಿಗೂ ಸಮಾನತೆಯನ್ನು ಖಾತ್ರಿಪಡಿಸುವ ಮೂಲಕ ತನ್ನ ರಾಜಕೀಯ ದೃಷ್ಟಿಕೋನವನ್ನು ಸಾಧಿಸಲು ಬಯಸಿದ್ದೇನೆ ಎಂದು ಬೃಂದಾ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
“ಬಿಜೆಪಿಯ ಹಾಲಿ ಸಚಿವರಿಗೆ ನನ್ನ ವಿರುದ್ಧ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದರೆ ಅದನ್ನು ನಾನು ನನ್ನ ಹೋರಾಟ ಡ್ರಗ್ಸ್ ಹಾವಳಿ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಶಂಸೆಯಾಗಿ ತೆಗೆದುಕೊಳ್ಳುತ್ತೇನೆ. ಒಬ್ಬ ಪೋಲೀಸ್ ಆಗಿ ಜನರಿಗೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನಾನು ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಪ್ರಭಾವ ಬೀರಲು ಬಯಸುತ್ತೇನೆ” ಬೃಂದಾ ಹೇಳಿದ್ದಾರೆ.
ಮಣಿಪುರದಲ್ಲಿ ಹಾಲಿ ಆಡಳಿತರದಲ್ಲಿರುವ ಎನ್ಡಿಎ ಸರ್ಕಾರವು ಡ್ರಗ್ಸ್ ಮಾಫಿಯಾವನ್ನು ಬೆಂಬಲಿಸುತ್ತಿದೆ ಎಂದು ಮಾಜಿ ಪೊಲೀಸ್ ಅಧಿಕಾರಿ ಆರೋಪಿಸಿದ್ದಾರೆ. ಖುದ್ದು ಸಿಎಂ ಆರೋಪಿಗಳ ರಕ್ಷಣೆಗೆ ನಿಲ್ಲುತ್ತಾರೆ. ಹಾಗಾಗಿ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅವರು ಹೇಳುತ್ತಾರೆ.
ತೌನೊಜಮ್ ಬೃಂದಾ ಅವರು ರಾಜ್ಯದ ವಿರುದ್ಧ ಸಶಸ್ತ್ರ ಚಳುವಳಿ ನಡೆಸಿದ್ದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (UNLF) ನ ಮಾಜಿ ಅಧ್ಯಕ್ಷರಾದ RK ಮೇಘನ್ ಸನಾಯೈಮಾ ಅವರ ಸೊಸೆ. ಇದು ಅವರಿಗೆ ಒಂದು ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.
ಅದೇನೆ ಇದ್ದರು, ಮಣಿಪುರ ಚುನಾವಣೆಯಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಹೋರಾಟಗಾರ್ತಿ ಇರೋಮ್ ಶರ್ಮಿಳಾಗೆ ಬೃಂದಾ ಅವರನ್ನು ಹೋಲಿಸಲಾಗುತ್ತಿದೆ. ಅದಾಗ್ಯೂ, ಇರೋಮ್ ಶರ್ಮಿಳಾಗಿಂತ ಬೃಂದಾ ಹೆಚ್ಚಿನ ಬೆಂಬಲ ರಾಜಕೀಯ ಹೋರಾಟದಲ್ಲಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 05 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.