ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನ ಬಿಜೆಪಿ ಪಾಲಾಗಿದೆ. ಈ ಮೂಲಕ ಮೈಸೂರು ನಂತರ ಕರಾವಳಿ ಜಿಲ್ಲೆ ಕೇಸರಿ ಪಾಲಾಗಿದೆ.
ಶುಕ್ರವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಜಯಾನಂದ ಅಂಚನ್ ಆಯ್ಕೆಯಾದರೆ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ. ಇದರಿಂದ ಎರಡೂ ಸ್ಥಾನಗಳು ಬಿಜೆಪಿ ಸದಸ್ಯರ ಪಾಲಾಗಿದೆ.
ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46 ಮಂದಿ ಜಯಾನಂದ ಪರ ಮತ ಚಲಾಯಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಪೊರೇಟರ್ ಶಶಿಧರ ಹೆಗ್ಡೆ 14 ಮತ ಗಳಿಸಿ ಸೋಲುಂಡರು.
ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ ಪೂರ್ಣಿಮಾ 46 ಮತ ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಅಭ್ಯರ್ಥಿ ಬಂದರು ವಾರ್ಡ್ ಸದಸ್ಯೆ ಝೀನತ್ ಶಂಸುದ್ದೀನ್ 14 ಮತ ಪಡೆದು ಸೋಲುಂಡರು. ಎಸ್ ಡಿಪಿಐ ಇಬ್ಬರು ಸದಸ್ಯರು ತಟಸ್ಥರಾಗಿದ್ದರು.
ಮತದಾನದಲ್ಲಿ ಒಟ್ಟು 60 ಪಾಲಿಕೆ ಸದಸ್ಯರು, ಇಬ್ಬರು ಶಾಸಕರು, ಒಬ್ಬರು ಸಂಸದ, ಇಬ್ಬರು ವಿಧಾನ ಪರಿಷತ್ ಸದಸ್ಯರು ಭಾಗವಹಿಸಬೇಕಿತ್ತು. ಇವರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಮಂಜುನಾಥ ಭಂಡಾರಿ ಗೈರು ಹಾಜರಾಗಿದ್ದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.